ಹೊಸಿಲ ಹಣತೆಗಳಲ್ಲಿ ಹಲವು ಬಗೆ

ಮಂಗಳವಾರ, ಜೂನ್ 25, 2019
29 °C

ಹೊಸಿಲ ಹಣತೆಗಳಲ್ಲಿ ಹಲವು ಬಗೆ

Published:
Updated:
ಹೊಸಿಲ ಹಣತೆಗಳಲ್ಲಿ ಹಲವು ಬಗೆ

–ಅಭಿಲಾಷ ಬಿ.ಸಿ.

ತೋರಣದ ತಳಿರಲ್ಲಿ, ಹೊಸಿಲಿನ ಹಣತೆಗಳಲ್ಲಿ ನಲಿವು ಮೂಡಿಸಿ, ಕತ್ತಲೆಯ ಪುಟಗಳಲ್ಲಿ ಬೆಳಕಿನಕ್ಷರಗಳಲ್ಲಿ ದೀಪಗಳ ಸಂದೇಶ ಸಾರುವ ಸಲುವಾಗಿ ಮತ್ತೆ ಬಂದಿದೆ ದೀಪಾವಳಿ. ದೀಪಗಳೀಗ ಕೇವಲ ಸಂಪ್ರದಾಯದ ಪ್ರತೀಕವಾಗಿ ಉಳಿದಿಲ್ಲ. ಸೌಂದರ್ಯ, ಆಕರ್ಷಣೆ ಕೆಲವೊಮ್ಮೆ ಪ್ರತಿಷ್ಠೆಯ ದ್ಯೋತಕವಾಗಿಯೂ ಬೆಳಗುತ್ತಿವೆ.

ಪಿಂಗಾಣಿ, ಚಿನ್ನ, ಬೆಳ್ಳಿಯ ಹಣತೆಗಳ ನಡುವೆಯೂ ಮಣ್ಣಿನ ದೀಪಗಳೇ ಶ್ರೇಷ್ಠ ಎಂಬ ಭಾವವೊಂದು ಅನೇಕ ಭಾರತೀಯರ ಎದೆಯಲ್ಲಿ ಮನೆಮಾಡಿರುವುದರಿಂದಲೇ ಅನೇಕ ಕುಟುಂಬಗಳು ಇಂದಿಗೂ ಕುಂಬಾರಿಕೆಯನ್ನೇ ನೆಚ್ಚಿ ಜೀವನ ಸಾಗಿಸುತ್ತಿವೆ. ಗ್ರಾಮೀಣ ಭಾಗಗಳಲ್ಲಿ ಇನ್ನೂ ಸಂಪ್ರದಾಯ ಮುರಿಯಲು ಇಚ್ಛಿಸದ ಹಲವರು ಮಣ್ಣಿನ ದೀಪಗಳನ್ನು ಬಳಸುತ್ತಿದ್ದಾರೆ. ಅದರೆ, ನಗರಗಳಲ್ಲಿ ಆಧುನಿಕತೆಗೆ ಒಗ್ಗಿಕೊಂಡಿರುವ ಬಹುತೇಕರು ಚೀನಿ, ಪಿಂಗಾಣಿ ಹಣತೆ ಬಳಸಿ ಮನೆಯನ್ನು ಸಿಂಗರಿಸುತ್ತಿದ್ದಾರೆ.

ಮಣ್ಣಿನಲ್ಲಿಯೂ ಬಹುವರ್ಣ, ವಿನ್ಯಾಸ, ಗಾತ್ರದ ದೀಪಗಳು ಮಾರುಕಟ್ಟೆಯನ್ನು ಪ್ರವೇಶಿಸಿರುವುದರಿಂದ ಕಳೆದ ಕೆಲ ವರ್ಷಗಳಲ್ಲಿ ಪಿಂಗಾಣಿ ಹಾಗೂ ಚೀನಿ ಹಣತೆಗಳಿಗಿದ್ದ ಜನಪ್ರಿಯತೆ ಈಗ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಆದರೆ, ಎಲ್‌ಇಡಿ ಮತ್ತು ಎಲ್‌ಸಿಡಿ ದೀಪಗಳ ಪ್ರಭೆ ಎದುರು ದೇಸಿ ಹಣತೆಗಳು ಕಳೆಗುಂದಿವೆ.

ನಗರದ ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಒಂದು ಡಜನ್ ಪಿಂಗಾಣಿ ಹಣತೆಗೆ ₹30ರಿಂದ ₹40 ಇದ್ದರೆ, ಮಣ್ಣಿನ ಹಣತೆಗೆ ₹15ರಿಂದ ₹25 ಇದೆ. ಬಣ್ಣದ ಮಣ್ಣಿನ ದೀಪಗಳು ₹50ರಿಂದ ₹60ಕ್ಕೆ ಮಾರಾಟವಾಗುತ್ತಿವೆ. ವಿನ್ಯಾಸ ಮತ್ತು  ಗಾತ್ರದ ಆಧಾರದಲ್ಲಿ ಬೆಲೆಯನ್ನು ನಿರ್ಧರಿಸಲಾಗುತ್ತಿದೆ. ಒಂದು ಸಾವಿರ ಬತ್ತಿಯನ್ನು ಹಾಕಬಹುದಾದ ಬಹುವಿನ್ಯಾಸದ ಚೀನಿ ಹಣತೆಗಳು ₹800 ರಿಂದ ₹1,500ಗೆ ಬಿಕರಿಯಾಗುತ್ತಿವೆ.

‘ದಶಕಗಳ ಹಿಂದೆ ದೀಪಾವಳಿ ಬಂತೆಂದರೆ ಹೊಸ ಉತ್ಸಾಹವಿರುತ್ತಿತ್ತು. ಹಬ್ಬಕ್ಕಾಗಿಯೇ ತಿಂಗಳುಗಳ ಮೊದಲೇ ನಗರದ ಹೊರವಲಯದಿಂದ ಮಣ್ಣನ್ನು ತಂದು ಹಣತೆ ಸಿದ್ಧಪಡಿಸುತ್ತಿದ್ದೆವು. ಈಗ ಆ ಉತ್ಸಾಹ ಮರೆಯಾಗಿದೆ. ತಮಿಳುನಾಡಿನಿಂದ ಯಥೇಚ್ಛವಾಗಿ ದೀಪಗಳು ಪೂರೈಕೆಯಾಗುತ್ತವೆ. ಅವು ಯಂತ್ರಗಳಿಂದ ಸಿದ್ಧಪಡಿಸುವ ಹಣತೆಗಳು. ಹಾಗಾಗಿ ನಾವು ಕೈಯಿಂದ ತಯಾರಿಸುವ ಹಣತೆಗಳಿಗಿಂತ ಕಡಿಮೆ ಬೆಲೆಗೆ ಸಿಗುತ್ತಿವೆ. ಜನರು ಅವುಗಳನ್ನೇ ಕೊಂಡುಕೊಳ್ಳುತ್ತಾರೆ. ಹಾಗಾಗಿ ನಾವೀಗ ಕುಂಬಾರಿಕೆಯನ್ನು ಕೈಬಿಟ್ಟು, ಕೇವಲ ಮಾರುವ ಕಾರ್ಯದಲ್ಲಿ ತೊಡಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮಲ್ಲೇಶ್ವರದ ವ್ಯಾಪಾರಿ ಆದಿಲಕ್ಷ್ಮಿ.

‘ವರ್ಷದಿಂದ ವರ್ಷಕ್ಕೆ ವ್ಯಾಪಾರ ಕುಸಿಯುತ್ತಿದೆ. ಅದರಲ್ಲೂ ಈ ವರ್ಷ ಸಂಜೆಯ ಹೊತ್ತಿಗೆ ಸುರಿವ ಮಳೆ ವ್ಯಾಪಾರಕ್ಕೆ ತೊಡಕಾಗಿ ಪರಿಣಮಿಸಿದೆ. ಸಂಜೆಯ ಸಮಯದಲ್ಲಿ ಉತ್ತಮ ವ್ಯಾಪಾರದ ನಿರೀಕ್ಷೆ ಇರುವಾಗಲೇ ಮಳೆ ಆರಂಭವಾಗುವುದರಿಂದ ವ್ಯಾಪಾರ ಸಂಪೂರ್ಣ ಸ್ಥಗಿತವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಮಲ್ಲೇಶ್ವರದ ರಸ್ತೆ ಬದಿ ವ್ಯಾಪಾರಿ ಶಾಂತಾ.

‘ಕಳೆದ 30 ವರ್ಷಗಳಿಂದ ಇದೇ ವ್ಯಾಪಾರವನ್ನು ನೆಚ್ಚಿಕೊಂಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಸ್ಪರ್ಧೆ ಹೆಚ್ಚುತ್ತಿದೆ. ತರಕಾರಿ, ಹೂ ಮಾರುವವರು ಸೇರಿದಂತೆ ವಿವಿಧ ಬೀದಿ ಬದಿಯ ವ್ಯಾಪಾರಿಗಳು ಕಾರ್ತಿಕ ಮಾಸದಲ್ಲಿ ಹಣತೆಗಳನ್ನು ಮಾರುತ್ತಾರೆ. ಹಾಗಾಗಿ ದೀಪಗಳ ವ್ಯಾಪಾರದಲ್ಲೇ ತೊಡಗಿಕೊಂಡಿರುವ ನಮ್ಮಂಥವರಿಗೆ ನಷ್ಟವಾಗುತ್ತಿದೆ. ಮಾತ್ರವಲ್ಲದೆ, ಗ್ರಾಹಕರ ಪ್ರತಿಕ್ರಿಯ ಕೂಡ ನೀರಸವಾಗಿದೆ’ ಎಂಬುದು ವೈಯಾಲಿಕಾವಲ್‌ನ ಶ್ರೀಮಂಜುನಾಥ ಸ್ಪೋರ್‌ನ ನಳಿನಿ ಅವರು ಅಂಬೋಣ.

‘ಕುಂಬಾರಿಕೆ ಈಗ ಲಾಭದಾಯಕ ಉದ್ಯೋಗವಾಗಿ ಉಳಿದಿಲ್ಲ. ದುಬಾರಿ ಬೆಲೆತೆತ್ತು ನಗರದ ಹೊರವಲಯದಿಂದ ಜೇಡಿಮಣ್ಣು ತಂದು ಬಹುವಿನ್ಯಾಸದ ದೀಪಗಳನ್ನು ತಯಾರಿಸಿದರೂ ಕೊಳ್ಳುವವರು ಬೆರಳೆಣಿಕೆಯ ಜನರು ಮಾತ್ರ. ಹಾಗಾಗಿ ಕುಂಬಾರಿಕೆಯನ್ನು ಬಿಟ್ಟು ಹೂ ಮಾರುವ ಉದ್ಯೋಗವನ್ನು ಆರಂಭಿಸಿದ್ದೇನೆ’ ಎನ್ನುತ್ತಾರೆ ವೈಯಾಲಿಕಾವಲ್‌ನ ದತ್ತಾತ್ರೇಯ ದೇವಾಲಯದ ಎದುರು ಹೂ ಮಾರುವ ರಾಣಿಲಕ್ಷ್ಮಿ.

‘ಮಣ್ಣಿನ ದೀಪಗಳನ್ನು ನಾಜೂಕಿನಿಂದ ಬಳಸಬೇಕು. ಸ್ವಲ್ಪ ಹೆಚ್ಚುಕಡಿಮೆಯಾದರೆ ಒಡೆಯುತ್ತವೆ. ಪಿಂಗಾಣಿ ದೀಪಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಆದರೆ, ಬತ್ತಿ ಜಾರುವುದರಿಂದ ದೀಪ ಬೇಗ ನಂದಿಹೋಗುತ್ತದೆ. ಮಣ್ಣಿನ ಹಣತೆಗಳು ಹೆಚ್ಚು ಸಮಯ ಬೆಳಕನ್ನು ನೀಡುತ್ತವೆ. ಹಾಗಾಗಿ ನನ್ನ ಆದ್ಯತೆ ಮಣ್ಣಿನ ಹಣತೆ’ ಎನ್ನುವುದು ಸದಾಶಿವನಗರದ ಪುಷ್ಪಾದೇವಿ ಅವರ ಅಭಿಪ್ರಾಯ.

‘ಮಣ್ಣಿನ ಹಣತೆಗಳು ವರ್ಷಪೂರ್ತಿ ಸಿಗುತ್ತವೆ. ಆಗಾಗ್ಗೆ ದೇವಾಲಯಗಳಿಗೆ ಹೋಗುವಾಗ ಅವುಗಳನ್ನು ಕೊಂಡ್ಯೊಯ್ಯುತ್ತೇನೆ. ಆದರೆ, ಚೀನಿ, ಪಿಂಗಾಣಿ ಮತ್ತು ಟೆರ‍್ರಾಕೂಟ ದೀಪಗಳು ಕಾರ್ತಿಕ ಮಾಸದಲ್ಲಿ ಮಾತ್ರ ಮಾರುಕಟ್ಟೆಗೆ ಬರುವುದರಿಂದ ಅವುಗಳನ್ನೇ ಕೊಂಡುಕೊಳ್ಳುತ್ತೇನೆ’ ಎಂದವರು ಗೃಹಿಣಿ ಲತಾ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry