ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಂಡಿ ಗೇಟ್‌’ಗಳು ಬೇಕು

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿದ್ದು, ಬೆಂಗಳೂರಿನ ಉಪ್ಪನ್ನವನ್ನು ತಿಂದು ಬೆಂಗಳೂರನ್ನು ಬಯ್ಯದವರು ಯಾರಾದರೂ ಇದ್ದಾರೆಯೇ? ಬೆಂಗಳೂರಿನ ನಿವಾಸಿಗಳೂ ಬಯ್ತಾರೆ, ಬೆಂಗಳೂರಿಗೆ ಹೋಗಿ ಬಂದವರೂ ಬಯ್ತಾರೆ. ಆದರೆ ‘ಈ ಬೆಂಗಳೂರಿನ ಸಹವಾಸ ಸಾಕಪ್ಪಾ’ ಎಂದವರು ಅಲ್ಲಿಂದ ಮನೆ ಬಿಟ್ಟು ಹೊರಡುವುದಿಲ್ಲ! ಹಳ್ಳಿಯಲ್ಲಿ ಬದುಕು ಭದ್ರವಾಗಿಲ್ಲ ಎಂದವರು ಜೀವನೋಪಾಯಕ್ಕೆ ಬೆಂಗಳೂರು ಬಸ್ಸು ಹತ್ತದೇ ಇರುವುದಿಲ್ಲ! ಮಾತು ಮತ್ತು ಕೃತಿಯ ನಡುವಿನ ವಿರೋಧಾಭಾಸಕ್ಕೆ ಇದೊಂದು ಉತ್ತಮ ಉದಾಹರಣೆ.

ಇಂತಹ ಮಹಾನಗರದಲ್ಲಿ ಈ ವರ್ಷದ ದಸರಾ ಕಳೆದು ದೀಪಾವಳಿಯ ನಡುವೆ ಬಿದ್ದ ಅಗಣಿತ ಮಳೆ ಬೆಂಗಳೂರಿಗರನ್ನು ಹೈರಾಣಾಗಿಸಿತು. ಕೆಲವು ಮನೆಗಳಲ್ಲಿ ಸೂತಕದ ಛಾಯೆ ಆವರಿಸಿತು. ರಸ್ತೆಗಳೇ ನದಿಗಳಂತಾಗಿ ಭೋರ್ಗರೆದು ಹರಿವ ಪ್ರವಾಹದ ನಡುವೆ ಅಸುರಕ್ಷತೆಯ ಡಿಗ್ರಿ ಏರಿತು. ಸ್ವಲ್ಪ ಕಾಲು ಜಾರಿದರೂ ನೆಲೆ ತಪ್ಪಿ ಪ್ರವಾಹದಲ್ಲಿ ಕೊಚ್ಚಿ ಹೋಗುವ ಭಯದಿಂದ ಅನೇಕ ಹೃದಯಗಳು ಕಂಪಿಸುತ್ತಿದ್ದರೆ ನಿಜಕ್ಕೂ ಕಾಲು ಜಾರಿ ಜನರು ಕೊಚ್ಚಿಯೇ ಹೋದ ಘಟನೆ ಹೃದಯ ವಿದ್ರಾವಕ. ಆದರೆ ಕಾಲು ಜಾರಲು ಕಾರಣವೇನು? ಅವರು ಹಾಗೆ ಸಾಯಬೇಕಾಗಿತ್ತೇ? ಅವರ ಸಾವಿಗೆ ಕಾರಣರು ಯಾರು? ಈ ಬಗೆಯ ಕೃತಕ ಪ್ರವಾಹಗಳನ್ನು ತಪ್ಪಿಸಲು ಸಾಧ್ಯವಿರಲಿಲ್ಲವೇ? ಎಂಥೆಂಥ ಟೆಕ್ನಾಲಜಿ ಇರುವ ನಮ್ಮಲ್ಲಿ ಇದಕ್ಕೊಂದು ಉಪಾಯ ಇಲ್ಲವೇ? ಅಥವಾ ಸತ್ತವರದ್ದು ವಿಧಿ, ಆಯುಷ್ಯ ಮುಗಿದಿತ್ತು ಎನ್ನೋಣವೇ? ಈ ಹಿಂದಿನ ಮಳೆಗೆ ಅಷ್ಟು ಜನ ಬಲಿ, ಈ ಸಲದ ಮಳೆಗೆ ಇಷ್ಟು ಬಲಿ, ಮುಂದಿನ ಮಳೆಗೆ ಇನ್ನೆಷ್ಟು ಬಲಿ? ಯಾರು ಅದಕ್ಕೆ ಸಿದ್ಧರಾಗುವವರು? ಯಾರವರು, ‘ಆಯಸ್ಸು ಮುಗಿದು ನೀರಿಗೆ ಬಿದ್ದು ಸಾವು’ ಅಂತ ಹಣೆಬರಹ ಬರೆಸಿಕೊಂಡವರು?

ಸಾಯುವವರದ್ದು ಮಾತ್ರ ಪ್ರಶ್ನೆ ಅಲ್ಲ, ಬದುಕಿರುವವರೂ ಅನುಭವಿಸಬೇಕಾದ ಯಾತನೆ ಅಷ್ಟಿಷ್ಟಲ್ಲ. ನಡುರಸ್ತೆಗಳಲ್ಲಿ, ದೊಡ್ಡದಾದ ಸರ್ಕಲ್‌ಗಳಲ್ಲಿ, ಏಕಮುಖ ಸಂಚಾರದ ಮಾರ್ಗಗಳಲ್ಲಿ ಅಕಸ್ಮಾತ್‌ ಸುರಿದ ಮಳೆಗೆ ಸಿಲುಕಿದ ವಾಹನಗಳು ಮುಂದಕ್ಕೂ ಚಲಿಸಲಾಗದೆ ಹಿಂದಕ್ಕೂ ತಿರುಗಿ ಹೋಗಲಾಗದೆ ಗಂಟೆಗಟ್ಟಲೆ ಇದ್ದಲ್ಲೇ ಇರಬೇಕಾದ ಸ್ಥಿತಿ ಅಂದರೆ ಅದೆಷ್ಟು ದುಸ್ತರವಾದುದು! ಮೇಲಿನಿಂದ ಬೀಳುವ ಧಾರಾಕಾರ ಮಳೆಗೆ ದ್ವಿಚಕ್ರ ವಾಹನಗಳಲ್ಲಿರುವವರ ಕಳವಳ ಹೇಳತೀರದ್ದು. ಮೊಬೈಲ್‌ನಲ್ಲಿ ಮನೆಗೆ ತಿಳಿಸುವಂತೆಯೂ ಇಲ್ಲ. ಕಾರು, ಬಸ್ಸುಗಳಲ್ಲಿದ್ದವರಿಗೂ ಮೊಬೈಲ್ ಸಿಗ್ನಲ್ ಸಿಗದೆ ಆಗುವ ಪರದಾಟದ ನೋವು ಸಣ್ಣದಲ್ಲ. ಗಂಡ ಒಂದೆಡೆ, ಹೆಂಡತಿ ಮತ್ತೊಂದೆಡೆ ರಸ್ತೆಗಳಲ್ಲಿ ಸಿಕ್ಕಿಬಿದ್ದಿದ್ದರೆ ಪರಸ್ಪರ ಸಂಪರ್ಕ ಸಿಕ್ಕಿದರೂ ಸುರಕ್ಷತೆಯ ಕುರಿತಾದ ಕಾತರದ ಕೊರೆತ ಅಸಹನೀಯ. ಇನ್ನು ಸುರಿವ ಮಳೆಗೆ ತುಂಬುವ ನೀರು ಕಾಲಿನಡಿಯಲ್ಲಿ ಏರುತ್ತ, ವಾಹನದ ಚಕ್ರಗಳು ಮುಳುಗುತ್ತ, ಕೊನೆಗೆ ವಾಹನವೂ ತೇಲುವ ಮಟ್ಟಕ್ಕೆ ಬರುವುದು ದಯನೀಯ ಸ್ಥಿತಿ. ಇಂತಹ ದುರಂತಮಯ ರಸ್ತೆ ನಿರ್ಮಾಣ ಮತ್ತು ಬೇಜವಾಬ್ದಾರಿ ನಿರ್ವಹಣೆ ಮಾಡುತ್ತ ಜನರನ್ನು ಬಲಿಕೊಡುತ್ತಿರುವವರು ಯಾರು?

ಬೆಂಗಳೂರು ಹಾಗೂ ಅಂತಹ ನಗರಗಳ ರಸ್ತೆಗಳಲ್ಲಿ ಸಾಧಾರಣ ಮಳೆಗೂ ರಸ್ತೆಗಳು ತುಂಬಿ ಸಂಚಾರಕ್ಕೆ ಅಡಚಣೆ ಉಂಟಾಗುವುದಕ್ಕೆ ಕಾರಣವೇನು? ದೊಡ್ಡ ಮಳೆ ಬಂದರಂತೂ ರಸ್ತೆಗಳು ನದಿಗಳಂತಾಗುವುದೇಕೆ? ತಗ್ಗಿನ ಸ್ಥಳಗಳಲ್ಲಿ ನೀರು ತುಂಬಿ ಮನೆಗಳಿಂದ ನೀರನ್ನು ರಾತ್ರಿ ಇಡೀ ಹೊರಚೆಲ್ಲುವುದು, ಮನೆಗಳ ಜಗಲಿ ಹಾಗೂ ದೇವಸ್ಥಾನಗಳ ಅಂಗಳಗಳಿಗೆ ಕೊಳಚೆ ನೀರು ನುಗ್ಗುವುದು ಇತ್ಯಾದಿಗಳೆಲ್ಲಾ ಇತ್ತೀಚಿನ ಪ್ರತಿಯೊಂದು ದೊಡ್ಡ ಮಳೆಯ ವಾರ್ತೆಯೊಂದಿಗೆ ಟಿ.ವಿ.ಗಳಲ್ಲಿ ತೋರಿಸುವ ಬೆಂಗಳೂರಿನ ಚಿತ್ರಣಗಳಾಗಿವೆ. ಮಹಾನಗರ ಪಾಲಿಕೆಯ ಅಧಿಕಾರಿಗಳು, ವಿಪತ್ತು ನಿರ್ವಹಣಾ ಘಟಕಗಳು ಹಾಗೂ ಪುರುಸೊತ್ತಿದ್ದರೆ ಮೇಯರ್, ಕಾರ್ಪೊರೇಟರ್‌ ಗಳಾದಿಯಾಗಿ ಅವಘಡಗಳಾದ ಸ್ಥಳ ಪರಿಶೀಲನೆ ಮಾಡಿ ಮುಂದಿನ ದುರಸ್ತಿ ಕಾರ್ಯದ ಬಗ್ಗೆ ಯೋಜನೆ ಹಾಕುತ್ತಾರೆ. ಆಮೇಲೆ ಮಳೆಯಿಲ್ಲದ ನಾಲ್ಕು ದಿನ ಕಳೆದಾಗ ಎಲ್ಲವೂ ಮರೆತು ಹೋಗುತ್ತದೆ. ಮತ್ತೊಂದು ದೊಡ್ಡ ಮಳೆಯೇ ಪರಿಹಾರ ಕಾರ್ಯಗಳು ಬಾಕಿ ಇರುವುದನ್ನು ನೆನಪು ಮಾಡಿಕೊಡಬೇಕಾಗುತ್ತದೆ. ಏಕೆಂದರೆ ಸಂಬಂಧಿಸಿದ ಅಧಿಕಾರಿ-ಎಂಜಿನಿಯರ್‌ಗಳಿಗೆ ಜನರ ಕ್ಷೇಮದ ಹೊಣೆ ತಮ್ಮ ಮೇಲಿದೆ ಎಂಬ ಎಚ್ಚರವೇ ಇಲ್ಲ.

ಈಗ ಮಾಡಬೇಕಾದ್ದೇನು ಎಂಬುದರ ನೀಲಿನಕ್ಷೆ ಅಗತ್ಯ. ಬೆಂಗಳೂರಿನ ಭೌಗೋಳಿಕ ಸ್ವರೂಪವನ್ನು ಲಕ್ಷಿಸಿ ಸಹಜವಾದ ತಗ್ಗುಗಳಿರುವಲ್ಲಿಗೆ ನೀರು ಹರಿದು ಹೋಗುವಂತೆ ಮಾಡಬೇಕು. ಹೀಗೆ ನೀರು ತಲುಪುವ ಜಾಗ ಹಿಂದಿನ ಕಾಲದ ಕೆರೆ ಅಥವಾ ಮಳೆಗಾಲದ ತಾತ್ಕಾಲಿಕ ಕೆರೆಯಾಗಿರುತ್ತದೆ. ಒಂದು ವೇಳೆ ಅಲ್ಲಿ ಅಕ್ರಮವಾಗಿ ಜನರು ಮನೆ ಕಟ್ಟಿ ನೆಲೆಸಿದ್ದರೆ ಕಾನೂನು ರೀತ್ಯಾ ಅವರನ್ನು ಸ್ಥಳಾಂತರಿಸುವ ಕೆಲಸವಾಗಬೇಕು. ಅಂತಹ ಸ್ಥಳದಲ್ಲಿ ಮನೆ ಕಟ್ಟಲು ಅಕ್ರಮ ಪರವಾನಗಿ ನೀಡಿದ್ದಾದರೆ ಹಾಗೆ ನೀಡಿದ ಅಧಿಕಾರಿಯಿಂದ ಆ ಮನೆಯವರಿಗೆ ಪರಿಹಾರ ಕೊಡಿಸಬೇಕು.

ಬೆಂಗಳೂರಿನ ರಸ್ತೆಗಳ ರಾಚನಿಕ ಸಮಸ್ಯೆ ಏನೆಂದರೆ ಎತ್ತರದಿಂದ ತಗ್ಗು ಮತ್ತು ಪುನಃ ಎತ್ತರಕ್ಕೆ ರಸ್ತೆಗಳು ಏರುವಲ್ಲಿ ತಗ್ಗಿನ ತುಂಬಾ ನೀರು ಇರುತ್ತದೆ. ಅಂತಹ ರೀತಿಯಲ್ಲಿ ನೀರು ಸಂಗ್ರಹವಾಗದ ಹಾಗೆ ತೂಬುಗಳನ್ನು ಗುತ್ತಿಗೆದಾರರೇ ಇಟ್ಟು ರಸ್ತೆ ಮಾಡುವ ಯೋಜನೆ ಇರಬೇಕು. ನಮ್ಮ ಆಡಳಿತ ವ್ಯವಸ್ಥೆ ಹೇಗಿದೆಯೆಂದರೆ ಯಾರಾದರೊಬ್ಬರಿಗೆ ರಸ್ತೆ ನಿರ್ಮಾಣದ ಸಮಗ್ರ ಗುತ್ತಿಗೆ ನೀಡುವುದಿಲ್ಲ. ಬದಲಾಗಿ ನೆಲ ಅಗೆದು ರಸ್ತೆ ಮಾಡುವವರು ಒಬ್ಬರು, ಡಾಂಬರು ಹಾಕುವವರು ಇನ್ನೊಬ್ಬರು, ಚರಂಡಿ ಮಾಡುವವರು ಮತ್ತೊಬ್ಬರು, ಅವುಗಳನ್ನು ಚಪ್ಪಡಿ ಹಾಕಿ ಮುಚ್ಚುವವರು ಮಗದೊಬ್ಬರು. ಆಗ ಅಧಿಕಾರಿಗಳಿಗೆ ಲಂಚ ಕೊಡುವವರ ಸಂಖ್ಯೆ ಒಬ್ಬರ ಬದಲು ನಾಲ್ಕಾಗುತ್ತದೆ. ಈ ನಾಲ್ಕು ಮಂದಿ ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡುವುದಿಲ್ಲ. ಅವರವರ ಅನುಕೂಲದಲ್ಲಿ ಮಾಡುತ್ತಾರೆ.

ಇದರ ಬದಲು ಈ ನಾಲ್ಕೂ ಕೆಲಸಗಳನ್ನು ಒಬ್ಬರಿಗೆ ವಹಿಸಿ ತಗ್ಗು ಜಾಗಗಳಲ್ಲಿ ನೀರು ತುಂಬದಂತೆ ಅದನ್ನು ಹೊರಕಳಿಸುವ ತೂಬುಗಳನ್ನು ಹಾಕುವುದೂ ಸೇರಿದಂತೆ ರಸ್ತೆ ಸುರಕ್ಷತೆಯ ಹೊಣೆಯನ್ನು ನೀಡಿದರೆ ಸ್ವಲ್ಪ ಮಟ್ಟಿಗೆ ಸರಿಯಾಗಬಹುದು. ಇದಲ್ಲದೇ ಚರಂಡಿಗಳಲ್ಲಿ ಹಾಗೂ ತೂಬುಗಳಲ್ಲಿ ಹೂಳು ತುಂಬದಂತೆ ನಿರ್ವಹಣಾ ಘಟಕಗಳನ್ನು ರೂಪಿಸಬೇಕು. ಇವರು ವರ್ಷವಿಡೀ ಸ್ವಚ್ಛ ಚರಂಡಿ ಮತ್ತು ತೂಬುಗಳಿರುವುದನ್ನು ಖಾತರಿ ಪಡಿಸಬೇಕು. ಈ ಕುರಿತು ಬಿಬಿಎಂಪಿಗೆ ಪ್ರತಿತಿಂಗಳೂ ವರದಿ ನೀಡಬೇಕು. ಹೀಗೆ ತ್ವರಿತವಾಗಿ ಏನಾದರೂ ಕ್ರಮ ಕೈಗೊಳ್ಳುವುದು ಬಿಟ್ಟು ‘ದೊಡ್ಡ ಮಳೆ ಬಂದ್ರೆ ನಾವೇನು ಮಾಡೋದು?’ ಅಂತ ತಲೆಗೆ ಕೈಯಿಟ್ಟು ಕುಳಿತರೆ ಮತ್ತೆ ಕೆಲವರ ಬಲಿಯಾಗುವುದು ನಿಶ್ಚಿತ.
ಜವಾಬ್ದಾರಿಯಿಂದ ಜಾರಿಕೊಳ್ಳುವ ಸರ್ಕಾರದ ಇಂತಹ ಮನೋಧರ್ಮವನ್ನು ದಾರಿಗೆ ತರಲು ಗುಂಡಿಗೇಟ್‌ಗಳನ್ನು ಹಾಕಿಸಲು ಒತ್ತಾಯಿಸಬೇಕು. ಗುಂಡಿಭರಿತ ರಸ್ತೆಯಲ್ಲಿ ಹಾದು ಈ ಗೇಟ್ ಗಳ ಮೂಲಕ ಸಾಗುವ ಪ್ರತೀ ವಾಹನಕ್ಕೆ ನಷ್ಟ ತುಂಬುವ ಲೆಕ್ಕದಲ್ಲಿ ನೂರು ರೂಪಾಯಿಗಳಂತೆ ಸರ್ಕಾರವೇ ನೀಡಬೇಕು. ಇವುಗಳಲ್ಲಿ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆಗಳೇನೂ ಬೇಡ. ಅವು ತಾವಾಗಿಯೇ ಹಣವಸೂಲಾತಿಗಾಗಿ ನಿಲ್ಲುತ್ತವೆ. ಹಣ ನೀಡಿದ ದಾಖಲೆಗಾಗಿ ಸಿ.ಸಿ. ಟಿ.ವಿ. ಕ್ಯಾಮೆರಾ ಇದ್ದರೆ ಸಾಕು. ಕ್ಯೂ ಬೆಳೆಯುವ ಸಮಸ್ಯೆ ಇಲ್ಲ. ಈ ಸಲಹೆ ಸ್ವೀಕೃತವಾದರೆ ಗುಂಡಿಗೇಟ್‌ಗಳು ಅದೆಷ್ಟೋ ಬೇಕಾದೀತು. ಅದರ ಬದಲು ರಸ್ತೆಗಳನ್ನೇ ಸರಿಮಾಡುವ ನಿರ್ಧಾರವನ್ನು ಸರ್ಕಾರವೇ ಮಾಡಿದರೆ ಸಮಸ್ಯೆಗೆ ದೊಡ್ಡ ಪರಿಹಾರ ಸಿಕ್ಕಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT