ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಂಪರಿಕ ತಾಣ ತಾಜ್‌ಮಹಲ್‌ ರಾಜಕೀಯ ದಾಳವಾಗದಿರಲಿ

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ತಾಜ್‌ಮಹಲ್, ಇತ್ತೀಚಿನ ತಿಂಗಳುಗಳಲ್ಲಿ ಸುದ್ದಿಯಾಗುತ್ತಲೇ ಇದೆ. ‘ತಾಜ್‌ಮಹಲ್ ಭಾರತೀಯ ಸಂಸ್ಕೃತಿಯಲ್ಲ, ದೇಶಕ್ಕೆ ಅದೊಂದು ಕಪ್ಪುಚುಕ್ಕೆ’ ಎಂಬಂತಹ ಮಾತುಗಳನ್ನಾಡಿ ಬಿಜೆಪಿ ಶಾಸಕ ಸಂಗೀತ್ ಸೋಮ್ ವಿವಾದ ಸೃಷ್ಟಿಸಿದ್ದಾರೆ. ತಾಜ್‌ಮಹಲ್ ಅನ್ನು ಮುಸ್ಲಿಂ ಸ್ಮಾರಕವಾಗಿ ಕಂಡಿರುವ ಅವರು ‘ನವಭಾರತ’ದಲ್ಲಿ ಅದಕ್ಕೆ ಸ್ಥಾನವಿರಬಾರದು ಎಂದಿದ್ದಾರೆ. ಈ ಬಗೆಯ ವಿಷಯುಕ್ತ ಹೇಳಿಕೆಗಳು, ಪೂರ್ವಸಿದ್ಧತೆ ಇಲ್ಲದ ಮಾತುಗಳ ಭರದಲ್ಲಿ ಅಚಾನಕ್ ಜಾರಿಬಿದ್ದ ನುಡಿಗಳು ಎಂದೇನೂ ಭಾವಿಸಬೇಕಿಲ್ಲ. ಈ ಮಾತು ಇತ್ತೀಚಿನ ದಿನಗಳಲ್ಲಿ ರೂಪುಗೊಳ್ಳುತ್ತಿರುವ ಸಂಕಥನ ಮಾದರಿಯ ಭಾಗವಾಗಿಯೇ ಇದೆ. ಸಂಗೀತ್ ಸೋಮ್ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಪರೋಕ್ಷ ಅಸಮ್ಮತಿ ಸೂಚಿಸಿದ್ದಾರೆ.

ರಾಷ್ಟ್ರ ಮಟ್ಟದ ನಾಯಕರು ದೊಡ್ಡ ಮಾದರಿಗಳ ಬಗ್ಗೆ ಮಾತನಾಡುತ್ತಿರುವಾಗಲೇ ಸ್ಥಳೀಯ ಮಟ್ಟದ ನಾಯಕರು ಕೋಮು ಪ್ರಚೋದಕ ಮಾತುಗಳನ್ನಾಡುವಂತಹ ಮಾದರಿ ಹೊಸದೇನೂ ಅಲ್ಲ. ಸಂಗೀತ್ ಸೋಮ್ ಹೇಳಿಕೆ ನೀಡಿದ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರೂ ತಾಜ್‌ಮಹಲ್‌ನಂತೆಯೇ ದಾಸ್ಯದ ಸಂಕೇತಗಳಾದ ರಾಷ್ಟ್ರಪತಿ ಭವನ, ಸಂಸತ್ ಭವನ, ಕುತುಬ್ ಮಿನಾರ್ ಹಾಗೂ ಕೆಂಪುಕೋಟೆಗಳನ್ನು ಕೆಡವಬೇಕು ಎಂದಿದ್ದಾರೆ.

‘ತೇಜೋಮಹಲ್ ಎಂಬ ಹಿಂದೂ ದೇಗುಲವಾಗಿತ್ತು ತಾಜ್‌ಮಹಲ್. ದೇಗುಲವನ್ನು ಧ್ವಂಸ ಮಾಡಿಸಿದ ಶಹಜಹಾನ್ ತಾಜ್‌ಮಹಲ್ ಕಟ್ಟಿಸಿದ್ದ ’ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ವಿನಯ್ ಕಟಿಯಾರ್ ಹೇಳಿದ್ದಾರೆ. ಈ ಬಗೆಯ ಹೇಳಿಕೆಗಳಿಂದ ಬಿಜೆಪಿ ಅಂತರ ಕಾಯ್ದುಕೊಳ್ಳಬಹುದು. ಆದರೆ ಚುನಾವಣೆಗಳು ಸನಿಹದಲ್ಲಿರುವಾಗ ಈ ಬಗೆಯ ದ್ವೇಷದ ಮಾತುಗಳ ಹಿಂದೆ ಕಾರ್ಯತಂತ್ರವೊಂದು ಕೆಲಸ ಮಾಡುತ್ತಿರುತ್ತದೆಯೇ ಎಂಬಂತಹ ಅನುಮಾನಗಳನ್ನು ತಡೆಯಲಾಗದು. ಮುಜಫ್ಫರ್‌ ನಗರದ ಗಲಭೆಗಳ ಪ್ರಕರಣದಲ್ಲಿ ಆರೋಪಿಯಾಗಿದ್ದವರು ಸಂಗೀತ್ ಸೋಮ್ ಎಂಬುದನ್ನು ಮರೆಯಲಾಗದು. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣೆಗಳು ಸನಿಹದಲ್ಲಿರುವಾಗ ಕೋಮು ಧ್ರುವೀಕರಣ ಮಾಡುವ ಈ ಬಗೆಯ ಮಾತುಗಳು ಅಕ್ಷಮ್ಯ. ಇತಿಹಾಸದ ಕುರುಹುಗಳನ್ನು ಅಳಿಸಿಹಾಕುವುದನ್ನು ರಾಷ್ಟ್ರೀಯತೆಯ ಪುನುರುಜ್ಜೀವನದ ಭಾಗವಾಗಿ ಪರಿಗಣಿಸುವಂತಹ ದೃಷ್ಟಿಕೋನವೇ ಅಪಾಯಕಾರಿ.

ತಾಜ್‌ಮಹಲ್, ಭಾರತದ ದೊಡ್ದ ಪ್ರವಾಸಿ ಆಕರ್ಷಣೆಯ ಕೇಂದ್ರಗಳಲ್ಲಿ ಒಂದು. ವಿಶ್ವದ ಏಳು ಅದ್ಭುತಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ. ಇದು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೂ ಹೌದು. ಹೀಗಿದ್ದೂ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ತನ್ನ ಮೊದಲ ಬಜೆಟ್ ಮಂಡಿಸಿದಾಗ, ತಾಜ್‌ಗೆ ಯಾವುದೇ ಸಾಂಸ್ಕೃತಿಕ ಪಾರಂಪರಿಕ ನಿಧಿಯನ್ನು ಹಂಚಿಕೆ ಮಾಡಲಿಲ್ಲ.

‘ರಾಮಾಯಣ ಹಾಗೂ ಭಗವದ್ಗೀತೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತದೆ. ತಾಜ್‌ಮಹಲ್ ಅಲ್ಲ’ ಎಂದು ಕೆಲವು ತಿಂಗಳುಗಳ ಹಿಂದೆ ಮುಖ್ಯಮಂತ್ರಿ ಹೇಳಿದ್ದರು. ವಿದೇಶಿ ಅತಿಥಿಗಳಿಗೆ ತಾಜ್‌ಮಹಲ್ ಪ್ರತಿಕೃತಿಗಳ ಉಡುಗೊರೆ ನೀಡುವುದು ‘ಭಾರತೀಯ ಸಂಸ್ಕೃತಿಯ ಭಾಗವಲ್ಲ ’ ಎಂದೂ ಮುಖ್ಯಮಂತ್ರಿ ಪ್ರತಿಪಾದಿಸಿದ್ದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕಡೆಗೆ, ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾದ ಹೊಳಪಿನ ಕಾಗದದಲ್ಲಿ ಮುದ್ರಿಸಲಾದ 32 ಪುಟಗಳ ಉತ್ತರ ಪ್ರದೇಶ ಪ್ರವಾಸೋದ್ಮಮ ಮಾರ್ಗದರ್ಶಿ ಕಿರು ಪುಸ್ತಕದಲ್ಲಂತೂ ತಾಜ್‌ಮಹಲ್ ಹೆಸರೇ ಇರಲಿಲ್ಲ.

ಆದರೆ ಗೋರಕ್‌ನಾಥ್ ದೇವಾಲಯಕ್ಕೆ ಇಡೀ ಪುಟ ಮೀಸಲಿರಿಸಿದ್ದನ್ನು ಏನೆಂದು ಕರೆಯುವುದು? ಯೋಗಿಯವರು ಗೋರಕ್‌ನಾಥ್ ಪ್ರಧಾನ ಅರ್ಚಕ ಎಂಬುದು ಕಾಕತಾಳೀಯವೇ? ಪ್ರತಿಯೊಂದು ಸ್ಮಾರಕದ ಇತಿಹಾಸವನ್ನು ಪ್ರಶ್ನಿಸಲು ಹೊರಟರೆ ಅದಕ್ಕೆ ಅಂತ್ಯವೆಲ್ಲಿ? ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ನಾವೇ ಪೇಲವಗೊಳಿಸಿಕೊಂಡಂತಾಗುತ್ತದೆ ಅಷ್ಟೆ. ಇತಿಹಾಸವನ್ನು ಸಾಮುದಾಯಿಕ ಪರಂಪರೆಯ ಭಾಗವಾಗಿ ಪರಿಗಣಿಸಬೇಕು. ಸಾಂಸ್ಕೃತಿಕ ಶ್ರೀಮಂತಿಕೆಯ ತಾಣಗಳು ಕ್ಷುಲ್ಲಕ ರಾಜಕಾರಣದ ವಾದವಿವಾದದ ಕೇಂದ್ರ ಬಿಂದುಗಳಾಗುವುದು ದುರದೃಷ್ಟಕರ. ನೊಬೆಲ್ ಪ್ರಶಸ್ತಿ ಪುರಸ್ಕೃತ ಬಂಗಾಳಿ ಸಾಹಿತಿ ರವೀಂದ್ರನಾಥ ಟ್ಯಾಗೋರ್ ಅವರಂತಹವರನ್ನೂ ಭಾವುಕವಾಗಿಸಿದಂತಹ ಸ್ಮಾರಕ ತಾಜ್‌ಮಹಲ್. ಸಂಕುಚಿತ ದೃಷ್ಟಿಕೋನದ ರಾಜಕಾರಣಿಗಳ ಮಾತುಗಳಿಗೆ ಇದು ಆಹಾರವಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT