ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧನದಾಹಿ ವೈದ್ಯರು ಕ್ಷೌರಿಕರು, ಜೇಬುಗಳ್ಳರಿಗಿಂತ ಕಡೆ’

ಆಯುರ್ವೇದ ದಿನಾಚರಣೆಯಲ್ಲಿ ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿಕೆ
Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅನಗತ್ಯ ಸಿಸೇರಿಯನ್‌ ಮಾಡುವ ವೈದ್ಯರು, ಕ್ಷೌರಿಕರು ಮತ್ತು ಜೇಬುಗಳ್ಳರಿಗಿಂತ ಕಡೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಟೀಕಿಸಿದರು.

ಆಯುಷ್‌ ಇಲಾಖೆ ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಜ ಹೆರಿಗೆ ಮಾಡಿಸಲು ಸಾಧ್ಯವಿಲ್ಲವೆಂದಾಗ ಶಸ್ತ್ರಚಿಕಿತ್ಸೆ ನಡೆಸಿ, ತಾಯಿ–ಮಗು ಜೀವ ಉಳಿಸುವುದು ಮೆಚ್ಚುವಂತಹುದು. ಸಹಜ ಹೆರಿಗೆ ಮಾಡಿಸಿದರೆ ಹಣ ಸಿಗುವುದಿಲ್ಲವೆಂಬ ಒಂದೇ ಕಾರಣಕ್ಕೆ ಸಿಸೇರಿಯನ್‌ ಮಾಡಿದರೆ ಅದನ್ನು ವೈದ್ಯ ವೃತ್ತಿ ಎನ್ನುವುದೋ ಅಥವಾ ಬೇರೆ ಏನೆಂದು ಕರೆಯುವುದು. ನಾವೆಲ್ಲ ಸಿಸೇರಿಯನ್‌ನಿಂದ ಹುಟ್ಟಿದವರಲ್ಲ. ನನ್ನ ತಾಯಿಗೆ ಎಂಟು ಹೆರಿಗೆಗಳು ಸಹಜವಾಗಿಯೇ ಆಗಿವೆ. ಆದರೆ, ಈಗ ವೈದ್ಯರು ಮಾತೆತ್ತಿದರೆ ಕತ್ತರಿ ಹಾಕುತ್ತಿದ್ದಾರೆ’ ಎಂದು ಹರಿಹಾಯ್ದರು.

‘ಅನಗತ್ಯ ಕತ್ತರಿ ಆಡಿಸುವವರು ಕ್ಷೌರಿಕರು ಮತ್ತು ಜೇಬುಗಳ್ಳರು ಮಾತ್ರ. ನನ್ನ ಹೇಳಿಕೆ ಬೇಕಾದರೆ ವಿವಾದ ಹುಟ್ಟುಹಾಕಲಿ, ಸಂತೋಷಪಡುತ್ತೇನೆ. ನಾನು ಮಾತನಾಡುವುದೇ ಹೀಗೆ. ನನಗೆ ವಿವಾದಗಳಿಲ್ಲದಿದ್ದರೆ ರಾತ್ರಿ ನಿದ್ರೆಯೂ ಬರುವುದಿಲ್ಲ’ ಎಂದು ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು.

ಸಚಿವರು ವೈದ್ಯಕೀಯ ಕಾಲೇಜು ಕ್ಯಾಂಪಸ್‌ನ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ವಚ್ಛತಾ ಕೆಲಸ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ತಿಂಗಳಿಗೆ ಕೇವಲ ₹5 ಸಾವಿರ ವೇತನ ನೀಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ‘ಸರ್ಕಾರಿ ಸಂಸ್ಥೆಯಲ್ಲಿ ಇಂತಹ ಅಮಾನವೀಯತೆ ಇರಬಾರದು. ಸಿಬ್ಬಂದಿ ಕೈಗೆ ಕನಿಷ್ಠ ₹9,000ದಿಂದ ₹10,000 ತಿಂಗಳಿಗೆ ವೇತನ ಸಿಗಬೇಕು’ ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT