ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಡು ವ್ಯಾಪಾರಕ್ಕೆ ಮಳೆ ಕುತ್ತು

Last Updated 17 ಅಕ್ಟೋಬರ್ 2017, 6:45 IST
ಅಕ್ಷರ ಗಾತ್ರ

ಹಾಸನ: ದೇವರ ಪ್ರಸಾದ ಯಾರಿಗೆ ತಾನೆ ಬೇಡ. ಬಾಯಲ್ಲಿ ನೀರು ತರಿಸುವ ಲಾಡು ರುಚಿ ನೋಡಲು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇಷ್ಟ ಪಡುತ್ತಾರೆ. ಆದರೆ, ಈ ಬಾರಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾಸನಾಂಬ ದೇವಸ್ಥಾದಲ್ಲಿ ಲಾಡು ವ್ಯಾಪಾರ ಶೇ 70ರಷ್ಟು ಕುಸಿದಿದೆ.

ದೇಗುಲದ ಆವರಣದಲ್ಲಿ ₹ 40 ಕ್ಕೆ ರುಚಿಯಾದ ಎರಡು ಲಾಡು ಸಿಗಲಿದೆ. ದೇಗುಲದ ಬಾಗಿಲು ತೆರೆದ ದಿನದಿಂದ ಧಾರಾಕಾರ ಮಳೆಯಿಂದಾಗಿ ಹೇಳಿಕೊಳ್ಳುವಂತಹ ವ್ಯಾಪಾರವಾಗಿಲ್ಲ. ಐದು ದಿನದಲ್ಲಿ 30 ಸಾವಿರ ಲಾಡು ಮಾರಾಟವಾಗಿದೆ. ದೇವಿ ದರ್ಶನವಾಗುತ್ತಿದ್ದಂತೆ ಭಕ್ತರು ಮಳೆಯಿಂದ ರಕ್ಷಣೆ ಪಡೆಯಲು ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಕಳೆದ ವರ್ಷ 13 ದಿನ ದರ್ಶನ ಇದ್ದ ಕಾರಣ ಎರಡು ಲಕ್ಷ ಲಾಡು ತಯಾರಿಸಲಾಗಿತ್ತು. ಅಲ್ಲದೇ ವಿಶೇಷ ದರ್ಶನಕ್ಕೆ ₹ 300 ರ ಟಿಕೆಟ್‌ ಕೊಂಡವರಿಗೆ ಲಾಡು, ಕುಂಕಮದ ಪ್ಯಾಕೇಟ್‌ ಸಹ ನೀಡಲಾಗಿತ್ತು. ಆದರೆ ಈ ಬಾರಿ ವಿಶೇಷ ದರ್ಶನಕ್ಕೆ ₹ 300 ಮತ್ತು ₹ 1,000 ಟಿಕೆಟ್‌ ಕೊಂಡರೂ ಲಾಡು, ಕುಂಕುಮ ನೀಡುತ್ತಿಲ್ಲ. ಹಾಗಾಗಿ ಈ ಬಾರಿ ಒಂದು ಲಕ್ಷ ಲಾಡು ತಯಾರಿಕೆಗೆ ಸೀಮಿತಗೊಳಿಸಲಾಗಿದೆ.

ಹತ್ತು ದಿನ ದರ್ಶನದಲ್ಲಿ ನಾಲ್ಕು ದಿನದ ವ್ಯಾಪಾರ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಉಳಿದ ಐದು ದಿನದಲ್ಲಿ ಮಳೆ ಬಿಡುವು ನೀಡಿದರೆ ಲಾಡು ವ್ಯಾಪಾರದಲ್ಲಿ ಚೇತರಿಕೆ ಕಾಣಲಿದೆ.

‘ಆಂಜನೇಯ ದೇವಸ್ಥಾನದಲ್ಲಿ ಪ್ರತಿ ದಿನ ಹತ್ತು ಸಾವಿರ ಲಾಡು ತಯಾರಿಸಲಾಗುತ್ತಿದ್ದು, 40 ಮಂದಿ ಕೆಲಸದಲ್ಲಿ ತೊಡಗಿದ್ದಾರೆ. ಭಾನುವಾರ ಮಾತ್ರ 15 ಸಾವಿರಕ್ಕೂ ಹೆಚ್ಚು ಮಾರಾಟವಾಗಿದೆ. ಆರಂಭದ ನಾಲ್ಕು ದಿನ ಮಳೆಯಿಂದ ದಿನಕ್ಕೆ ಕೇವಲ 2 ರಿಂದ 3 ಸಾವಿರ ಮಾತ್ರ ಮಾರಾಟವಾಯಿತು. ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದರು. ಅಂದು ಮಧ್ಯಾಹ್ನದವರೆಗೆ ಐದು ಸಾವಿರ ಖಾಲಿಯಾಯಿತು. ಸಂಜೆ ಮಳೆ ಆರಂಭವಾಗಿ ವ್ಯಾಪಾರಕ್ಕೆ ತೊಂದರೆ ಉಂಟಾಯಿತು’ ಎಂದು ಗುತ್ತಿಗೆದಾರ ಕಾರ್ತಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು

‘ಇದೇ ಮೊದಲ ಬಾರಿಗೆ ಲಾಡು ಪ್ರಸಾದ ತಯಾರಿಕೆ ಗುತ್ತಿಗೆ ಪಡೆದಿದ್ದೇನೆ. ಗುಣಮಟ್ಟದ ಆಹಾರ ಪದಾರ್ಥ ಕಡಲೆಹಿಟ್ಟು, ಸಕ್ಕರೆ, ಗೋಡಂಬಿ, ಏಲಕ್ಕಿ, ತುಪ್ಪ, ಕಲ್ಲು ಸಕ್ಕರೆ, ದ್ರಾಕ್ಷಿ ಬಳಸಿ ಲಾಡು ತಯಾರು ಮಾಡಲಾಗುತ್ತಿದೆ. ಪ್ರತಿ ಲಾಡುಗೆ ₹ 8 ರಂತೆ ಟೆಂಡರ್‌ ನೀಡಲಾಗಿದೆ. ಇದರಿಂದ ಲಾಭ ಇಲ್ಲ. ಆದರೂ ದೇವರ ಸೇವೆ ಎಂಬ ಕಾರಣಕ್ಕೆ ಮಾಡುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT