ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗಣ್ಣಿನ ಬೆಳಕಲ್ಲಿ ದೀಪಾವಳಿ

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅನಂತಪುರ ಜಿಲ್ಲೆಯ ದೊಡ್ಡಘಟ್ಟ ನನ್ನೂರು. ತಂದೆ–ತಾಯಿ, ಅಣ್ಣಂದಿರು, ಅಕ್ಕ–ತಂಗಿಯರು ಎಲ್ಲ ಇದ್ದಾರೆ. ನನಗೂ ಮದುವೆಯಾಗಿ ಮೂರು ವರ್ಷದ ಮಗಳಿದ್ದಾಳೆ. ಆಂಧ್ರಪ್ರದೇಶದವರಾದರೂ, ಮನೆಯಲ್ಲಿ ಎಲ್ಲರೂ ಕನ್ನಡ ಮಾತಾಡುತ್ತೇವೆ. ನಾವು ಮಾತ್ರವಲ್ಲ ಗ್ರಾಮದವರಿಗೂ ಕನ್ನಡದ ನಂಟಿದೆ. ಬಳ್ಳಾರಿ ನಮಗೆ ಸಮೀಪವಿರುವುದರಿಂದ ವ್ಯವಹಾರಗಳಿಗೂ ಅಲ್ಲಿಗೆ ತೆರಳುತ್ತೇವೆ. ಕುಟುಂಬ ನಿರ್ವಹಣೆಗೆ ಅನಿವಾರ್ಯವಾಗಿ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ತೂಕ ನೋಡುವ ಯಂತ್ರವಿಟ್ಟುಕೊಂಡು ದುಡಿಯುತ್ತಿದ್ದೇನೆ.

ನನ್ನ ಕುಟುಂಬದಲ್ಲಿ ನನಗೊಬ್ಬನಿಗೆ ಕಣ್ಣು ಕಾಣುವುದಿಲ್ಲ. ನನಗೆ ಮೂರು ವರ್ಷ ಆಗುವವರೆಗೆ ಚೆನ್ನಾಗಿಯೇ ಇದ್ದೆನಂತೆ. ಸಿಡುಬು ಕಾಯಿಲೆಯಿಂದಾಗಿ ಕಣ್ಣು ಕಳೆದುಕೊಳ್ಳಬೇಕಾಯಿತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ದೊಡ್ಡ ಆಸ್ಪತ್ರೆಗೆ ತೋರಿಸುವ ಶಕ್ತಿ ಪೋಷಕರಿಗೆ ಇರಲಿಲ್ಲ. ನಾಟಿ ಚಿಕಿತ್ಸೆ ಮಾಡಿಸಿದರಾದರೂ, ಹೋದ ಕಣ್ಣು ಮಾತ್ರ ಬರಲೇ ಇಲ್ಲ.

ಗ್ರಾಮೀಣ ಅಭಿವೃದ್ಧಿ ಟ್ರಸ್ಟ್‌ನವರ ಸಹಾಯದಿಂದಾಗಿ ಬಿ.ಎ ಪದವಿ ಪೂರ್ಣಗೊಳಿದೆ. ಇಲ್ಲಿನ ಕಾಲ್‌ಸೆಂಟರ್‌, ಅಗರಬತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದೇನೆ. ಮದುವೆಯಾದ ನಂತರ ಬರುವ ಸಂಬಳದಲ್ಲಿ ಜೀವನ ಸಾಗಿಸುವುದು ತುಂಬಾ ಕಷ್ಟವಾಯಿತು. ಹಾಗಾಗಿ ತೂಕದ ಯಂತ್ರವಿಟ್ಟುಕೊಂಡಿದ್ದೇನೆ. ಆಸಕ್ತರು 2 ರೂಪಾಯಿ ಕೊಟ್ಟು ತೂಕ ನೋಡಿಕೊಂಡು ಹೋಗುತ್ತಾರೆ. ಕೆಲವರು ಉದಾರವಾಗಿ ಸಹಾಯ ಮಾಡುತ್ತಾರೆ. ಐದು ದಿನ ಕೆಲಸ ಮಾಡಿ ಊರಿಗೆ ಹೋಗಿ ಬರುತ್ತೇನೆ.

ನನ್ನ ಎಲ್ಲ ವೈಯಕ್ತಿಕ ಕೆಲಸಗಳನ್ನೂ ನಾನೇ ಸ್ವತಂತ್ರವಾಗಿ ಮಾಡಿಕೊಳ್ಳುತ್ತೇನೆ. ಶಾಲೆಯಲ್ಲಿ ಈ ಬಗ್ಗೆ ಉತ್ತಮ ತರಬೇತಿ ನೀಡಿದ್ದಾರೆ. ಆದರೂ ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಿ ಓಡಾಡುವಾಗ ಸ್ವಲ್ಪ ಭಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಜನರೇ ನನ್ನ ಕೈ ಹಿಡಿದು ನಡೆಸಿದ್ದಾರೆ. ಭಾಷೆ ಬಾರದವರೂ ನನ್ನನ್ನು ಗಮನಿಸಿ 'ಕ್ಯಾನ್ ಐ ಹೆಲ್ಟ್‌ ಯು?' ಎಂದು ಕೇಳಿದ್ದಾರೆ. ದೇವರಂತೂ ಕಣ್ಣಿಗೆ ಕಾಣಲ್ಲ. ಸಹಾಯಕ್ಕೆ ಬರುವ ಜನರೇ ನನ್ನ ದೇವರು.

ದೀಪಾವಳಿ ಹಬ್ಬ ನನಗೆ ಅಚ್ಚುಮೆಚ್ಚು. ಬಾಲ್ಯದಲ್ಲಿ ಕಣ್ಣು ಇದ್ದು, ಜೀವನಯಾನದ ಮಧ್ಯದಲ್ಲಿ ಕಣ್ಣು ಕಳೆದುಕೊಂಡವರಿಗೆ ಹಬ್ಬ ಹೇಗಿರುತ್ತದೆ ಎಂಬ ಕಲ್ಪನೆಯಾದರೂ ಇರುತ್ತದೆ. ಆದರೆ ನನಗೆ ಅದೂ ಸಾಧ್ಯವಿಲ್ಲ. ಇತರರ ಅನುಭವದ ಮಾತುಗಳು, ಶಬ್ದ ಮತ್ತು ಸ್ಪರ್ಶದ ಮೂಲಕ ಮಾತ್ರವೇ ಹಬ್ಬದ ಕುರಿತು ತಿಳಿಯಬೇಕು.

ಹಬ್ಬದ ಪ್ರಯುಕ್ತ ಮನೆಯನ್ನು ಸ್ವಚ್ಛಗೊಳಿಸುತ್ತೇವೆ. ಎಣ್ಣೆಸ್ನಾನ ಮಾಡಿ ಹೊಸ ಬಟ್ಟೆ ಧರಿಸುತ್ತೇವೆ. ಸಹಿ ಅಡುಗೆಯನ್ನು ಮಾಡಿ ಸಂತೋಷದಿಂದ ಊಟ ಮಾಡುತ್ತೇವೆ. ನನ್ನ ಮಟ್ಟಿಗೆ ಅದೇ ಹಬ್ಬ. ಬಾಲ್ಯದಲ್ಲಿ  ಪಟಾಕಿ ಕೊಡಿಸುವಂತೆ ಹಠ ಹಿಡಿದಿದ್ದೆ. ಅದಕ್ಕೆ ಅಪ್ಪ, ‘ಕಣ್ಣಿನ ತೊಂದರೆ ಇಟ್ಟುಕೊಂಡು ಹ್ಯಾಂಗ್‌ ಪಟಾಕಿ ಹಚ್ಚುತ್ತೀಯಾ ಮಗ. ಏನಾದರೂ ತೊಂದರೆಯಾದೀತು. ಚಿನಕುರಳಿ ಪಟಾಕಿ ಸಿಡಿಸು ಸಾಕು’ ಎಂದಿದ್ದರು. ಹಾಗಾಗಿ ನಾನು ಪ್ರತಿವರ್ಷ ಚಿನಕುರಳಿ ಪಟಾಕಿಯನ್ನು ಮಾತ್ರವೇ ಸಿಡಿಸಿ ಸಂಭ್ರಮಿಸುತ್ತೇನೆ.

ನನ್ನಂತೆ ಅಂಧತ್ವ ಎದುರಿಸುತ್ತಿರುವ ಕೆಲವು ಸ್ನೇಹಿತರಿದ್ದಾರೆ. ತುಂಬಾ ಚಾಣಾಕ್ಷರು. ದೊಡ್ಡ ಪಟಾಕಿಗಳನ್ನೂ ಸಿಡಿಸಬಲ್ಲರು. ಆದರೆ, ಪ್ರತಿವರ್ಷವೂ ಪಟಾಕಿಯಿಂದಾಗುವ ಅನಾಹುತಗಳ ಬಗ್ಗೆ ಕೇಳಿದಾಗ ತುಂಬಾ ನೋವಾಗುತ್ತದೆ. ಒಂದು ದಿನದ ಹಬ್ಬಕ್ಕಾಗಿ ಇಡೀ ಜೀವನವನ್ನೇ ಕಳೆದುಕೊಳ್ಳುವಂತಾಗಬಾರದು. ಕಣ್ಣು ತುಂಬಾ ಸೂಕ್ಷ್ಮವಾದ ಅಂಗ. ಒಮ್ಮೆ ಏನಾದರೂ ಅನಾಹುತವಾದರೆ ಮರಳಿ ದೃಷ್ಟಿ ಪಡೆಯುವುದು ಅಸಾಧ್ಯ.

ಎಲ್ಲರಿಗೂ ನಾನು ಹೇಳುವುದು ಇಷ್ಟೇ. ಎಚ್ಚರಿಕೆಯಿಂದ ದೀಪಾವಳಿ ಆಚರಿಸಿ. ಮನೆಯ ಮುಂದೆ ದೀಪಗಳನ್ನು ಹಚ್ಚಿ, ಸುರುಸುರು ಬತ್ತಿ, ಚಿನಕುರಳಿಯಂತಹ ಸಣ್ಣ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿ. ಇದು ಆರೋಗ್ಯಕ್ಕೂ, ಪರಿಸರಕ್ಕೂ ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT