ನೋಟಿಸ್‌ ನೀಡಿದ್ದರೂ ತೆರವು ಮಾಡಿರದ ಮಾಲೀಕರು!

ಶುಕ್ರವಾರ, ಮೇ 24, 2019
23 °C
ಮಾಲೀಕರ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಿಸಲು ಬಿಬಿಎಂಪಿ ಅಧಿಕಾರಿಗಳ ಚಿಂತನೆ

ನೋಟಿಸ್‌ ನೀಡಿದ್ದರೂ ತೆರವು ಮಾಡಿರದ ಮಾಲೀಕರು!

Published:
Updated:
ನೋಟಿಸ್‌ ನೀಡಿದ್ದರೂ ತೆರವು ಮಾಡಿರದ ಮಾಲೀಕರು!

ಬೆಂಗಳೂರು: ವಿವೇಕನಗರ ಬಳಿಯ ಈಜಿಪುರದಲ್ಲಿ ಏಳು ಮಂದಿಯನ್ನು ಬಲಿ ಪಡೆದ ಶಿಥಿಲಾವಸ್ಥೆಯ ಎರಡು ಅಂತಸ್ತಿನ ಕಟ್ಟಡವನ್ನು ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳು, ಕಟ್ಟಡದ ಮಾಲೀಕರಿಗೆ ಕಳೆದ ತಿಂಗಳಷ್ಟೇ ನೋಟಿಸ್‌ ನೀಡಿದ್ದರು ಎಂಬುದು ಗೊತ್ತಾಗಿದೆ.

ಪ್ರಕರಣ ಸಂಬಂಧ ಸದ್ಯ ಕಟ್ಟಡದ ಮಾಲೀಕ ಗುಣೇಶ್‌ ಅವರನ್ನು ವಿವೇಕನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಿಬಿಎಂಪಿ ದಾಖಲೆಗಳ ಪ್ರಕಾರ ಅವರ ತಂದೆ ದಿವಂಗತ ಸೋಮೇಶ್‌ ಅವರು ಕಟ್ಟಡದ ಮಾಲೀಕರಾಗಿದ್ದಾರೆ. ಹೀಗಾಗಿ ಅಧಿಕಾರಿಗಳು, ಅವರ ಹೆಸರಿಗೆ ಸೆಪ್ಟೆಂಬರ್‌ 25ರಂದು ನೋಟಿಸ್‌ ನೀಡಿದ್ದರು. ಆದರೆ, ಕೈ ಬರಹದಲ್ಲಿ ಆದೇಶದ ದಿನಾಂಕವನ್ನು ಬರೆಯಲಾಗಿದೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಸೋಮೇಶ್‌ ತೀರಿಕೊಂಡ ಬಳಿಕ ಮಕ್ಕಳೆಲ್ಲ ಆಸ್ತಿ ಹಂಚಿಕೊಂಡಿದ್ದಾರೆ. ಕುಸಿದಿರುವ ಕಟ್ಟಡವು ಗುಣೇಶ್‌ ಅವರ ಪಾಲಿಗೆ ಬಂದಿದೆ. ಅವರು ದಾಖಲೆ ಪತ್ರಗಳನ್ನು ವರ್ಗಾವಣೆ ಮಾಡಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ಅದು ಇದುವರೆಗೂ ಪೂರ್ಣಗೊಂಡಿಲ್ಲ. ಹಳೇ ದಾಖಲೆ ಆಧರಿಸಿ ಅವರ ತಂದೆಯ ಹೆಸರಿಗೆ ನೋಟಿಸ್‌ ಕೊಟ್ಟಿದ್ದೆವು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘ನೋಟಿಸ್‌ ಅನ್ನು ಗುಣೇಶ್‌ ಅವರೇ ಸ್ವೀಕರಿಸಿದ್ದರು. ಅದಕ್ಕೆ ಸಹಿ ಮಾಡಿದ್ದರು. ಅದಾದ ಬಳಿಕ ಅವರು, ಕಟ್ಟಡ ತೆರವು ಮಾಡಲು ಕ್ರಮ ಕೈಗೊಂಡಿಲ್ಲ. ಇದರಿಂದಲೇ ಇಂದು ಅನಾಹುತ ಸಂಭವಿಸಿದೆ. ಚಾಲ್ತಿಯಲ್ಲಿರುವ ಕಾನೂನು ಪ್ರಕಾರ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲು ಚಿಂತನೆ ನಡೆಸಿದ್ದೇವೆ’ ಎಂದು ಅವರು ವಿವರಿಸಿದರು.

ನೋಟಿಸ್‌ನಲ್ಲಿ ಏನಿತ್ತು:

‘ವಾರ್ಡ್‌ ನಂಬರ್‌ 148ರ ಈಜಿಪುರದದಲ್ಲಿ ದೈನಂದಿನ ತಪಾಸಣೆ ನಡೆಸಿದ್ದೆವು. ನಿಮ್ಮ (ಸೋಮೇಶ್‌) ಕಟ್ಟಡವು 20–25 ವರ್ಷಗಳ ಹಿಂದೆ ನಿರ್ಮಿಸಿದ್ದು, ಅದರ ಗುಣಮಟ್ಟವು ಹಾಳಾಗಿರುವುದು ಕಂಡುಬಂದಿದೆ. ಜತೆಗೆ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ, ಮುಂದೆ ಭಾರಿ ಮಳೆಗೆ ಕಟ್ಟಡವು ಶಿಥಿಲಗೊಂಡು ಕುಸಿಯುವ ಸಂಭವವಿದೆ.’

‘ಜತೆಗೆ ನೆರೆಯ ಮನೆಗಳಿಗೂ ಹಾನಿಯಾಗುವ ಸಾಧ್ಯತೆ ಇದೆ. ಈ ನೋಟಿಸ್‌ ತಲುಪಿದ ಕೂಡಲೇ ಕಟ್ಟಡವನ್ನು ತೆರವುಗೊಳಿಸಬೇಕು. ನಿಮ್ಮ ಮನೆಯಲ್ಲಿ ವಾಸವಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ನಿಮ್ಮ ಖರ್ಚಿನಲ್ಲಿ ಅವರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಬೇಕು. ಆಕಸ್ಮಾತ್‌ ತೆರವು ಮಾಡದಿದ್ದರೆ, ಮುಂದಾಗುವ ಅನಾಹುತಗಳಿಗೆ ಹಾಗೂ ಪ್ರಾಣ ಹಾನಿಗಳಿಗೆ ನೀವೇ ಜವಾಬ್ದಾರರಾಗುತ್ತೀರಿ. ಬಿಬಿಎಂಪಿ ಅದಕ್ಕೆ ಹೊಣೆಯಾಗುವುದಿಲ್ಲ’ ಎಂದು ನೋಟಿಸ್‌ನಲ್ಲಿ ಬರೆಯಲಾಗಿತ್ತು.

ಮನೆ ಖಾಲಿ ಮಾಡಿದ ನೆರೆಯವರು:

ಕುಸಿದ ಕಟ್ಟಡದ ನಿವಾಸಿಗಳು, ಘಟನೆಯಿಂದ ಆತಂಕಗೊಂಡಿದ್ದು ತಮ್ಮ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಏಳು ಮನೆಯ ನಿವಾಸಿಗಳು, ಮಂಗಳವಾರ ಬೆಳಿಗ್ಗೆ ಮನೆಯಲ್ಲಿದ್ದ ವಸ್ತುಗಳನ್ನು ಬೇರೆಡೆ ಸ್ಥಳಾಂತರಿಸಿದರು.

‘ಕಟ್ಟಡ ಕುಸಿದಿದ್ದರಿಂದ ನಮ್ಮ ಮನೆಯ ಗೋಡೆ ಬಿರುಕು ಬಿಟ್ಟಿದೆ. ಜೋರಾದ ಶಬ್ದಕ್ಕೆ ನನ್ನ ಗಂಡ ಬೆಚ್ಚಿಬಿದ್ದಿದ್ದರು. ಈಗ ಪ್ರಾಣಭಯ ಶುರುವಾಗಿದೆ. ಹೀಗಾಗಿ ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದೇವೆ’ ಎಂದು ನಿವಾಸಿ ನಂದಿನಿ ಹೇಳಿದರು.

ತೈಲ ನಿಗಮದ ಅಧಿಕಾರಿಗಳ ಭೇಟಿ:

ಸಿಲಿಂಡರ್‌ ಅನಿಲ್‌ ಸೋರಿಕೆಯಿಂದ ಸ್ಫೋಟ ಸಂಭವಿಸಿರುವ ಅನುಮಾನವಿರುವುದರಿಂದ ಭಾರತೀಯ ತೈಲ ನಿಗಮದ (ಐಓಸಿ) ಅಧಿಕಾರಿಗಳು, ಘಟನಾ ಸ್ಥಳಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದರು. ಅವಶೇಷವಿದ್ದ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಶಬ್ದ ಕೇಳಿಬಂದ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು, ‘ಮೇಲ್ನೋಟಕ್ಕೆ ಇಂದು ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಫೋಟ ಎಂಬುದು ತಿಳಿಯುತ್ತದೆ. ಕೆಲ ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳ ಪರಿಶೀಲನೆ ನಡೆಸಿದ ಬಳಿಕ ನಿಖರ ಮಾಹಿತಿ ತಿಳಿಯಲಿದೆ’ ಎಂದರು.

***

ಮನೆ ಖಾಲಿ ಮಾಡಿದ್ದಕ್ಕೆ ಜೀವ ಉಳಿಯಿತು

ಕುಸಿದ ಕಟ್ಟಡದಲ್ಲಿ ಹಲವು ವರ್ಷಗಳಿಂದ ಬಾಡಿಗೆಗೆ ಇದ್ದ ಮೇರಿ ಎಂಬುವರು ನಾಲ್ಕು ತಿಂಗಳ ಹಿಂದಷ್ಟೇ ಮನೆ ಖಾಲಿ ಮಾಡಿದ್ದರು. ಆಕಸ್ಮಾತ್‌ ಅದೇ ಮನೆಯಲ್ಲಿ ವಾಸವಿದ್ದರೆ ತಮ್ಮ ಜೀವಕ್ಕೂ ಕುತ್ತು ಬರುತ್ತಿತ್ತು ಎಂದು ಅವರು ನೆನೆದರು.

ಘಟನಾ ಸ್ಥಳದಲ್ಲಿ ಮಾತನಾಡಿದ ಮೇರಿ, ‘ಕಟ್ಟಡ ಶಿಥಿಲಗೊಂಡಿದ್ದನ್ನು ಅವಾಗಲೇ ನೋಡಿದ್ದೆ. ಮಾಲೀಕರಿಗೆ ಹೇಳಿದ್ದರೂ ಸರಿ ಮಾಡಿರಲಿಲ್ಲ. ಹೀಗಾಗಿ ಮನೆ ಖಾಲಿ ಮಾಡಿಕೊಂಡು ಬಂದೆ. ದೇವರು ದೊಡ್ಡವನ್ನು ನನ್ನ ಪ್ರಾಣ ಉಳಿಸಿದ’ ಎಂದು ಹೇಳಿದರು.

***

ಬೇಕರಿ ಬಳಿಯೇ ದಂಪತಿ ವಾಸ

ಕಟ್ಟಡ ಕುಸಿದ ಸಮಯದಲ್ಲಿ ಮನೆಯಿಂದ ಹೊರಗೆ ಓಡಿಬಂದಿದ್ದ ಸ್ಥಳೀಯ ನಿವಾಸಿಗಳಾದ ಯೋಗಾನಂದ ಹಾಗೂ ಪುಷ್ಪ ದಂಪತಿ, ವಾಪಸ್‌ ಮನೆಯೊಳಗೆ ಹೋಗಲು ಭಯಪಡುತ್ತಿದ್ದಾರೆ. ಅವರು, ಮಗುವಿನ ಸಮೇತ ಈಜಿಪುರದ ಬೇಕರಿಯೊಂದರ ಮುಂದೆ ಕುಳಿತು ರಾತ್ರಿ ಕಳೆದಿದ್ದಾರೆ. ಮಂಗಳವಾರ ಬೆಳಿಗ್ಗೆಯೂ ಅಲ್ಲಿಯೇ ಕುಳಿತಿದ್ದು ಕಂಡುಬಂತು.

ಕೆಲ ಸ್ಥಳೀಯ ನಿವಾಸಿಗಳು, ರಾತ್ರಿ ಸಂಬಂಧಿಕರ ಮನೆಗಳಿಗೆ ಹೋಗಿ ಮಲಗಿದ್ದಾರೆ. ಇನ್ನು ಹಲವರು ತಿಂಡಿ ಹಾಗೂ ಊಟಕ್ಕೆ ಪರದಾಡಿದ್ದಾರೆ. ಹಲವು ನಿವಾಸಿಗಳು ಮನೆ ಖಾಲಿ ಮಾಡಲು ಮುಂದಾಗಿದ್ದು, ಅವರಿಗೆ ಮುಂಗಡ ಹಣ ವಾಪಸ್‌ ಕೊಡಲು ಮಾಲೀಕರು ಸತಾಯಿಸುತ್ತಿದ್ದಾರೆ.

‘ನಮಗೆ ಈ ಏರಿಯಾದಲ್ಲಿ ಇರಲು ಆಗುತ್ತಿಲ್ಲ. ನಮ್ಮ ಹಣ ವಾಪಸ್‌ ಕೊಟ್ಟರೆ ಹೊರಟು ಹೋಗುತ್ತೇವೆ ಎಂದು ಮಾಲೀಕರಿಗೆ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಏನು ಮಾಡಬೇಕು ಎಂಬುದು ತೋಚುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ನಮಗೆ ಹಣ ಕೊಡಿಸಬೇಕು’ ಎಂದು ನಿವಾಸಿ ಜಯಮ್ಮ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry