ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಕ್ಕೆ ಎಣೆಯಿಲ್ಲ; ಒತ್ತಡಕ್ಕೆ ಮಣಿಯಲ್ಲ

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮತ್ತೆ ನಿರ್ದೇಶನಕ್ಕಿಳಿಯುವುದು ಯಾವಾಗ?

ನನಗೆ ಪ್ರತಿದಿನ ಏನಾದರೂ ಮಾಡಬೇಕು, ನಿರ್ದೇಶಿಸಬೇಕು ಎಂದು ಅನಿಸುತ್ತಲೇ ಇರುತ್ತದೆ. ಆದರೆ ನನ್ನ ಅಕ್ಕಪಕ್ಕದಲ್ಲಿ ಸುಮಾರು ಜನರು ತಮ್ಮ ಕನಸುಗಳನ್ನು ನನ್ನೊಟ್ಟಿಗೆ ನನಸು ಮಾಡಿಕೊಳ್ಳಲು ಕಾಯುತ್ತಿದ್ದಾರೆ. ಅವರೆಲ್ಲರೂ ನನಗೆ ನನ್ನ ಮಗಳ ಹಾಗೆಯೇ ಕಾಣುತ್ತಾರೆ. ಅವರ ಕನಸು ಈಡೇರಿಸುವುದು ನನ್ನ ಜವಾಬ್ದಾರಿಯೂ ಹೌದು.

ಮಾರ್ಕೆಟ್‌ ಬಿದ್ದು ಹೋದಾಗ, ಸಿನಿಮಾ ಸೋತಾಗ ಕಲಾವಿದ ಸಾಯುವುದಿಲ್ಲ. ಆದರೆ ಯಾವಾಗ ಅವನಿಗಾಗಿ ಯಾರೂ ಏನೂ ಬರೆಯುವುದಿಲ್ಲವೋ ಆಗ ಸಾಯುತ್ತಾನೆ. ಈ ಭಯ ನಿರಂತರವಾಗಿ ನನ್ನನ್ನು ಕಾಡುತ್ತಲೇ ಇರುತ್ತದೆ. ನಮಗಾಗಿ ಬರೆಯುವವರು ಇದ್ದಾರೆ ಎಂದರೆ ನಾವು ಬದುಕಿದ್ದೀವಿ ಅಂತ ಅರ್ಥ. ಹಾಗೆಯೇ ಎಷ್ಟೊಂದು ಜನ ನನಗಾಗಿ ಬರೆಯುತ್ತಿದ್ದಾರಲ್ಲ, ಅವರನ್ನು ಬಿಟ್ಟು ನಾನು ನಿರ್ದೇಶನಕ್ಕಿಳಿಯುವುದು ಕಷ್ಟ. ನನ್ನ ಬದುಕಿನ ಈ ಹಂತದಲ್ಲಿ ಅವರಿಗಾಗಿ ನಾನು ಕೆಲಸ ಮಾಡಬೇಕು. ನಾನೇ ಬರೆಯುವ ಹಂತ ಬಂದಾಗ ಖಂಡಿತವಾಗಿಯೂ ನಿರ್ದೇಶನ ಮಾಡಿಯೇ ಮಾಡುತ್ತೇನೆ.

ನಿಮ್ಮ ಮಗಳೂ ನಟನೆಗೆ ಇಳಿಯುವ ಸೂಚನೆ ಇದೆಯೇ?

ನನಗೆ ಗೊತ್ತಿಲ್ಲ. ಅವಳು ತುಂಬ ಪ್ರತಿಭಾವಂತ ಹುಡುಗಿ. ಹಾಡುವುದು ಮತ್ತು ಚಿತ್ರ ಬಿಡಿಸುವುದು ಅವಳಿಗೆ ತುಂಬ ಇಷ್ಟ. ಅವಳಿಗೆ ನಾನು ಯಾವುದನ್ನೂ ಹೇರುವುದಿಲ್ಲ. ಇಂಥದ್ದೇ ಮಾಡು ಎಂದು ಹೇಳುವ ಸರ್ವಾಧಿಕಾರಿಯಾಗುವುದಕ್ಕಿಂತ ಅವಳಿಗೆ ಯಾವುದು  ಇಷ್ಟವೋ ಅದಕ್ಕೆ ಪ್ರೋತ್ಸಾಹ ಕೊಡುವ ತಂದೆಯಾಗಬೇಕು ಎನ್ನುವುದು ನನ್ನ ಆಸೆ. ಅವಳಿಗೆ ಯಾವುದರಲ್ಲಿ ಖುಷಿ ಇದೆಯೋ ಅದನ್ನೇ ಮಾಡಲಿ.

ಹಾಲಿವುಡ್‌ ಸಿನಿಮಾ ಮಾಡುತ್ತಿದ್ದೀರಂತೆ...

ಹೌದು. ಇದೇ ತಿಂಗಳ 22ನೇ ತಾರೀಕು ಚಿತ್ರತಂಡ ಬೆಂಗಳೂರಿಗೆ ಬರುತ್ತಿದೆ. ಆಗ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇವೆ.

ನಿಮ್ಮ ಸಿನಿಮಾ ಕೆಲಸಗಳ ಮಧ್ಯ ‘ಬಿಗ್‌ಬಾಸ್‌’ ನಿರೂಪಣೆ ಕೆಲಸ ಒತ್ತಡ ಅನಿಸುತ್ತಿಲ್ಲವೇ?

ಇಲ್ಲ. ‘ಬಿಗ್‌ಬಾಸ್‌’ ನನ್ನ ಪಾಲಿಗೆ ಒತ್ತಡ ನಿವಾರಣೆ ಮಾಡುವ ಕಾರ್ಯಕ್ರಮ. ಅಲ್ಲಿ ಸ್ಪರ್ಧಿಗಳು ಮಾಡುವ ಜಗಳಗಳಲ್ಲಿ ನಮಗೆ ಏನೋ ಪಾಠ ಇರುತ್ತದೆ. ಅದನ್ನು ನಾನು ಎಂಜಾಯ್‌ ಮಾಡುತ್ತೇನೆ.

‘ಪೈಲ್ವಾನ್‌’ ಚಿತ್ರದ ಬಗ್ಗೆ ಹೇಳಿ

‘ಪೈಲ್ವಾನ್‌’ ಚಿತ್ರ ನನ್ನ ಮೇಲೆ ಸಾಕಷ್ಟು ಜವಾಬ್ದಾರಿಯನ್ನು ಹೇರಿದೆ. ಈಗೀಗ ಏನಾದರೂ ತಿನ್ನಬೇಕು ಎಂಬ ಆಸೆ ಜಾಸ್ತಿಯಾಗಿದೆ. ಆದರೆ ಡಯಟೀಷಿಯನ್‌ ತಿನ್ನಲು ಬಿಡುವುದಿಲ್ಲ. ನಾನು ಹೆಚ್ಚು ಜಿಮ್‌ಗೆ ಹೋಗುವುದಿಲ್ಲ. ಆದರೆ ಆ ಪಾತ್ರಕ್ಕೆ ನಾನು ಟೋನ್ಡ್‌ ಅಪ್‌ ಆಗಬೇಕು. ಅದಕ್ಕಾಗಿ ಸಿದ್ಧತೆ ನಡೆಸಿದ್ದೇನೆ.

ಚಿರಂಜೀವಿ ಅವರ ಸಿನಿಮಾದಲ್ಲಿ ಮಾಡ್ತಿದ್ದೀರಂತೆ.

ಆ ಕುರಿತು ಮಾತುಕತೆ ಆಗಿದ್ದು ನಿಜ. ಇನ್ನೂ ಮಾತುಕತೆ ನಡೆಯುತ್ತಿದೆ. ಆದರೆ ನಾನಿನ್ನೂ ಒಪ್ಪಿಕೊಂಡಿಲ್ಲ. ಯಾಕೆಂದರೆ ಇಲ್ಲಿ ಇಷ್ಟೊಂದು ಕೆಲಸಗಳಲ್ಲಿ ತೊಡಗಿಕೊಂಡಿರುವಾಗ ಮತ್ತೆ ಐವತ್ತು ಅರವತ್ತು ದಿನ ಅಲ್ಲಿ ಕಳೆಯುವುದು ತಮಾಷೆಯಲ್ಲ. ನನಗೆ ತುಂಬ ಕಷ್ಟ ಅದು. ಆದ್ದರಿಂದ ಇನ್ನೂ ಆ ಬಗ್ಗೆ ಯೋಚಿಸುತ್ತಿದ್ದೇನೆ. ನೋಡೋಣ ಏನಾಗುತ್ತದೆ ಅಂತ.

‘ಅಂಬಿ ನಿಂಗ್‌ ವಯಸ್ಸಾಯ್ತೋ’ ಸಿನಿಮಾಗೆ ಹೆಸರು ಸೂಚಿಸಿದ್ದೇ ನೀವಂತೆ?

ಅಂಬರೀಷ್‌ ಅವರು ತುಂಬ ಆಸೆಪಟ್ಟ ಸಿನಿಮಾ ಅದು. ಎಷ್ಟೋ ವರ್ಷಗಳ ನಂತರ ಮೊದಲ ಬಾರಿಗೆ ಅಂಬರೀಷ್‌ ಮಾಮ ಅವರಲ್ಲಿ ಒಂದು ಎನರ್ಜಿ ನೋಡಿದೆ. ಅಂದರೆ ನಾನು ಸಿನಿಮಾ ಮಾಡಬೇಕು ಎಂಬ ಹಂಬಲ. ಧೂಮಪಾನ, ಮದ್ಯಪಾನಗಳನ್ನೆಲ್ಲ ಬಿಟ್ಟ ಮೇಲೆ ಅವರಲ್ಲೀಗ ತುಂಬ ತಾಜಾತನ ಕಾಣುತ್ತಿದೆ. ಸಿನಿಮಾದ ಕುರಿತು ಆಸಕ್ತಿಯಿಂದ ಚರ್ಚಿಸುತ್ತಿದ್ದಾರೆ. ನನ್ನ ಮೇಲೆ ಅವರಿಗೆ ತುಂಬ ನಂಬಿಕೆ. ಪ್ರತಿಯೊಂದು ದೃಶ್ಯದ ಬಗ್ಗೆಯೂ ಆಸಕ್ತಿ ತೋರಿಸುತ್ತಿದ್ದಾರೆ.

ವೈಯಕ್ತಿಕವಾಗಿ ನನಗೆ ಆ ಟೈಟಲ್‌ ತುಂಬ ಆಪ್ತ ಅನಿಸಿತು. ಟ್ರೈಲರ್‌ನಲ್ಲಿ ಆ ಟೈಟಲ್‌ ಬಗ್ಗೆನೇ ತುಂಬ ಆಸಕ್ತಿಕರ ಅಂಶಗಳಿವೆ. ಒಂದತ್ತು ಜನ ಬಂದು ‘ಲೇ ಅಂಬಿ ನಿಂಗೆ ವಯಸ್ಸಾಯ್ತು ಹೋಗೋ..’ ಅಂತಾರೆ. ಅದಕ್ಕೆ ಅವರೊಂದು ಉತ್ತರ ಕೊಡ್ತಾರೆ. ಅದು ತುಂಬ ಚೆನ್ನಾಗಿದೆ. ಆ ಕಥೆಯೇ ಹಾಗಿದೆ. ಆ ಪಾತ್ರವೇ ಹಾಗಿದೆ. ಅಂಬರೀಷ್‌ ಅವರ ಹಾವಭಾವ, ಅವರ ಭಾಷೆ ಅವರು ಮಾತ್ರ ಬಳಸಲು ಸಾಧ್ಯ. ಅದೆಲ್ಲ ಇಟ್ಟುಕೊಂಡೇ ಮಾಡಿದ್ದೀವಿ.

‘ದಿ ವಿಲನ್‌’ ಸಿನಿಮಾ ಎಲ್ಲಿಗೆ ಬಂತು? ಪ್ರೇಮ್‌ ಜತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಬಹುತೇಕ ಮುಗಿದಿದೆ. ನವೆಂಬರ್‌ನಲ್ಲಿ ಪೂರ್ತಿಯಾಗುತ್ತದೆ. ಸಿನಿಮಾದ ಬಗ್ಗೆ ಪ್ರೇಮ್‌ಗೆ ಇರುವಂಥ ಮೋಹ ತುಂಬ ಕಡಿಮೆ ಜನರಲ್ಲಿ ನೋಡಿದ್ದೇನೆ ನಾನು. ಅವರು ಶೋ ಅಪ್‌, ಬಿಲ್ಡಪ್‌ ಜಾಸ್ತಿ ಎಂದೆಲ್ಲ ಕೇಳುತ್ತಿದ್ದೆ. ಯಾರು ಮಾಡಲ್ಲ ಅದನ್ನ? ಕೆಲವರು ಗೊತ್ತಾಗದಂತೆ ಮಾಡುತ್ತಾರೆ. ಇನ್ನು ಕೆಲವರು ಸ್ವಲ್ಪ ಲೌಡ್‌ ಆಗಿ ಮಾಡುತ್ತಾರಷ್ಟೆ. ಆದರೆ ಅವರನ್ನು ಸೆಟ್‌ನಲ್ಲಿ ನೋಡಿದ್ದೇನೆ. ಖಂಡಿತ ಆತ ಒರಟ ಅಲ್ಲ. ನಾನೇ ಬೈದು ಬೈದು ಊಟ ಮಾಡಿಸುತ್ತಿದ್ದೆ. ಅವರಿಗೆ ಸಿನಿಮಾದ ಬಗ್ಗೆ ತುಂಬ ಮೋಹವಿದೆ. ಆ ಮೋಹಕ್ಕೆ ನಾವೆಲ್ಲರೂ ತಲೆಬಾಗಲೇ ಬೇಕು. ಈ ಸಿನಿಮಾದ ಪ್ರತಿಯೊಂದು ಅಂಶವನ್ನೂ ತುಂಬ ಆಸಕ್ತಿಯಿಂದ ರೂಪಿಸುತ್ತಿದ್ದಾರೆ. ನನಗೆ ಇಡೀ ಸಿನಿಮಾ ಕುರಿತೇ ಸಾಕಷ್ಟು ಎಕ್ಸೈಟ್‌ಮೆಂಟ್‌ ಇದೆ.

ಕೊನೆಗೆ ಸಿನಿಮಾ ಹೇಗೆ ಬರುತ್ತದೆ ಎಂಬುದು ಬೇರೆ. ಪ್ರತಿ ಸಿನಿಮಾವೂ ಇಪ್ಪತ್ತೈದು ವಾರ ಓಡುತ್ತದೆ ಎಂದುಕೊಂಡೇ ಆರಂಭಿಸುತ್ತೇವೆ. ಅವೆಲ್ಲದರ ಆಚೆಗೆ ನಾನು ಒಬ್ಬ ಒಳ್ಳೆಯ ಸಿನಿವ್ಯಾಮೋಹಿಯ ಜತೆ ಕೆಲಸ ಮಾಡುತ್ತಿದ್ದೇನೆ ಎಂಬ ಖುಷಿಯಂತೂ ನನಗಿದೆ.

‘ದಿ ವಿಲನ್‌’ ಯಾವಾಗ ಬಿಡುಗಡೆಯಾಗಬಹುದು?

ಒಳ್ಳೆಯ ಪ್ರಶ್ನೆ. ಆದರೆ ಈ ಪ್ರಶ್ನೆಗೆ ನಾನು ಕಳೆದ ಕೆಲವು ತಿಂಗಳುಗಳಿಂದ ಉತ್ತರ ಹುಡುಕುತ್ತಿದ್ದೇನೆ (ನಗು). ಪ್ರೇಮ್‌ ಅವರ ಸಿನಿಮಾವನ್ನು ಅವರಿಗೆ ಯಾವಾಗ ಸರಿ ಅನಿಸುತ್ತದೆಯೋ ಆಗಲೇ ಬಿಡುಗಡೆ ಮಾಡುವುದು. ಇನ್ನೊಂದು ಸ್ವಲ್ಪ ಕೆಲಸ ಮಾತ್ರ ಬಾಕಿ ಇದೆ.

**

ನಾನು ಈ ಹೊತ್ತಿನಲ್ಲಿ ಬದುಕುವವನು. ನನ್ನನ್ನು ಯಾರಾದರೂ ಬದುಕು ಎಂದರೆ ಏನು ಎಂದು ಕೇಳಿದರೆ ನಾನು ಈ ಕ್ಷಣ ಎಂದು ಉತ್ತರಿಸುತ್ತೇನೆ. ಹೀಗಿರುವಾಗ ಯಾರೂ ನನ್ನ ಮೇಲೆ ಒತ್ತಡ ಹೇರಲು ಹೆದರಿಸಲು ಸಾಧ್ಯವೇ ಇಲ್ಲ. ನೀವು ಒಬ್ಬ ಒಳ್ಳೆಯ ಸ್ನೇಹಿತನಾಗಿ ಮಾತನಾಡುತ್ತೀರಾದರೆ ನಾನು ಕೇಳಬಹುದು. ಆದರೆ ಒತ್ತಡಕ್ಕೆ ಮಣಿಯುವುದಿಲ್ಲ ಸುದೀಪ್‌ ಅನ್ನುವನನ್ನು ಯಾರೂ ಅಡ್ವಾಂಟೇಜ್‌ ತೆಗೆದುಕೊಳ್ಳುವುದು ಸಾಧ್ಯವಿಲ್ಲ.

**

ನನಗೆ ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡಿ ಅಭ್ಯಾಸವಿಲ್ಲ. ಒಮ್ಮೆ ಒಂದು ಕೆಲಸದ ಮೇಲೆ ಮಾತ್ರ ಏಕಾಗ್ರತೆ ಸಾಧಿಸಬಲ್ಲೆ. ಏನೇ ಮಾಡಿದರೂ ನೂರಕ್ಕೆ ನೂರರಷ್ಟು ಬದ್ಧನಾಗಿ ಮಾಡುತ್ತಿದ್ದೇನೆ.

-ಸುದೀಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT