ಮೂರೂವರೆ ದಶಕದ ಕನಸು ನನಸು!

ಗುರುವಾರ , ಜೂನ್ 20, 2019
27 °C

ಮೂರೂವರೆ ದಶಕದ ಕನಸು ನನಸು!

Published:
Updated:
ಮೂರೂವರೆ ದಶಕದ ಕನಸು ನನಸು!

ವಿಜಯಪುರ: ನಾಲ್ಕು ವರ್ಷದ ಸತತ ಪ್ರಯತ್ನದ ಫಲವಾಗಿ ಮೂರುವರೆ ದಶಕದ ಕನಸು ನನಸಾಗಿದೆ. ಕಬ್ಬು ಬೆಳೆಗಾರರ ಕಂಗಳಲ್ಲಿ ಭರವಸೆಯ ಬೆಳಕು ಮಿನುಗುತ್ತಿದೆ. 16395 ರೈತರ ಒಡೆತನದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸ್ತುತ ಹಂಗಾಮಿ ನಿಂದಲೇ ಕಬ್ಬು ಹರಿಯಲು ಸಜ್ಜಾಗಿದೆ.

ಈಗಾಗಲೇ ಬಾಯ್ಲರ್ ಪ್ರದೀಪನಾ ಕಾರ್ಯ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪೂಜೆ ಗೊಂಡು, ಕಬ್ಬು ಅರೆಯುವಿಕೆ ಆರಂಭಿಸಲು ಸಕಲ ಸಿದ್ಧತೆಗಳು ಬಿರುಸಿನಿಂದ ನಡೆದಿವೆ.

2013ರ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಯಶವಂತರಾಯ ಗೌಡ ಪಾಟೀಲ ಈ ಭಾಗದ ಜನತೆಗೆ ನೀಡಿದ್ದ ಆಶ್ವಾಸನೆಯಂತೆ, ಶಾಸಕರಾಗಿ ಆಯ್ಕೆಯಾದ ಬಳಿಕ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮರು ಜನ್ಮ ನೀಡಿದ್ದು, ಉದ್ಘಾಟನೆ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.

ಇತಿಹಾಸ: ಸಹಕಾರಿ ಕ್ಷೇತ್ರ ಸಶಕ್ತವಾಗಿದ್ದ ಕಾಲಘಟ್ಟದಲ್ಲೇ ಇಂಡಿ–ಸಿಂದಗಿ ತಾಲ್ಲೂಕಿನ ಕಬ್ಬು ಬೆಳೆಗಾರರ ಸಂಕಷ್ಟ ತಪ್ಪಿಸಿ, ಹಿತಾಸಕ್ತಿ ರಕ್ಷಿಸಬೇಕು ಎಂಬ ಕೂಗು ಪ್ರಬಲವಾಗಿತ್ತು. ನಾಲ್ಕಾರು ವರ್ಷಗಳ ಬೇಡಿಕೆಗೆ ಜೀವ ತುಂಬಿದ ಸಹಕಾರಿ ಧುರೀಣ ಎಸ್.ಆರ್.ನಾಕರೆ 1983ರ ಏಪ್ರಿಲ್‌ 20ರಂದು ಸಹಕಾರ ಸಂಘಗಳ ಕಾಯ್ದೆಯನ್ವಯ ಸಹಕಾರಿ ಕಾರ್ಖಾನೆ ಸ್ಥಾಪನೆಯ ನೋಂದಣಿ ಕಾರ್ಯ ನೆರವೇರಿಸಿದರು.

ಎರಡೂ ತಾಲ್ಲೂಕಿನ ರೈತರು ಆರಂಭದಲ್ಲಿ ತಲಾ ₹ 1000 ಷೇರು ಧನ ನೀಡಿದರು. ನಂತರ ಮತ್ತೆ ₹ 1000 ಷೇರು ಧನ ನೀಡುವ ಮೂಲಕ ಒಟ್ಟು ₹ 4.61 ಕೋಟಿ ಷೇರು ಸಂಗ್ರಹಿಸಿದರು. ರಾಜ್ಯ ಸರ್ಕಾರ ಸಹ ಸಹಕಾರಿ ಸಕ್ಕರೆ ಸ್ಥಾಪನೆಗಾಗಿ 1997, 2001ರಲ್ಲಿ ₹ 8.20 ಕೋಟಿ ಷೇರು ಬಂಡವಾಳ ನೀಡಿದೆ.

ಆಗ ಸಂಸದರಾಗಿದ್ದ ಬಿ.ಕೆ.ಗುಡದಿನ್ನಿ ಸಹಕಾರಿ ಸಕ್ಕರೆ ಸ್ಥಾಪನೆಗೆ ಅಗತ್ಯವಿರುವ ಎಲ್ಲ ಪರವಾನಗಿ ಕೊಡಿಸಿದರು. ಆದರೆ ರಾಜಕೀಯ ನೇತಾರರ ಇಚ್ಛಾಶಕ್ತಿ ಕೊರತೆಯಿಂದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಗೊಳ್ಳಲಿಲ್ಲ.

ವಿಜಯಪುರ ತಾಲ್ಲೂಕು ಕೃಷ್ಣಾನಗರದಲ್ಲಿ ರೈತರ ಸಹಕಾರದಿಂದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಗೊಂಡು, ಆ ಭಾಗದ ಜನರ ಆರ್ಥಿಕ–ಸಾಮಾಜಿಕ ಪ್ರಗತಿಗೆ ಮುನ್ನುಡಿ ಬರೆಯಿತು. ನಮ್ಮ ಭಾಗದಲ್ಲಿ ಸಕಾಲಕ್ಕೆ ಸಹಕಾರ ದೊರಕದೆ ಕಬ್ಬು ಬೆಳೆಗಾರರು ಮೂರ್ನಾಲ್ಕು ದಶಕ ಖಾಸಗಿ ಕಾರ್ಖಾನೆಗಳ ಹಿಡಿತಕ್ಕೆ ಸಿಲುಕಿ ನಲುಗಬೇಕಾಯಿತು ಎಂದು ಸಂಭಾಜಿ ಮಿಸಾಳೆ ಕಾರ್ಖಾನೆಯ ಇತಿಹಾಸ ತಿಳಿಸಿದರು. ಇದರ ನಡುವೆ ಕಾರ್ಖಾನೆಗೆ ಮಂಜೂರಾಗಿದ್ದ 181.12 ಎಕರೆ ಜಮೀನು ಕಬಳಿಸುವ ಹುನ್ನಾರಗಳು ನಡೆದವು.

ರೈತರ ಆಸ್ತಿಯಾಗಿದ್ದ ಕಾರ್ಖಾನೆಯನ್ನು ‘ರಾಯಲ್ ಪರ್ಲ್’ ಹೆಸರಿನಲ್ಲಿ ಖಾಸಗಿ ಆಸ್ತಿಯನ್ನಾಗಿಸುವ ಸಂಚು ನಡೆಯಿತು. ಇದರ ವಿರುದ್ಧ ಸುಪ್ರೀಂಕೋರ್ಟ್‌ನವರೆಗೂ ತೆರಳಿ ರೈತರ ಆಸ್ತಿಯನ್ನು ಉಳಿಸಿಕೊಳ್ಳಲಾಗಿದೆ ಎಂದು ಕಾನೂನು ಹೋರಾಟದ ಹಾದಿಯನ್ನು ಸ್ಮರಿಸಿಕೊಂಡರು.

ತೃಪ್ತಿ ಸಿಕ್ಕಿದೆ: ‘ಬೆಳಗಾವಿ ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕರು ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಅಸಾಧ್ಯ ಎಂದು 2007ರಲ್ಲಿ ಸಮಾಪನಾ ಆದೇಶ ಹೊರಡಿಸಿದ್ದರು. ಲಿಕ್ವಿಡೇಷನ್‌ ಆದ ಸಂಸ್ಥೆಗೆ ಮರು ಜನ್ಮ ನೀಡುವುದು ಕಷ್ಟಸಾಧ್ಯದ ಕೆಲಸವಾಗಿತ್ತು. ಎಲ್ಲ ಅಡೆತಡೆ ನಿವಾರಿಸಿ ಕಾರ್ಖಾನೆ ಕಾರ್ಯಾರಂಭಿಸುತ್ತಿರುವುದಕ್ಕೆ ಅಪಾರ ಸಂತಸವಾಗುತ್ತಿದೆ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.

‘ಕಾರ್ಖಾನೆ ಆರಂಭಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಒಬ್ಬೊಬ್ಬರ ಸಹಕಾರವೂ ಸ್ಮರಣಾರ್ಹ. ರಾಜ್ಯ ಸರ್ಕಾರ ₹ 39 ಕೋಟಿ ಅನುದಾನ ನೀಡಿದ್ದು, ಇದರಲ್ಲೇ ಈಕ್ವಿಟಿ ಷೇರು ನೀಡಿದೆ. ಸಹಕಾರ ಬ್ಯಾಂಕ್‌ಗಳು, ಸಹಕಾರ ಸಕ್ಕರೆ ಕಾರ್ಖಾನೆಗಳು ನೆರವು ನೀಡಿವೆ’ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry