ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 200 ಕೋಟಿ ಅವ್ಯವಹಾರ ಶಂಕೆ: ಬೆಳ್ಳುಬ್ಬಿ

Last Updated 17 ಅಕ್ಟೋಬರ್ 2017, 9:29 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಕಾಲುವೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಈ ಕಾಮಗಾರಿಗಳಲ್ಲಿ ಸುಮಾರು ₹ 200 ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಗಂಭೀರ ಆರೋಪ ಮಾಡಿದರು.

ಪಟ್ಟಣದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಮಸೂತಿಯಿಂದ ಪಶ್ಚಿಮದ ಮುಖ್ಯ ಕಾಲುವೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಕಾಮಗಾರಿ ಮಾಡಿದ ಕೆಲ ತಿಂಗಳಲ್ಲಿಯೇ ಕಾಲುವೆಯ ಗೋಡೆ ಕುಸಿದು ಬೀಳುತ್ತಿವೆ. ಇದು ಬಸವನಬಾಗೇವಾಡಿ ತಾಲ್ಲೂಕಿನ ಒಂದು ಉದಾಹರಣೆಯಾಗಿದೆ.

ಇದೇ ರೀತಿ ಮುದ್ದೇಬಿಹಾಳ ತಾಲ್ಲೂಕು ಸೇರಿದಂತೆ ವಿವಿಧೆಡೆಯ ಬಹುತೇಕ ಕಾಲುವೆಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಈ ಕುರಿತು ಸರ್ಕಾರ ತನಿಖೆ ಮಾಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಸೇರಿದಂತೆ ಕೆರೆ ತುಂಬುವ ಯೋಜನೆ ಪೂರ್ಣಗೊಂಡು ಜಮೀನುಗಳಿಗೆ ನೀರು ಹರಿಯತ್ತದೆ ಎಂಬ ರೈತರ ನಿರೀಕ್ಷೆಯನ್ನು ಸರ್ಕಾರ ಹುಸಿಗೊಳಿಸುತ್ತಿದೆ. ₹ 13 ಸಾವಿರ ಕೋಟಿ ವೆಚ್ಚದ ನೀರಾವರಿ ಯೋಜನೆಯಲ್ಲಿ ಇದುವರೆಗೆ ಕೇವಲ ₹ 6 ಸಾವಿರ ಕೋಟಿ ಮಾತ್ರ ಖರ್ಚು ಮಾಡಲಾಗಿದೆ. ನೀರಾವರಿ ವಿಷಯ ಕುರಿತು ಸರ್ಕಾರದ ಕಾರ್ಯ ವೈಖರಿ ನೋಡಿದರೆ ಕಾಮಗಾರಿಯನ್ನು ಪೂರ್ಣಗೊಳಿಸುವ ಲಕ್ಷಣಗಳು ಕಂಡು ಬರುತ್ತಿಲ್ಲ ಎಂದು ಹೇಳಿದರು.

ವಿವಿಧ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಪ್ರಮುಖವಾಗಿ ಐದು ಜಾಕ್‌ವೆಲ್ ಕಾಮಗಾರಿ ನಡೆಯುತ್ತಿವೆ. ಕ್ಷೇತ್ರದ ಶಾಸಕರು, ನೀರಾವರಿ ಸಚಿವರು ರೈತರ ಹಾಗೂ ಅಧಿಕಾರಿಗಳ ಸಭೆಯನ್ನು ಕರೆದು ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸಬೇಕಿತ್ತು ಎಂದು ಹೇಳಿದರು.

ರಾಜ್ಯ ಸರ್ಕಾರ ಕಾಲುವೆ ಕಾಮಗಾರಿ ಕಳಪೆಯಾಗಿರುವ ಕುರಿತು ಎಸಿಬಿಯಿಂದ ತನಿಖೆ ಮಾಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅ.23 ರಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳುವ ಕುರಿತು ರೈತರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಬಸವರಾಜ ಕುಂಬಾರ, ರಾಮು ಜಗತಾಪ, ನಿತ್ಯಾನಂದ ಮಠ, ಪ್ರವೀಣ ಪವಾರ, ಮುಲ್ಲು ಶೇಬಗೊಂಡ, ರಾಮಣ್ಣ ಬಾಟಿ, ಆನಂದ ಬಿಸ್ಟಗೊಂಡ, ಚನ್ನಯ್ಯ ಸ್ವಾಮಿ, ಈರಣ್ಣ ರೊಳ್ಳಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT