ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೋದವಂದಪುರ: ಚೆಕ್‌ ಡ್ಯಾಂ ಒಡೆದು ರೈತರ ಹೊಲಕ್ಕೆ ಹಾನಿ

Last Updated 17 ಅಕ್ಟೋಬರ್ 2017, 6:59 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ದೋಟಿಕೊಳ್‌ ಹಾಗೂ ಸುತ್ತಲಿನ 8 ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಾಗುವ ‘ಸುಜಲಾ–3 ಯೋಜನೆ’ ಅಡಿಯಲ್ಲಿ ನೀರು ಹಾಗೂ ಮಣ್ಣು ಸಂರಕ್ಷಣೆಗೆ ಕೈಗೊಂಡ ಜಲಾನಯನ ಕಾಮಗಾರಿಗೆ ಮಳೆಯಿಂದ ಹಾನಿಯಾಗಿದೆ.

ಖೊದವಂದಪುರ ಗ್ರಾಮದ ಹಣಮಂತರಾವ್‌ ಬ್ಯಾಲಳ್ಳಿ ಅವರಿಗೆ ಸೇರಿದ ಸ.ನಂ. 19ರಲ್ಲಿ ನಿರ್ಮಿಸಿದ ಬೃಹತ್‌ ಚೆಕ್‌ ಡ್ಯಾಂ ಒಡೆದು ಹೋಗಿ ರೈತನಿಗೆ ಅಪಾರ ಹಾನಿ ಉಂಟು ಮಾಡಿದೆ. ‘ಎತ್ತರದ ಗುಡ್ಡದ ಮೇಲಿನಿಂದ ಮಳೆ ನೀರು ಬಂದು ಚೆಕ್‌ ಡ್ಯಾಂನಲ್ಲಿ ಸಂಗ್ರಹವಾಗುವಂತೆ ನಿರ್ಮಿಸಿದ ಚೆಕ್‌ ಡ್ಯಾಂನ ಕಾಮಗಾರಿ ಗುಣಮಟ್ಟದಿಂದ ನಡೆಸದ ಕಾರಣ ನೀರಿನ ಒತ್ತಡ ತಡೆಯಲಾಗದೇ ಒಡೆದು ಭೂಮಿಯನ್ನು ಕೊಚ್ಚಿಕೊಂಡು ಹೋಗಿದೆ’ ಎಂದು ಚನ್ನವೀರ ಬ್ಯಾಲಳ್ಳಿ ದೂರಿದ್ದಾರೆ. ಚೆಕ್‌ ಡ್ಯಾಂನ ಬಂಡ್‌ ಒಡೆದಿದ್ದಲ್ಲದೇ ಭೋಂಗಾ ಬಿದ್ದು ನೀರು ಹರಿದು ಹೊಲದ ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ರೈತನಿಗೆ ನಷ್ಟವಾಗಿದೆ.

ತನಿಖೆಗೆ ಬಿಜೆಪಿ ಒತ್ತಾಯ: ಮಳೆ ನೀರು ವ್ಯರ್ಥವಾಗುವುದನ್ನು ತಡೆಯುವುದಕ್ಕಾಗಿ ನಿರ್ಮಿಸಿದ ಜಲಾನಯನ ಕಾಮಗಾರಿಗಳು ಮಳೆಗೆ ಆಹುತಿಯಾಗಿವೆ. ಇದರಲ್ಲಿ ವ್ಯಾಪಕ ಗೋಲ್‌ಮಾಲ್‌ ನಡೆದಿದ್ದು ತನಿಖೆ ನಡೆಸುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಂತುರೆಡ್ಡಿ ನರನಾಳ್‌ ದೂರಿದ್ದಾರೆ.

ದೋಟಿಕೊಳ ಗ್ರಾಮದಲ್ಲಿ ಕೂಡ ಕೃಷಿ ಹೊಂಡ, ಟ್ರೆಂಚ್‌ ಬಂಡ್‌, ಇಂಗುಗುಂಡಿಗಳು ಒಡೆದುಹೋಗಿವೆ. ಸರ್ಕಾರ ಬರಗಾಲವನ್ನು ಸಮರ್ಥವಾಗಿ ಎದುರಿಸಲು ರೈತರ ಜಮೀನಿನಲ್ಲಿ ಮತ್ತು ಸರ್ಕಾರದ ಜಮೀನಿನಲ್ಲಿ ಕೈಗೊಂಡ ಕಾಮಗಾರಿಗಳ ತನಿಖೆ ನಡೆಸಬೇಕು ಹಾಗೂ ಇವುಗಳ ಪರಿಶೀಲನೆಗೆ ಮೂರನೇ ತಂಡ (ಥರ್ಡ್‌ ಪಾರ್ಟಿ) ರಚಿಸಬೇಕೆಂದು ಒತ್ತಾಯಿಸಿದ್ದಾರೆ.

8 ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಿರುವ ಯೋಜನೆ ಅಡಿಯಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿಗಳ ವಿವರ ಆಯಾ ಗ್ರಾಮಗಳಲ್ಲಿ ಡಂಗೂರು ಸಾರಿ ಜನರಿಗೆ ತಿಳಿಸಲು ಗ್ರಾಮಸಭೆ ಮಾಡಬೇಕು ಮತ್ತು ಗ್ರಾಮ ಪಂಚಾಯಿತಿಯಲ್ಲಿ ಕಡ್ಡಾಯವಾಗಿ ಒಂದು ಪ್ರತಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಸುರಕ್ಷಿತವಾಗಿಡಬೇಕೆಂದು ಅವರು ಒತ್ತಾಯಿಸಿದ್ದಾರೆ.] ಈಗ ಒಡೆದುಹೋದ ಚೆಕ್‌, ಕೃಷಿ ಹೊಂಡಗಳನ್ನು ತಕ್ಷಣ ದುರಸ್ತಿಗೊಳಿಸಬೇಕು, ನಷ್ಟಕ್ಕೊಳಗಾದ ರೈತನಿಗೆ ಪರಿಹಾರ ನೀಡಬೇಕೆಂದು ಶಾಂತುರೆಡ್ಡಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT