ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರು– ಸಿಬ್ಬಂದಿ ಉಡುಗೊರೆಗೆ ಬ್ರೇಕ್‌

ಒಂದು ದಿನದ ಕಾರ್ಯಕ್ರಮ; ವೆಚ್ಚ ₹ 10 ಕೋಟಿಗೆ ಮಿತಿಗೊಳಿಸಲು ಮುಖ್ಯಮಂತ್ರಿ ಸೂಚನೆ
Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ದಿನ ನಿಗದಿಯಾಗಿದ್ದ ವಿಧಾನಸೌಧ ವಜ್ರ ಮಹೋತ್ಸವಕ್ಕೆ ₹ 26.87 ಕೋಟಿ ವೆಚ್ಚ ಮಾಡುವ ಸ್ಪೀಕರ್‌ ಕಚೇರಿಯ ಪ್ರಸ್ತಾವಕ್ಕೆ ತಡೆ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ₹ 10ಕೋಟಿ ವೆಚ್ಚದಲ್ಲಿ ಒಂದು ದಿನದ ಸಮಾರಂಭ ನಡೆಸುವಂತೆ ತಾಕೀತು ಮಾಡಿದ್ದಾರೆ.

ವಜ್ರಮಹೋತ್ಸವದ ನೆನಪಿನ ಕಾಣಿಕೆಯಾಗಿ ಶಾಸಕರು ಮತ್ತು ಸಂಸತ್‌ ಸದಸ್ಯರಿಗೆ ಚಿನ್ನದ ಬಿಸ್ಕತ್‌ ಮತ್ತು ವಿಧಾನ ಮಂಡಲದ ಉಭಯ ಸದನಗಳ ಸಚಿವಾಲಯಗಳ ಸಿಬ್ಬಂದಿಗೆ ಬೆಳ್ಳಿ ತಟ್ಟೆ ನೀಡುವ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿ ಈ ಸ್ಪಷ್ಟನೆ ನೀಡಿದ್ದಾರೆ.

ಇದೇ 25 ಮತ್ತು 26ರಂದು ವಜ್ರಮಹೋತ್ಸವ ಸಮಾರಂಭ ನಡೆಸಲು ಸಿದ್ಧತೆ ನಡೆಯುತ್ತಿದ್ದು, ಮೊದಲ ದಿನ ಉಭಯ ಸದನಗಳ ವಿಶೇಷ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಮಾಡಲಿದ್ದಾರೆ.

ವಜ್ರಮಹೋತ್ಸವ ಖರ್ಚು ವೆಚ್ಚದ ಪ್ರಸ್ತಾವನೆ ಭಾರಿ ಚರ್ಚೆಯಾಗುತ್ತಿರುವ ಮಧ್ಯೆ, ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಮತ್ತು ವಿಧಾನ ಪರಿಷತ್ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರು ಮಂಗಳವಾರ ಬೆಳಿಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಸಮಾರಂಭದ ಆಚರಣೆಯ ರೂಪು-ರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಸಮಾರಂಭಕ್ಕೆ ಖರ್ಚಾಗುವ ಹಣದ ಅಂದಾಜು ಪಟ್ಟಿ ಬಗ್ಗೆಯೂ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ, ಕಾರ್ಯಕ್ರಮವನ್ನು ಸರಳವಾಗಿ ಆಚರಿಸುವಂತೆ ಸೂಚನೆ ನೀಡಿದ ಮುಖ್ಯಮಂತ್ರಿ, ‘₹ 26.87 ಕೋಟಿ ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಕೋಳಿವಾಡ ಮತ್ತು ಶಂಕರಮೂರ್ತಿ ಅವರು ಅಂದಾಜು ಪಟ್ಟಿ ಬಗ್ಗೆ ಮುಖ್ಯಮಂತ್ರಿಗೆ ವಿವರಣೆ ನೀಡಲು ಮುಂದಾದರೂ ಮುಖ್ಯಮಂತ್ರಿ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅಲ್ಲದೆ, ಜನಪ್ರತಿನಿಧಿಗಳು ಮತ್ತು ಸಿಬ್ಬಂದಿಗೆ ಉಡುಗೊರೆ ನೀಡುವ ಪ್ರಸ್ತಾವ ಕೈ ಬಿಡುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ವಿಧಾನಸೌಧ ವಜ್ರಮಹೋತ್ಸವ ಸಮಾರಂಭಕ್ಕೆ ಹಣ ನೀಡುವುದು ನಾನು. ಸೋಮವಾರ ರಾತ್ರಿಯೇ ಕಡತ ವಿಲೇವಾರಿ ಮಾಡಿದ್ದೇನೆ. ಚಿನ್ನದ ಉಡುಗೊರೆ ನೀಡುವ ವಿಚಾರ ಸುಳ್ಳು. ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎಂದರು.

‘ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ದುಂದುವೆಚ್ಚ ಮಾಡಬಾರದು. ಕಾರ್ಯಕ್ರಮವನ್ನು ಒಂದು ದಿನಕ್ಕೆ ಸೀಮಿತಗೊಳಿಸುವಂತೆ ಕೋಳಿವಾಡ ಅವರಿಗೆ ತಿಳಿಸಿದ್ದೇನೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಭೆಯ ಬಳಿಕ ಮಾತನಾಡಿದ ಕೋಳಿವಾಡ, ‘ವಿಧಾನಸೌಧದ ವಜ್ರ ಮಹೋತ್ಸವ ಸಮಾರಂಭ ಅದ್ಧೂರಿಯಾಗಿ ನಡೆಯುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಿ’ ಎಂದರು.

‘₹ 27 ಕೋಟಿ ಖರ್ಚು ಮಾಡುವ ಬಗ್ಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆಯೇ ಇಲ್ಲವೇ ಎನ್ನುವ ಬಗ್ಗೆ ನಾನು ಹೇಳುವುದೇನೂ ಇಲ್ಲ’ ಎಂದೂ ಚುಟುಕಾಗಿ ಪ್ರತಿಕ್ರಿಯಿಸಿದರು.

ಭಾರಿ ವೆಚ್ಚದಲ್ಲಿ ವಜ್ರ ಮಹೋತ್ಸವ ಆಚರಿಸಲು ಸಿದ್ಧತೆ ನಡೆಯುತ್ತಿರುವ ಬಗ್ಗೆ ಸಾಮಾಜಿಕ ಜಾಲ ತಾಣ ಮತ್ತು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾದ ಬಳಿಕ, ‘ಚಿನ್ನದ ಬಿಸ್ಕತ್‌, ಬೆಳ್ಳಿ ತಟ್ಟಿ ನೀಡುವಂಥ ಯಾವುದೇ ಪ್ರಸ್ತಾವ ನಮ್ಮ ಮುಂದೆ ಇಲ್ಲ’ ಎಂದು ಕೋಳಿವಾಡ ಸ್ಪಷ್ಟಪಡಿಸಿದ್ದರು.

ಉಡುಗೊರೆ ನೀಡುವ ಪ್ರಸ್ತಾವಕ್ಕೆ ಉಭಯ ಸದನಗಳ ವಿರೋಧ ಪಕ್ಷ ನಾಯಕರಾದ ಜಗದೀಶ ಶೆಟ್ಟರ್ ಮತ್ತು ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವರು ತಕರಾರು ಎತ್ತಿದ್ದರು. ಆಡಳಿತ ಪಕ್ಷದ ಕೆಲವು ಶಾಸಕರು, ಸಚಿವರು ಕೂಡ ದುಂದುವೆಚ್ಚದಲ್ಲಿ ವಜ್ರಮಹೋತ್ಸವ ಆಚರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಜೆಡಿಎಸ್‌ ಸದಸ್ಯರು ಉಡುಗೊರೆ ಸ್ವೀಕರಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದರು.

ದುಂದು ವೆಚ್ಚ ಬೇಡ: ಪರಮೇಶ್ವರ
ವಿಧಾನಸೌಧ ವಜ್ರಮಹೋತ್ಸವದ ಸವಿನೆನಪಿಗಾಗಿ ಶಾಸಕರಿಗೆ ಚಿನ್ನದ ಬಿಸ್ಕತ್‌ ನೀಡುವ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ‘ರೈತರು ಬರದಿಂದ ತತ್ತರಿಸಿದ್ದಾರೆ. ಈಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದು, ಈ ವೇಳೆಯಲ್ಲಿ ದುಂದು ವೆಚ್ಚ ಮಾಡುವುದು ಬೇಡ’ ಎಂದು ತಿಳಿಸಿದರು.

***
ಜಿಎಸ್‌ಟಿ ವಿಧಿಸುವ ವಸ್ತು ಕೈಬಿಡಲು ತೀರ್ಮಾನ
‘ರಾಜ್ಯ ಏಕೀಕರಣದ ಸುವರ್ಣ ವರ್ಷಾಚರಣೆ (2007ರಲ್ಲಿ) ನೆನಪಿಗಾಗಿ ಸ್ಮರಣಿಕೆಗಳನ್ನು ನೀಡಲು ₹ 2.40 ಕೋಟಿ ವೆಚ್ಚ ಮಾಡಲಾಗಿತ್ತು. ಹೀಗಾಗಿ, ವಜ್ರ ಮಹೋತ್ಸವದ ಸ್ಮರಣಿಕೆ ನೀಡಲು ₹ 3 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಚಿನ್ನ ಮತ್ತು ಬೆಳ್ಳಿ ಉಡುಗೊರೆ ಕೊಡುವ ಬಗ್ಗೆ ಹೇಗೆ ಸುದ್ದಿಯಾಯಿತೋ ಗೊತ್ತಿಲ್ಲ’ ಎಂದು ಶಂಕರಮೂರ್ತಿ ಹೇಳಿದರು.

‘ಈ ವಿಷಯದಲ್ಲಿ ಯಾಕೆ ವಿವಾದವಾಯಿತು ಎಂದು ಮುಖ್ಯಮಂತ್ರಿ ಕೇಳಿದರು. ಆಗ ನಾನು, ಉಡುಗೊರೆ ನೀಡುವ ಪ್ರಸ್ತಾವನ್ನೇ ಕೈ ಬಿಡುವಂತೆ ತಿಳಿಸಿದೆ. ಇತರ ಯಾವುದೆಲ್ಲ ವಿಷಯಗಳಲ್ಲಿ ವೆಚ್ಚ ಕಡಿತಗೊಳಿಸಬಹುದು ಎಂದೂ ಮುಖ್ಯಮಂತ್ರಿ ಕೇಳಿದರು. ಈ ಕಾರಣದಿಂದ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗುವ ವಸ್ತುಗಳನ್ನೂ ಅಂದಾಜು ಪಟ್ಟಿಯಿಂದ ಕೈಬಿಟ್ಟು ವೆಚ್ಚ ಕಡಿಮೆ ಮಾಡಲು ತೀರ್ಮಾನಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT