ಸೊರಗಿದ ನೆಲಗಂಗಿಯ ಜಲಧಾರೆ

ಶನಿವಾರ, ಮೇ 25, 2019
33 °C

ಸೊರಗಿದ ನೆಲಗಂಗಿಯ ಜಲಧಾರೆ

Published:
Updated:
ಸೊರಗಿದ ನೆಲಗಂಗಿಯ ಜಲಧಾರೆ

ಚಿಂಚೋಳಿ: ತಾಲ್ಲೂಕಿನಲ್ಲಿ ಈವರೆಗೆ ಬೆಳಕಿಗೆ ಬಂದಿರುವ ಜಲಪಾತಗಳ ಸಂಖ್ಯೆ ಕೇವಲ ಮೂರು. ಆದರೆ, ಇದಕ್ಕೆ ಮತ್ತೊಂದು ಜಲಪಾತ ಸೇರ್ಪಡೆಯಾಗಿದ್ದು, ಅದುವೇ ನೆಲಗಂಗಿ ಜಲಧಾರೆ. ಚಿಮ್ಮನಚೋಡ್‌ ಬಳಿಯ ಚೌಕಿ ತಾಂಡಾದ ಪಕ್ಕದಲ್ಲಿರುವ ನೆಲಗಂಗಿ ತಾಂಡಾಕ್ಕೆ ಹೊಂದಿಕೊಂಡು ಹರಿಯುವ ತೊರೆಯೇ ಈ ಜಲಧಾರೆಗೆ ಆಸರೆಯಾಗಿದೆ.

ಕರ್ನಾಟಕ ತೆಲಂಗಾಣ ಗಡಿಯಲ್ಲಿರುವ ಎತ್ತಿಪೋತೆ ಜಲಪಾತ, ವನ್ಯಜೀವಿ ಧಾಮದಲ್ಲಿರುವ ಕುಸ್ರಂಪಳ್ಳಿ ತಾಂಡಾದ ಹಿಂದೆ ಬರುವ ಮಾಣಿಕಪುರ ಜಲಪಾತ, ನಾಗರಾಳ್‌ ಜಲಾಶಯದ ಕ್ರೆಸ್ಟ್‌ಗೇಟ್‌ ಎದುರಿನ ನಾಗರಾಳ್‌ ಜಲಪಾತಗಳ ಸಾಲಿಗೆ ನೆಲಗಂಗಿ ಜಲಪಾತವೂ ಸೇರಿದೆ.

ತಾಂಡಾದಿಂದ ಕೂಗಳತೆ ಅಂತರದಲ್ಲಿರುವ ನೆಲಗಂಗಿ ಜಲಪಾತದಲ್ಲಿ ನೀರಿಲ್ಲದೇ ಸೊರಗಿದೆ. ಆದರೆ, ಅದರ ಸೌಂದರ್ಯಕ್ಕೆ ಮಾತ್ರ ಚ್ಯುತಿಯಿಲ್ಲದಂತಾಗಿದೆ. ಮಳೆಗಾಲದಲ್ಲಿ ಹರಿಯುವ ಜಲಧಾರೆ ಕಣ್ಣಿಗೆ ಹಬ್ಬವನ್ನುಂಟು ಮಾಡಲಿದೆ.

‘ಒಂದೆಡೆ ತಾಂಡಾವಾಸಿಗಳ ಮನೆಗಳು. ಇನ್ನೊಂದೆಡೆ ಹುಲುಸಾಗಿ ಬೆಳೆಯುತ್ತಿರುವ ಗ್ಲಿಸರಿಡಿಯಾ ವನದ ಮಧ್ಯೆ ಜುಳು ಜುಳು ಸದ್ದಿನೊಂದಿಗೆ ಬಳುಕುವ ಲತೆಯಂತೆ ಹರಿಯುತ್ತ ಮನಸ್ಸಿಗೆ ಆಹ್ಲಾದತೆ ಉಂಟು ಮಾಡುತ್ತದೆ’ ಎನ್ನುತ್ತಾರೆ ಜಿತೇಂದ್ರ ರಾಮಶೆಟ್ಟಿ ರಾಠೋಡ್‌.

ಬೃಹತ್‌ ಕಪ್ಪು ಶಿಲೆಯ ಬಂಡೆಗಲ್ಲುಗಳಿಗೆ ಮುತ್ತಿಕ್ಕುತ್ತ ಸುಮಾರು 30 ಅಡಿಗಿಂತಲೂ ಎತ್ತರದಿಂದ ಹಂತ ಹಂತವಾಗಿ ಬೀಳುವ ಜಲಧಾರೆ ನೋಡಲು ಆಕರ್ಷಕವಾಗಿ ಗೋಚರಿಸುತ್ತದೆ. ಒಂದೆಡೆ ನೀರು ಹರಿಯುವ ಹಾಗೂ ಇನ್ನೊಂದೆಡೆ ಜಲಪಾತದ ನೈಸರ್ಗಿಕ ಸೃಷ್ಟಿ ಪ್ರಕೃತಿಯ ರಮಣೀಯತೆ ಆಸ್ವಾದಿಸಲು ನೆರವಾಗುತ್ತಿದೆ.

ಇನ್ನು ನೀರು ಹರಿದುಹೋಗುವ ದಾರಿ ನೋಡುತ್ತ ನಿಂತರೆ ದೃಷ್ಟಿಯುದ್ದಕ್ಕೂ ಗೋಚರಿಸುವ ತೊರೆ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಎರಡು ಎತ್ತರದ ಕಣಿವೆಗಳು ಸೀಳಿ ಕವಲೊಡೆದು ಅವುಗಳ ಮಧ್ಯೆ ಸೃಷ್ಟಿಯಾದ ನೈಸರ್ಗಿಕ ದಾರಿ ಕಂದರ ವಿಸ್ಮಯ ಮೂಡಿಸುವಂತಾಗಿದೆ. ಮೇಲ್ಗಡೆ ತೊರೆಯಿಂದ ನೀರು ಹರಿಯುವುದು ಬಹುತೇಕ ಚಳಿಗಾಲದ ಕೊನೆಯಲ್ಲಿ ಸ್ಥಗಿತಗೊಳ್ಳುತ್ತದೆ. ಆದರೆ, ಈ ಜಲಧಾರೆ ಮಾತ್ರ ಬತ್ತುವುದಿಲ್ಲ. ಜಲಧಾರೆಯ ಪಶ್ಚಿಮ ದಿಕ್ಕಿನ ಭೂಮಿಯಿಂದ ಬೃಹತ್‌ ಕಲ್ಲು ಬಂಡೆಯ ಸಂದಿನಿಂದ ಝರಿಯಾಗಿ ಜಿನುಗುವ ನೀರು ಬೇಸಿಗೆಯಲ್ಲೂ ಬತ್ತುವುದಿಲ್ಲ. ತಾಂಡಾದಲ್ಲಿ ಎಲ್ಲಾ ತೆರೆದ ಬಾವಿ, ಕೊಳವೆ ಬಾವಿ ಬತ್ತಿದರೂ ಸ್ಥಳೀಯರ ಬಾಯಾರಿಕೆಯ ದಾಹ ನೀಗಿಸಲು ಈ ನೆಲಗಂಗಿಯೇ ಆಧಾರ ಎನ್ನುತ್ತಾರೆ ಸ್ಥಳೀಯ ಮುಖಂಡ ರವಿ ಮೋತಿರಾಮ ನಾಯಕ್‌.

ಶೇ 17ರಷ್ಟು ಮಳೆಯ ಕೊರತೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿಯೇ ಆಳಂದದಲ್ಲಿ ಮಾತ್ರ ಉತ್ತಮ ಮಳೆಯಾದರೆ, ಜೇವರ್ಗಿ ತಾಲ್ಲೂಕಿನಲ್ಲಿ ಶೇ 22ರಷ್ಟು ಮಳೆ ಕೊರತೆಯಿದೆ ಎಂದು ಕನಾರ್ಟಕ ರಾಜ್ಯ ನೈಸರ್ಗಿಕ ವಿಪತ್ತುಗಳ ನಿರ್ವಹಣಾ ಕೇಂದ್ರದ ಮೂಲಗಳು ತಿಳಿಸಿವೆ.

ಇದರಿಂದ ಜಲಪಾತದಲ್ಲಿ ನೀರಿನ ರಭಸ ಕಾಣುತ್ತಿಲ್ಲ. ಆದರೆ, ಇಲ್ಲಿಗೆ ಸರಳವಾಗಿ ಹೋಗಬಹುದಾಗಿದ್ದು, ಯಾವ ತೊಂದರೆಯೂ ಇಲ್ಲ. ಮಳೆಗಾಲದಲ್ಲಿಯೇ ಮಿಂಚಿ ಮರೆಯಾಗುವ ಜಲಧಾರೆ ಕಣ್ತುಂಬಿಕೊಳ್ಳಲು ಮತ್ತೆ ಮಳೆಗಾಗಿ ಕಾಯುವಂತಾಗಿದೆ. 

ಜಗನ್ನಾಥ ಡಿ.ಶೇರಿಕಾರ

***

ನೆಲಗಂಗಿ ಜಲಪಾತದಲ್ಲಿ ಹರಿಯುವ ನೀರಿಗೆ ಪ್ರತಿವರ್ಷ ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತೇವೆ. ಈ ಜಲಪಾತದ ಜಲಧಾರೆಯಿಂದಲೇ ಈ ತಾಂಡಾಕ್ಕೆ ನೆಲಗಂಗಿ ತಾಂಡಾ ಎಂಬ ಹೆಸರು ಬಂದಿರುವ ಸಾಧ್ಯತೆಯಿದೆ.

–ತೇಜು ಜಾಧವ್‌, ಶಿವರಾಮ ನಾಯಕ ತಾಂಡಾ ವಾಸಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry