ಭಾನುವಾರ, ಸೆಪ್ಟೆಂಬರ್ 22, 2019
22 °C

ಜಿಎಸ್‌ಟಿಗೆ ನೂರು ದಿನ: ವರ್ತಕರಿಗೆ ತಲೆನೋವು

Published:
Updated:
ಜಿಎಸ್‌ಟಿಗೆ ನೂರು ದಿನ: ವರ್ತಕರಿಗೆ ತಲೆನೋವು

ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಯ ದ್ಯೋತಕವಾಗಿ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆ ಜುಲೈನಿಂದ ಜಾರಿಗೆ ಬರುವಾಗ ವಹಿವಾಟು ಮತ್ತು ತೆರಿಗೆ ವಿವರ ಸಲ್ಲಿಕೆಯಲ್ಲಿ ತಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಹೊಸ ವ್ಯವಸ್ಥೆ ದೂರ ಮಾಡಲಿದೆ ಎಂದು ವಣಿಕ ಸಮುದಾಯ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು.

ಆದರೆ, ದಿನಕ್ಕೊಂದು ಸ್ವರೂಪ ಪಡೆಯುತ್ತ ಸಾಗಿದ ಈ ವ್ಯವಸ್ಥೆಯು ತನ್ನ ಸ್ವಯಂಕೃತ ತಪ್ಪುಗಳಿಂದಾಗಿ ದಿನಗಳೆದಂತೆ ವರ್ತಕ ಸಮುದಾಯಕ್ಕೆ ಬಹಳಷ್ಟು ಹೊರೆಯಾಗಿ ಪರಿಣಮಿಸಿದೆ. ಇದರಿಂದ ಅವರ ಮೊಗದಲ್ಲಿ ನಿರಾಸೆ ಕವಿದಿದೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ವರ್ತಕರು ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಅವರೀಗ ವ್ಯಾಪಾರಕ್ಕಿಂತ ಹೆಚ್ಚಾಗಿ ವಹಿವಾಟಿನ ದಾಖಲೆಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಇಡುವತ್ತಲೇ ಹೆಚ್ಚಿನ ಗಮನ ಹರಿಸುವಂತೆ ಮಾಡಿದೆ.

ಲೆಕ್ಕಪತ್ರ ವಿವರ ಸಲ್ಲಿಕೆ

\
ವರ್ತಕರಿಗೆ ಮುಖ್ಯ ಸಮಸ್ಯೆ ಇರುವುದು ಲೆಕ್ಕಪತ್ರ ವರದಿ (ರಿಟರ್ನ್ಸ್‌) ಸಲ್ಲಿಕೆಯಲ್ಲಿ. ಒಬ್ಬ ಸಾಮಾನ್ಯ ವರ್ತಕನೊಬ್ಬ ಈಗ ಪ್ರತಿ ತಿಂಗಳೂ ನಮೂನೆ 3ಬಿ, ಜಿಎಸ್‌ಟಿಆರ್-1, ಜಿಎಸ್‌ಟಿಆರ್ 2, ಜಿಎಸ್‌ಟಿಆರ್- 3 ಎಂದು ಒಟ್ಟು 4 ಲೆಕ್ಕ ಪತ್ರ ವರದಿಗಳನ್ನು ಸಲ್ಲಿಸಬೇಕು. ಈಗಾಗಲೇ ಜುಲೈ ಮತ್ತು ಅಗಸ್ಟ ತಿಂಗಳ ನಮೂನೆ-3ಬಿ, ಜುಲೈ ತಿಂಗಳ ಆರ್-1 ಸಲ್ಲಿಸುವ ಅವಧಿ ಮುಗಿದು ಹೋಗಿದೆ.

ಈಗ ಪ್ರಸ್ತುತ ಸೆಪ್ಟೆಂಬರ ತಿಂಗಳ 3ಬಿಯನ್ನು ಇದೇ 20 ರೊಳಗೆ ಸಲ್ಲಿಸಬೇಕು. ಜಿಎಸ್‌ಟಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿರುವ ವರ್ತಕರಿಗೆ ಈ ಕೆಲಸ ಬಹಳ ಪ್ರಯಾಸಕರವಾಗಿದೆ. ಈ ರಿಟರ್ನ್ಸ್‌ ಸಲ್ಲಿಸುವವರೆಗೆ ಹೆಚ್ಚುವರಿ ಹೂಡುವಳಿ ತೆರಿಗೆಯ (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌) ಮರುಪಾವತಿ ದೊರೆಯುವುದಿಲ್ಲ.

ಇದರೊಂದಿಗೆ ಲೆಕ್ಕಪತ್ರ ವರದಿ ಸಲ್ಲಿಸುವಾಗ ಕಣ್ತಪ್ಪಿನಿಂದ ತಪ್ಪುಗಳು ಆಗೇ ಆಗುತ್ತವೆ. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಈಗ ಅವಕಾಶವೇ ಇಲ್ಲ. ಜುಲೈ ತಿಂಗಳ ‘3ಬಿ’ಯಲ್ಲಿ ತಪ್ಪಿದ್ದರೆ ಅದು ಸಲ್ಲಿಕೆಯಾಗುವುದಿಲ್ಲ. ಅದು ಸಲ್ಲಿಕೆಯಾಗದೆ ಮುಂದಿನ ತಿಂಗಳ 3ಬಿ ಲೆಕ್ಕಪತ್ರ ವರದಿಗಳನ್ನು ಸಲ್ಲಿಸಲು ಜಾಲತಾಣವು ಅವಕಾಶ ನೀಡುವುದಿಲ್ಲ.  ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗುವಂತಹ ಪರಿಸ್ಥಿತಿಗೆ ಇದನ್ನು ಹೋಲಿಸಬಹುದು. ಲೆಕ್ಕಪತ್ರ ವರದಿಗೆ ಸಂಬಂಧಿಸಿದ ಇಂತಹ ಅನೇಕ ಅಡಚಣೆಗಳು ಸಾಕಷ್ಟಿವೆ.

ವಾರ್ಷಿಕ ₹ 1.5 ಕೋಟಿವರೆಗಿನ ವಹಿವಾಟು ನಡೆಸುವ ವರ್ತಕರಿಗೆ ತ್ರೈಮಾಸಿಕ ವರದಿ ಸಲ್ಲಿಸಲು ಜಿಎಸ್‌ಟಿ ಮಂಡಳಿಯು ಅವಕಾಶ ನೀಡಿದೆ. ಆದರೆ, ಇದು 2018ರ ಜನವರಿಯಿಂದ ಜಾರಿಯಾಗುವುದರಿಂದ ಅಲ್ಲಿಯವರೆಗೆ ವರ್ತಕರು ಹಳೆಯ ವ್ಯವಸ್ಥೆಗೆ ಹೊಂದಿಕೊಂಡು ಮುಂದುವರೆಯಬೇಕಾಗಿದೆ.

ಒಟಿಪಿ ಸಮಸ್ಯೆ

ಈ ಪ್ರತಿಯೊಂದು ಲೆಕ್ಕಪತ್ರ ವರದಿಯನ್ನು ಜಿಎಸ್‌ಟಿ ಜಾಲತಾಣದಲ್ಲಿ ಸಲ್ಲಿಸುವ ಮುಂಚೆ ದೃಢೀಕರಣಕ್ಕಾಗಿ  ನೋಂದಾಯಿತ ಮೊಬೈಲ್‌ಗೆ ಒಂದು ಬಾರಿಯ ರಹಸ್ಯ ಸಂಖ್ಯೆ (ಒಟಿಪಿ) ಬರುತ್ತದೆ. ಇದನ್ನು ದಾಖಲಿಸಿದರೆ ಮಾತ್ರ ಲೆಕ್ಕಪತ್ರ ವರದಿ ಸಲ್ಲಿಕೆಯಾಗುತ್ತದೆ. ಈಗ ಸಮಸ್ಯೆ ಬಂದಿರುವುದೇ ಈ ಒಟಿಪಿ ವಿಷಯದಲ್ಲಿ.

ಸಾಮಾನ್ಯವಾಗಿ ಈ ಲೆಕ್ಕಪತ್ರ ವರದಿಗಳನ್ನು ಸಲ್ಲಿಸುವವರು ತೆರಿಗೆ ಸಲಹೆಗಾರರು ಮತ್ತು ಲೆಕ್ಕಪರಿಶೋಧಕರು. ಇವರಿಗೆ ವರ್ತಕರು ಲೆಕ್ಕಪತ್ರ ವರದಿ ಸಲ್ಲಿಸಲು ಬೇಕಾದ ಎಲ್ಲ ದತ್ತಾಂಶ ಕೊಟ್ಟು ಹೋಗುತ್ತಿದ್ದರು. ಈಗ ಒಟಿಪಿ ಬರುವುದು ವರ್ತಕರ ಮೊಬೈಲ್‌ಗೆ. ಜಾಲತಾಣದಲ್ಲಿ ಒಟಿಪಿ ಜನರೇಟ್‌ ಆದರೂ ಒಮ್ಮೊಮ್ಮೆ ಮೊಬೈಲ್‌ಗೆ ಬರುವುದೇ ಇಲ್ಲ. ಬಂದರೆ ತಡವಾಗಿ ಬರುತ್ತದೆ. ಅಷ್ಟರೊಳಗೆ ಅದರ ಕಾಲಾವಧಿ ಮುಗಿದು ಹೋಗಿರುತ್ತದೆ. ವರ್ತಕರು ತಮ್ಮ ಅಂಗಡಿ-ವ್ಯಾಪಾರವನ್ನು ಬಿಟ್ಠು ತೆರಿಗೆ ಸಲಹಾಗಾರರ ಕಚೇರಿಯಲ್ಲಿ ಮೊಬೈಲ್‌ ನೋಡುತ್ತ ಒಟಿಪಿಗಾಗಿ ಕಾಯ್ದು ಕುಳಿತುಕೊಳ್ಳಬೇಕಾಗುತ್ತದೆ.

ಈ ‘ಮೊಬೈಲ್‌ ಒಟಿಪಿ’ಯು ವರ್ತಕರ ನೆಮ್ಮದಿಯನ್ನೇ ಹಾಳು ಮಾಡಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ವರ್ತಕರಂತೂ ಹೈರಾಣಾಗಿದ್ದಾರೆ. ಕಲಬುರ್ಗಿ, ಬೆಳಗಾವಿ ವಿಭಾಗಗಳಂತ ಹೆಚ್ಚಿನ ಗ್ರಾಮೀಣ ಪ್ರದೇಶ ಹೊಂದಿರುವ ವಿಭಾಗಗಳಲ್ಲಿ ಲೆಕ್ಕಪತ್ರವರದಿ ಸಲ್ಲಿಕೆಯ ಪ್ರಮಾಣ ಗಮನಿಸಿದರೆ ಇದು ಎದ್ದು ಕಾಣುತ್ತದೆ.

ಒಟಿಪಿಗಳು ಒಮ್ಮೊಮ್ಮೆ ಅಪರಿಚಿತರ ಮೊಬೈಲ್‌ಗೆ ಹೋಗಿ ಬಿಡುತ್ತವೆ. ಮೌಲ್ಯವರ್ಧಿತ ತೆರಿಗೆಯಿಂದ (ವ್ಯಾಟ್‌) ನೋಂದಣಿ ಮಾಡುವಾಗ ತೆರಿಗೆ ಸಲಹೆಗಾರರು ಅನ್ಯರ ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ ವಿಳಾಸ ನಮೂದಿಸಿದ್ದಾರೆ. ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ ವಿಳಾಸ ಬದಲಿಸಿಕೊಳ್ಳಬೇಕೆಂದರೆ ಅದಕ್ಕೂ ಅವಕಾಶವಿಲ್ಲ. ಎಲ್ಲ ಕಡೆಯಿಂದ ಕೈಕಟ್ಟಿ ಹಾಕಲಾಗಿದೆ.

ವರ್ತಕರು ಸಂಕೇತ ಪದ ಮತ್ತು ಗುಪ್ತಪದಗಳನ್ನು ದಾಖಲಿಸಿಯೇ ಲೆಕ್ಕಪತ್ರ ವರದಿ ಸಲ್ಲಿಸುವುದರಿಂದ ಅದೇ ಒಂದು ದೃಢೀಕರಣವಾಗುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ‘ಮೊಬೈಲ್‌ ಒಟಿಪಿ’ ಎಂಬ ಮತ್ತೊಂದು ಕಿರಿಕಿರಿ ಏಕೆ ಎಂಬುದು ವರ್ತಕರ ಪ್ರಶ್ನೆಯಾಗಿದೆ . ಈ ವ್ಯವಸ್ಥೆಯನ್ನು ತಕ್ಷಣ ತೆಗೆದುಹಾಕಬೇಕು ಎಂಬುದು ವರ್ತಕರ ಹಕ್ಕೊತ್ತಾಯವಾಗಿದೆ.

ನೋಂದಣಿ ರದ್ದತಿ

ವಹಿವಾಟು ಅತ್ಯಂತ ಕಡಿಮೆ ಇರುವ ವ್ಯಾಪಾರಿಗಳು ಲೆಕ್ಕಪತ್ರ ವರದಿ ಸಲ್ಲಿಕೆ ವಿಳಂಬಕ್ಕೆ ದಂಡ ಪಾವತಿಸುವ ಮತ್ತಿತರ ಕಾರಣಕ್ಕೆ ಕೆಲವರು ತಮ್ಮ ಜಿಎಸ್‌ಟಿ ನೋಂದಣಿಯನ್ನೇ ರದ್ದುಪಡಿಸಿಕೊಳ್ಳಲು ಬಯಸಿದ್ದಾರೆ. ಇದಕ್ಕೆ ಅವಕಾಶವೇ ಇಲ್ಲ. ನೋಂದಣಿ ರದ್ದತಿಗೆ ಅರ್ಜಿ ಸಲ್ಲಿಸಲು ಇವತ್ತಿನವರೆಗೂ  ಅವಕಾಶವೇ ಇಲ್ಲ. ನೋಂದಣಿ ರದ್ದತಿಗೆ ಅವಕಾಶ ನೀಡಿದರೆ ಸಣ್ಣ ವರ್ತಕರು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ.

ವಿಳಂಬ ಶುಲ್ಕವೆಂಬ ‘ದಂಡ’

‘3ಬಿ’ ಲೆಕ್ಕಪತ್ರ ವರದಿಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸದ ವರ್ತಕರು ಪ್ರತಿದಿನದ ವಿಳಂಬಕ್ಕೆ ₹ 200ರಂತೆ ದಂಡ ಪಾವತಿಸಬೇಕಾಗುತ್ತದೆ. ಈ ಒಟಿಪಿ ಕೈಕೊಡುವಿಕೆ ಕಾರಣದಿಂದ ಲೆಕ್ಕಪತ್ರ ವರದಿ ಸಲ್ಲಿಕೆ ತಡವಾದರೂ ದಂಡ ಪಾವತಿಸಲೇಬೇಕಾಗುತ್ತದೆ. ಈ ದಂಡವನ್ನೂ ಯಾವಾಗ ವಿಧಿಸಲಾಗುವುದು ಮತ್ತು ಯಾವಾಗ ರದ್ದುಪಡಿಸಲಾಗುವುದು ಎಂಬುದೂ ನಿಗೂಢವಾಗಿಯೇ ಇದೆ. ಜುಲೈ ಮತ್ತು ಆಗಸ್ಟ್‌ ತಿಂಗಳುಗಳಲ್ಲಿ ಕೆಲವು ಪ್ರಾಮಾಣಿಕ ವರ್ತಕರು ದಂಡ ತುಂಬಿ ಕೈಸುಟ್ಟುಕೊಂಡರು.

ಆದರೆ ಕೆಲವರಿಗೆ ದಂಡ ಬೀಳಲಿಲ್ಲ. ಉದಾಹರಣೆಗೆ ಆಗಸ್ಟ ತಿಂಗಳ ‘3ಬಿ’ ಸುಸ್ತಿದಾರರಿಗೆ ಸೆಪ್ಟೆಂಬರ 21 ರಿಂದ ದಂಡ ಪ್ರಾರಂಭವಾಯಿತು. ಸೆಪ್ಟೆಂಬರ 30 ರವರೆಗೆ ಲೆಕ್ಕಪತ್ರ ವರದಿ ಸಲ್ಲಿಸಿದವರು ದಂಡ ಪಾವತಿಸಿದರು. ಅಕ್ಟೋಬರ್‌ 1 ರ ನಂತರ ಈ ದಂಡವನ್ನು ಕೈಬಿಡಲಾಯಿತು. ಆಗ ಲೆಕ್ಕಪತ್ರ ವರದಿ ಸಲ್ಲಿಸಿದ ವರ್ತಕರಿಗೆ ದಂಡ ಬೀಳಲಿಲ್ಲ.  ಸೆಪ್ಟೆಂಬರ ತಿಂಗಳ ‘3ಬಿ’ ಸಲ್ಲಿಕೆಯ ಮೇಲೆ ಇದರ ಪರಿಣಾಮ ಕಂಡು ಬರಲಿದೆ ಎಂದು ತೆರಿಗೆ ಅಧಿಕಾರಿಗಳು ಅಲವತ್ತುಕೊಳ್ಳುತ್ತಿದ್ದಾರೆ.

ರಾಜಿ ತೆರಿಗೆ ಪದ್ಧತಿಯ ತ್ರಿಶಂಕು ಸ್ಥಿತಿ

ಜಿಎಸ್‌ಟಿ ಮಂಡಳಿಯ ಪರೀಷ್ಕೃತ ತೀರ್ಮಾನದಂತೆ ಸೆಪ್ಟೆಂಬರ 30 ರವರೆಗೆ ರಾಜಿ ತೆರಿಗೆ ಪದ್ಧತಿ ಆಯ್ದುಕೊಳ್ಳಲು ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಯಿತು. ಬಹಳಷ್ಟು ಜನ ವರ್ತಕರು ಜಾಲತಾಣದಲ್ಲಿ ಅರ್ಜಿ ಸಲ್ಲಿಸಿದರು. ಅವರಿಗೆ ಸ್ವೀಕೃತಿ ಸಂಖ್ಯೆಯೂ ಬಂದಿದೆ. ಆದರೆ, ಹೀಗೆ ಸಲ್ಲಿಸಿದ ನೂರಾರು ಅರ್ಜಿಗಳು ಇನ್ನೂ ಅನುಮೋದನೆಯಾಗಿಲ್ಲ. ಜಾಲತಾಣದಲ್ಲಿ ಅನುಮತಿಗಾಗಿ ಕಾದು ಕುಳಿತಿವೆ. ಇತ್ತ ಸಾಮಾನ್ಯ ವರ್ತಕರೂ ಅಲ್ಲ. ಅತ್ತ ರಾಜಿ ವರ್ತಕರೂ ಅಲ್ಲ. ಅನೇಕ ವರ್ತಕರು ತ್ರಿಶಂಕು ಸ್ಥಿತಿಯಲ್ಲಿ ಇದ್ದಾರೆ. ಇನ್ನೊಂದು ಕಡೆ ಲೆಕ್ಕಪತ್ರ ವರದಿ ಸಲ್ಲಿಸುವಂತೆ ಸ್ಥಳೀಯ ತೆರಿಗೆ ಕಚೇರಿಗಳಿಂದ ಪೋನ್‌ ಮೇಲೆ ಪೋನ್‌ ಕರೆಗಳು ಬರುತ್ತಲೇ ಇರುತ್ತವೆ.

ಪರಿಷ್ಕರಣೆಗೊಳ್ಳದ ಮಾಹಿತಿ

ಲೆಕ್ಕಪತ್ರ ವರದಿ ಸಲ್ಲಿಕೆ,ರಾಜಿ ತೆರಿಗೆ ಪದ್ಧತಿ ಆಯ್ಕೆ, ನೋಂದಣಿ-ಇತ್ಯಾದಿ ಯಾವ ಅಂಕಿ-ಸಂಖ್ಯೆ-ಕೆಲಸಗಳ ಮಾಹಿತಿ ಜಿಎಸ್‌ಟಿ ಜಾಲತಾಣದಲ್ಲಿ ಪ್ರತಿದಿನ ಪ್ರತಿಕ್ಷಣ ಪರಿಷ್ಕರಣೆಗೊಳ್ಳುತ್ತಿಲ್ಲ. ಇದರಿಂದ  ರಿಟನ್ಸ್‌ ಸಲ್ಲಿಕೆಯಾಗಿಲ್ಲ ಎಂದು ದಾಖಲೆಗಳು ತೋರಿಸುತ್ತಿವೆ ಎಂದು ವರ್ತಕರಿಗೆ ತೆರಿಗೆ ಕಚೇರಿಗಳಿಂದ ಪೋನ್‌ಗಳು ಬರುತ್ತವೆ. ತಾವು ರಿಟರ್ನ್ಸ್‌ ಸಲ್ಲಿಸಿದ್ದೇವೆ ಎಂದರೂ ಕೇಳುವುದಿಲ್ಲ. ಸ್ವೀಕೃತಿ ಸಂಖ್ಯೆ ನೀಡುವಂತೆ ಗಂಟುಬೀಳುತ್ತಾರೆ. ಅವರಿಗೆ ಅವರ ಮೇಲಧಿಕಾರಿಗಳಿಂದ ಹಾಗೆ ಕಟ್ಟಪ್ಪಣೆ ಆಗಿದೆಯಂತೆ. ಜಾಲತಾಣದಲ್ಲಿ ಮಾಹಿತಿ ಪರಿಷ್ಕರಣೆ ಆಗದಿರುವುದರಿಂದ ಇಷ್ಟೆಲ್ಲ ಗಡಿಬಿಡಿ- ಗೊಂದಲಗಳು ಕಂಡು ಬರುತ್ತಿವೆ.

ಎಲ್ಲ ಕಡೆಯೂ ಗೊಂದಲಗಳು ಇರುವಾಗ ವರ್ತಕರಿಗೆ ಸರಿಯಾದ ಮಾಹಿತಿ ಕೊಡದ ಕೆಲವು ತೆರಿಗೆ ಸಲಹೆಗಾರರು ‘ಕಲಕಿದ ನೀರಲ್ಲಿ ಮೀನು ಹಿಡಿಯುವ ಕೃತ್ಯ’ದಲ್ಲಿ ತೊಡಗಿದ್ದಾರೆ ಎಂದೂ ಕೆಲ ವರ್ತಕರು ದೂರುತ್ತಾರೆ. ವರ್ತಕರು ಮೊದಲಿನಿಂದಲೂ ಸ್ಥಳೀಯ ಕಚೇರಿಗಳೊಂದಿಗೆ ಸಂಪರ್ಕ ಇಟ್ಟುಕೊಂಡಿಲ್ಲ. ಇತ್ತ ತಮ್ಮ ತೆರಿಗೆ ಸಲಹೆಗಾರರು-ಲೆಕ್ಕಪರಿಶೋಧಕರಿಂದ ಸರಿಯಾದ ಮಾಹಿತಿಯೂ ಸಿಗುತ್ತಿಲ್ಲ. ಇವೆಲ್ಲವು ಒಟ್ಟಾಗಿ ವಹಿವಾಟುದಾರರನ್ನು ಹೈರಾಣು ಮಾಡಿವೆ.

ಇಂಗ್ಲಿಷ್‌ ಹಾವಳಿ

ಜಿಎಸ್‌ಟಿ ಸಂಬಂಧ ಪುಂಖಾನುಪುಂಖವಾಗಿ ಹೊರಬರುವ ಸುತ್ತೋಲೆ,ಅಧಿಸೂಚನೆ, ಜಿಎಸ್‌ಟಿ ಮಂಡಳಿಯ ಸಭಾ ನಡವಳಿಗಳು, ನಿಯಮಗಳು ಎಲ್ಲ ಇಂಗ್ಲಿಷ್‌ನಲ್ಲಿ ಇರುವುದರಿಂದ ವರ್ತಕರಿಗೆ ಅವುಗಳ ತಲೆಬುಡವೂ ತಿಳಿಯುವುದಿಲ್ಲ. ಕನ್ನಡದಲ್ಲಿದ್ದರೆ ಸ್ವಂತ ಓದಿಕೊಂಡಾದರೂ ತಿಳಿದುಕೊಂಡು ಆ ಪ್ರಕಾರ ನಡೆದುಕೊಳ್ಳಬಹುದಿತ್ತು. ತೆರಿಗೆ ಆಡಳಿತದಲ್ಲಿ ಈ ಪರಿಯ ಇಂಗ್ಲಿಷ್‌ ಹಾವಳಿ ಕಾರಣಕ್ಕೆ ವಣಿಕರಿಗೆ ಕಣ್ಣುಕಟ್ಟಿ ಕತ್ತಲಲ್ಲಿ ಬಿಟ್ಟಂತಹ ಸ್ಥಿತಿ ಎದುರಾಗಿದೆ.

ದಿನಕ್ಕೊಂದು ಸುತ್ತೋಲೆ\

ಇಷ್ಟೇ ಅಲ್ಲ, ಇನ್ನೂ ಹಲವಾರು ಸಮಸ್ಯೆಗಳಿವೆ. ಅತ್ಯುತಮ್ಮ ತೆರಿಗೆ ಸುಧಾರಣೆ ಮತ್ತು ಕಾಯ್ದೆಯಾಗಬಹುದಾಗಿದ್ದ ಜಿಎಸ್‌ಟಿಯನ್ನು ಜಾರಿ ಮಾಡುತ್ತಿರುವ ಈ ರೀತಿಯ ಅಸಮರ್ಪಕ ವಿಧಾನದಿಂದಾಗಿ ಅದು ವರ್ತಕರು ಮತ್ತು ವಹಿವಾಟುದಾರರಿಗೆ ಭಾರ ಎನಿಸಿದೆ. ಗರಿಷ್ಠ ಮುಖ ಬೆಲೆಯ ನೋಟುಗಳ ರದ್ದತಿ ಸಂದರ್ಭದಲ್ಲಿ ಆದಂತೆ ದಿನಕ್ಕೊಂದು ನಿರ್ಣಯ, ದಿನಕ್ಕೊಂದು ಸುತ್ತೋಲೆಗಳು ಹೊಸ ತೆರಿಗೆ ವ್ಯವಸ್ಥೆಯಲ್ಲಿಯೂ ಮರುಕಳಿಸುತ್ತಿದೆ.

ಹೊಸ ವ್ಯವಸ್ಥೆ ಜಾರಿಯ ಅತ್ಯಂತ ಕೆಳಗಿನ ಹಂತದಲ್ಲಿ ಏನು ನಡೆದಿದೆ. ವರ್ತಕರ ಮಟ್ಟದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಂಡು  ವ್ಯವಸ್ಥೆ ಸರಳ ಮಾಡಬೇಕಾಗಿದೆ. ಸ್ಥಳೀಯ ಭಾಷೆಯಲ್ಲಿಯೇ ಸಂವಹನ ನಡೆದರೆ ಮಾತ್ರ ಈ ವ್ಯವಸ್ಥೆ ಆದಷ್ಟು ಬೇಗ ಸರಿ ದಾರಿಗೆ ಮರಳಲಿದೆ.

ನೋಂದಣಿ ಪ್ರಕ್ರಿಯೆಯ ಕಣ್ಣುಮುಚ್ಚಾಲೆ

ಆರಂಭದಿಂದಲೇ ನೋಂದಣಿ ನೀಡಿಕೆಯು ಗೊಂದಲದಲ್ಲೇ ಮುಂದುವರೆದಿದೆ. 3 ದಿನಗಳಲ್ಲಿ ನೋಂದಣಿ, ಉಚಿತ ನೋಂದಣಿಯೆಂದು ಮಾಡಿದ ಪ್ರಚಾರದ ಅಬ್ಬರಕ್ಕೆ ವಹಿವಾಟುದಾರರು ಮರುಳಾಗಿದ್ದರು. ಈಗ ನೋಡಿದರೆ ನೋಂದಣಿಗೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೇ ಕಾಯ್ದು ಕುಳಿತರೂ ನೋಂದಣಿ ಅನುಮೋದನೆಯಾಗುತ್ತಿಲ್ಲ. ಸ್ಥಳೀಯ ಜಿಎಸ್‌ಟಿ ಕಚೇರಿಗೆ ಹೋಗಿ ವಿಚಾರಿಸಿದರೆ ಅದು ತಮ್ಮ ಗಣಕದಲ್ಲಿ ಇಲ್ಲವೆಂದು ಅಧಿಕಾರಿಗಳು ತಮ್ಮ ಗಣಕವನ್ನು ತೋರಿಸುತ್ತಾರೆ. ವಹಿವಾಟುದಾರರಿಗೆ ತಮ್ಮ ನೋಂದಣಿ ಅರ್ಜಿ ಎಲ್ಲಿ ಕಾಣೆಯಾಯಿತು ಎಂಬುದೂ ತಿಳಿಯುತ್ತಿಲ್ಲ.

ಅತ್ತ ನೋಂದಣಿ ಸಂಖ್ಯೆ ಇಲ್ಲದೆ ಪೂರೈಕೆದಾರರು ಸರಕು ಮಾರಾಟ ಮಾಡುವುದಿಲ್ಲ. ವ್ಯಾಟ್‌ ವ್ಯವಸ್ಥೆಯಡಿಯಲ್ಲಿ ಅರ್ಜಿ ಸಲ್ಲಿಸಿ ಸ್ಥಳೀಯ ಕಚೇರಿಯ ಅಧಿಕಾರಿಗಳಿಗೆ ತುಸು ವಿನಂತಿಸಿದರೆ ಒಂದೇ ದಿನದಲ್ಲಿ ನೋಂದಣಿ ಸಂಖ್ಯೆ ಸಿಗುತ್ತಿತ್ತು. ಈಗ ಜಿಎಸ್‌ಟಿಯಲ್ಲಿ ‘ವ್ರತವೂ ಕೆಟ್ಟಿತು; ಸುಖವೂ ಸಿಗಲಿಲ್ಲ’ ಎನ್ನುವಂತಾಗಿದೆ ಎಂದು ವರ್ತಕರು ಗೊಣಗುತ್ತಿದ್ದಾರೆ.

Post Comments (+)