ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಾಮಾಣಿಕರ ವಿರುದ್ಧ ‘ನೋಟಾ’ ಚಲಾಯಿಸಿ‌

Last Updated 17 ಅಕ್ಟೋಬರ್ 2017, 7:31 IST
ಅಕ್ಷರ ಗಾತ್ರ

ಮಂಡ್ಯ: ‘ಭ್ರಷ್ಟಾಚಾರ ತಾಂಡವ ವಾಡುತ್ತಿರುವ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸಲು ಮತ ದಾರರು ಜಾಗೃತರಾಗಬೇಕು. ಕಣದಲ್ಲಿ ರುವ ಅಭ್ಯರ್ಥಿಗೆ ಜನಪ್ರತಿನಿಧಿಯಾಗಿ ಆಯ್ಕೆಯಾಗುವ ಅರ್ಹತೆ ಇಲ್ಲದಿದ್ದರೆ ನೋಟಾ (ಎನ್‌ಒಟಿಎ: ಮೇಲಿನ ಯಾರಿಗೂ ಮತವಿಲ್ಲ) ಚಲಾಯಿಸಬೇಕು’ ಎಂದು ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಅರಳಿ ನಾಗರಾಜ್‌ ಹೇಳಿದರು.

‘ಚುನಾವಣಾ ರಾಜಕಾರಣ ಸುಧಾರಣೆಯಾಗಬೇಕಾದರೆ ಮೊದಲು ಮತದಾರ ಅರಿವು ಹೊಂದಬೇಕು. ರಾಜಕೀಯ ಭ್ರಷ್ಟಾಚಾರಗಳ ವಿರುದ್ಧ ಹೋರಾಟ ನಡೆಸಬೇಕು. ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ಎನ್ನುವುದು ದೈತ್ಯಾಕಾರವಾಗಿ ಬೆಳೆಯುತ್ತದೆ. ಅದು ಇಡೀ ವ್ಯವಸ್ಥೆಯನ್ನು ಬಣ್ಣಗೆಡಿಸಲು ಸಂಚು ಹೂಡುತ್ತದೆ. ಹೀಗಾಗಿ ಜನರು ಜಾಗೃತರಾಗಿ ಮತಪೆಟ್ಟಿಗೆಯಿಂದಲೇ ಭ್ರಷ್ಟರಿಗೆ ತಕ್ಕ ಉತ್ತರ ನೀಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಭದ್ರ ವಾಗಿಡಲು ಚುನಾವಣಾ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು’ ಎಂದು ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

‘ಸುಪ್ರೀಂ ಕೋರ್ಟ್‌ ಮತದಾರರಿಗೆ ನೋಟಾ ಚಲಾವಣೆ ಮಾಡುವ ಅಧಿಕಾರ ನೀಡಿದೆ. ಆದರೆ ಈ ಬಗ್ಗೆ ಯಾವುದೇ ಸರ್ಕಾರ, ಚುನಾವಣಾ ಆಯೋಗ ಹಾಗೂ ಇತರ ಸಂಘಸಂಸ್ಥೆಗಳು ಜನರಲ್ಲಿ ಅರಿವು ಮೂಡಿಸುವ ಕೆಲಸಮಾಡಿಲ್ಲ. ಭ್ರಷ್ಟರಿಗೆ ಮತ ಹಾಕಲು ಇಷ್ಟಪಡದ ಕೆಲವರು ಮತದಾನ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದಾರೆ.

ಹೀಗಾಗಿ ಜನರಲ್ಲಿ ನೋಟಾ ಚಲಾವಣೆಯ ಬಗ್ಗೆ ಆಂದೋಲನಗಳ ಮೂಲಕ ಜಾಗೃತಿ ಮೂಡಿಸಬೇಕು. ಇದರಿಂದ ಅಭ್ಯರ್ಥಿಯ ಸೋಲು– ಗೆಲುವಿಗೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ನೈತಿಕತೆ, ಕಳಕಳಿ ಇರುವವರು ಮಾತ್ರ ಜನಪ್ರತಿನಿಧಿಗಳಾಗಬೇಕು’ ಎಂದು ಹೇಳಿದರು.

‘ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯ ಹಿನ್ನೆಲೆಯನ್ನು ಪರಿಶೀಲನೆ ನಡೆಸಬೇಕು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತದಾರರಿಗೆ ಆಸೆ, ಆಮಿಷಗಳನ್ನು ಒಡ್ಡುವ ವ್ಯವಸ್ಥೆ ನಿಲ್ಲಬೇಕು. ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕ ನೀತಿ ಬಂದಾಗ ಮಾತ್ರ ಯೋಗ್ಯ ಅಭ್ಯರ್ಥಿಗಳು ಸಂಸತ್ತು, ಶಾಸನ ಸಭೆ ಪ್ರವೇಶಿಸಲು ಸಾಧ್ಯ. ಜಾತೀಯತೆ, ಸ್ವಜನ ಪಕ್ಷಪಾತ, ತಾರತಮ್ಯ ಮಾಡುವ ಅಭ್ಯರ್ಥಿಗಳನ್ನು ಸಾರಾಸಗಟಾಗಿ ತಿರಸ್ಕಾರ ಮಾಡಬೇಕು’ ಎಂದರು.

‘ಸಂವಿಧಾನ ನೀಡಿರುವ ಸಾಮಾಜಿಕ ನ್ಯಾಯ ಪರಿಕಲ್ಪನೆ ದುರ್ಬಳಕೆಯಾಗುತ್ತಿರುವುದು ದುರದೃಷ್ಟಕರ. ಮೀಸಲಾತಿ ದುರ್ಬಲರಿಗೆ ಸಿಗುವಂತಾ ಗಬೇಕು. ಸುಪ್ರೀಂ ಕೋರ್ಟ್‌ ಬಡ್ತಿ ಮೀಸಲಾತಿಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ ಅದರ ವಿರುದ್ಧ ಸುಗ್ರೀವಾಜ್ಞೆ ತರುವುದು ಸರಿಯಾದ ನಿರ್ಧಾರವಲ್ಲ. ರಾಷ್ಟ್ರೀಯ ಹೆದ್ದಾರಿ ಬದಿ ಬಾರ್‌ಗಳನ್ನು ಮುಚ್ಚುವಂತೆ ಆದೇಶ ನೀಡಿದರೆ ಹೆದ್ದಾರಿಗಳನ್ನೇ ಡಿನೋಟಿಫೈ ಮಾಡುವುದು ನ್ಯಾಯವಲ್ಲ’ ಎಂದು ಹೇಳಿದರು.

ಮಕ್ಕಳಿಗೆ ಕೌನ್ಸೆಲಿಂಗ್‌ ಅಗತ್ಯ: ‘ಹಿರಿಯರಾದ ತಂದೆ–ತಾಯಂದಿರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಬೆಳವಣಿಗೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದನ್ನು ತೊಡೆದು ಹಾಕಲು ಮಕ್ಕಳಿಗೆ ಕೌನ್ಸೆಲಿಂಗ್‌ ಮಾಡಬೇಕು. ಹಿರಿಯರ ಮಹತ್ವವನ್ನು ಅರಿಯುವಂತೆ ಅವರಿಗೆ ತಿಳಿ ಹೇಳಬೇಕು ’ ಎಂದು ಹೇಳಿದರು. ವಕೀಲ ಗುರುಪ್ರಸಾದ್‌, ಸೋಮಶೇಖರ್‌ ಕೆರೆಗೋಡು, ಕೆ.ಸಿ.ಮಂಜುನಾಥ್‌, ಬಿ.ಪಿ.ಪ್ರಕಾಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT