ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3,959 ಸಿಬ್ಬಂದಿ ವರ್ಗಾವಣೆ ಆದೇಶ

ಸಾರಿಗೆ ಸಂಸ್ಥೆಗಳ ನೌಕರರ ಅಂತರನಿಗಮ ವರ್ಗಾವಣೆ
Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಅಂತರನಿಗಮ ವರ್ಗಾವಣೆ ನಿಯಮದ ಅನ್ವಯ ಚಾಲಕ –ನಿರ್ವಾಹಕ, ತಾಂತ್ರಿಕ ಮತ್ತು ಇತರರು ಸೇರಿ ‌ಒಟ್ಟು 3,959 ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಲಾಗಿದೆ.

ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ, ‘ವರ್ಗಾವಣೆ ಪಟ್ಟಿಯನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ’ ಎಂದರು.

‘ವರ್ಗಾವಣೆ ಕೋರಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಂದ ಒಟ್ಟು 18,978 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 14,418 ಅರ್ಜಿಗಳು ಕ್ರಮಬದ್ಧವಾಗಿದ್ದವು. ಖಾಲಿ ಹುದ್ದೆ ಹಾಗೂ ಮೀಸಲಾತಿ ಪರಿಗಣಿಸಿ, ಪಾರದರ್ಶಕವಾಗಿ ವರ್ಗಾವಣೆ ಮಾಡಲಾಗಿದೆ’ ಎಂದರು.

ಈಡೇರಿದ 12 ವರ್ಷದ ಬೇಡಿಕೆ:
ಸಾರಿಗೆ ಸಂಸ್ಥೆ ಸಿಬ್ಬಂದಿ ಅಂತರ ನಿಗಮ ವರ್ಗಾವಣೆ ಮಾಡುವಂತೆ ಹನ್ನೆರಡು ವರ್ಷಗಳಿಂದ ಆಗ್ರಹಿಸುತ್ತಿದ್ದರು. ಆದರೆ, ನಿಗಮಗಳ ಮಟ್ಟದಲ್ಲಿ ವರ್ಗಾವಣೆ ಮಾಡುವುದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ ಈ ಬೇಡಿಕೆ ನನೆಗುದಿಗೆ ಬಿದ್ದಿತ್ತು. ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು, ಒಂದು ಬಾರಿ ಅಂತರ ನಿಗಮ ವರ್ಗಾವಣೆಗೆ ಮಾರ್ಚ್‌ನಲ್ಲಿ ಆದೇಶ ಹೊರಡಿಸಿತ್ತು.

***
‘ಮೀಸಲಾತಿಯಿಂದ ಇತರ ಅರ್ಹರಿಗೆ ತೊಂದರೆ ಆಗಬಾರದು’
‘ಹೈದರಾಬಾದ್- ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು ವಿಶೇಷ ಮೀಸಲಾತಿ (371 ಜೆ) ಅಡಿ ಉದ್ಯೋಗ ಗಿಟ್ಟಿಸಿಕೊಂಡ ಬಳಿಕ ತಮ್ಮ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಕೊಂಡು ಹೋಗುವುದು ಸಮಸ್ಯೆಯಾಗಿದೆ’ ಎಂದು ರೇವಣ್ಣ ಹೇಳಿದರು.

‘ಬಿಎಂಟಿಸಿ ವ್ಯಾಪ್ತಿಯಿಂದ ಈಶಾನ್ಯ ಮತ್ತು ವಾಯವ್ಯ ರಸ್ತೆ ಸಾರಿಗೆ ನಿಗಮಗಳಿಗೆ ಎರಡು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಹೋಗುತ್ತಿದ್ದಾರೆ. 371 ಜೆ ಕೋಟಾ ಮತ್ತು ಕೌಟುಂಬಿಕ ಸಮಸ್ಯೆಗಳ ಕಾರಣಗಳಿಗೆ ಅವರವರ ಜಿಲ್ಲೆಗಳಿಗೆ ಹೋಗುತ್ತಾರೆ. ಒಬ್ಬರಿಗೆ ಮೀಸಲಾತಿ ಕೊಡುವುದರಿಂದ ಇತರ ಅರ್ಹರಿಗೆ ತೊಂದರೆ ಆಗಬಾರದು’ ಎಂದು ಅವರು ಅಭಿಪ್ರಾಯಪಟ್ಟರು.

‘ಸಾರಿಗೆ, ಗೃಹ, ಶಿಕ್ಷಣ ಇಲಾಖೆಯಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಕೆಎಎಸ್, ಐಎಎಸ್ ಅಧಿಕಾರಿಗಳ ಹಂತದಲ್ಲೂ ಈ ಸಮಸ್ಯೆ ಆಗಬಹುದು. ಆದರೆ, ಈ ಬಗ್ಗೆ ಚರ್ಚೆ ಆಗಬೇಕು. ಈ ವಿಷಯದಲ್ಲಿ ಹೆಚ್ಚು ಮಾತನಾಡಿದರೆ ವಿವಾದ ಆಗುತ್ತದೆ’ ಎಂದು ಸುಮ್ಮನಾದರು.

***
ಯಾವ ನಿಗಮದಿಂದ ಎಷ್ಟು ಸಿಬ್ಬಂದಿ

ಬಿಎಂಟಿಸಿ - 2348 267
ಕೆಎಸ್‌ಆರ್‌ಟಿಸಿ - 1,053 1,308
ಈಶಾನ್ಯ ಸಾರಿಗೆ - 314 1,576
ವಾಯವ್ಯ ಸಾರಿಗೆ - 244 808

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT