ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಧಾನ ವನ’ ನಿರ್ಮಿಸಿ

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಿಧಾನಸೌಧದ ವಜ್ರ ಮಹೋತ್ಸವದ ಆಚರಣೆಯ ವಿವಾದದ ಮಧ್ಯೆ ನನ್ನ ಕೆಲವು ಪುಟ್ಟ ಸಲಹೆಗಳಿವೆ. ಇದಕ್ಕೆ ಕೋಟಿಗಟ್ಟಲೆ ಹಣ ಬೇಕಾಗಿಲ್ಲ; ಆದರೆ ಶತಮಾನೋತ್ಸವದಲ್ಲೂ ನೆನಪಿಡುವಂಥ ಕೆಲಸ ಇದಾಗುತ್ತದೆ:

1. ಇಡೀ ವಿಧಾನಸೌಧ ಮತ್ತು ಸುತ್ತಲಿನ ಉದ್ಯಾನಕ್ಕೆ ಬೆಸ್ಕಾಮ್ ವಿದ್ಯುತ್ ಸಂಪರ್ಕ ತಪ್ಪಿಸಿ; ಎಲ್ಲ ಯಂತ್ರೋಪಕರಣಗಳೂ ಆಲಂಕಾರಿಕ ದೀಪಗಳೂ ಸೌರ ವಿದ್ಯುತ್ತಿನಿಂದಲೇ ನಡೆಯುವಂತೆ ಮಾಡಿ. ಅದು ಸಾಧ್ಯವಿದೆ.

2. ಜಲಮಂಡಳಿಯ ಸಂಪರ್ಕ ತಪ್ಪಿಸಿ. ಸಿಬ್ಬಂದಿ ಮತ್ತು ಶಾಸಕರು ಬಳಸಿ ಚೆಲ್ಲಿದ ನೀರನ್ನೇ ಮತ್ತೆ ಸಂಸ್ಕರಿಸಿ ಕುಡಿಯುವಂತೆ ಮಾಡಿ. ಕಡಿಮೆ ಬಿದ್ದರೆ ಮಾತ್ರ ಮಳೆಕೊಯ್ಲಿನ ನೀರನ್ನು ಬಳಸಲಿ. ತಂತ್ರಜ್ಞಾನ ಲಭ್ಯವಿದೆ. ಸಿಂಗಪುರದ ಶಾಸಕರು ಇದನ್ನು ಮಾಡಿದ್ದಾರೆ.

3. ವಿಧಾನಸೌಧದಿಂದ ಘನತ್ಯಾಜ್ಯಗಳು ಹೊರಕ್ಕೆ ಹೋಗುವುದನ್ನು ತಪ್ಪಿಸಿ. ಪ್ಲಾಸ್ಟಿಕ್ ಮತ್ತು ಕಾಗದಗಳನ್ನು ರೀಸೈಕ್ಲಿಂಗ್ ಮಾಡಿ. ಗಾಜು, ಪಿಂಗಾಣಿಗಳನ್ನು ಕಲಾಕೃತಿಗಳನ್ನಾಗಿ ಅಲ್ಲೇ ಪ್ರದರ್ಶನಕ್ಕೆ ಇಡಿ.

4. ಉದ್ಯಾನಕ್ಕೆ ಕೆಮಿಕಲ್ ಗೊಬ್ಬರ ಬಳಕೆಯನ್ನು ತಪ್ಪಿಸಿ. ಟಾಯ್ಲೆಟ್‍ಗಳಲ್ಲಿನ ತ್ಯಾಜ್ಯದಿಂದ ಅನಿಲವನ್ನು ಉತ್ಪಾದಿಸಿ, ನಂತರ ಉಳಿಯುವ ಪೋಷಕಾಂಶಗಳನ್ನೇ ಸಂಸ್ಕರಿಸಿ ಸಸ್ಯಗಳಿಗೆ ಬಳಸಿ. ಶ್ರೇಷ್ಠ ಗೊಬ್ಬರ ಅದು.

5. ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಒಂದು ‘ಶಾಸಕರ ವನ’ವನ್ನು ನಿರ್ಮಾಣ ಮಾಡಿ. ಪ್ರತಿ ಶಾಸಕನ ಹೆಸರಿನಲ್ಲಿ ಅಲ್ಲಿ ಒಂದೊಂದು ಮರವನ್ನು ಬೆಳೆಸಿ. ಇದುವರೆಗೆ ಆಗಿ ಹೋದ ಹಾಗೂ ಮುಂದಿನ 40 ವರ್ಷಗಳ ಎಲ್ಲ ಶಾಸಕರ ಹೆಸರಿನಲ್ಲೂ ಮರ ಬೆಳೆಸಲು ಅಲ್ಲಿ ಜಾಗವಿದೆ. ಅಧಿಕಾರಿಗಳ ಹೆಸರಿನಲ್ಲಿ ಪ್ರತ್ಯೇಕ ವನವನ್ನೂ ಅಲ್ಲಿ ನಿರ್ಮಿಸಬಹುದು. ಎರಡನ್ನೂ ಸೇರಿಸಿ ‘ವಿಧಾನ ವನ’ ಎಂದು ಹೆಸರಿಸಬಹುದು.

6. ಇವೆಲ್ಲ ಪರಿಸರಸ್ನೇಹಿ ಕೆಲಸಗಳ ವಿವರಗಳನ್ನು ಒಂದು ಫಲಕದಲ್ಲಿ ಬರೆದು ಸೂಕ್ತ ಕಲಾಕೃತಿಯ ಜೊತೆಗೆ ವಿಧಾನಸೌಧದ ಬಳಿ ನಿಲ್ಲಿಸಿ. ಪ್ರವಾಸಿಗಳು ಹೆಮ್ಮೆಯಿಂದ ಈ ‘ವಜ್ರಪೀಠ’ದ ಎದುರು ನಿಂತು ಫೋಟೊ ತೆಗೆಸಿಕೊಳ್ಳುವಂತಾಗಲಿ. ನಾಳಿನ ಮಾದರಿ ಸಮಾಜ ನಿರ್ಮಾಣಕ್ಕೆ ಮೊದಲ ನ್ಯಾಸವನ್ನು ನಿರ್ಮಿಸಿದ ಹೆಮ್ಮೆ ನಮ್ಮ ವಿಧಾನಸೌಧಕ್ಕೆ ಬರಲಿ. ಅದು ಜಗತ್ತಿಗೆಲ್ಲ ಗೊತ್ತಾಗುತ್ತಿರಲಿ.

ಈ ಯಾವುದಕ್ಕೂ ದೊಡ್ಡ ಮೊತ್ತದ ಹಣ ಬೇಕಾಗಿಲ್ಲ. ಇಚ್ಛಾಶಕ್ತಿಯೊಂದೇ ಸಾಕು.

ನಾಗೇಶ ಹೆಗಡೆ, ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT