ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ: ಎರಡು ವರ್ಷದ ಬಳಿಕ ಮೈದುಂಬುವ ಪುಳಕ

ಇನ್ನು ಮೂರು ಅಡಿ ನೀರು ಬಂದರೆ ಜಲಾಶಯ ಸಂಪೂರ್ಣ ಭರ್ತಿ
Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇನ್ನು 3.23 ಅಡಿ ನೀರು ಬಂದರೆ, ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.

ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 1,633 ಅಡಿ ಇದ್ದು, ಮಂಗಳವಾರ 1,629.77 ಅಡಿ ನೀರು ಸಂಗ್ರಹವಾಗಿದೆ. ಅಕ್ಟೋಬರ್‌ ಒಂದರಿಂದ ಇಲ್ಲಿಯವರೆಗೆ ಜಲಾಶಯಕ್ಕೆ 23.23 ಟಿ.ಎಂ.ಸಿ. ಅಡಿ ನೀರು ಹರಿದು ಬಂದಿದೆ.

ಸಮರ್ಪಕ ಮಳೆಯಾಗದ ಕಾರಣ ಎರಡು ವರ್ಷದಿಂದ ಎರಡನೇ ಬೆಳೆಗೇ ನೀರು ಹರಿಸಿರಲಿಲ್ಲ. ಅಲ್ಲದೆ ಬೇಸಿಗೆಯಲ್ಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿತ್ತು. ಆದರೆ, ಈ ಬಾರಿ ಅಂತಹ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಕಡಿಮೆ.

ಸೋಮವಾರ 30,219 ಕ್ಯುಸೆಕ್‌ ಇದ್ದ ಒಳಹರಿವು, ಮಂಗಳವಾರ 13,738 ಕ್ಯುಸೆಕ್‌ಗೆ ತಗ್ಗಿದೆ. ಈಗಿರುವಷ್ಟೇ ಒಳಹರಿವು ಇದ್ದರೆ ಇನ್ನೂ ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗಬಹುದು. ಇಷ್ಟೇ ಪ್ರಮಾಣದ ನೀರು ಡಿಸೆಂಬರ್‌ ಮೊದಲ ವಾರದಲ್ಲಿಯೂ ಇದ್ದರೆ ಎರಡನೇ ಬೆಳೆಗೂ ನೀರು ಹರಿಸಬಹುದು.

ಜಲಾಶಯದ ಒಟ್ಟು ನೀರಿನಲ್ಲಿ ರಾಜ್ಯದ ಪಾಲು ಶೇ 60ರಷ್ಟಿದ್ದರೆ, ಉಳಿದದ್ದು ಅವಿಭಜಿತ ಆಂಧ್ರಪ್ರದೇಶದ್ದು. ಅಷ್ಟರಲ್ಲೇ ಕೃಷಿ ಹಾಗೂ ಕುಡಿಯುವ ಉದ್ದೇಶಕ್ಕೆ ಈ ನೀರು ಉಪಯೋಗಿಸಬೇಕು.

ಸೆಪ್ಟೆಂಬರ್‌ ಒಂದರಿಂದ ಜಲಾಶಯದ ಎಲ್ಲ ಕಾಲುವೆಗಳಿಗೂ ನೀರು ಹರಿಸಲಾಗುತ್ತಿದೆ. ಎಡದಂಡೆ ಮುಖ್ಯ ಕಾಲುವೆಗೆ 1,026 ಕ್ಯುಸೆಕ್‌ ನೀರು ಹರಿಸಲಾಗುತ್ತಿದ್ದು, ರಾಯಚೂರು ಜಿಲ್ಲೆಗೆ ಈ ನೀರು ಹೋಗುತ್ತಿದೆ. ಬಲದಂಡೆ ಕೆಳಮಟ್ಟದ ಕಾಲುವೆಗೆ 565 ಕ್ಯುಸೆಕ್‌ ಬಿಡುತ್ತಿದ್ದು, ಕಂಪ್ಲಿ, ಬಳ್ಳಾರಿ, ಆಂಧ್ರದ ಕರ್ನೂಲ್‌ಗೆ ತಲುಪುತ್ತಿದೆ. ಬಲದಂಡೆ ಮೇಲ್ಮಟ್ಟದ ಕಾಲುವೆಯಿಂದ ಹರಿಸಲಾಗುತ್ತಿರುವ 12 ಕ್ಯುಸೆಕ್‌ ನೀರು ಕಂಪ್ಲಿ, ಬಳ್ಳಾರಿ, ಆಂಧ್ರಪ್ರದೇಶದ ಕಡಪಾ, ಅನಂತಪುರಕ್ಕೆ ಹರಿದು ಹೋಗುತ್ತಿದೆ. ತಾಲ್ಲೂಕಿನ ಕಮಲಾಪುರ ಸಮೀಪದ ಪವರ್‌ ಕಾಲುವೆಗೆ 663 ಕ್ಯುಸೆಕ್‌, ವಿಜಯನಗರ ಕಾಲದ ಕಾಲುವೆಗಳಿಗೆ 160 ಕ್ಯುಸೆಕ್‌ ನೀರು ಬಿಡಲಾಗುತ್ತಿದ್ದು, ಇದೇ ರೀತಿ ಜನವರಿ ವರೆಗೆ ನೀರು ಹರಿಸಲು ಇತ್ತೀಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

‘ಮುಂಗಾರು ಹಂಗಾಮಿನ ಬೆಳೆಗೆ ಒಟ್ಟು 70 ಟಿ.ಎಂ.ಸಿ. ಅಡಿ ನೀರು ಬೇಕು. ಜನವರಿಯಲ್ಲಿ ಬೆಳೆಯುವ ಎರಡನೇ ಬೆಳೆಗೆ ಅಂದಾಜು 50 ಟಿ.ಎಂ.ಸಿ. ಅಡಿ ಹಾಗೂ ಜೂನ್‌ವರೆಗೆ ಕುಡಿಯುವ ಉದ್ದೇಶಕ್ಕಾಗಿ 10 ಟಿ.ಎಂ.ಸಿ. ಅಡಿ ನೀರು ಇರಿಸಬೇಕು. ಹೀಗಾಗಿ ಈಗಲೇ ಎರಡನೇ ಬೆಳೆಗೆ ನೀರು ಬಿಡುವುದರ ಬಗ್ಗೆ ಏನೂ ಹೇಳಲು ಆಗುವುದಿಲ್ಲ. ಡಿಸೆಂಬರ್‌ನಲ್ಲಿ ನೀರಿನ ಸಂಗ್ರಹ ನೋಡಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಡಿ. ರಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

***
ಒಳಹರಿವು ಹೆಚ್ಚೂ– ಕಡಿಮೆಯಾಗುತ್ತಿದೆ. ಆದರೆ, ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ನೀರಿನ ಸಂಗ್ರಹ ಮಟ್ಟ ಉತ್ತಮವಾಗಿದೆ. ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಭರವಸೆ ಇದೆ.
ಡಿ.ರಂಗಾರೆಡ್ಡಿ, ಕಾರ್ಯದರ್ಶಿ, ತುಂಗಾಭದ್ರಾ ಜಲಾಶಯ ಆಡಳಿತ ಮಂಡಳಿ

***

ಕಳೆದ ಹತ್ತು ವರ್ಷಗಳಲ್ಲಿ ಜಲಾಶಯದ ನೀರಿನ ಸಂಗ್ರಹ (ಅ.17ಕ್ಕೆ) ವರ್ಷ ನೀರಿನ ಸಂಗ್ರಹ (ಟಿ.ಎಂ.ಸಿ. ಅಡಿಗಳಲ್ಲಿ)
2017 - 88.91
2016 - 35.61
2015 - 71.10
2014 - 100.86
2013 - 95.57
2012 - 86.38
2011 - 94.09
2010 - 104.34
2009 - 104.34
2008 - 99.27

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT