ಸೋಮವಾರ, ಸೆಪ್ಟೆಂಬರ್ 16, 2019
29 °C

ಲಿಂಗಭೋಗೋಪಭೋಗಿ

Published:
Updated:

ಭಾರತೀಯ ದರ್ಶನಗಳಲ್ಲಿಯೇ ಅತ್ಯಂತ ವಿಶಿಷ್ಟವಾದ ಲಿಂಗಾಯತ ದರ್ಶನದಲ್ಲಿ ಅಧ್ಯಾತ್ಮ ಸಾಧಕನ ಸಾಧನೆಯ ಹಂತಗಳನ್ನು ಷಟ್‌ಸ್ಥಲಗಳಲ್ಲಿ ಗುರುತಿಸಲಾಗಿದೆ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯವೆಂಬ ಈ ಸ್ಥಲಗಳಲ್ಲಿ ಸಾಧಕನು ತನ್ನ ಸಾಧನೆಯ ಮೂಲಕ ಪ್ರಾಣಲಿಂಗಿ ಸ್ಥಲವನ್ನು ತಲುಪಿದಾಗ ’ಲಿಂಗವೇ ಪ್ರಾಣ, ಪ್ರಾಣವೇ ಲಿಂಗ’ ಎಂಬ ಸ್ಥಿತಿಯನ್ನು ಹೊಂದಿರುತ್ತಾನೆ. ಅಂದರೆ ತಾನು ಅಂಗವೆಂಬ ಪ್ರತ್ಯೇಕತೆಯ ಭಾವವನ್ನು ಕಳೆದುಕೊಂಡು ಲಿಂಗಸ್ವರೂಪಿಯಾಗಿರುತ್ತಾನೆ. ಆಗ ತಾನು ಬೇರೆ, ಪರಶಿವ ಬೇರೆ ಎಂಬ ಭಾವವಿರುವುದಿಲ್ಲ. ಅವಿರಳಜ್ಞಾನಿ ಚೆನ್ನಬಸವಣ್ಣ ಹೇಳಿದಂತೆ- ’ಆನು ಕರ್ಪುರ, ನೀನು ಜ್ಯೋತಿ, ಆನು ನಿಮ್ಮೊಳಗಡಗಿದೆನು’ ಎಂಬಂತಹ ಸ್ಥಿತಿಯನ್ನು ಸಾಧಕನು ತಲುಪುವನು. ಅವನ ಕಾಯವೇ ಲಿಂಗವಾಗಿರುವುದರಿಂದ ಈಗ ಅವನು ಲಿಂಗದೇಹಿ ಮಾತ್ರ.

ಲಿಂಗದೇಹಿಯಾಗಿರುವ ಸಾಧಕನು ತನ್ನ ಇಂದ್ರಿಯಗಳು ಪರಶಿವನ ಅವಯವಗಳೆಂದು ತಿಳಿಯುವನು. ತನ್ನ ಸರ್ವಾಂಗಗಳಲ್ಲಿಯೂ ಲಿಂಗಗಳನ್ನು ಸ್ಥಾಪಿಸಿಕೊಂಡಿರುವ ಅವನು ಲಿಂಗಪ್ರಾಣಿ. ಅವನು ತನ್ನ ಪಂಚೇಂದ್ರಿಯಗಳಾದ ಮೂಗು, ನಾಲಿಗೆ, ಕಣ್ಣು, ಚರ್ಮ ಮತ್ತು ಕಿವಿಗಳಲ್ಲಿ ಕ್ರಮವಾಗಿ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ ಹಾಗು ಪ್ರಸಾದಲಿಂಗ ಸಂಬಂಧಿಸಿಕೊಂಡಿರುವನಲ್ಲದೆ ಹೃದಯಲ್ಲಿ (ಮನಸ್ಸು) ಮಹಾಲಿಂಗವನ್ನು ಪ್ರತಿಷ್ಠಾಪಿಸಿಕೊಂಡಿರುವನು. ಇದರಿಂದ ಗಂಧ, ರೂಪ, ರಸ ಇತ್ಯಾದಿ ವಿಷಯಗಳು ಅವನ ಇಂದ್ರಿಯಗಳನ್ನು ತಲುಪುವ ಮೊದಲೇ ಲಿಂಗಕ್ಕೆ ಸಮರ್ಪಿತವಾಗಿ ಲಿಂಗಭೋಗವಾಗುತ್ತವೆ. ’ಎನ್ನ ಮನದ ಬಾಗಿಲಲ್ಲಿರ್ದು ಪಂಚೇಂದ್ರಿಯಗಳನರಿದು ಸುಖಿಸುವ ಅರಿವಿನ ಮೂರ್ತಿ ನೀನಯ್ಯ’ ಎಂಬ ಶರಣವಾಣಿಯು ಇಂದ್ರಿಯಗಳ ಮೂಲಕ ವಿಷಯಗಳನ್ನು ಸವಿಯುವ ಮನಸ್ಸನ್ನು ಪರಶಿವನು ಆಕ್ರಮಿಸಿಕೊಂಡಾಗ ನಮ್ಮ ದೇಹೇಂದ್ರಿಯಾದಿಗಳೆಲ್ಲ ಲಿಂಗದ ಮುಖಗಳಾಗುತ್ತವೆ ಎಂಬುದನ್ನು ತಿಳಿಸಿಕೊಡುತ್ತದೆ. ಹೀಗೆ ಲಿಂಗಮುಖವಾಗಿ ಭೋಗಿಸುವವನು ಲಿಂಗಭೋಗೋಪಭೋಗಿ ಎನಿಸುವನು.

’ಲಿಂಗಶರಣನ ಪಂಚೇಂದ್ರಿಯಗಳು ಲಿಂಗಮುಖವಾಗಿ ನಿಂದು, ನನಸಹಿತ ಪಂಚವಿಷಯಂಗಳಖಿಲಸುಖಂಗಳ ಲಿಂಗಾರ್ಪಿತದಿಂದ ಚರಿಸುತ್ತ, ಬೇರೆ ಮತ್ತೊಂದು ದೆಸೆ ಇಲ್ಲದೆ ನಿಂದವು ಸೌರಾಷ್ಟ್ರ ಸೋಮೇಶ್ವರಲಿಂಗವಾಸಿಯಾದ ಶರಣಂಗೆ’ ಎಂಬ ಶರಣ ಆದಯ್ಯನ ವಚನವು ಲಿಂಗಭೋಗೋಪಭೋಗಿಯ ಸ್ವರೂಪವನ್ನು ತಿಳಿಸಿಕೊಡುತ್ತದೆ. ಅಂದರೆ ಪಂಚೇಂದ್ರಿಯಗಳು ಮುಟ್ಟದ ಮುನ್ನವೇ ಲಿಂಗಾರ್ಪಿತ ಮಾಡಬೇಕು. ಹಾಗೆ ಮಾಡದಿದ್ದರೆ ಸಾಧಕನು ಲಿಂಗಕಾಯನೆನಿಸದೆ ಬರುಕಾಯನೆನಿಸುವನು.

ಲಿಂಗಾರ್ಪಣೆಯೇ ಪ್ರಮುಖವಾಗಿರುವ ಈ ಅವಸ್ಥೆಯನ್ನು ಕುರಿತು ಬಸವಣ್ಣನವರು ’ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ, ಉಂಬ ಉಡುವ ಕೂಡಲಸಂಗಮದೇವ ಜಂಗಮ ಮುಖದಲ್ಲಿ’ ಎಂದು ಹೇಳುವ ಮೂಲಕ ಲಿಂಗದ ಮುಖವಾಗಿರುವ ಜಂಗಮದ ಮೂಲಕ ಸಾಧಕನು ಅರ್ಪಿಸಿದುದೆಲ್ಲವನ್ನೂ ಭಗವಂತನು ಸ್ವೀಕರಿಸುತ್ತಾನೆ. ಕಣ್ಣಿಗೆ ಕಾಣದ ಲಿಂಗದ ಮುಖ ಮತ್ತು ನಡೆದಾಡುವ ಲಿಂಗವಾಗಿರುವ ಜಂಗಮಕ್ಕೆ ಸತ್ಕಾಯಕದಿಂದ ಸಂಪಾದಿಸಿದುದನ್ನು ಅರ್ಪಿಸಿ ಮಿಕ್ಕುದು ಕೊಂಬುದು ಕೂಡ ಲಿಂಗಭೋಗೋಪಭೋಗವಾಗುವುದು. ಲಿಂಗಭೋಗವು ಪ್ರಸಾದ. ಜಂಗಮ ಪ್ರಸಾದವೇ ಭೋಗೋಪಭೋಗವು. ಹೀಗೆ ಲಿಂಗಮುಖ (ಜಂಗಮ)ವಾಗಿ ಭೋಗಿಸುವ ಸಾಧಕನೇ (ಶರಣ) ಲಿಂಗಭೋಗೋಪಭೋಗಿ ಎನಿಸುವನು.

Post Comments (+)