ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಪ್ರಯುಕ್ತ ಚನ್ನಕೇಶವನ ಹಬ್ಬ

Last Updated 17 ಅಕ್ಟೋಬರ್ 2017, 6:46 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿಯ ಜಿನ್ನೇನ ಹಳ್ಳಿ ಮತ್ತು ಕಾವಲುಬಾರೆ ಗ್ರಾಮಗಳಲ್ಲಿ ಚನ್ನಕೇಶವ ಮತ್ತು ದೀಪಾವಳಿ ಹಬ್ಬವನ್ನು ಮೂರು ದಿನ ಭಕ್ತಿಭಾವದಿಂದ ಆಚರಿಸುತ್ತಾರೆ.
ನರಕ ಚತುರ್ದಶಿಯ ದಿನವಾದ ಬುಧವಾರ (ಅ. 18) ಜಿನ್ನೇನಹಳ್ಳಿ ಗ್ರಾಮದವರು ಚನ್ನಕೇಶವ ಸ್ವಾಮಿಯ ದೇವಸ್ಥಾನವನ್ನು ಸ್ವಚ್ಛ ಮಾಡಿ, ಚಪ್ಪರ ಹಾಕುವ ಮೂಲಕ ಹಬ್ಬಕ್ಕೆ ಚಾಲನೆ ನೀಡುತ್ತಾರೆ.

ಸಂಜೆ ಮಂಗಳವಾದ್ಯದೊಂದಿಗೆ ಮೆರೆಯ ದೇವರನ್ನು ಮೆರವಣಿಗೆಯಲ್ಲಿ, ಗ್ರಾಮದ ಮದ್ಯದಲ್ಲಿರುವ ಲಕ್ಷ್ಮಿ ದೇವಿಯ ದೇವಸ್ಥಾನಕ್ಕೆ ಕರೆತರುತ್ತಾರೆ. ಗ್ರಾಮದಲ್ಲಿರುವ ಬಸವಣ್ಣನಿಗೆ ನಗಾರಿಯನ್ನು ಕಟ್ಟಿ ಬಾರಿಸುತ್ತಾರೆ. ಭಾಗವಂತಿಕೆ ಮೇಳದವರು ಹಾಡುಗಳನ್ನು ಹೇಳುತ್ತಿದ್ದರೆ, ಕೊಡಂಗಿ ವೇಷದಾರಿ ಮತ್ತು ಮಕ್ಕಳು ಹಾಡಿನ ತಾಳಕ್ಕೆ ನೃತ್ಯ ಮಾಡುವುದು ಈ ಹಬ್ಬದ ವಿಶೇಷ.

ಮಾರನೆ ದಿನ ಗುರುವಾರ (ಅ. 19) ಅಮಾವಾಸ್ಯೆ ದಿನದಂದು ದೇವರ ಭಕ್ತರು ಇರುವ ಗ್ರಾಮಗಳಾದ ಮೇಟಿಕೆರೆ, ಯಾಳನಹಳ್ಳಿ, ಬೂಕ, ಬೂಕನ ಬೆಟ್ಟ, ಹಿರೀಸಾವೆ ಮತ್ತು ದೊಡೇರಿ ಕಾವಲು ಗ್ರಾಮಗಳಿಗೆ ದೇವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಭಕ್ತರಿಂದ ಪಡಿ ಅಕ್ಕಿ ಮತ್ತು ಹರಕೆಯನ್ನು ಪಡೆಯುತ್ತಾರೆ.

ಬಲಿಪಾಡ್ಯಮಿಯ ದಿನವಾದ ಶುಕ್ರವಾರ ಸಂಜೆ (ಅ. 20) ಚನ್ನಕೇಶವ ದೇವರು ಮಾಚಬೂವನಹಳ್ಳಿ (ಕಾವಲು ಬಾರೆ) ಗ್ರಾಮಕ್ಕೆ ಬಂದಾಗ ವಿಶೇಷ ಪೂಜೆ ಸಲ್ಲಿಸುತ್ತಾರೆ. ಗ್ರಾಮದ ಪ್ರಮುಖ ಬೀದಿಯಲ್ಲಿ ಎತ್ತರಕ್ಕೆ ಮಣ್ಣಿನ ಮಡಕೆಯನ್ನು ನೇತು ಹಾಕುತ್ತಾರೆ.

ಯುವಕರ ಗುಂಪು ಮಡಕೆಯನ್ನು ನೆಗೆದು ಒಡೆಯುವಾಗ ಎರಡು ಬದಿಯಿಂದ ನೀರನ್ನು ಅವರ ಮೇಲೆ ಎರಚುತ್ತಾರೆ. 30 ಅಡಿ ಎತ್ತರದ ಕಂಬವನ್ನು ನೆಟ್ಟು ಅದರ ತುದಿಗೆ ಬಹುಮಾನವನ್ನು ಕಟ್ಟಲಾಗುತ್ತದೆ. ಕಂಬದ ತುಂಬ ಎಣ್ಣೆ ಮತ್ತು ರಾಗಿಯನ್ನು ಹಚ್ಚಿರುತ್ತಾರೆ. ಎಣ್ಣೆಯಲ್ಲಿ ಜಾರುವ ಕಂಬವನ್ನು ಹತ್ತಿ ತುದಿ ಮುಟ್ಟಿದ್ದವರಿಗೆ ಬಹುಮಾನವನ್ನು ಗ್ರಾಮಸ್ಥರು ನೀಡುತ್ತಾರೆ.

ಜಿನ್ನೇನಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಶನಿವಾರ (ಅ.21) ಬಾಯಿಬೀಗ ಮತ್ತು ಹರಕೆಯನ್ನು ಭಕ್ತರು ನಡೆಸುತ್ತಾರೆ. ಚನ್ನಕೇಶವ ದೇವರನ್ನು ಮೂಲಸ್ಥಾನಕ್ಕೆ ಕರೆತರುವ ಮೂಲಕ ಹಬ್ಬವನ್ನು ಮುಕ್ತಾಯಗೊಳಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT