ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರೆಗಳ ಗುಂಪಿಂದ ಬಂದ ಹೂವಾಡಗಿತ್ತಿಯರು...

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಲಂಬಾಣಿಗರಿಗೆ ದೀಪಾವಳಿ ಬಹು ದೊಡ್ಡ ಹಬ್ಬ. ಅಮಾವಾಸ್ಯೆಯ ಹಿಂದಿನ ದಿನದ ರಾತ್ರಿ ಎಲ್ಲರೂ ಸೇರಿ ಆ ವರ್ಷದಲ್ಲಿ ಮೃತಪಟ್ಟವರ (ದೀಪಾವಳಿಯ ಮೊದಲು) ಮನೆಗಳಿಗೆ ತೆರಳಿ ಅವರಿಗೆ ಸಾಂತ್ವನ ಹೇಳುವುದರೊಂದಿಗೆ ‘ಬನ್ನಿ ನಾವು ನೀವು ಸೇರಿ ದೀಪಾವಳಿ ಆಚರಿಸೋಣ,’ ಎಂದು ಹೇಳಿ ಬರುತ್ತಾರೆ.(ಮಣ್ಣೆತ್ತಿನ ಅಮಾವಾಸ್ಯೆ ನಂತರ ಆಚರಿಸುವ ‘ಸೀತಾಳ’ ಹಬ್ಬದಲ್ಲೂ ಹೀಗೆ ಸಾಂತ್ವನ ಹೇಳಲಾಗುತ್ತದೆ) ಎಲ್ಲರೂ ತಮ್ಮ ಮನೆ ಎದುರಿನ ಅಂಗಳವನ್ನು ಸಾರಿಸಿ, ಇಡೀ ತಾಂಡಾವನ್ನೇ ತಳಿರು ತೋರಣಗಳಿಂದ ಅಲಂಕರಿಸುತ್ತಾರೆ.

ಅಮಾವಾಸ್ಯೆಯ ದಿನ ಬೆಳಿಗ್ಗೆ ಕಾರಭಾರಿಯಿಂದ ಎಲ್ಲರನ್ನೂ ಕರೆ ತರುತ್ತಾರೆ. ತಾಂಡಾದ ಗೌಡನ ಮನೆಯ ಮುಂದೆ ಕಾಳಿಕಾ ದೇವಿಗಾಗಿ ಮೀಸಲಿಟ್ಟ ಕುರಿಯನ್ನು ಬಲಿ ಕೊಟ್ಟು, ದೇವಿಗೆ ರಕ್ತದ ಅಭಿಷೇಕ ಮಾಡುತ್ತಾರೆ. ಆ ದಿನ ರಾತ್ರಿ ಊಟಕ್ಕೆ ಮಾಂಸಾಹಾರದ ಅಡುಗೆ ಮಾಡಲಾಗುತ್ತದೆ. ತಾಂಡಾದ ದನ ಕಾಯುವ ಹುಡುಗರು ತಮ್ಮ ದನಗಳಿಗೆ ಒಳ್ಳೆಯದಾಗಲೆಂದು ಅವುಗಳಿಗೆ ಜೂಲಾಹಾಕಿ, ಕೊಂಬಿಗೆ ಬಣ್ಣವನ್ನು ಹಚ್ಚಿ, ಡಬ್ಬಿಗಳನ್ನು ಬಾರಿಸಿ ಅವು ಬೆದರಿ ಓಡುವಂತೆ ಮಾಡಿ ಸಂಭ್ರಮಿಸುತ್ತಾರೆ. ಸಂಪತ್ತಿನ ಲಕ್ಷಣವೆಂದು ಭಾವಿಸಿ ಆ ದಿನ ದನಗಳ ಸಗಣಿಯನ್ನು ಗುಡಿಸುವುದಿಲ್ಲ.

ಮರುದಿನ ಪಾಡ್ಯದ ದಿನ ಸಗಣಿಯಿಂದ ಮಾಡಿದ ಪಾಂಡವರನ್ನು ಮಾಳಿಗೆ ಮೇಲೆ ಇಡುತ್ತಾರೆ. ಆ ಬಳಿಕ ಸಗಣಿ ಗುಡಿಸುತ್ತಾರೆ.
ಅಮಾವಾಸ್ಯೆಯ ಸಂಜೆ ತಾಂಡಾದ ದನಗಾಹಿ ಹುಡುಗರು ಅಡವಿಯಿಂದ ತಂದ ಗುಬ್ಬಿಯ ಬಚ್ಚು(ಗೂಡು)ಗಳಿಗೆ ಬೆಂಕಿ ಹಚ್ಚಿ ‘ಅಗ್ಝಡ, ಭಗ್ಝಡ, ಗಂಗೊಡ್ಝಡ, ಜುಂಯಿಝಡ’(ಉಣ್ಣೆಗಳು, ಹೇನುಗಳು, ಉದುರಿ ನಾಶವಾಗಲಿ, ನಮ್ಮ ದನಕರುಗಳು ಸುಖವಾಗಿ ಇರಲಿ) ಎಂದು ಹಾಡುತ್ತಾ ತಾಂಡಾವನ್ನು ಸುತ್ತುತ್ತಾರೆ.

ಕೆಲವು ಹುಡುಗರು ತಮ್ಮ ಮನೆಯಲ್ಲಿ ಧಾನ್ಯಗಳನ್ನು ಕೇರುವ ಮೊರವನ್ನು ಹುಟ್ಟಿನಿಂದ ಬಡಿಯುತ್ತಾ ‘ಆಳಸ್ ಜಾಯಿಸ್, ಪಾಳಸ್ ಜಾಯಿಸ್, ಉಟ್ ಲಂಡಿ ಬಾರ್ ಭೇಸ್’(ನಮ್ಮಲ್ಲಿರುವ ಆಲಸ್ಯ, ದರಿದ್ರತನವೆಲ್ಲವೂ ನಾಶವಾಗಿ ಹೋಗಿ ಹೊಸ ಹುರುಪು ಬರಲಿ) ಎಂದು ಹೇಳುತ್ತಾ ತಾಂಡಾವನ್ನು ಸುತ್ತುತ್ತಾರೆ.

ಲಂಬಾಣಿ ಮಹಿಳೆಯರು ಬುಟ್ಟಿಗಳೊಂದಿಗೆ ಅಡವಿಗೆ ತೆರಳಿ ಹೂಗಳನ್ನು ತರಲು ಹೋಗುತ್ತಾರೆ. ಆ ಸಂದರ್ಭದಲ್ಲಿ ಅದೇ ವರ್ಷ ಲಗ್ನವಾಗಲಿರುವ ಹುಡುಗಿಯರು ಮುಂದಿನ ದೀಪಾವಳಿ ತಮಗೆ ಇಂಥ ಅವಕಾಶ ಸಿಗುವುದಿಲ್ಲ, ಇದೇ ಕೊನೆಯ ದೀಪಾವಳಿ ಎಂದು ನೆನೆಸಿಕೊಂಡು ದುಃಖದಿಂದ ಅಳುತ್ತಾರೆ. ಹೂವುಗಳನ್ನು ಹರಿಯಲು ಕಾಡಿಗೆ ಹೋಗುವ ಹುಡುಗಿಯರು ಚಂದ್ರ ಮತ್ತು ತಾರೆಗಳ ಗುಂಪಿನಿಂದ ಈ ಹೂವಾಡಗಿತ್ತಿಯರ ಗುಂಪು ಬಂದಿದೆ. ಎಂದು ಹಾಡುತ್ತಾ ತಾಂಡಾದ ನಾಯಕನ ಮನೆಯ ಮುಂದೆ ಬಂದು ಹೂವಿನ ಬುಟ್ಟಿ ಇಳಿಸಿ, ನೃತ್ಯ ಮಾಡುತ್ತಾರೆ.

ಪಾಡ್ಯದ ದಿನವನ್ನು ತಾಂಡಾದವರು ‘ಹಿರಿಯರ ಹಬ್ಬ’ ಎಂದು ಪರಿಗಣಿಸಿ ಮಡಿದ ಹಿರಿಯರಿಗೆ ಸಿಹಿಯನ್ನು ಎಡೆ ಹಿಡಿದು, ತಮ್ಮ ಬಂಧು ಬಳಗದವರನ್ನು ಕರೆ ತಂದು ಎಲ್ಲರೂ ಸೇರಿ ಊಟ ಮಾಡುತ್ತಾರೆ. ಸಂಜೆ ಸೇವಾಲಾಲನ ಗುಡಿಯ ಮುಂದೆ ಸೇರಿ ಎಲ್ಲರೂ ಭಜನೆ ಮಾಡುತ್ತಾರೆ.

**

ದೀಪ ಬೆಳಗುವುದು

ತಾಂಡದಲ್ಲಿ ಲಗ್ನವಾಗದೆ ಇರುವ ಹುಡುಗಿಯರು ತಮ್ಮ ಮನೆಯಿಂದ ವಿಶೇಷ ಹಣತೆಯಲ್ಲಿ ದೀಪ ಹಚ್ಚಿಕೊಂಡು ಹೊಸ ಉಡಿಗೆ ತೊಟ್ಟು ಬರುತ್ತಾರೆ. ಅಲ್ಲಿ ಎಲ್ಲಾ ಯುವಕರು, ಮುದುಕರು, ಹೆಂಗಸರೆಲ್ಲಾ ಸೇರಿ ಕುಳಿತಿರುತ್ತಾರೆ. ಆಗ ಎಲ್ಲರೂ ಸರತಿಯಂತೆ ಅಣ್ಣನಿದ್ದರೆ ‘ವರ್ಷ ಕಡ್ದವಾಳಿ ಭೀಯಾ ತೋನ ಮೇರ’ ( ವರ್ಷಕ್ಕೊಮ್ಮೆ ಬರುವ ಈ ದೀಪಾವಳಿ ನಿನಗೆ ಮಂಗಳವನ್ನು ನೀಡಲಿ ಅಣ್ಣಾ)ಎಂದೂ, ಅಕ್ಕ ಇದ್ದರೆ ‘ಭಾಯಿ’, ಕಾಕಾ ಇದ್ದರೆ ‘ಕಾಕಾ’ ಎಂದು ಹೇಳುತ್ತಾ ದೀಪವನ್ನು ಬೆಳಗುತ್ತಾರೆ. ಬೆಳಗಿಸಿಕೊಂಡವರು ಕಾಣಿಕೆಯಾಗಿ ಹಣವನ್ನೊ ಇಲ್ಲವೆ ಬೆಲ್ಲದ ಚೂರನ್ನೊ ಹಣತೆ ತಟ್ಟೆಯಲ್ಲಿ ಹಾಕುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT