ಬಾಡಿಗೆ ಮನೆಗೆ ಸೇತುವೆ ‘ರೆಂಟ್‌ಪ್ರಾಪ್‌4ಯು’

7

ಬಾಡಿಗೆ ಮನೆಗೆ ಸೇತುವೆ ‘ರೆಂಟ್‌ಪ್ರಾಪ್‌4ಯು’

Published:
Updated:
ಬಾಡಿಗೆ ಮನೆಗೆ ಸೇತುವೆ ‘ರೆಂಟ್‌ಪ್ರಾಪ್‌4ಯು’

ಬೆಂಗಳೂರು ನಗರಕ್ಕೆ ವಿದ್ಯಾಭ್ಯಾಸ, ಉದ್ಯೋಗ, ವರ್ಗಾವಣೆ ಮತ್ತು ವಲಸೆ ಉದ್ದೇಶಕ್ಕೆ ಬರುವ ಪರ ಊರಿನವರಿಗೆ ಸುಲಭವಾಗಿ ಬಾಡಿಗೆ ಮನೆ ಸಿಗುವುದಿಲ್ಲ. ದಲ್ಲಾಲಿಗಳು, ಮಧ್ಯವರ್ತಿಗಳು ನಿಗದಿಪಡಿಸಿದ ಮೊತ್ತಕ್ಕೆ, ಕಮಿಷನ್‌ ಕೊಟ್ಟರೆ ಮಾತ್ರ ಬಾಡಿಗೆ ಮನೆಗಳು ಸಿಗುತ್ತವೆ. ಕೆಲವೊಮ್ಮೆ ಮಾಲೀಕರಿಗೂ ಅರ್ಹ ಬಾಡಿಗೆದಾರರೂ ಸಿಗುವುದಿಲ್ಲ. ದಲ್ಲಾಲಿಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸುವ ಸ್ಟಾರ್ಟ್‌ಅಪ್ ‘ರೆಂಟ್‌ಪ್ರಾಪ್‌4ಯು’, ಬಾಡಿಗೆದಾರ ಮತ್ತು ಮಾಲೀಕರ ಅಗತ್ಯಗಳನ್ನೆಲ್ಲ ಆನ್‌ಲೈನ್‌ ಮೂಲಕವೇ ಸುಲಭವಾಗಿ ಒದಗಿಸುತ್ತ ಯಶಸ್ಸಿನ ಹಾದಿಯಲ್ಲಿ ಸಾಗಿದೆ.

ಅದೇ ತಾನೇ ತಮ್ಮ ವೃತ್ತಿಜೀವನ ಆರಂಭಿಸುವ ಯುವ ವೃತ್ತಿಪರರಿಗೆ ದೊಡ್ಡ ಮೊತ್ತದ ಭದ್ರತಾ ಠೇವಣಿ ಅಥವಾ ಮುಂಗಡ ಠೇವಣಿ ಹೊಂದಿಸುವುದು ಸುಲಭವಾಗಿರುವುದಿಲ್ಲ. ಸ್ಥಳೀಯ ದಲ್ಲಾಲಿ ಅಥವಾ ಮಧ್ಯವರ್ತಿಗಳ ಜತೆ ವ್ಯವಹರಿಸುವಲ್ಲಿ ಭಾಷೆಯೂ ದೊಡ್ಡ ಅಡ್ಡಿಯಾಗಿ ಪರಿಣಮಿಸಿರುತ್ತದೆ.  ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮನೆಗಳು ಬಾಡಿಗೆಗೆ ಲಭ್ಯ ಇವೆ. ಅವುಗಳಲ್ಲಿ ಬಹಳಷ್ಟು ಮನೆಗಳು ಸೂಕ್ತ ಬಾಡಿಗೆದಾರರು ಸಿಗದೇ ಖಾಲಿಯಾಗಿಯೇ ಉಳಿದಿರುತ್ತವೆ. ಇಂತಹ ಮನೆಗಳಿಗೆ ಅರ್ಹ ಬಾಡಿಗೆದಾರರನ್ನು ಒದಗಿಸಿ ಮಾಲೀಕರ ಚಿಂತೆ ದೂರ ಮಾಡುವ ಆನ್‌ಲೈನ್‌ ವಹಿವಾಟಿಗೆ ಬೆಂಗಳೂರಿನಲ್ಲಿ ದೊಡ್ಡ ಮಾರುಕಟ್ಟೆ ಇದೆ.

ನವೋದ್ಯಮ ಸ್ಥಾಪಿಸಲು ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಚಿಂತನೆಯು ಮೊದಲಿಗೆ ನಾಗರಾಜು ಎಂ. ಅವರಿಗೆ ಹೊಳೆದಿತ್ತು. ತಮ್ಮ ಆಲೋಚನೆಯನ್ನು ನಾಗರಾಜು ಅವರು ತಮ್ಮ ಸ್ನೇಹಿತರಾದ ಆಶಾ ಮತ್ತು ರವಿ ಅವರೊಂದಿಗೆ  ಹಂಚಿಕೊಂಡಿದ್ದರು. ಮೂವರೂ ಸೇರಿ  ಸ್ಟಾರ್ಟ್‌ಅಪ್‌ ಆರಂಭಿಸುವ ಆಲೋಚನೆಯನ್ನು ಕಳೆದ ವರ್ಷ ಕಾರ್ಯರೂಪಕ್ಕೆ ತಂದಿದ್ದರು.  ಮೊದಲ ವರ್ಷದಲ್ಲಿಯೇ ಸಂಸ್ಥೆ ₹ 1 ಕೋಟಿಗಳ ವಹಿವಾಟು ಸಾಧಿಸಿದೆ. ಮುಂದಿನ ಮೂರು ವರ್ಷಗಳಲ್ಲಿ 3000ಕ್ಕೂ ಹೆಚ್ಚಿನ ಆಸ್ತಿಗಳನ್ನು  ನಿರ್ವಹಿಸುವ ಗುರಿ ಹಾಕಿಕೊಂಡಿದೆ.

ಈ ಮೂವರೂ ಈ ನವೋದ್ಯಮಕ್ಕೆ ಕೈಹಾಕಿ ಯಶಸ್ಸಿನ ಒಂದೊಂದೇ ಮೆಟ್ಟಿಲು ಏರುತ್ತಿದ್ದಾರೆ. ಬಾಡಿಗೆದಾರರಿಗೆ ಸುಲಲಿತವಾಗಿ ಬಾಡಿಗೆ ಮನೆ ಒದಗಿಸಿ ಕೊಡುವುದು ಈ ಸ್ಟಾರ್ಟ್‌ಅಪ್‌ನ ಮೂಲ ಉದ್ದೇಶವಾಗಿದೆ. ನಗರಕ್ಕೆ ಹೊಸದಾಗಿ ಬಂದವರಿಗೆ ತಮಗೆ ಅನುಕೂಲಕರ ಸ್ಥಳದಲ್ಲಿ ಮೆಚ್ಚುಗೆ ಆಗುವಂತಹ   ಮತ್ತು ತಮ್ಮ ವರಮಾನಕ್ಕೆ ಸರಿಹೊಂದುವ ಬಾಡಿಗೆ ಮನೆ ಹುಡುಕುವುದು ದೊಡ್ಡ ಸವಾಲು ಆಗಿರುತ್ತದೆ. ಮನೆ ಬಿಡುವಾಗ ಇನ್ನೊಂದು ಬಗೆಯ ತಾಪತ್ರಯ.  ಕೆಲ ಮನೆ ಮಾಲೀಕರು ಇಲ್ಲದ ಸಬೂಬುಗಳನ್ನು ನೀಡಿ, ಪೇಂಟ್‌ ಮತ್ತಿತರ ದುರಸ್ತಿ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಾರೆ. ಬಾಡಿಗೆ ಹಿಡಿಯುವಾಗ ಮತ್ತು ಮನೆ ಬಿಡುವಾಗ ಎದುರಾಗುವ  ಇಂತಹ ತಲೆನೋವುಗಳಿಗೆಲ್ಲ ಸಂಸ್ಥೆಯು ಪರಿಹಾರ ಒದಗಿಸುತ್ತಿದೆ.

ಪೇಯಿಂಗ್ ಗೆಸ್ಟ್‌ಗಳಲ್ಲಿ ನೆಲೆಸುವ ವಿದ್ಯಾರ್ಥಿಗಳು, ಕಾರ್ಪೊರೇಟ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕೆಲ ನಿರ್ಬಂಧಗಳಿರುತ್ತವೆ. ‘ಪಿಜಿ’ಗಳಿಂದ ಹೊರ ಬರಲು ಇಷ್ಟ ಪಡುವ ಅವರೂ ಸೂಕ್ತ ಬಾಡಿಗೆ ಮನೆಯ ಹುಡುಕಾಟದಲ್ಲಿ ಇರುತ್ತಾರೆ. ಅವರಿಗೂ ಇಲ್ಲಿ ಅವರ ಅಗತ್ಯಕ್ಕೆ ತಕ್ಕಂತೆ ಮನೆ, ಅಪಾರ್ಟ್‌ಮೆಂಟ್‌ಗಳು ಬಾಡಿಗೆಗೆ ದೊರೆಯುತ್ತವೆ.

‘ಆನ್‌ಲೈನ್‌ನಲ್ಲಿ ಹುಡುಕಾಡುತ್ತ ಐದಾರು ಮನೆಗಳನ್ನು ನೋಡಿ ಒಂದನ್ನಾದರೂ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲಿ ಇರುತ್ತದೆ.  ಮಾಲೀಕರ ಇಷ್ಟಾನಿಷ್ಟದಂತೆಯೇ ಸೂಕ್ತ ಬಾಡಿಗೆದಾರರನ್ನು ಒದಗಿಸಲಾಗುವುದು. ಕೆಲ ಸಂದರ್ಭಗಳಲ್ಲಿ ಮಾಲೀಕರ ಮನವೊಲಿಸಿ ಕೆಲ ನಿಬಂಧನೆ ಸಡಿಲಿಸಿ ಬಾಡಿಗೆ ನೀಡಲಾಗುತ್ತಿದೆ. ಖಾಲಿ ಬೀಳುವ ಬದಲಿಗೆ ಒಂದಿಷ್ಟು ಬಾಡಿಗೆ ಬರಲಿ ಎಂದು ಮಾಲೀಕರೂ ತಮ್ಮ ಬಿಗಿ ನಿಲುವು ಸಡಿಲಿಸುತ್ತಾರೆ.  ಆರಂಭದಲ್ಲಿ ಅನಿವಾಸಿ ಭಾರತೀಯರ ಮನೆ, ಫ್ಲ್ಯಾಟ್‌, ಅಪಾರ್ಟ್‌ಮೆಂಟ್‌ಗಳನ್ನು ನಿರ್ವಹಿಸಿ, ಅವುಗಳನ್ನು ಅರ್ಹರಿಗೆ ಬಾಡಿಗೆ ನೀಡುವ ಉದ್ದೇಶದಿಂದ ಈ ನವೋದ್ಯಮಕ್ಕೆ ಚಾಲನೆ ನೀಡಲಾಗಿತ್ತು. ಆನಂತರ ಇತರ ಮಾಲೀಕರ ಆಸ್ತಿಗಳನ್ನೂ ನಿರ್ವಹಿಸಲು ಗಮನ ಹರಿಸಲಾಗಿದೆ ’ ಎಂದು ಸಂಸ್ಥೆಯ ಸಿಇಒ ನಾಗರಾಜು ಎಂ. ಹೇಳುತ್ತಾರೆ.

ಬಾಡಿಗೆ ಮನೆಗಳಲ್ಲಿ ಮಾಲೀಕರು ಪೀಠೋಪಕರಣ ಸೇರಿದಂತೆ ಪೂರ್ಣ ಪ್ರಮಾಣದ ಸೌಲಭ್ಯಗಳನ್ನು ಒದಗಿಸಿರದಿದ್ದರೆ, ಮಂಚ, ಟೆಲಿವಿಷನ್‌, ಬೆಡ್‌ಗಳನ್ನು  ಈ ಸಂಸ್ಥೆಯೇ ಒದಗಿಸಲಿದೆ. ಇದಕ್ಕೆ ಬಾಡಿಗೆದಾರರು ಹೆಚ್ಚುವರಿ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ.

ಅನಿವಾಸಿ ಭಾರತೀಯರೂ ತಮ್ಮ ಸ್ವಂತ ಬಂಡವಾಳ ಹಾಕಿ ಇಲ್ಲವೆ ಸಾಲ ಮಾಡಿ ಮನೆ, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಿರುತ್ತಾರೆ ಇಲ್ಲವೇ ಖರೀದಿಸಿರುತ್ತಾರೆ. ಬಾಡಿಗೆ ವರಮಾನದ ಉದ್ದೇಶಕ್ಕೆಂದೇ ಅನೇಕರು ಆಸ್ತಿಗಳನ್ನು ಮಾಡಿರುತ್ತಾರೆ. ಸೂಕ್ತ ಬಾಡಿಗೆದಾರರು ಸಿಗದಿದ್ದರೆ ಸಾಲ ಮರು ಪಾವತಿ ಸಮಸ್ಯೆ ಎದುರಾದರೆ, ಬಾಡಿಗೆ ವರಮಾನವನ್ನೇ ನೆಚ್ಚಿಕೊಂಡವರಿಗೆ ಹಣಕಾಸು ನಷ್ಟ ಎದುರಾಗಿರುತ್ತದೆ. ಈ ಸಂಸ್ಥೆಯ ನೆರವು ಪಡೆದರೆ ನಿಯಮಿತವಾಗಿ ಬಾಡಿಗೆ ಪಡೆಯಬಹುದು.

‘ಆನ್‌ಲೈನ್‌ನಲ್ಲಿಯೇ ಮನೆಗಳನ್ನು ಹುಡುಕಿ, ಮೆಚ್ಚಿಕೊಂಡು ಅಗತ್ಯ ದಾಖಲೆ ಒದಗಿಸಿ, ನಿಯಮಿತವಾಗಿ ಬಾಡಿಗೆ ಪಾವತಿಸುವ  ಇಂತಹ ಮಧ್ಯವರ್ತಿ ಸಂಸ್ಥೆಯ ಅಗತ್ಯ ಈಗ ಹೆಚ್ಚಿದೆ. 15 ದಿನಗಳಲ್ಲಿ ಬಾಡಿಗೆದಾರರನ್ನು ಹುಡುಕಿ ಕೊಡಲಾಗುವುದು. ಒಂದು ವೇಳೆ ಬಾಡಿಗೆದಾರರು ಸಿಗದಿದ್ದರೆ 16ನೆ ದಿನದಿಂದ ಸಂಸ್ಥೆಯೇ ಮಾಲೀಕರಿಗೆ ಬಾಡಿಗೆ ಹಣ ಪಾವತಿಸುವ ಸೌಲಭ್ಯ ಇದರಲ್ಲಿ ಇದೆ. ₹ 5 ಸಾವಿರದಷ್ಟು ವೆಚ್ಚ ಬರುವ ಮನೆಗಳ ಸಣ್ಣ ಪುಟ್ಟ ದುರಸ್ತಿ ಕೆಲಸಗಳನ್ನು ಸಂಸ್ಥೆಯೇ ಭರಿಸುತ್ತದೆ.

‘ಬಾಯಿ ಮಾತಿನ ಪ್ರಚಾರ, ಆನ್‌ಲೈನ್‌ ಮತ್ತು ಆಫ್‌ಲೈನ್‌ ಜಾಹೀರಾತು ಮೂಲಕ ಸಂಸ್ಥೆಯ ವಹಿವಾಟು ದಿನೇ ದಿನೇ ವೃದ್ಧಿಸುತ್ತಿದೆ. ಇಲ್ಲಿ ಎಲ್ಲವೂ ಪಾರದರ್ಶಕ ವಹಿವಾಟು ನಡೆಯುತ್ತದೆ. ಆನ್‌ಲೈನ್‌ ಮತ್ತು ಚೆಕ್‌ ಮೂಲಕವೇ ವಹಿವಾಟು ನಿರ್ವಹಿಸಲಾಗುತ್ತಿದೆ. ಯಾರೊಬ್ಬರಿಗೂ ನಗದು ರೂಪದಲ್ಲಿ ಪಾವತಿ ಇರುವುದಿಲ್ಲ’ ಎಂದು  ನಾಗರಾಜು ಎಂ. ಅವರು ಹೇಳುತ್ತಾರೆ.

‘2016ರ ಫೆಬ್ರುವರಿ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ನವೋದ್ಯಮವು ಒಂದೂವರೆ ವರ್ಷದಲ್ಲಿ ಒಳ್ಳೇಯ ಬೆಳವಣಿಗೆ ದಾಖಲಿಸಿದೆ. ಆರಂಭಿಕ ದಿನಗಳಲ್ಲಿ ಅಸ್ತಿತ್ವ ಉಳಿಸಿಕೊಂಡು ವಹಿವಾಟು ಬೆಳೆಸಲು ಸಾಧ್ಯವೇ ಎನ್ನುವ ಆತಂಕ ಎದುರಾಗಿತ್ತು. ದಿನಗಳೆದಂತೆ ಅದು ದೂರವಾಗುತ್ತ ಬಂದಿತು. ಸದ್ಯಕ್ಕೆ ವಹಿವಾಟು ಒಂದು ನೆಲೆಗೆ ಬಂದು ನಿಂತಿದೆ. ಇತರ ನಗರಗಳಿಗೂ ವಹಿವಾಟು ವಿಸ್ತರಿಸಲು ಸಾಧ್ಯ ಎನ್ನುವ ಆತ್ಮವಿಶ್ವಾಸ ಮೂಡಿದೆ’ ಎಂದೂ ನಾಗರಾಜು ಅವರು ಹೇಳುತ್ತಾರೆ.

ಆರಂಭದಲ್ಲಿ ₹ 8 ಲಕ್ಷ ಹಾಕಿ ಆರಂಭಿಸಿದ್ದ ಈ ನವೋದ್ಯಮವು ಈಗ ಒಂದೂವರೆ ವರ್ಷದಲ್ಲಿ ₹ 1 ಕೋಟಿಗಳಷ್ಟು ವಹಿವಾಟು ನಡೆಸುವ ಮಟ್ಟಿಗೆ ಬೆಳವಣಿಗೆ ಸಾಧಿಸಿದೆ. ಒಂದು ವರ್ಷದಲ್ಲಿ 150 ಮಾಲೀಕರು ಮುಂದುವರೆದಿರುವುದು ಇವರ ವಹಿವಾಟಿನ ದಕ್ಷತೆಗೆ ಸಿಕ್ಕ ಮನ್ನಣೆಯಾಗಿದೆ. ಬೆಂಗಳೂರಿನಲ್ಲಿ ವಹಿವಾಟು ವಿಸ್ತರಿಸಲು ಸಂಸ್ಥೆಗೆ ಹಣದ ಅಗತ್ಯ ಉದ್ಭವಿಸಿಲ್ಲ. ಚೆನ್ನೈ ಮತ್ತು ಹೈದರಾಬಾದ್‌ ನಗರಗಳಲ್ಲಿ ವಹಿವಾಟು ವಿಸ್ತರಣೆಗೆ ಆರಂಭದ ಮೊದಲ 6 ತಿಂಗಳಲ್ಲಿ ₹ 30 ಲಕ್ಷದಷ್ಟು ಬಂಡವಾಳ ಬೇಕಾಗಲಿದೆ. ಒಂದೆರಡು ವರ್ಷಗಳ ನಂತರ ಮೈಸೂರು, ತುಮಕೂರಿನಲ್ಲಿಯೂ ಈ ಸೌಲಭ್ಯ ವಿಸ್ತರಿಸಲು ಉದ್ದೇಶಿಸಲಾಗಿದೆ.

ಮಾಲೀಕರಿಗೆ ಬಾಡಿಗೆದಾರರ  ಸಮಗ್ರ ಮಾಹಿತಿ ಕೊಡಲಾಗುತ್ತಿದೆ. ಒಂದು ದಿನ ಮುಂಚಿತವಾಗಿಯೇ ಮಾಹಿತಿ ನೀಡಿ ಮಾಲೀಕರು ಬಾಡಿಗೆದಾರರನ್ನು ಭೇಟಿಯಾಗಲು ಅವಕಾಶ ಕಲ್ಪಿಸಿಕೊಡಲಾಗುವುದು. ಬಾಡಿಗೆದಾರರ ಬಗ್ಗೆ ಪೊಲೀಸ್‌ ದೃಢೀಕರಣ ಆದ ನಂತರವೇ ಆ ದಾಖಲೆಗಳನ್ನು ಮಾಲೀಕರಿಗೂ ಕಳಿಸಿಕೊಡಲಾಗುವುದು. ಉದ್ದಿಮೆ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಬಗ್ಗೆ ಆಯಾ ಸಂಸ್ಥೆಯ ಎಚ್‌ಆರ್‌ ವಿಭಾಗದಿಂದ ಮಾಹಿತಿ ಸಂಗ್ರಹಿಸಲಾಗುವುದು. ಹೀಗಾಗಿ ಮಾಲೀಕರು ಬಾಡಿಗೆದಾರರ ಪೂರ್ವಾಪರ ಬಗ್ಗೆ ನಿಶ್ಚಿಂತೆಯಿಂದ ಇರಬಹುದು’ ಎಂದು ನಾಗರಾಜು ಹೇಳುತ್ತಾರೆ.

ಮಾಲೀಕರು ಅಂತರ್ಜಾಲ ತಾಣ ‘ರೆಂಟ್‌ಪ್ರಾಪ್‌4ಯುಡಾಟ್‌ಕಾಮ್‌’ನಲ್ಲಿ (www.rentprop4u.com)  ತಮ್ಮ ಬಾಡಿಗೆ ಮನೆಗಳ ಮಾಹಿತಿ ಮತ್ತು ಚಿತ್ರಗಳನ್ನು ಅಪ್‌ಲೋಡ್‌ ಮಾಡಬಹುದು. ಬಾಡಿಗೆದಾರರೂ ಈ ತಾಣದಿಂದಲೇ ತಮಗಿಷ್ಟದ ಮನೆಗಳನ್ನು ಬಾಡಿಗೆಗೆ ಆಯ್ಕೆ ಮಾಡಿಕೊಳ್ಳಬಹುದು.

240ಕ್ಕೂ ಹೆಚ್ಚು ಮಾಲೀಕರ ಆಸ್ತಿಗಳ ನಿರ್ವಹಣೆ

ಚೆನ್ನೈ, ಹೈದರಾಬಾದ್‌ ನಗರಗಳಿಗೆ ವಹಿವಾಟು ವಿಸ್ತರಣೆ ಆಲೋಚನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry