ಗುರುವಾರ , ಸೆಪ್ಟೆಂಬರ್ 19, 2019
21 °C
ಇನಿಂಗ್ಸ್ ಸೋಲಿಗೆ ಶರಣಾದ ಅಸ್ಸಾಂ; ಕರ್ನಾಟಕ ತಂಡದ ಶುಭಾರಂಭ

ರಣಜಿ ಟ್ರೋಫಿ ಕ್ರಿಕೆಟ್‌: ಗ್ಲೇಡ್ಸ್‌ನಲ್ಲಿ ಜಯದ ಸಿಂಚನ

Published:
Updated:
ರಣಜಿ ಟ್ರೋಫಿ ಕ್ರಿಕೆಟ್‌: ಗ್ಲೇಡ್ಸ್‌ನಲ್ಲಿ ಜಯದ ಸಿಂಚನ

ಮೈಸೂರು: ಅಂತಿಮ ದಿನದಾಟದಲ್ಲಿ ಪವಾಡವೇನೂ ನಡೆಯಲಿಲ್ಲ. ಅಸ್ಸಾಂ ತಂಡವನ್ನು ಇನಿಂಗ್ಸ್‌ ಹಾಗೂ 121 ರನ್‌ಗಳಿಂದ ಬಗ್ಗುಬಡಿದ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಹೊಸ ಋತುವನ್ನು ಭರ್ಜರಿಯಾಗಿ ಆರಂಭಿಸಿತು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೋಮವಾರದ ಆಟದ ಅಂತ್ಯಕ್ಕೆ 6 ವಿಕೆಟ್‌ಗೆ 169 ರನ್‌ ಗಳಿಸಿದ್ದ ಅಸ್ಸಾಂ ಇನಿಂಗ್ಸ್‌ ಸೋಲು ತಪ್ಪಿಸಲು 155 ರನ್‌ ಗಳಿಸಬೇಕಿತ್ತು. ನಾಯಕ ಆರ್‌.ವಿನಯ್‌ ಕುಮಾರ್‌ (31ಕ್ಕೆ4) ಮತ್ತು ಅಭಿಮನ್ಯು ಮಿಥುನ್‌ (47ಕ್ಕೆ 3) ಅವರ ಬಿಗುವಾದ ಬೌಲಿಂಗ್‌ ಮುಂದೆ ನಲುಗಿದ ಪ್ರವಾಸಿ ತಂಡ 73.1 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟಾಯಿತು.

ಸತತ ಎರಡು ವರ್ಷ ಕೈತಪ್ಪಿಹೋಗಿದ್ದ ರಣಜಿ ಟ್ರೋಫಿಯನ್ನು ಮರಳಿ ಪಡೆಯಲು ಛಲ ತೊಟ್ಟಿರುವ ಕರ್ನಾಟಕಕ್ಕೆ ಮೊದಲ ಪಂದ್ಯದಲ್ಲಿ ದೊರೆತ ಗೆಲುವು ಹೆಚ್ಚಿನ ಆತ್ಮವಿಶ್ವಾಸ ನೀಡಿದೆ. ‘ತಂಡದ ಒಟ್ಟಾರೆ ಪ್ರದರ್ಶನ ತೃಪ್ತಿ ನೀಡಿದೆ. ಟೂರ್ನಿಯನ್ನು ಗಂಭೀರ ಜಯದೊಂದಿಗೆ ಆರಂಭಿಸಲು ಸಾಧ್ಯವಾಗಿದ್ದು ಸಂತಸದ ವಿಷಯ’ ಎಂದು ನಾಯಕ ವಿನಯ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ವಿನಯ್‌ ಮಾರಕ ದಾಳಿ: ಅಂತಿಮ ದಿನವಾದ ಮಂಗಳವಾರ ಮೊದಲ ಒಂದು ಗಂಟೆಯ ಅವಧಿಯಲ್ಲೇ ಕರ್ನಾಟಕ ಗೆಲುವಿನ ‘ಪಟಾಕಿ’ ಸಿಡಿಸಿತು. 10.1 ಓವರ್‌ಗಳಲ್ಲಿ ಎದುರಾಳಿ ತಂಡದ ಕೊನೆಯ ನಾಲ್ಕು ವಿಕೆಟ್‌ಗಳು ಬಿದ್ದವು. ಇದರಲ್ಲಿ ಮೂರು ವಿಕೆಟ್‌ ವಿನಯ್‌ ಪಾಲಾದರೆ, ಮತ್ತೊಂದನ್ನು ಮಿಥುನ್‌ ಪಡೆದರು.

ಪಂದ್ಯಕ್ಕೆ ಬೇಗನೇ ತೆರೆ ಎಳೆಯಬೇಕೆಂಬ ಉದ್ದೇಶದಿಂದ ಕರ್ನಾಟಕ ತಂಡ ದಿನದ ಎರಡನೇ ಓವರ್‌ನಲ್ಲಿ ಹೊಸ ಚೆಂಡು ಕೈಗೆತ್ತಿಕೊಂಡಿತು. ಐದನೇ ಓವರ್‌ನಲ್ಲಿ ಮೊದಲ ಯಶಸ್ಸು ಲಭಿಸಿತು. ಸೋಮವಾರ ಔಟಾಗದೆ ಉಳಿದುಕೊಂಡಿದ್ದ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ವಿನಯ್‌ ಸತತ ಎರಡು ಓವರ್‌ಗಳಲ್ಲಿ ಪೆವಿಲಿಯನ್‌ಗಟ್ಟಿದರು.

ಅಸ್ಸಾಂ ತಂಡದ ನಾಯಕ ಗೋಕುಲ್‌ ಶರ್ಮ (66, 124 ಎಸೆತ, 6 ಬೌಂ.) ಅವರನ್ನು ಸೊಗಸಾದ ಎಸೆತದ ಮೂಲಕ ಬೌಲ್ಡ್‌ ಮಾಡಿದರು. ಗೋಕುಲ್‌ ಹಿಂದಿನ ದಿನದ ಮೊತ್ತಕ್ಕೆ ಕೇವಲ ನಾಲ್ಕು ರನ್‌ ಸೇರಿಸಿದರು. ಅಬು ನೆಚೀಮ್‌ ಅಹ್ಮದ್‌ (17) ಅವರು ವಿನಯ್‌ ಎಸೆತದಲ್ಲಿ ವಿಕೆಟ್‌ ಕೀಪರ್‌ ಸಿ.ಎಂ.ಗೌತಮ್‌ಗೆ ಕ್ಯಾಚ್‌ ನೀಡಿದರು.

ಎರಡನೇ ದಿನದಾಟದ ವೇಳೆ ಗಾಯಗೊಂಡು ಅಂಗಳದಿಂದ ಹೊರನಡೆದಿದ್ದ ಅಸ್ಸಾಂ ತಂಡದ ವಿಕೆಟ್‌ ಕೀಪರ್‌ ವಾಸಿಖುರ್‌ ರೆಹಮಾನ್‌ ಗಾಯವನ್ನು ಲೆಕ್ಕಿಸದೆ ಕ್ರೀಸ್‌ಗೆ ಬಂದರೂ ಹೆಚ್ಚುಹೊತ್ತು ನಿಲ್ಲಲಿಲ್ಲ. ಮಿಥುನ್‌ ಅವರ ಎಲ್‌ಬಿ ಬಲೆಗೆ ಬಿದ್ದರು.

ಅಲ್ಪ ಸಮಯದ ಬಳಿಕ ರಾಹುಲ್‌ ಸಿಂಗ್‌ ಅವರನ್ನು ವಿಕೆಟ್‌ ಹಿಂದುಗಡೆ ಕ್ಯಾಚ್‌ ಕೊಡಿಸುವಂತೆ ಮಾಡಿದ ವಿನಯ್‌ ಆತಿಥೇಯ ತಂಡದ ಗೆಲುವಿನ ವ್ಯವಹಾರ ಪೂರ್ಣಗೊಳಿಸಿದರು. ಮೊದಲ ಪಂದ್ಯದಲ್ಲಿ ದೆಹಲಿ ಜತೆ ಡ್ರಾ ಮಾಡಿಕೊಂಡಿದ್ದ ಅಸ್ಸಾಂ ತಂಡ ಋತುವಿನ ಮೊದಲ ಕಹಿ ಅನುಭವಿಸಿತು.

ಈ ಪಂದ್ಯದಲ್ಲಿ ಅಸ್ಸಾಂ ತಂಡದ 20 ವಿಕೆಟ್‌ಗಳನ್ನು ಕರ್ನಾಟದ ವೇಗಿಗಳು ಮತ್ತು ಸ್ಪಿನ್ನರ್‌ಗಳು ಸಮನಾಗಿ ಹಂಚಿಕೊಂಡರು. ವಿನಯ್‌, ಮಿಥುನ್‌, ಮತ್ತು ಸ್ಟುವರ್ಟ್‌ ಬಿನ್ನಿ ಒಟ್ಟು 10 ವಿಕೆಟ್‌ ಪಡೆದರೆ, ಇನ್ನುಳಿದ ಹತ್ತು ವಿಕೆಟ್‌ಗಳನ್ನು ಕೆ.ಗೌತಮ್‌ ಮತ್ತು ಶ್ರೇಯಸ್‌ ಗೋಪಾಲ್‌ ಹಂಚಿಕೊಂಡರು.

***

ಕರ್ನಾಟಕ ತಂಡಕ್ಕೆ ರಣಜಿ ಕ್ರಿಕೆಟ್‌ನಲ್ಲಿ ಅಸ್ಸಾಂ ವಿರುದ್ಧ ದೊರೆತ ಐದನೇ ಗೆಲುವು ಇದು. ಉಭಯ ತಂಡಗಳು ಇದುವರೆಗೆ ಒಟ್ಟು ಏಳು ಪಂದ್ಯಗಳನ್ನು ಆಡಿದ್ದು, ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.

ರಾಜ್ಯ ತಂಡ ಮೈಸೂರಿನಲ್ಲಿ ಅಸ್ಸಾಂ ವಿರುದ್ಧ ಇದೇ ಮೊದಲ ಬಾರಿ ಆಡಿದ್ದು, ಜಯ ಸಾಧಿಸಿದೆ. ರಣಜಿ ಇತಿಹಾಸದಲ್ಲಿ ಕರ್ನಾಟಕ 69 ಬಾರಿ ಇನಿಂಗ್ಸ್‌ ಗೆಲುವಿನ ಸಿಹಿ ಅನುಭವಿಸಿದೆ. ಅಸ್ಸಾಂ ವಿರುದ್ಧ ಎರಡನೇ ಬಾರಿ ಇನಿಂಗ್ಸ್‌ ಜಯ ದೊರೆತಿದೆ. 1993/94ರ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಕರ್ನಾಟಕ ಇನಿಂಗ್ಸ್‌ ಹಾಗೂ 186 ರನ್‌ಗಳ ಜಯ ಸಾಧಿಸಿತ್ತು. ಮಾಹಿತಿ: ಚನ್ನಗಿರಿ ಕೇಶವಮೂರ್ತಿ

Post Comments (+)