ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರೂಣದ ಲಿಂಗ ಪತ್ತೆ ಪರೀಕ್ಷೆ ಮಾಡಿದ ವೈದ್ಯ ದಂಪತಿ ಬಂಧನಕ್ಕೆ ಬಿಜೆಪಿ ಶಾಸಕರಿಂದ ತಡೆ

Last Updated 18 ಅಕ್ಟೋಬರ್ 2017, 6:04 IST
ಅಕ್ಷರ ಗಾತ್ರ

ಅಲೀಗಡ: ಭ್ರೂಣದ ಲಿಂಗ ಪತ್ತೆ ಪರೀಕ್ಷೆ ನಡೆಸಿದ ವೈದ್ಯ ದಂಪತಿಯನ್ನು ಬಂಧಿಸಲು ಯತ್ನಿಸಿದ ಪೊಲೀಸರನ್ನು ಬಿಜೆಪಿ ಶಾಸಕರಿಬ್ಬರು ತಡೆದ ಪ್ರಕರಣ ಇಲ್ಲಿ ನಡೆದಿದೆ.

ಬಿಜೆಪಿ ಶಾಸಕರಾದ ಸಂಜೀವ್ ರಾಜಾ ಮತ್ತು ಅನಿಲ್ ಪರಾಷರ್ ಎಂಬುವವರು ವೈದ್ಯ ದಂಪತಿಯ ಬಂಧನಕ್ಕೆ ತಡೆಯೊಡ್ಡಿದ ಆರೋಪ ಎದುರಿಸುತ್ತಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಲಿಂಗ ಪತ್ತೆಗೆ ಬಳಸಿದ ಅಲ್ಟ್ರಾಸೌಂಡ್ ಮಷಿನ್‌ ಅನ್ನು ಮುಟ್ಟುಗೋಲು ಹಾಕಲೂ ಶಾಸಕರು ಬಿಡಲಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ.

‘ವೈದ್ಯ ದಂಪತಿಯ ಬಂಧನಕ್ಕೆ ಅನುವು ಮಾಡಿಕೊಡುವಂತೆ ಅಲೀಗಡದ ಜಿಲ್ಲಾಧಿಕಾರಿಯವರು ಶಾಸಕರ ಬಳಿ ಪರಿಪರಿಯಾಗಿ ಮನವಿ ಮಾಡಿದರು. ಆದರೂ ಶಾಸಕರು ಬಿಡಲಿಲ್ಲ’ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಅಲೀಗಡದ ಜೀವನ್‌ ನರ್ಸಿಂಗ್‌ ಹೋಮ್‌ನ ಡಾ. ಜಯಂತ್‌ ಶರ್ಮಾ ಹಾಗೂ ಅವರ ಪತ್ನಿ ಸೋಮವಾರ ಸಂಜೆ ಭ್ರೂಣದ ಲಿಂಗ ಪತ್ತೆ ಪರೀಕ್ಷೆ ನಡೆಸಿದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದ ಸ್ಥಳೀಯ ಪೊಲೀಸರು, ಭ್ರೂಣದ ಲಿಂಗ ಪತ್ತೆ ಪರೀಕ್ಷೆ ನಡೆಸಿದ ಅಲ್ಟ್ರಾಸೌಂಡ್ ಮಷಿನ್‌ ಜತೆಗೆ ವೈದ್ಯ ದಂಪತಿಯನ್ನು ಠಾಣೆಗೆ ಕರೆದುಕೊಂಡು ಬಂದಿದ್ದರು. ತಕ್ಷಣವೇ ಠಾಣೆಗೆ ಬಂದ ಶಾಸಕರು ತಡರಾತ್ರಿ ಎರಡು ಗಂಟೆವರೆಗೂ ಠಾಣೆಯಲ್ಲೇ ಇದ್ದು ವೈದ್ಯರನ್ನು ಅಲ್ಲಿಂದ ಕಳುಹಿಸಿದ ನಂತರ ತೆರಳಿದ್ದಾರೆ. ಈ ಮಧ್ಯೆ, ಭ್ರೂಣದ ಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಂಡ ಮಹಿಳೆ ತಲೆಮರೆಸಿಕೊಂಡಿದ್ದಾರೆ.

‘ಸ್ಥಳೀಯ ಶಾಸಕರು ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ನಾವು ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟೆವು. ಕಾನೂನು ಪ್ರಕ್ರಿಯೆ ಮಾಡಲು ಅಧಿಕಾರಿಗಳಿಗೆ ಅನುವು ಮಾಡಿಕೊಡಬೇಕೆಂದು ಶಾಸಕರಲ್ಲಿ ಪರಿಪರಿಯಾಗಿ ಮನವಿ ಮಾಡಿದೆವು. ಆದರೂ ಅವರು ಕೇಳಲಿಲ್ಲ’ ಎಂದು ಅಲೀಗಡದ ಜಿಲ್ಲಾಧಿಕಾರಿ ರಿಷೀಕೇಶ್ ಭಾಸ್ಕರ್ ಅವರು ಹೇಳಿದ್ದನ್ನು ಇಂಡಿಯನ್‌ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭ್ರೂಣದ ಲಿಂಗ ಪತ್ತೆ ಪರೀಕ್ಷೆ ಮಾಡುವುದಕ್ಕೆ ಕಾನೂನಿನಲ್ಲಿ ನಿಷೇಧವಿದೆ. ಭ್ರೂಣದ ಲಿಂಗ ಪತ್ತೆ ಪರೀಕ್ಷೆ ಗಂಭೀರ ಅಪರಾಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT