ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಯವಿಟ್ಟು ಗಮನಿಸಿ’ ಇದು ಪಯಣದ ಕಥೆ!

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ರೋಹಿತ್ ಪದಕಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ‘ದಯವಿಟ್ಟು ಗಮನಿಸಿ’ ಶುಕ್ರವಾರ ತೆರೆಗೆ ಬರುತ್ತಿದೆ. ಇದು ಬದುಕಿನ ಸೂಕ್ಷ್ಮ ಮಜಲುಗಳನ್ನು ಹೇಳುವ, ಎಲ್ಲರ ಬದುಕಿನಲ್ಲೂ ಇದ್ದಿರಬಹುದಾದ ಪಯಣಗಳ ಕಥೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ.

ಸಿನಿಮಾ ಬಿಡುಗಡೆಯ ಸಿದ್ಧತೆಯಲ್ಲಿ ಇದ್ದ ರೋಹಿತ್ ಅವರು ‘ಚಂದನವನ’ದ ಜೊತೆ ‘ನಮ್ಮನ್ನು ಒಮ್ಮೆ ದಯವಿಟ್ಟು ಗಮನಿಸಿ’ ಎನ್ನುತ್ತಾ ಮಾತನಾಡಿದ್ದಾರೆ. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

‘ಮನುಷ್ಯನ ದಿನನಿತ್ಯದ ಜೀವನದಲ್ಲಿ ಒಬ್ಬೊಬ್ಬನಿಗೂ ಒಂದೊಂದು ಕಥೆ ಇರುತ್ತದೆ. ಪ್ರತಿ ವ್ಯಕ್ತಿಯದ್ದೂ ಒಂದೊಂದು ಬಗೆಯ ಪ್ರಯಾಣ ಇರುತ್ತದೆ. ಅಂತಹ ಕಥೆ ಹಾಗೂ ಪ್ರಯಾಣದ ಕುರಿತು ಮಾತನಾಡುವ ಸಿನಿಮಾ ಇದು’ ಎಂದು ಮಾತುಕತೆಯ ಆರಂಭದಲ್ಲಿ ಹೇಳಿದರು ರೋಹಿತ್. ತಮ್ಮ ಮಾತುಗಳನ್ನು ವಿವರಿಸಲು ಅವರು ರೈಲು ನಿಲ್ದಾಣದ ಉದಾಹರಣೆಯೊಂದನ್ನು ನೀಡಿದರು.

‘ರೈಲು ನಿಲ್ದಾಣದಲ್ಲಿ ಪ್ರಯಾಣ ಮಾಡುತ್ತಿರುವವರ ಬಗ್ಗೆ ಯಾರೂ ಗಮನಿಸಿರಲ್ಲ. ಸಾವಿರಾರು ಮಂದಿ ಒಂದೇ ರೈಲು ಏರುತ್ತಾರೆ. ಆದರೆ, ಅವರೆಲ್ಲರ ಹಿನ್ನೆಲೆಗಳು ಬೇರೆ ಬೇರೆ ಆಗಿರುತ್ತವೆ. ಅವರ ಜಾತಿಗಳು ಬೇರೆ ಬೇರೆಯವಾಗಿರುತ್ತವೆ. ಅವರದ್ದು ಬೇರೆ ಬೇರೆ ವಿಚಾರಗಳ ಬಗ್ಗೆ ಜಗಳ ಇದ್ದಿರಬಹುದು. ಆದರೆ ಆ ರೈಲು ಅವರೆಲ್ಲರನ್ನೂ ಒಂದೇ ನಿಲ್ದಾಣಕ್ಕೆ ಕರೆದೊಯ್ಯುತ್ತದೆ’ ಎಂಬ ಅಮೂರ್ತ ವಿವರಣೆಯನ್ನು ಸಿನಿಮಾ ಬಗ್ಗೆ ನೀಡಿದರು.

ವ್ಯಕ್ತಿಯ ಇಡೀ ಬದುಕಿನ ಪ್ರಯಾಣವನ್ನು ಈ ಸಿನಿಮಾ ಧ್ವನಿಸುತ್ತದೆ. ಬದುಕಿನ ಚಿಕ್ಕ–ಪುಟ್ಟ ವಿಷಯಗಳನ್ನು ಗಮನಿಸುತ್ತ ಸಾಗುವ ಸಿನಿಮಾ ಇದು ಎಂದು ಹೇಳಲು ಅವರು ಮರೆಯಲಿಲ್ಲ. ರೋಹಿತ್ ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ.

ಅಂದಹಾಗೆ ಸಿನಿಮಾವನ್ನು ಈ ರೀತಿಯಲ್ಲಿ ಮಾಡಬೇಕು ಅಂತ ಅನಿಸಿದ್ದು ಏಕೆ ಎಂದು ಪ್ರಶ್ನಿಸಿದಾಗ ಒಮ್ಮೆ ನಕ್ಕರು ರೋಹಿತ್. ‘ಒಂದರ್ಥದಲ್ಲಿ ಈ ಸಿನಿಮಾವನ್ನು ಮಾಡಲೇಬೇಕು ಅಂತ ಮಾಡಿದ್ದಲ್ಲ. ಈ ಸಿನಿಮಾ ಆಗಿಹೋಯಿತು ಎನ್ನಬಹುದು. ಇಂಥದ್ದೊಂದು ಸಿನಿಮಾ ಆಗಬೇಕಿತ್ತು. ಹಾಗಾಗಿ ಆಗಿಹೋಯಿತು. ಮನರಂಜನೆ ಮೂಲಕವೇ ಒಂದು ತತ್ವವನ್ನು ಹೇಳುವ ಸಿನಿಮಾ ಇದು’ ಎಂದರು.

ಈ ಸಿನಿಮಾದಲ್ಲಿ ನಾಲ್ಕು ಕಥೆಗಳು ಇವೆಯಂತೆ. ಒಂದು ಕಥೆ ಮಧ್ಯ ವಯಸ್ಸಿನ ಅವಿವಾಹಿತನೊಬ್ಬನದ್ದು. ಅವನ ಜೀವನದ ತೊಂದರೆಗಳು, ಇದ್ದಕ್ಕಿದ್ದಂತೆ ಮದುವೆ ಪ್ರಸ್ತಾವವೊಂದು ಎದುರಾದಾಗ ಆತನಿಗೆ ಆಗುವ ಫಜೀತಿಗಳನ್ನು ಈ ಕಥೆ ಹೇಳುತ್ತದೆಯಂತೆ.

ದಿನನಿತ್ಯದ ಜೀವನ ನಡೆಸುವುದಕ್ಕೂ ಕಷ್ಟಪಡುವ ಒಬ್ಬ ಕಳ್ಳನ ಬಗ್ಗೆ ಇನ್ನೊಂದು ಕಥೆ ಮಾತನಾಡುತ್ತದೆ. ಹಾಗೆಯೇ, ಇದರಲ್ಲಿ ಸ್ವಾಮೀಜಿಯೊಬ್ಬರ ಕಥೆಯೂ ಇದೆ. ಈ ಸ್ವಾಮೀಜಿ ಬೇರೆ ಬೇರೆ ಧರ್ಮಗಳನ್ನು ಗಮನಿಸಿ, ಕೊನೆಯಲ್ಲಿ ವಿಶ್ವಮಾನವ ಆಗುತ್ತಾರೆ. ಆದರೆ, ವಿಶ್ವಮಾನವನಾಗಿಯೇ ಉಳಿಯಲು ಅವರಿಗೆ ಸಾಧ್ಯವಾಗುತ್ತದೆಯೇ ಎಂಬುದು ಮೂರನೆಯ ಕಥೆ. ಇದೊಂದು ಫನ್ನಿ ಡ್ರಾಮಾ ಎಂದು ರೋಹಿತ್ ತಿಳಿಸಿದರು.

ನಾಲ್ಕನೆಯ ಕಥೆ ಕಾರ್ಪೊರೇಟ್ ವ್ಯವಸ್ಥೆಯಲ್ಲಿ ಕೆಲಸ ಮಾಡುವವನಿಗೆ ಸಂಬಂಧಿಸಿದ್ದು. ಈ ವ್ಯಕ್ತಿಯ ಬಳಿ ಎಲ್ಲವೂ ಇರುತ್ತದೆ. ಆದರೆ ಖುಷಿ ಮಾತ್ರ ಇರುವುದಿಲ್ಲ. ಅವನ ಬದುಕಿನ ಕಥೆ ಈ ಸಿನಿಮಾದಲ್ಲಿ ಇದೆ. ಈ ನಾಲ್ಕೂ ಜನ ಏನನ್ನೋ ಹುಡುಕಿಕೊಂಡು ಹೋಗುತ್ತಿರುತ್ತಾರಂತೆ. ಅವರ ಹುಡುಕಾಟ ಏನು ಎಂಬುದನ್ನು ಸಿನಿಮಾ ವೀಕ್ಷಿಸಿ ತಿಳಿಯಬೇಕು!

ನಮ್ಮ–ನಿಮ್ಮ ಕಥೆ

‘ಈ ಸಿನಿಮಾದ ಕಥೆ ನನ್ನ ಜೀವನದಲ್ಲಿ, ನಿಮ್ಮ ಜೀವನದಲ್ಲಿ ಆಗಿದ್ದಿರಬಹುದು. ಆದರೆ ಆ ಕಥೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಿರುವುದಿಲ್ಲ. ಈ ಸಿನಿಮಾದಲ್ಲಿ ಇರುವ ವಿಷಯಗಳನ್ನು ಜನರ ಮುಂದಿಟ್ಟಾಗ ಅವರಲ್ಲಿ ಒಂದು ಮೌನ ಸೃಷ್ಟಿಯಾಗುತ್ತದೆ. ಆಲೋಚನೆಗೆ ಇಳಿಸುವಂತಹ ಮೌನ ಅದು. ಒಂದು ಉತ್ತಮ ಪುಸ್ತಕ ಓದಿದಾಗ ತೃಪ್ತಿಯ ಮೌನ ಆವರಿಸುತ್ತದೆ. ಅಂತಹ ಮೌನವನ್ನು ನಮ್ಮ ಸಿನಿಮಾ ಕಟ್ಟಿಕೊಡುತ್ತದೆ’ ಎಂದರು ವಿಶ್ವಾಸದಿಂದ.

ಈ ಸಿನಿಮಾಕ್ಕಾಗಿ ರೋಹಿತ್ ಮತ್ತು ಅವರ ತಂಡ 55 ದಿನ ಚಿತ್ರೀಕರಣ ನಡೆಸಿದೆ. ದೆಹಲಿ, ಪಂಜಾಬ್, ಲಡಾಕ್, ಶ್ರೀನಗರ, ಜಮ್ಮು ಮತ್ತು ಕಾಶ್ಮೀರ, ಕಳಸ, ಚಿಕ್ಕಮಗಳೂರು ಕಡೆ ಚಿತ್ರೀಕರಣ ನಡೆದಿದೆಯಂತೆ.

ಹಿಂದೊಮ್ಮೆ ‘ದಯವಿಟ್ಟು ಗಮನಿಸಿ’ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ರೋಹಿತ್ ತೀರಾ ಭಾವುಕರಾಗಿದ್ದರು. ಹಾಗೆ ಆಗಿದ್ದೇಕೆ ಎಂದು ಪ್ರಶ್ನಿಸಿದಾಗ, ‘ಈ ಸಿನಿಮಾಕ್ಕಾಗಿ ಕೆಲಸ ಮಾಡಿದ ಪ್ರತಿ ವ್ಯಕ್ತಿಯಲ್ಲೂ ಒಂದು ಪಯಣ ಇತ್ತು. ನಾವು ಯಾರೂ ಸುಲಭದಲ್ಲಿ ಈ ಸಿನಿಮಾ ಮಾಡಿಲ್ಲ. ಈ ಸಿನಿಮಾದ ಕಥೆಯ ಆಳ ಹಾಗೂ ನಾವು ಅದಕ್ಕಾಗಿ ಹಾಕಿರುವ ಶ್ರಮ ನನ್ನನ್ನು ಭಾವುಕವಾಗಿಸುತ್ತದೆ’ ಎಂದರು.

ಇಂಥದ್ದೊಂದು ಕಥೆಯನ್ನು ಹೇಳಹೊರಟಿರುವುದರ ಹಿಂದೆ ರೋಹಿತ್ ಅವರಿಗೆ ಒಂದು ಕಾರಣ ಇದೆ. ಅದನ್ನು ಅವರು ಹೇಳುವುದು ಹೀಗೆ: ‘ನಾನು ಬಿಗ್‌ ಬಾಸ್‌ನ ಮೊದಲ ಸೀಸನ್‌ನಲ್ಲಿ ಕೆಲಸ ಮಾಡಿದ್ದೆ. ಅದರಲ್ಲಿ ಭಾಗವಹಿಸಿದ್ದವರು, ನೂರು ದಿನಗಳ ಅವಧಿಯಲ್ಲಿ ಹೇಗಿದ್ದರು ಎಂಬುದನ್ನು ತೋರಿಸಿದಾಗ ಕೆಲವರು ಮೌನವಾಗಿಬಿಟ್ಟರು. ಅದನ್ನು ಕಂಡ ನನಗೆ, ನನ್ನ ಜೀವನವನ್ನೂ ಯಾರಾದರೂ ಹೀಗೆ ತೋರಿಸಿದರೆ ಎಂಬ ಪ್ರಶ್ನೆ ಮೂಡಿತು. ಅದು ಈ ಸಿನಿಮಾ ಮಾಡಲು ಒಂದು ಕಾರಣವಾಯಿತು.’

ಸಾಹಿತಿ ಜಯಂತ ಕಾಯ್ಕಿಣಿ ಅವರ ಒಂದು ಕಥೆಯನ್ನು ರೋಹಿತ್ ಅವರು ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ. ಮೇಲೆ ಹೇಳಿದ ನಾಲ್ಕು ಕಥೆಗಳ ಪೈಕಿ ಅದೂ ಒಂದು. ಕಾಯ್ಕಿಣಿ ಅವರ ಕಥೆಯನ್ನು ಯಥಾವತ್ತಾಗಿ ಬಳಸಲಾಗಿದೆ ಎಂದರು ರೋಹಿತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT