ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಕೋಡಿಯಲ್ಲಿ ಮಕ್ಕಳ ಮೀನುಬೇಟೆ!

Last Updated 17 ಅಕ್ಟೋಬರ್ 2017, 9:39 IST
ಅಕ್ಷರ ಗಾತ್ರ

ಯಾದಗಿರಿ: ಕೆಲವರು ಸೊಳ್ಳೆ ಪರದೆ ಹಿಡಿದು ಬಂದಿದ್ದರು. ಹಲವರು ಮನೆಯಲ್ಲಿನ ತಾಯಂದಿರ ಸೀರೆ ಹೊತ್ತು ತಂದಿದ್ದರು. ಉಳಿದವರು ಹೊಲಗಳಲ್ಲಿನ ಅಪ್ಪಂದಿರು ಉಟ್ಟ ಲುಂಗಿ, ಟವೆಲ್ಲು ತೆಗೆದುಕೊಂಡು ಬಂದಿದ್ದರು. ಕೆರೆ ಕೋಡಿಯ ಉದ್ದಕ್ಕೂ ಹರಿಯುವ ನೀರಿಗೆ ಅಡ್ಡಲಾಗಿ ಅವುಗಳನ್ನು ಹಿಡಿದು ಕೌತುಕ ವ್ಯಕ್ತಪಡಿಸುತ್ತಿದ್ದರು.

ಶಬ್ದ ಮಾಡದಂತೆ ಉಳಿದವರಿಗೆ ತಂಡದಲ್ಲಿದ್ದವರು ಸೂಚನೆ ನೀಡುತ್ತಿದ್ದರು. ಅಬ್ಬಾ... ಈಗ ಮೇಲಕ್ಕೆತ್ತಿ ಎಂದು ಸಲಹೆ ನೀಡುತ್ತಿದ್ದರು. ಮಕ್ಕಳು ಹಿಡಿದ ಸೊಳ್ಳೆ ಪರದೆಯಲ್ಲಿ ಹಲವು ಮೀನುಗಳು ಒದ್ದಾಟ ನಡೆಸಿದ್ದವು. ಮೀನು ನೋಡಿದ ಮಕ್ಕಳ ಸಂಭ್ರಮ ಮುಗಿಲು ಮುಟ್ಟಿತ್ತು. ಬಲೆಗೆ ಬಿದ್ದ ಮೀನುಗಳನ್ನು ಚೀಲಕ್ಕೆ ತುಂಬಿ, ಮೀನು ಬೇಟೆಯ ಸಂಭ್ರಮಕ್ಕೆ ಮಕ್ಕಳು ಅಣಿಯಾಗುತ್ತಿದ್ದರು.

ನಿರಂತರ ಮಳೆಗೆ ಕೋಡಿಬಿದ್ದು ಹರಿಯುತ್ತಿರುವ ವರ್ಕನಳ್ಳಿ ಕೆರೆಯಲ್ಲಿ ಸೋಮವಾರ ಕಂಡುಬಂದ ಮಕ್ಕಳ ಮೀನು ಬೇಟೆಯ ದೃಶ್ಯಾವಳಿಗಳಿವು. ಜಿಲ್ಲೆಯಲ್ಲಿ ತುಂಬಿದ ಕೆರೆಗಳು ಈಗ ಮಕ್ಕಳ ಆಕರ್ಷಣಾ ಕೇಂದ್ರಗಳಾಗಿವೆ. ದಸರಾ ರಜೆ ಇರುವುದರಿಂದ ಮಕ್ಕಳು ಕೆರೆ ಏರಿ, ಕೆರೆದಂಡೆ, ಕೋಡಿಗಳಲ್ಲಿ ಈಜಾಡುತ್ತಾ ಸಂಭ್ರಮಿಸುತ್ತಿದ್ದಾರೆ. ಸದಾ ಟಿ.ವಿ, ಮೊಬೈಲ್‌ಗಳಲ್ಲಿ ಮುಳುಗಿರುತ್ತಿದ್ದ ಮಕ್ಕಳು ಕೆರೆಗಳತ್ತ ದೌಡಾಯಿಸಿ ಕೆರೆ–ಕೋಡಿಗಳಲ್ಲಿ ಮೀನುಬೇಟೆ ನಡೆಸಿದ್ದಾರೆ. ಇಡೀ ದಿನ ಕೆರೆಯಂಗಳದಲ್ಲಿ ನೀರಾಟದಲ್ಲಿ ತೊಡಗಿರುವ ಮಕ್ಕಳ ಅಪರೂಪದ ಕ್ಷಣಗಳನ್ನು ನೋಡಿ ಪಾಲಕರು ಕೂಡ ಖುಷಿ ಅನುಭವಿಸುತ್ತಿದ್ದಾರೆ.

‘ಕೆರೆ ಕೋಡಿ ಬೀಳುವುದಿರಲಿ ಕನಿಷ್ಠ ಏರಿಮಟ್ಟಕ್ಕೆ ಕೆರೆ ತುಂಬಿಯೇ ಹಲವು ವರ್ಷಗಳು ಕಳೆದಿವೆ. ನಾವು ಚಿಕ್ಕವರಿದ್ದಾಗ ಕೆರೆ ಪ್ರತಿವರ್ಷ ಮಳೆಗಾಲದಲ್ಲಿ ತುಂಬಿ ಕೋಡಿ ಬೀಳುತ್ತಿತ್ತು. ನಾವೂ ಕೆರೆಯಲ್ಲೇ ನಿತ್ಯ ಈಜಾಡುತ್ತಿದ್ದೆವು. ಕೆರೆಯ ಒಡಲಿಗೆ ಇಳಿಯದ ದಿನಗಳೇ ಇರಲಿಲ್ಲ. ಎಮ್ಮೆಗಳನ್ನಾದರೂ ದಡಕ್ಕೆ ತರಲು ಕೆರೆಗೆ ಇಳಿಯಲೇಬೇಕಾಗಿ ಬರುತ್ತಿತ್ತು.

ಆದರೆ, ಮಳೆಗಾಲ ಅನಿಶ್ಚಿತಗೊಂಡ ಮೇಲೆ ಕೆರೆಗಳು ಬತ್ತಿದವು. ಇದರಿಂದ ಕೆರೆಗಳ ಒಡನಾಟ ತಪ್ಪಿತು. ಟಿ.ವಿ., ಮೊಬೈಲ್‌ಗಳೇ ಮಕ್ಕಳ ಪ್ರಪಂಚವಾಗಿದೆ. ಅವುಗಳಿಂದಾಗಿ ಕೆರೆ, ಕೃಷಿ, ಎತ್ತು, ಉಳುಮೆ, ದೇಸಿ ಕ್ರೀಡೆಗಳ ಬಗ್ಗೆ ಮಕ್ಕಳಿಗೆ ಪರಿಚಯವಿಲ್ಲದಂತಾಗಿದೆ. ಹಲವು ವರ್ಷಗಳ ನಂತರ ಕೆರೆಯ ಸೌಂದರ್ಯ ಇಮ್ಮಡಿಸಿದೆ. ಮಕ್ಕಳ ಸಂಭ್ರಮ ನೋಡಿ ನಮಗೂ ಖುಷಿಯಾಗಿದೆ’ ಎಂದು ವರ್ಕನಳ್ಳಿಯ ಬಸವರಾಜಪ್ಪ ನೆನಪುಗಳನ್ನು ಬಿಚ್ಚಿಟ್ಟರು.

ಕೆರೆಯ ಮೀನುಗಳು ಬಲು ರುಚಿ: ‘ಈ ಕೆರೆಯ ನೀರು ಪರಿಶುದ್ಧ. ಇದರಲ್ಲಿ ಮೀನುಗಳಿರಲಿಲ್ಲ. ಆದರೆ, ನಿರಂತರ ಮಳೆಗೆ ಮೀನುಗಳು ಹಳ್ಳಗಳ ಮೂಲಕ ಕೆರೆ ಸೇರಿವೆ. ಆ ಮೀನುಗಳು ಕೋಡಿ ಹರಿಯುವ ನೀರಿನ ಮೂಲಕ ಮತ್ತೆ ಹಳ್ಳ ಸೇರುತ್ತವೆ. ಅವುಗಳನ್ನು ಮಕ್ಕಳು, ದೊಡ್ಡವರು ಹಿಡಿಯಲು ಮುಗಿಬೀಳುತ್ತಾರೆ. ಕೆರೆ ಮೀನಿನ ಊಟ ಬಲು ರುಚಿ. ಅಲ್ಲದೇ ಕೆರೆದಂಡೆಯಲ್ಲೇ ಸುಟ್ಟು ತಿಂದರೆ ಮತ್ತಷ್ಟೂ ಸ್ವಾದ’ ಎನ್ನುತ್ತಾರೆ ಶಂಕರ್ ಜಾಧವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT