ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನ್‌ ವಿರುದ್ಧ ಷಾ ವಾಗ್ದಾಳಿ

ಕೇರಳ: ಬಿಜೆಪಿಯ ‘ಜನ ರಕ್ಷಾ’ ಯಾತ್ರೆಯ ಸಮಾರೋಪ
Last Updated 18 ಅಕ್ಟೋಬರ್ 2017, 4:38 IST
ಅಕ್ಷರ ಗಾತ್ರ

ತಿರುವನಂತಪುರ : ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರ ಸಂಬಂಧ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರದ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಹರಿಹಾಯ್ದಿದ್ದಾರೆ.

‘ರಾಜ್ಯದಲ್ಲಿ ನಡೆದಿರುವ 13 ಮುಗ್ಧ ಬಿಜೆಪಿ/ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆ ಪ್ರಕರಣದ ನೈತಿಕ ಜವಾಬ್ದಾರಿ ಹೊರಲು ಸಿದ್ಧರಿದ್ದೀರಾ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಷಾ ಪ್ರಶ್ನಿಸಿದ್ದಾರೆ.

ಕೇರಳದಲ್ಲಿ ಪಕ್ಷ ಸಂಘಟಿಸಿದ್ದ 15 ದಿನಗಳ ‘ಜನ ರಕ್ಷಾ’ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಿನ ಸರ್ಕಾರ ಕಳೆದ ವರ್ಷ ಅಸ್ತಿತ್ವಕ್ಕೆ ಬಂದ ನಂತರ ಪಕ್ಷದ 13 ಕಾರ್ಯಕರ್ತರ ಹತ್ಯೆ ನಡೆದಿದೆ ಎಂದು ಆರೋಪಿಸಿದ್ದಾರೆ.

‘ಸಿಎಂ ಸಾಹೇಬರೇ, ನಮ್ಮೊಂದಿಗೆ ಹೋರಾಟ ಮಾಡಲು ಬಯಸಿದರೆ, ಅಭಿವೃದ್ಧಿ ವಿಚಾರ ಮತ್ತು ಸೈದ್ಧಾಂತಿಕ ವಿಚಾರವಾಗಿ ಹೋರಾಟ ಮಾಡಿ’ ಎಂದು ಅವರು ಸವಾಲು ಹಾಕಿದ್ದಾರೆ.

‘ಸ್ವಾತಂತ್ರ್ಯ ಬಂದ 70 ವರ್ಷಗಳ ಬಳಿಕವೂ ಹಿಂಸಾಚಾರದಿಂದ  ಬಿಜೆಪಿ/ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ನಿರ್ನಾಮ ಮಾಡಬಹುದು ಎಂದು ಮಾವೊವಾದಿಗಳ ಪಕ್ಷ ಭಾವಿಸಿದ್ದರೆ, ಅವರು ತಪ್ಪು ತಿಳಿದುಕೊಂಡಿದ್ದಾರೆ. ಅದು ಯಾವತ್ತಿಗೂ ಸಾಧ್ಯವಿಲ್ಲ’ ಎಂದು  ಹೇಳಿದ್ದಾರೆ.

ರಾಜ್ಯದಲ್ಲಿರುವ ಆರ್‌ಎಸ್‌ಎಸ್‌/ಬಿಜೆಪಿ ಕಾರ್ಯಕರ್ತರನ್ನು ನಾಶ ಮಾಡಲು ರಾಜ್ಯದ ಜನ ತಮಗೆ ಜನಾದೇಶ ನೀಡಿದ್ದಾರೆಯೇ ಎಂದೂ ಅವರು ವಿಜಯನ್‌ ಅವರನ್ನು ಪ್ರಶ್ನಿಸಿದ್ದಾರೆ.

ಇದಕ್ಕೂ ಮೊದಲು, ಅವರು ಪಾಳಯಂನಲ್ಲಿಂದ ಸಮಾರೋಪ ಸಮಾರಂಭ ನಡೆದ ಪುತ್ತರಿಕಂಡಂ ಮೈದಾನದವರೆಗೆ 2 ಕಿ.ಮೀ ದೂರದವರೆಗೆ ಪಕ್ಷದ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದರು.

ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವುದಕ್ಕೂ ಮುನ್ನ ರಾಜಕೀಯ ಹಿಂಸಾಚಾರದಲ್ಲಿ ಮೃತಪಟ್ಟ ಪಕ್ಷದ ಕಾರ್ಯಕರ್ತರಿಗೆ ಅಮಿತ್‌ ಷಾ ಶ್ರದ್ಧಾಂಜಲಿ ಅರ್ಪಿಸಿದರು.

***
ರಾಜಕೀಯ ಹತ್ಯೆ: ಸರ್ಕಾರದ ನಿಲುವು ಕೇಳಿದ ಹೈಕೋರ್ಟ್‌
ಕೊಚ್ಚಿ:
ಎಲ್‌ಡಿಎಫ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ನಡೆದಿರುವ ಆರ್‌ಎಸ್‌ಎಸ್‌/ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸುವ ಬಗ್ಗೆ ನಿಲುವನ್ನು ಸ್ಪಷ್ಟಪಡಿಸುವಂತೆ ಕೇರಳ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ತಲಶ್ಶೇರಿಯ ಗೋಪಾಲನ್‌ ಆದಿಯೋಗಿ ವಕೀಲ್‌ ಸ್ಮಾರಕ ಟ್ರಸ್ಟ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನವನೀತಿ ಪ್ರಸಾದ್‌ ಸಿಂಗ್‌ ಮತ್ತು ನ್ಯಾಯಮೂರ್ತಿ ರಾಜಾ ವಿಜಯ ರಾಘವನ್‌ ಅವರಿದ್ದ ನ್ಯಾಯಪೀಠ, ಅಕ್ಟೋಬರ್‌ 25ರ ಒಳಗಾಗಿ ಈ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ಎಲ್‌ಡಿಎಫ್‌ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ನಂತರ ರಾಜ್ಯದಲ್ಲಿ ನಡೆದಿರುವ ಏಳು ‘ರಾಜಕೀಯ ಹತ್ಯೆ’ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ದೇಶನ ನೀಡುವಂತೆ ಕೋರಿ ಟ್ರಸ್ಟ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT