ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ

Last Updated 17 ಅಕ್ಟೋಬರ್ 2017, 9:24 IST
ಅಕ್ಷರ ಗಾತ್ರ

ಉಡುಪಿ: ಪಡುಕೆರೆ ಹಾಗೂ ಸುತ್ತಮುತ್ತಲಿನ ಕಡಲ್ಕೊರೆತ ಸಮಸ್ಯೆ ಬಗೆಹರಿಸಲು ಶಾಶ್ವತ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು. ಮಟ್ಟು ಗ್ರಾಮದ ಸಮೀಪ ಸೋಮವಾರ ನಡೆದ ಶಾಶ್ವತ ತಡೆಗೋಡೆ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಳೆಗಾಲದಲ್ಲಿ ಜನರು ಆತಂಕದಿಂದ ಜೀವನ ನಡೆಸುವ ಪರಿಸ್ಥಿತಿ ಇದೆ. ಆದ್ದರಿಂದ ₹78ಕೋಟಿ ವೆಚ್ಚದಲ್ಲಿ ವೈಜ್ಞಾನಿಕ ರೀತಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಜನರು ಅಭದ್ರತೆಯ ಭಾವನೆ ಇಲ್ಲದೆ ಜೀವನ ಸಾಗಿಸಬಹುದು ಎಂದು ಹೇಳಿದರು.

ಪಡುಬಿದ್ರಿಯ ಕಡಲ ಕಿನಾರೆಯನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪಡುಕೆರೆಯನ್ನೂ ಸಹ ಪ್ರವಾಸಿ ತಾಣವಾಗಿ ರೂಪಿಸಲಾಗುವುದು. ಇದರಿಂದಾಗಿ ಸ್ಥಳೀಯ ಜನರಿಗೆ ಉದ್ಯೋಗ ಅವಕಾಶಗಳು ಸಿಗಲಿವೆ. ಸರ್ಕಾರ ನಡೆಸುವ ಕಾಮಗಾರಿಗಳ ಮಾಹಿತಿ ಸ್ಥಳೀಯ ಜನರಿಗೆ ಇರಬೇಕು ಎಂಬ ಕಾರಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಮೀನುಗಾರರನ್ನು ಪ್ರೋತ್ಸಾಹಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 110 ಮೀನುಗಾರರಿಗೆ ಸಾಧ್ಯತಾ ಪತ್ರವನ್ನು ವಿತರಿಸಲಾಗಿದೆ ಎಂದರು.

ಪಡುಕೆರೆಯಿಂದ ಹೆಜಮಾಡಿಯವರೆಗೆ ಸಂಪರ್ಕ ರಸ್ತೆ ನಿರ್ಮಾಣ ಮಾಡಲು ಆದ್ಯತೆ ನೀಡಲಾಗಿದ್ದು, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದೆ. ಹೆಜಮಾಡಿ ಕ್ರೀಡಾಂಗಣಕ್ಕೂ ₹3 ಕೋಟಿ ನೀಡಲು ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಒಪ್ಪಿದ್ದಾರೆ. ಪಡುಕೆರೆ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವ ಪ್ರಮೋದ್ ಮಧ್ವರಾಜ್, ಕರಾವಳಿ ತೀರದ ಜನರು ಮಳೆಗಾಲದಲ್ಲಿ ಕಡಲ್ಕೊರೆತದ ಆತಂಕ ಎದುರಿಸುತ್ತಾರೆ. ಇದನ್ನು ಕೊನೆಗಾಣಿಸುವ ಉದ್ದೇಶದಿಂದ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸಹಕಾರದೊಂದಿಗೆ ಉಳ್ಳಾಲದಿಂದ ಶಿರೂರಿನವರೆಗೆ ₹900 ಕೋಟಿ ವೆಚ್ಚದ ಶಾಶ್ವತ ತಡೆಗೋಡೆ ನಿರ್ಮಾಣ ಯೋಜನೆ ತಯಾರಿಸಲಾಗಿದೆ.

ಪಡುಕೆರೆ ಸಮುದ್ರ ಕಿನಾರೆಯ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ₹90 ಕೋಟಿ ಅನುದಾನ ಬಿಡುಗಡೆಯಾಗಿದೆ. ₹78 ಕೋಟಿ ಮೊತ್ತದ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ವಿನಯ ಕುಮಾರ್ ಸೊರಕೆ ಅವರ ಪ್ರಯತ್ನದಿಂದಾಗಿಯೇ 5 ಕಿ.ಮೀ.ವರೆಗಿನ ಈ ಕಾಮಗಾರಿ ಅನುಷ್ಠಾನವಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಹೆಜಮಾಡಿ ಬಂದರು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ . ಸದಸ್ಯೆ ರಜನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಂಧಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸರಸು ಬಂಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT