ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾಗೆ ಜಯ; ಸೋಲುಂಡ ಸಿಂಧು

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಕ್ಯಾರೊಲಿನಾ ಮರಿನ್‌ಗೆ ಸೋಲು
Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‌ಒಡೆನ್ಸ್‌ : ಭಾರತದ ಅಗ್ರಗಣ್ಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಗುರುವಾರ ಡೆನ್ಮಾರ್ಕ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಘಾತ ಅನುಭವಿಸಿದರು. ಆದರೆ ಸೈನಾ ನೆಹ್ವಾಲ್ ಸ್ಪೇನ್‌ನ ಕ್ಯಾರೊಲಿನಾ ಮರಿನ್‌ ಅವರನ್ನು ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ನೆಚ್ಚಿನ  ಆಟಗಾರ್ತಿಯಾಗಿದ್ದ ಸಿಂಧು 17–21, 21–23ರಲ್ಲಿ ನೇರ ಗೇಮ್‌ಗಳಿಂದ ಚೀನಾದ ಚೆನ್‌ ಯೂಫಿ ವಿರುದ್ಧ ಸೋತರು. ಕೊರಿಯಾ ಓಪನ್ ಗೆದ್ದುಕೊಂಡ ಬಳಿಕ ಜಪಾನ್‌ ಓಪನ್‌ ಟೂರ್ನಿಯಲ್ಲಿಯೂ ಸಿಂಧು ಆರಂಭಿಕ ಸುತ್ತುಗಳಲ್ಲಿಯೇ ಸೋತಿದ್ದರು.

ಅನುಭವಿ ಆಟಗಾರ್ತಿ ಸೈನಾ 22–20, 21–18ರಲ್ಲಿ ಮರಿನ್‌ ಎದುರು ಗೆದ್ದರು. ರಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಆಟಗಾರ್ತಿ ಮರಿನ್ ಅವರಿಂದ ತೀವ್ರ ಪೈಪೋಟಿ ಎದುರಿಸಿದ ಸೈನಾ ಛಲದ ಆಟವಾಡಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಸೈನಾ ಅವರು ನಾಲ್ಕನೇ ಸ್ಥಾನದಲ್ಲಿರುವ ಮರಿನ್ ವಿರುದ್ಧ ಗೆದ್ದರು.

‘ಹಿಂದಿನ ಕೆಲವು ಟೂರ್ನಿಗಳಲ್ಲಿ ಆರಂಭದಲ್ಲಿಯೇ ಸೋಲು ಕಂಡಿದ್ದೆ. ನನ್ನ ವೃತ್ತಿಬದುಕಿಗೆ ಒಂದು ಉತ್ತಮ ಗೆಲುವಿನ ಅವಶ್ಯಕತೆ ಇತ್ತು. ಮರಿನ್ ವಿರುದ್ಧದ ಜಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ’ ಎಂದು ಸೈನಾ ಹೇಳಿದ್ದಾರೆ.

ಮುಂದಿನ ಪಂದ್ಯದಲ್ಲಿ ಸೈನಾ ಥಾಯ್ಲೆಂಡ್‌ನ ನಿಚನ್ ಜಿಂದಪಾಲ್ ಅಥವಾ ರಷ್ಯಾದ ಎವೆಜಿನಿಯಾ ಕೊಸೆಟಸ್ಕಯಾ ವಿರುದ್ಧ ಆಡಲಿದ್ದಾರೆ.

ಶ್ರೀಕಾಂತ್‌ಗೆ ಜಯ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್‌ 21–17, 21–15ರಲ್ಲಿ ಶುಭಾಂಕರ್ ಡೆ ವಿರುದ್ಧ ಗೆದ್ದರು. ಮುಂದಿನ ಪಂದ್ಯದಲ್ಲಿ ಅವರು ಕೊರಿಯಾದ ಜಾನ್ ಹೇಕ್ ಜಿನ್ ಅವರನ್ನು ಎದುರಿಸಲಿದ್ದಾರೆ.

ಬಿ. ಸಾಯಿಪ್ರಣೀತ್‌ 10–21, 15–21ರಲ್ಲಿ ಸ್ಥಳೀಯ ಆಟಗಾರ ಹೆನ್ಸ್‌ ಕ್ರಿಸ್ಟಿಯನ್ ಸೊಲ್‌ಬರ್ಗ್ ವಿಟ್ಟಿನ್ಸ್ ವಿರುದ್ಧ ಸೋತರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿರುವ ಪ್ರಣಯ್‌ 21–18, 21–19ರಲ್ಲಿ ಡೆನ್ಮಾರ್ಕ್‌ನ ಎಮಿಲ್ ಹೋಸ್ಟ್ ಅವರನ್ನು ಮಣಿಸಿದರು. ಎಮಿಲ್ ಎದುರು ಪ್ರಣಯ್‌ಗೆ ಸಿಕ್ಕ ಮೂರನೇ ಗೆಲುವು ಇದಾಗಿದೆ. ಮುಂದಿನ ಪಂದ್ಯದಲ್ಲಿ ಪ್ರಣಯ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಮಲೇಷ್ಯಾದ ಲೀ ಚಾಂಗ್ ವಿರುದ್ಧ ಆಡಲಿದ್ದಾರೆ.

ಮಿಶ್ರ ಡಬಲ್ಸ್ ಹಾಗೂ ಪುರುಷರ ಡಬಲ್ಸ್ ವಿಭಾಗದ ಪಂದ್ಯಗಳಲ್ಲಿ ಸಾತ್ವಿಕ್‌ಸೈರಾಜ್ ರಾಂಕಿರೆಡ್ಡಿ ಸೋತಿದ್ದಾರೆ.

ಸಾತ್ವಿಕ್ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ 19–21, 17–21ರಲ್ಲಿ ನಿಕೊಲಸ್ ನೊಹರ್ ಮತ್ತು ಸಾರಾ ಥೈಗೆಸನ್ ವಿರುದ್ಧ ಸೋತಿದೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಜೋಡಿ 21–14, 18–21, 17–21ರಲ್ಲಿ ಕೊರಿಯಾದ ಜೋಡಿ ಚುಂಗ್‌ ಸೋಕ್ ಮತ್ತು ಕಿಮ್ ಡುಕ್‌ಯಂಗ್ ಎದುರು ಪರಾಭವಗೊಂಡಿದೆ.

ಮನು ಅತ್ರಿ ಮತ್ತು ಸುಮೀತ್‌ ರೆಡ್ಡಿ ಜೋಡಿ 13–21, 18–21ರಲ್ಲಿ ಡೆನ್ಮಾರ್ಕ್‌ನ ಮ್ಯಾಡ್ಸ್‌ ಕೊನರ್ಡ್‌ ಮತ್ತು ಪೀಟರ್ಸನ್ ಜೋಡಿಗೆ ಮಣಿದಿದೆ. ಪ್ರಣವ್ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ 17–21, 15–21ರಲ್ಲಿ ಇರಾನ್‌ನ ಸ್ಯಾಮ್ ಮ್ಯಾಗಿ ಮತ್ತು ಚೋಲೆ ಮ್ಯಾಗಿ ವಿರುದ್ಧ ಸೋತಿದೆ.

***

ವಿಶ್ವ ಚಾಂಪಿಯನ್‌ಷಿಪ್‌ನಿಂದ ಪಾಠ ಕಲಿತೆ

ಗ್ಲಾಸ್ಗೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ ಸೋಲು ನನಗೆ ದೊಡ್ಡ ಪಾಠ ಕಲಿಸಿತು. ಈ ಟೂರ್ನಿಯ ಬಳಿಕ ನಾನು ಫಿಟ್‌ನೆಸ್‌ ಕಡೆ ಹೆಚ್ಚು ಗಮನಹರಿಸಿದೆ’ ಎಂದು ಸೈನಾ ನೆಹ್ವಾಲ್ ಹೇಳಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 10ರೊಳಗಿನ ಸ್ಥಾನಕ್ಕೆ ಏರುವ ಗುರಿ ಹೊಂದಿರುವುದಾಗಿ ಸೈನಾ ಹೇಳಿದ್ದಾರೆ.

‘ಎಲ್ಲಾ ಟೂರ್ನಿಗಳಲ್ಲಿಯೂ ಆರಂಭದ ಸುತ್ತುಗಳಲ್ಲಿಯೇ ನನಗೆ ಅಗ್ರಗಣ್ಯ ಆಟಗಾರರು ಎದುರಾಗುತ್ತಿದ್ದಾರೆ. ಇದಕ್ಕೆ ಕಾರಣ ನನ್ನ ರ‍್ಯಾಂಕಿಂಗ್‌. ಕಠಿಣ ಡ್ರಾ ಬಗ್ಗೆ ಹೆಚ್ಚು ಚಿಂತಿಸುವ ಬದಲು ಉತ್ತಮ ಆಟಗಾರರ ಎದುರೂ ಗೆಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಮಾತ್ರ ನನ್ನ ಮುಂದಿರುವ ದಾರಿ’ ಎಂಬುದನ್ನು ನಾನು ಅರಿತುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT