ಅರ್ಚಕರಾದರಷ್ಟೇ ಸಾಲದು...

ಮಂಗಳವಾರ, ಜೂನ್ 18, 2019
26 °C
ಕರ್ನಾಟಕ ಸರ್ಕಾರ, ದಲಿತ-–ಶೂದ್ರರನ್ನು ಅರ್ಚಕರನ್ನಾಗಿ ನೇಮಕ ಮಾಡಿಕೊಳ್ಳಲೇಬೇಕು ಎಂದಿದ್ದರೆ ಅವೈದಿಕ ಪದ್ಧತಿ ಪೂಜಾರಿಕೆಗೆ ಬೆಂಬಲ ಕೊಟ್ಟು ಅದರ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಿ

ಅರ್ಚಕರಾದರಷ್ಟೇ ಸಾಲದು...

Published:
Updated:

* ವಿಕಾಸ್ ಆರ್. ಮೌರ್ಯ

ಕೇರಳ ಮಾದರಿಯಲ್ಲಿಯೇ ರಾಜ್ಯದಲ್ಲೂ ದಲಿತ ಅರ್ಚಕರನ್ನು ನೇಮಿಸುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ. ಕೇರಳ ಸರ್ಕಾರವು ಹಿಂದುಳಿದ ಜಾತಿಗಳ 36 ಅರ್ಚಕರನ್ನೂ ನೇಮಿಸಿದೆ ಎಂಬುದನ್ನು ಸಹ ನಾವು ಮರೆಯಬಾರದು. ಹಾಗೆಂದು ಹಿಂದುಳಿದವರು ಮತ್ತು ದಲಿತರು ಅರ್ಚಕರಾಗುತ್ತಿರುವುದು ಕೇರಳದಲ್ಲಿಯೇ ಮೊದಲಲ್ಲ.

ಇಂತಹ ಪ್ರಯತ್ನಗಳನ್ನು ಗುಜರಾತ್ ಮತ್ತು ತಮಿಳುನಾಡು ಸರ್ಕಾರಗಳು ಮಾಡಿದ್ದವು. ತಮಿಳುನಾಡಿನ ಆದೇಶವನ್ನು ಅಲ್ಲಿನ ‘ಬ್ರಾಹ್ಮಣ ಅರ್ಚಕರ ಸಂಘ’ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದೆ. ಗುಜರಾತಿನ ಸರ್ಕಾರ, ‘ದಲಿತ ಅರ್ಚಕ’ ಎಂಬ ಯೋಜನೆಗೆ ಹಣವನ್ನೂ ಮೀಸಲಿಟ್ಟಿತ್ತು. ಕೇರಳ ಸರ್ಕಾರದ ಬ್ರಾಹ್ಮಣೇತರ ಅರ್ಚಕ ಯೋಜನೆಯನ್ನು ಕ್ರಾಂತಿಕಾರಿ ನಡೆ ಎಂದು ಈಗ ಹೇಳುತ್ತಿರುವವರು ಅಂದು, ‘ಪಾಳು ಬಿದ್ದ ದೇವಸ್ಥಾನಗಳಿಗೆ ದಲಿತರನ್ನು ಪೂಜಾರಿ ಮಾಡ್ತಾರಂತೆ’ ಎಂದಿದ್ದರು.

ದಲಿತ ಅಥವಾ ಶೂದ್ರ ಸಮುದಾಯಗಳಿಗೆ ಪೂಜಾರಿಕೆ ಹೊಸತೇನಲ್ಲ. ನೆಲ ಮೂಲ ದೇವರಾದ ಸಿಂಗಮ್ಮ, ಮಂಟೇಸ್ವಾಮಿ, ಜುಂಜಪ್ಪ, ತಿಪ್ಪೇಸ್ವಾಮಿ, ಮಾರಮ್ಮ, ಮಾದಪ್ಪ, ಗಂಗಮ್ಮ, ಹುಲಿಗೆಮ್ಮ, ದುಗ್ಗಮ್ಮ ಮುಂತಾದ ದೇವರಿಗೆ ತಲೆತಲಾಂತರಗಳಿಂದ ಪೂಜಾರಿಕೆ ಮಾಡಿಕೊಂಡು ಬರುತ್ತಿದ್ದಾರೆ. ಅವರನ್ನು ಗುಡ್ಡಪ್ಪ, ದಾಸಪ್ಪ, ತಮದಿಗಳು ಎಂದೆಲ್ಲ ಕರೆಯುತ್ತಾರೆ. ಆದರೆ ಕೇರಳ ಮಾದರಿಯಲ್ಲಿ ಆಗಮಶಾಸ್ತ್ರ ಅಭ್ಯಾಸ ಮಾಡಿದ ದಲಿತ ಅರ್ಚಕರ ನೇಮಕ ಸದ್ಯಕ್ಕೆ ಸುಧಾರಣೆಯಂತೆ ಕಂಡರೂ ದೂರಗಾಮಿಯಲ್ಲಿ ದಲಿತ ವಿಮೋಚನೆಗೆ ಅಪಾಯವನ್ನು ತಂದೊಡ್ಡಿ ಹೊಸ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಆಗಮಶಾಸ್ತ್ರ ಅಭ್ಯಾಸ ಮಾಡಲಿಚ್ಛಿಸುವ ವ್ಯಕ್ತಿ ದ್ವಿಜನಾಗಿರಬೇಕು. ಅಂದರೆ ಜನಿವಾರ ಧಾರಣೆ ಕಡ್ಡಾಯ. ಜೊತೆಗೆ ಪಕ್ಕಾ ಸಸ್ಯಾಹಾರಿಯಾಗಿರಬೇಕು. ಇದು ದಲಿತರ ಆಹಾರ ವೈವಿಧ್ಯವನ್ನೇ ಹಾಳುಗೆಡುವುತ್ತದಲ್ಲದೆ, ಮಾಂಸಾಹಾರ ಸೇವನೆ ವಿರುದ್ಧ ಈಗಿರುವ ಹುನ್ನಾರಗಳಿಗೆ ಬಲ ನೀಡುತ್ತದೆ. ಮುಖ್ಯವಾಹಿನಿಯಲ್ಲಿ ಇಲ್ಲದ ಅವೈದಿಕ ಪೂಜಾವಿಧಿಗಳನ್ನು ಮತ್ತಷ್ಟು ಹಿಂದಕ್ಕೆ ತಳ್ಳುತ್ತದೆ. ಬಹುತ್ವವನ್ನು ನಾಶ ಮಾಡುತ್ತಾ ಏಕತ್ವವನ್ನು ಸ್ಥಾಪಿಸುತ್ತದೆ. ಈ ಏಕತ್ವಕ್ಕೆ ಹುಲ್ಲುಕಡ್ಡಿಯಷ್ಟು ಸಹಕಾರ ಸಿಕ್ಕರೂ ದೇಶದ ಜಾತ್ಯತೀತತೆಯನ್ನು ಸದಾ ಹೊಸಕಿ ಹಾಕಲು ಕಾಯುವ ಬಲಪಂಥೀಯ ವಿಚಾರಧಾರೆಗೆ ಆನೆಬಲ ಬಂದು ಬಿಡುತ್ತದೆ. ಇದರ ತಂದೆಯಾದ ಕೋಮುವಾದ ದಲಿತ-ಶೂದ್ರ ಅರ್ಚಕರನ್ನು ತೋರಿಸಿ ಇಡೀ ಸಮುದಾಯಗಳನ್ನು ಅನ್ಯಧರ್ಮೀಯರ ವಿರುದ್ಧ ಎತ್ತಿಕಟ್ಟುವಲ್ಲಿ ಹಿಂದೆಂದೂ ಕಾಣದ ಯಶಸ್ಸನ್ನು ಕಾಣುವ ಸಾಧ್ಯತೆ ನಿರ್ಮಾಣವಾಗುತ್ತದೆ.

ಅಂಬೇಡ್ಕರರು ಜಾತಿ ವಿನಾಶ ಕೃತಿಯಲ್ಲಿ ‘ಈ ರೀತಿಯ ಪೌರೋಹಿತ್ಯವನ್ನೇ ರದ್ದುಪಡಿಸಬೇಕು’ ಎಂದಿದ್ದರು. ಹಲವಾರು ದೇವರು, ಸಂಸ್ಕೃತಿಗಳು, ಪೂಜಾ ವಿಧಾನಗಳಿರುವ ಈ ದೇಶದಲ್ಲಿ ಬ್ರಾಹ್ಮಣ್ಯ ರೀತಿಯ ಅರ್ಚಕ ಪದ್ಧತಿಗೆ ಒತ್ತುಕೊಟ್ಟು ಅದನ್ನು ದಲಿತ-ಶೂದ್ರರು ಅಭ್ಯಸಿಸುವಂತೆ ಮಾಡಿ ಅರ್ಚಕರನ್ನು ಮಾಡುವುದರಿಂದ ಇತರ ಪೂಜಾರಿಕೆ ಪದ್ಧತಿಯನ್ನು ಕನಿಷ್ಠ ಮಟ್ಟಕ್ಕೆ ತಳ್ಳಿದಂತಾಗುತ್ತದೆ. ಅವೈದಿಕ ದೇವರನ್ನು ಕಬಳಿಸಿರುವ ಬ್ರಾಹ್ಮಣ್ಯಕ್ಕೆ ಹೆಗಲು ಕೊಟ್ಟಂತಾಗುತ್ತದೆ.

ಆದ್ದರಿಂದ ಕರ್ನಾಟಕ ಸರ್ಕಾರ ದಲಿತ-ಶೂದ್ರರನ್ನು ಅರ್ಚಕರನ್ನಾಗಿ ನೇಮಕ ಮಾಡಿಕೊಳ್ಳಲೇಬೇಕು ಎಂದಿದ್ದರೆ ಅವೈದಿಕ ಪದ್ಧತಿ ಪೂಜಾರಿಕೆಗೆ ಬೆಂಬಲ ಕೊಟ್ಟು ಅದರ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಿ. ಏಕೆಂದರೆ ಜನಿವಾರ ರಹಿತವಾಗಿ, ಮಾಂಸಾಹಾರ ಸೇವಿಸುತ್ತಲೇ, ಮಡಿ ಮೈಲಿಗೆಗೆ ಬೆಲೆ ಕೊಡದೆ, ಸಂಸ್ಕೃತಕ್ಕೆ ಕಟ್ಟು ಬೀಳದೆ, ಸಹ ಮಾನವರೊಂದಿಗೆ ಬೆರೆತು ಮಾಡುವ ಪೂಜಾರಿಕೆಯು ಆಗಮಶಾಸ್ತ್ರ ಪೂಜಾರಿಕೆಗಿಂತ ಜನಪರವಾಗಿದೆ. ಇಂತಹ ಪದ್ಧತಿಯನ್ನು ಬೌದ್ಧ ಭಿಕ್ಕು ಸಂಘಗಳು ಎರಡು ಸಾವಿರ ವರ್ಷಗಳ ಹಿಂದೆಯೇ ಪಾಲಿಸಿದ್ದವು. ಭಿಕ್ಕು ಸಂಘಗಳಿಗೆ ಬುದ್ಧ ವಂದನೆ ಮಾಡಲು ಮಾಂಸಾಹಾರ, ಜಾತಿ-ವರ್ಣ-ಲಿಂಗ ಒಂದು ಸಮಸ್ಯೆಯೇ ಆಗಿರಲಿಲ್ಲ.

ಇನ್ನು ದಲಿತರ ವಿಚಾರಕ್ಕೆ ಬರೋಣ. ದಲಿತರಲ್ಲೂ ಪೂಜಾರಿಕೆ ಇದೆ ಎಂದು ಆಗಲೇ ಹೇಳಿದ್ದೇನೆ. ಆದರೆ ಅಂಬೇಡ್ಕರರು ದಲಿತರ ವಿಮೋಚಕರಾದ ಮೇಲೆ, ಅಂಬೇಡ್ಕರ್‌ವಾದವೇ ದಲಿತರ ವಿಮೋಚನೆಯ ದಾರಿ ಎಂದಾದ ಮೇಲೆ ಬುದ್ಧ ಧಮ್ಮ ದಲಿತರಿಗೆ ದಿನದಿಂದ ದಿನಕ್ಕೆ ಆಪ್ತವಾಗುತ್ತಿದೆ. ಆ ಧಮ್ಮದ ಹಿರಿಮೆ ಎಂದರೆ ಇದುವರೆಗೂ ಅದು ಜಾತಿ, ಮಡಿ-ಮೈಲಿಗೆಗಳನ್ನು ತನ್ನೊಳಗೆ ಬಿಟ್ಟುಕೊಂಡಿಲ್ಲದೇ ಇರುವುದು. ಈ ಕಾರಣಕ್ಕಾಗಿ ಅಂಬೇಡ್ಕರರು ಬೌದ್ಧ ಧಮ್ಮ ಸ್ವೀಕಾರ ದಿನದಂದು ದಲಿತರಿಗೆ ಬೋಧಿಸಿದ 22 ಪ್ರತಿಜ್ಞೆಗಳು ಬಹಳ ಮುಖ್ಯವಾಗುತ್ತವೆ. ಅವುಗಳಲ್ಲಿ ಕೆಲವು ಅಂಶಗಳು ಈ ಸನ್ನಿವೇಶಕ್ಕೆ ಸೂಕ್ತವಾಗುತ್ತವೆ.

* ನನಗೆ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ನಂಬಿಕೆ ಇಲ್ಲ ಮತ್ತು ಇವರನ್ನು ಪೂಜಿಸುವುದಿಲ್ಲ.

* ನಾನು ಯಾವುದೇ ರೀತಿಯಲ್ಲೂ ಬ್ರಾಹ್ಮಣರ ಆಚರಣೆಗಳನ್ನು ಆಚರಿಸುವುದಿಲ್ಲ.

ಈ ಎರಡು ಪ್ರತಿಜ್ಞೆಗಳನ್ನು ಗಮನಿಸಿದರೆ, ಕರ್ನಾಟಕ ಸರ್ಕಾರದ ದಲಿತ ಅರ್ಚಕರ ನೇಮಕ ಹೇಗೆ ದಲಿತರ ವಿಮೋಚನೆಗೆ ಅಡ್ಡಗಾಲು ಹಾಕುತ್ತದೆ ಎಂದು ತಿಳಿಯಬಹುದು. ಏಕೆಂದರೆ ದಲಿತರು ಇಂದು ತಮ್ಮ ವಿಮೋಚನೆಗೆ ಅಂಬೇಡ್ಕರರ ಮಾರ್ಗವೇ ಸೂಕ್ತ ಎಂದು ನಂಬಿದ್ದಾರೆ. ಇಷ್ಟರ ಮೇಲೂ ಸರ್ಕಾರಕ್ಕೆ ದಲಿತರನ್ನು ಪುರೋಹಿತರನ್ನಾಗಿ ಮಾಡುವ ಇಚ್ಛೆ ಇದ್ದಲ್ಲಿ, ತಡವಾಗಿಯಾದರೂ ಸರಿಯೇ ತಾಲ್ಲೂಕಿಗೊಂದು ಬೌದ್ಧ ವಿಹಾರ ನಿರ್ಮಿಸಿ ಅಲ್ಲಿ ದಲಿತರನ್ನು ಭಂತೇಜಿಗಳನ್ನಾಗಿ ಆಯ್ಕೆ ಮಾಡಲಿ.

ಇದಕ್ಕಿಂತಲೂ ಮುಖ್ಯವಾದ, ಬೇರೆಲ್ಲ ಸರ್ಕಾರಗಳು ಯೋಚಿಸಲೂ ಅಸಾಧ್ಯವಾದ ಒಂದು ಕಾರ್ಯವಿದೆ. ಅದೆಂದರೆ ಪೌರಕಾರ್ಮಿಕ ವೃತ್ತಿಗೆ ದಲಿತೇತರರನ್ನು ನೇಮಕ ಮಾಡುವುದು. ಪೌರಕಾರ್ಮಿಕರ ವೃತ್ತಿಯನ್ನು ಇಂದಿಗೂ ದಲಿತರೇ ಮಾಡುತ್ತಿರುವ ಕಾರಣ ದಲಿತೇತರರು ಈ ವೃತ್ತಿಗೆ ಬಂದರೆ ಭಾರತದ ಐತಿಹಾಸಿಕ ಅನ್ಯಾಯವನ್ನು ಈಗಲಾದರೂ ಸರಿಪಡಿಸಬಹುದಾಗಿದೆ.

ಯಾವುದೇ ಸುಧಾರಣೆಗೆ ಅಡಿ ಇಟ್ಟಾಗಲೂ ಈ ಪುರುಷ ಪ್ರಧಾನ ಸಮಾಜ ‘ಅವನ’ ಬಗ್ಗೆ ಮಾತ್ರ ಯೋಚಿಸುತ್ತದೆ. ‘ಅವಳ’ (ಇಲ್ಲಿ ಅರ್ಚಕಿಯರು) ಬಗ್ಗೆ ಚಕಾರ ಎತ್ತುವುದಿಲ್ಲ. ಈ ವಿಚಾರದಲ್ಲಿ ಮಹಿಳೆಯರು ದನಿ ಎತ್ತಬೇಕಿದೆ.

ಒಟ್ಟಾರೆ ದಲಿತರಿಗೆ ಮಾನವ ಸಹಜ ಘನತೆ ಮೊದಲು ಸಿಗಬೇಕಿದೆ. ಸಾಮಾಜಿಕ-ಆರ್ಥಿಕ ಭದ್ರತೆ ದೊರಕಬೇಕಿದೆ. ಸವರ್ಣೀಯ ಭಾರತ ನಡೆಸುವ ದೌರ್ಜನ್ಯಗಳು ನಿಲ್ಲಬೇಕಿದೆ. ಆದ್ದರಿಂದ ದಲಿತರಿಗೆ ಶಾಸನಸಭೆ ಪ್ರವೇಶ ಮುಖ್ಯವಾಗಬೇಕೆ ಹೊರತು ದೇಗುಲ ಪ್ರವೇಶವಲ್ಲ. ಪ್ರಧಾನಮಂತ್ರಿ, ಮುಖ್ಯಮಂತ್ರಿಯಾಗುವುದು ಮುಖ್ಯವೇ ಹೊರತು ಅರ್ಚಕನಲ್ಲ.

ಅಂಬೇಡ್ಕರರ ಮಾತಿನಲ್ಲಿ ಕೊನೆ ಮಾಡುವುದಾದರೆ ‘ನಮ್ಮ ಉನ್ನತಿಗಾಗಿ ನಮಗೆ ಉಳಿದೆಲ್ಲ ಜನರ ಸಹಾಯ, ಸಹಾನುಭೂತಿ ಬೇಕಿದೆ. ಆದರೆ ಹಿಂದೂ ಸಮಾಜದ ಗಟ್ಟಿ ಚೌಕಟ್ಟನ್ನು ಹಾಗೇ ಇಟ್ಟು, ಉಪಕಾರವೆಂಬಂತೆ ನಮಗೆ ಸವಲತ್ತುಗಳನ್ನು ಕೊಡಲು ನೋಡುವ ಹಾಗೂ ನಮ್ಮ ಹಕ್ಕುಗಳಿಗೆ ಮಹತ್ವ ಕೊಡದೆ ಕೇವಲ ತಮ್ಮ ಧರ್ಮದ ವರ್ಚಸ್ಸನ್ನು ತೋರಿಸಲು ನಮ್ಮನ್ನು ಹಿಂದೂ ಸಮಾಜದಲ್ಲಿಡಲು ಹವಣಿಸುವ ಸ್ವಾರ್ಥಿ ಜನರ ಸಹಾನುಭೂತಿ ನಮಗೆ ಬೇಕಿಲ್ಲ. ಇಂತಹ ಜನರೇ ನಿಜವಾದ ಶತ್ರುಗಳು’.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry