ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೆ ಸರಿವ ನ್ಯಾಯಮೂರ್ತಿಗಳು..!

ರಾಘವೇಶ್ವರ ಭಾರತೀ ಶ್ರೀಗಳ ಪ್ರಕರಣ
Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:‌ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಪ್ರಕರಣದ ವಿಚಾರಣೆಯಿಂದ ಇದುವರೆಗೆ ಒಟ್ಟು ಏಳು ನ್ಯಾಯಮೂರ್ತಿಗಳು ಹಿಂದೆ ಸರಿದಿರುವುದು ನ್ಯಾಯಾಂಗ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

ಶ್ರೀಗಳನ್ನು ಪೀಠದಿಂದ ಕೆಳಗಿಳಿಸುವಂತೆ ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಿಂದ ಇತ್ತೀಚೆಗಷ್ಟೇ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಿಂದೆ ಸರಿದಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೋಹನ ಶಾಂತನ ಗೌಡರ, ಪಂಜಾಬ್– ಹರಿಯಾಣ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಕೆ.ಭಜಂತ್ರಿ, ನಿವೃತ್ತ ನ್ಯಾಯಮೂರ್ತಿಗಳಾದ ರಾಮ ಮೋಹನ ರೆಡ್ಡಿ ಹಾಗೂ ಎನ್‌.ಕುಮಾರ್ ಹಿಂದೆ ಸರಿದ ಉಳಿದ ನ್ಯಾಯಮೂರ್ತಿಗಳು.

ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಶ್ರೀಗಳ ಪ್ರಕರಣದಲ್ಲಿ ಹಿಂದೆ ಸರಿಯುವುದಕ್ಕೆ ಕಾರಣ ನೀಡಿದ್ದರು. ಇನ್ನುಳಿದವರು, ‘ಈ ಪ್ರಕರಣ ನಡೆಸಲು ನಮಗೆ ಇಚ್ಛೆ ಇಲ್ಲ’ ಎಂದಷ್ಟೇ ಹೇಳಿದ್ದರು.

ಶ್ರೀಗಳ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಹಾಗೂ ನ್ಯಾಯಮೂರ್ತಿ ರಾಮ ಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ಸಂದರ್ಭದಲ್ಲಿ ಬೆಳಗಿನ ಕಲಾಪದಲ್ಲಿ ಪ್ರಾಸಿಕ್ಯೂಷನ್‌ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ರಾಮಮೋಹನ ರೆಡ್ಡಿ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದ್ದರು. ಆದರೆ, ಮಧ್ಯಾಹ್ನ ಊಟದ ವಿರಾಮದ ನಂತರ ಯಾವುದೇ ಕಾರಣ ನೀಡದೆ ವಿಚಾರಣೆಯಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದ್ದರು.

ರಾಮಕಥಾ ಗಾಯಕಿಯು ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಮತ್ತು ಹೊನ್ನಾವರದ ಮ್ಯಾಜಿಸ್ಟ್ರೇಟ್ ವಿರುದ್ಧ ನೇರ ಆರೋಪ ಮಾಡಿ ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಇದರಿಂದಾಗಿ ಫಣೀಂದ್ರ ವಿಚಾರಣೆಯಿಂದ ಹಿಂದೆ ಸರಿದಿದ್ದರು. ‘ಗೋಕರ್ಣ ಹಿತರಕ್ಷಣಾ ಸಮಿತಿಯವರು ಪತ್ರ ಬರೆದಿದ್ದಾರೆ’ ಎಂಬ ಕಾರಣಕ್ಕೆ ಮೋಹನ ಶಾಂತನಗೌಡರ ಹಿಂದೆ ಸರಿದಿದ್ದರು.

ಮದ್ರಾಸ್‌ಗೆ ಕಳುಹಿಸಬೇಕೆ?:
ಈ ಕುರಿತಂತೆ ರಾಜ್ಯ ವಕೀಲರ ಪರಿಷತ್‌ ಸಹ ಕಾರ್ಯಾಧ್ಯಕ್ಷ ವೈ.ಆರ್.ಸದಾಶಿವ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ’ಇರುವ 24 ಜನ ನ್ಯಾಯಮೂರ್ತಿಗಳೂ ಈ ರೀತಿ ಹಿಂದೆ ಸರಿಯುತ್ತಾ ಹೋದರೆ ಪ್ರಕರಣವನ್ನು ಮದ್ರಾಸ್‌ ಹೈಕೋರ್ಟ್‌ಗೆ ಕಳುಹಿಸಬೇಕೇ’ ಎಂದು ಅತ್ಯಂತ ಖಾರವಾಗಿ ಪ್ರಶ್ನಿಸಿದ್ದಾರೆ.

‘ಇಂತಹವೇ 100 ಪ್ರಕರಣಗಳು ಬಂದರೆ ನ್ಯಾಯಮೂರ್ತಿಗಳು ಏನು ಮಾಡುತ್ತಾರೆ. ಇದು ನ್ಯಾಯಮೂರ್ತಿಗಳ ಆಡಳಿತ ವಿಷಯವೇ ಆದರೂ ವಕೀಲರ ಸಂಘ ಈ ಬಗ್ಗೆ ಗಟ್ಟಿಯಾದ ನಿಲುವು ತಳೆಯಬೇಕು’ ಎಂದು ಸದಾಶಿವರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

194 ಪ್ರಕರಣಗಳು: ’ರಾಘವೇಶ್ವರ ಶ್ರೀಗಳಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ, ಸೆಷನ್ಸ್‌ ಕೋರ್ಟ್, ಹೈಕೋರ್ಟ್‌ ಸೇರಿದಂತೆ ವಿವಿಧ ಕೋರ್ಟ್‌ಗಳಲ್ಲಿ 194 ಪ್ರಕರಣ ಇವೆ. ಸದ್ಯ ಇವುಗಳಲ್ಲಿ 40ಕ್ಕೂ ಹೆಚ್ಚು ವಿಚಾರಣೆ ಹಂತದಲ್ಲಿವೆ’ ಎನ್ನುತ್ತಾರೆ ಅಖಿಲ ಹವ್ಯಕ ಒಕ್ಕೂಟದ ಮುಖಂಡ ಪುತ್ತೂರಿನ ಶಂಕರ ಭಟ್ಟ.

ರೆಕ್ಯೂಸ್‌ ಎಂದರೇನು:
ಯಾವುದೇ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿಗಳು ಹಿಂದೆ ಸರಿಯುವುದಕ್ಕೆ ಇಂಗ್ಲಿಷ್‌ನಲ್ಲಿ ‘Recuse’ (ರೆಕ್ಯೂಸ್) ಎಂದು ಕರೆಯುತ್ತಾರೆ. ‘ಪ್ರಕರಣದ ಬಗ್ಗೆ ಪರ– ವಿರುದ್ಧದ ನಿಲುವು ಹೊಂದಿದ್ದರೆ ಅವುಗಳ ವಿಚಾರಣೆ ನಿರಾಕರಿಸಬೇಕು’ ಎಂಬುದು ಇದರರ್ಥ.

***
ನ್ಯಾಯಮೂರ್ತಿಗಳು ಮಣಿಯಬಾರದು
‘ನ್ಯಾಯಮೂರ್ತಿಗಳು ಯಾವುದೇ ಒತ್ತಡಕ್ಕೆ ಮಣಿದು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯದೆ ಧೈರ್ಯದಿಂದ ಪ್ರಕರಣದ ವಿಚಾರಣೆ ನಡೆಸಬೇಕು’ ಎನ್ನುತ್ತಾರೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡರು.

ಈ ಕುರಿತಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ವಿಚಾರಣೆಯಿಂದ ಹಿಂದೆ ಸರಿಯುವ ನ್ಯಾಯಮೂರ್ತಿಗಳಿಗೆ ಬಹುಶಃ ಯಾವುದೋ ಅಸಮರ್ಥತೆ ಇರುತ್ತದೆ. ಅವರ ಆತ್ಮಸಾಕ್ಷಿ ಮತ್ತು ಮನಸ್ಸು ಒಪ್ಪದಿರಬಹುದು. ಇದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ. ಆದರೆ, ಎಲ್ಲರೂ ಅಸಮರ್ಥರಾಗಿಯೇ ಇರುವುದಿಲ್ಲ. ಯಾರಾದರೂ ಒಬ್ಬರು ವಿಚಾರಣೆ ನಡೆಸಲೇಬೇಕಲ್ಲವೇ’ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.

***
ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಅನುಮತಿ ಕೋರಿ ನಗರದ ಒಂದನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ವಜಾಗೊಳಿಸಿದ್ದಾರೆ.

‘ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ದೋಷಮುಕ್ತಗೊಳಿಸಿದ ತೀರ್ಪಿನಲ್ಲಿ, ‘ಅನೈತಿಕ ಸಂಬಂಧವಿತ್ತು’ ಎಂದು ಉಲ್ಲೇಖಿಸಲಾಗಿದೆ. ಹಲವು ಪ್ರಕರಣಗಳಲ್ಲಿ ಅವರು ಆರೋಪಿಯಾಗಿದ್ದಾರೆ. ಹೀಗಾಗಿ, ಅವರನ್ನು ಪೀಠದಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ಆಡಳಿತಾಧಿಕಾರಿಯೊಬ್ಬರನ್ನು ನೇಮಿಸಬೇಕಿದೆ. ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಗೆ ಸೆಕ್ಷನ್ 92 ಸಿಪಿಸಿ ಅಡಿ ಅನುಮತಿ ನೀಡಬೇಕು’ ಎಂದು ಕೋರಿ ಪ್ರಶಾಂತ ಕುಮಾರ್ ಮತ್ತು ಲೋಕೇಶ್ ಎಂಬುವರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ‘ಸ್ವಾಮೀಜಿ ವಿರುದ್ಧ ಮಾಡಿರುವ ಆರೋಪಗಳಿಗೆ ಯಾವುದೇ ಪುರಾವೆ ಇಲ್ಲ. ಹಾಗೆಯೇ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ದೋಷಮುಕ್ತಗೊಳಿಸಿದ ಆದೇಶದಲ್ಲೂ ‘ಅನೈತಿಕ ಸಂಬಂಧ’ ಇತ್ತು ಎಂದು ಉಲ್ಲೇಖಿಸಿಲ್ಲ. ಹೀಗಾಗಿ, ಅನುಮತಿ ನೀಡಲಾಗದು’ ಎಂದು ಹೇಳಿದ್ದಾರೆ.

‘ಸ್ವಾಮೀಜಿ ವಿರುದ್ಧ ಮಾಡಿದ್ದ ಆರೋಪಗಳಿಗೆ ಅರ್ಜಿದಾರರು ಸಾಕ್ಷ್ಯ ಒದಗಿಸಲು ವಿಫಲರಾಗಿದ್ದಾರೆ. ಹೀಗಾಗಿ, ಕೋರ್ಟ್‌ ಅರ್ಜಿ ವಜಾಗೊಳಿಸಿದೆ’ ಎಂದು ಸ್ವಾಮೀಜಿ ಪರ ವಕೀಲ ಕೆ.ಗೋವಿಂದರಾಜ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಸಲ್ಲದ ಆರೋಪಗಳನ್ನು ಮಾಡುವ ಹಾಗೂ ಅತ್ಯಾಚಾರ ಪ್ರಕರಣದಿಂದ ಸ್ವಾಮೀಜಿ ಅವರನ್ನು ದೋಷಮುಕ್ತಗೊಳಿಸಿದ ತೀರ್ಪನ್ನು ತಿರುಚುವ ಮೂಲಕ ಸ್ವಾಮೀಜಿ ಘನತೆಗೆ ಧಕ್ಕೆ ತರುವ ಪ್ರಯತ್ನಗಳಿಗೆ ಈ ಆದೇಶದ ಮೂಲಕ ತಕ್ಕ ಉತ್ತರ ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT