ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ: ಗರಿಗೆದರಿದೆ ರಿಯಲ್‌ ಎಸ್ಟೇಟ್‌

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು ಆಸುಪಾಸು ವೇಗವಾಗಿ ಬೆಳೆಯುತ್ತಿರುವ ಉಪನಗರಗಳಲ್ಲಿ ಬಿಡದಿ ಸಹ ಒಂದು. ಭೌಗೋಳಿಕವಾಗಿ ರಾಮನಗರ ಜಿಲ್ಲೆಗೆ ಸೇರಿದ್ದರೂ ಈ ಊರಿಗೆ ರಾಜಧಾನಿಯ ನಂಟೇ ಹೆಚ್ಚು. ಕಳೆದ ಕೆಲವು ದಶಕಗಳಿಂದ ಈ ಊರು ನಗರೀಕರಣಕ್ಕೆ ತನ್ನನ್ನು ಹೆಚ್ಚು ತೆರೆದುಕೊಳ್ಳುತ್ತಿದೆ. ಇಲ್ಲಿನ ಹೊಲಗಳೆಲ್ಲ ನಿವೇಶನವಾಗಿ ಪರಿವರ್ತನೆಗೊಳ್ಳತೊಡಗಿವೆ. ಹೂಡಿಕೆಯ ದೃಷ್ಟಿಯಿಂದಲೂ ಇದು ಉತ್ತಮ ಆಯ್ಕೆ ಎಂಬ ಅಭಿಪ್ರಾಯವಿದೆ.

ಮೈಸೂರು–ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಬಿಡದಿಯು ಬೆಂಗಳೂರು ನಗರದಿಂದ ಕೇವಲ 35 ಕಿ.ಮೀ. ದೂರದಲ್ಲಿದೆ. ಈಗಾಗಲೇ ಮೆಟ್ರೊ ರೈಲು ಕೆಂಗೇರಿಯವರೆಗೂ ವಿಸ್ತರಣೆ ಆಗುತ್ತಿದೆ. ಅದು ಕುಂಬಳಗೋಡು ಪ್ರದೇಶವನ್ನು ದಾಟಿ ಇಲ್ಲಿಗೆ ಬರಲು ಹೆಚ್ಚು ಕಾಲ ಬೇಕಿಲ್ಲ ಎನ್ನುವ ಆಶಯದೊಂದಿಗೆ ಜನ ಇಲ್ಲಿ ನೆಲೆ ಕಂಡುಕೊಳ್ಳಲು ನಿವೇಶನಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಎಲ್ಲೆಲ್ಲಿ ನಿವೇಶನ ಲಭ್ಯ: ಬಿಡದಿ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ದೊಡ್ಡ ಕೈಗಾರಿಕೆಗಳು ಇವೆ. ಇಲ್ಲಿನ ಕೈಗಾರಿಕೆಗಳಲ್ಲಿ ಕೆಲಸ ಮಾಡಲೆಂದು ವಲಸೆ ಬಂದವರಿಗೆ ಸೂರು ಒದಗಿಸುವ ಸಲುವಾಗಿ ರಿಯಲ್‌ ಎಸ್ಟೇಟ್ ಉದ್ಯಮ ಚುರುಕಾಗಿದೆ. ಬಿಡದಿ ಕೈಗಾರಿಕಾ ಪ್ರದೇಶವು ಎರಡು ಹಂತದಲ್ಲಿ ಅಭಿವೃದ್ಧಿಗೊಂಡಿದೆ. ಇಲ್ಲಿ ಕೈಗಾರಿಕೆಗಳ ಸಮೀಪ ಹತ್ತಾರು ಲೇಔಟ್‌ಗಳು, ಟೌನ್‌ಶಿಪ್‌ಗಳು ತಲೆ ಎತ್ತಿವೆ. ಉತ್ತಮ ರಸ್ತೆಗಳು, ಒಳಚರಂಡಿ ವ್ಯವಸ್ಥೆ ಮೊದಲಾದ ಸೌಕರ್ಯಗಳ ಮೂಲಕ ಗ್ರಾಹಕರನ್ನು ಸೆಳೆಯಲು ಪೈಪೋಟಿಗೆ ಬಿದ್ದಿವೆ.

ಕೇವಲ ಕೈಗಾರಿಕಾ ಪ್ರದೇಶ ಮಾತ್ರವಲ್ಲ, ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಹಳ್ಳಿಗಳೂ ನಗರೀಕರಣಕ್ಕೆ ತೆರೆದುಕೊಂಡಿವೆ. ಹೆಜ್ಜಾಲ, ಶೇಷಗಿರಿಹಳ್ಳಿ, ಮಂಚನಾಯಕನಹಳ್ಳಿ, ಬನ್ನಿಕುಪ್ಪೆ, ಗಾಣಕಲ್‌ ಮೊದಲಾದ ಗ್ರಾಮಗಳ ಜಮೀನು ಭೂಪರಿವರ್ತನೆಗೊಂಡು ನಿವೇಶನಗಳು ಹಂಚಿಕೆಯಾಗಿವೆ. ವಿವಿಧ ಸಂಘ–ಸಂಸ್ಥೆಗಳು ಇಲ್ಲಿ ಈಗಾಗಲೇ ಲೇಔಟ್‌ಗಳನ್ನು ನಿರ್ಮಿಸುತ್ತಿವೆ.

ಕರ್ನಾಟಕ ರಾಜ್ಯ ಗೃಹಮಂಡಳಿ ಸಹ ಇಲ್ಲಿ ಬಡಾವಣೆಗಳ ನಿರ್ಮಾಣಕ್ಕೆ ಮುಂದಾಗಿದೆ. ಕಾಕರಾಮನಹಳ್ಳಿ, ಬೋರೆಹಳ್ಳಿ, ಮಾದಾಪುರ ಮೊದಲಾದ ಕಡೆಗಳಲ್ಲಿ ಈಗಾಗಲೇ ಮಂಡಳಿಯಿಂದ ನಿವೇಶನಗಳು ರಚನೆಯಾಗಿವೆ.

‘ಬೆಂಗಳೂರಿನ ಸಂಚಾರ ದಟ್ಟಣೆಯಿಂದ ಬೇಸತ್ತವರಿಗೆ ಇದು ಕೊಂಚ ನೆಮ್ಮದಿ ನೀಡಬಹುದಾದ ಸ್ಥಳ. ವಿಸ್ತಾರವಾದ, ಪೂರ್ವ ನಿಯೋಜಿತ ವಿನ್ಯಾಸದ ಬಡಾವಣೆಗಳು ಇಲ್ಲಿ ನಿರ್ಮಾಣವಾಗುತ್ತಿವೆ. ಸಣ್ಣ ಅಳತೆಯ ನಿವೇಶನದಿಂದ ಹಿಡಿದು ದೊಡ್ಡದೊಡ್ಡ ವಿಲ್ಲಾಗಳವರೆಗೆ ನಿವೇಶನಗಳು ಲಭ್ಯವಿದೆ. ಪ್ರಸಿದ್ಧ ಕಂಪೆನಿಗಳು ಟೌನ್‌ಶಿಪ್‌ಗಳ ನಿರ್ಮಾಣದ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಎಲ್ಲ ವರ್ಗಕ್ಕೂ ಒಪ್ಪತಕ್ಕ ನಿವೇಶನಗಳು ಇಲ್ಲಿ ಲಭ್ಯವಿದೆ’ ಎನ್ನುತ್ತಾರೆ ಬಿಡದಿಯ ರಿಯಲ್ ಎಸ್ಟೇಟ್ ಏಜೆಂಟ್‌ ರಮೇಶ್.

‘ಇಲ್ಲಿನ ಜನರಿಗೆ ಅಪಾರ್ಟ್‌ಮೆಂಟ್‌ ಸಂಸ್ಕೃತಿ ಇನ್ನೂ ಹೊಸತು. ಜನರು ಫ್ಲಾಟ್‌ಗಳನ್ನು ಹೊಂದುವ ಬದಲು ಹೆಚ್ಚಾಗಿ ನಿವೇಶನಗಳನ್ನೇ ಖರೀದಿಸಲು ಇಷ್ಟಪಡುತ್ತಿದ್ದಾರೆ' ಎನ್ನುತ್ತಾರೆ ಅವರು.

ಬೆಲೆ ವಿಚಾರ: ನಿವೇಶನಗಳ ಬೆಲೆ ಈಗಾಗಲೇ ಗಗನ ಮುಟ್ಟುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಪ್ರತಿ ಚದರ ಅಡಿಗೆ ₹800–1000 ಬೆಲೆ ಇದೆ. ಪಟ್ಟಣಕ್ಕೆ ಸಮೀಪ ಇರುವ ಪ್ರದೇಶಗಳಲ್ಲಿ ₹2000ದಿಂದ ₹3000 ಮುಟ್ಟಿದೆ. ನಿವೇಶನಗಳ ಬೆಲೆಯು ಅಲ್ಲಿರುವ ಮೂಲ ಸೌಕರ್ಯಗಳನ್ನು ಅವಲಂಬಿಸಿದೆ.

ಬಿಡದಿ ಪಟ್ಟಣ ಇದೀಗ ಪುರಸಭೆಯಾಗಿ ಪರಿವರ್ತನೆಗೊಂಡಿದೆ. ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳು ಇದರ ವ್ಯಾಪ್ತಿಯಲ್ಲಿವೆ. ಕೈಗಾರಿಕಾ ಪ್ರದೇಶದ ಕೆಲವೊಂದು ಭಾಗ ಪುರಸಭೆಗೆ ಒಳಪಡುತ್ತದೆ. ಸ್ಥಳೀಯ ನಿಯಮಾವಳಿಗಳಿಗೆ ಅನುಗುಣವಾಗಿ ‘11ಬಿ’ ಅಡಿ ಖಾತೆ ನೋಂದಣಿ ಮೂಲಕ ವ್ಯವಹರಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ ‘9/11’ ಫಾರಂ ಮೂಲಕ ಖಾತೆ ಮಾಡಿಕೊಡಲಾಗುತ್ತದೆ. ಇಲ್ಲಿ ರಚನೆಯಾಗಿರುವ ಬಡಾವಣೆಗಳು ಬಿಎಂಆರ್‌ಡಿಎ ಅನುಮೋದನೆ ಪಡೆಯುವುದು ಕಡ್ಡಾಯ.

ಎಚ್ಚರ ಅಗತ್ಯ: ಬಿಡದಿಯ ಸುತ್ತಮುತ್ತಲೂ ಕೆಲವು ಕಡೆ ಅಕ್ರಮ ಬಡಾವಣೆಗಳು ತಲೆ ಎತ್ತಿವೆ. ಕೆಲವು ಬಡಾವಣೆಗಳಲ್ಲಿ ದೇವಸ್ಥಾನ, ಉದ್ಯಾನಕ್ಕೆಂದು ಜಾಗ ತೋರಿಸಿ ಅವುಗಳನ್ನೂ ಇತರರಿಗೆ ಮಾರಿರುವ ಉದಾಹರಣೆಗಳೂ ಇವೆ. ಅದರಲ್ಲೂ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಇಂತಹ ಅಕ್ರಮಗಳು ಹೆಚ್ಚು. ಹೀಗಾಗಿ ನಿವೇಶನ ಕೊಳ್ಳುವ ಮುನ್ನ ದಾಖಲೆಪತ್ರಗಳನ್ನು ಪರಿಶೀಲಿಸುವುದು, ಸ್ಥಳೀಯ ಪಂಚಾಯಿತಿ, ಪ್ರಾಧಿಕಾರದ ಮಟ್ಟದಲ್ಲಿ ವಿಚಾರಿಸಿಕೊಳ್ಳುವುದು ಒಳಿತು ಎನ್ನುವುದು ಈ ಉದ್ಯಮದಲ್ಲಿ ತೊಡಗಿಸಿಕೊಂಡವರ ಸಲಹೆ.

ಬೆಂಗಳೂರು–ಮೈಸೂರು ಹೆದ್ದಾರಿಯು ಇದೀಗ ಅಷ್ಟಪಥದ ರಸ್ತೆಯಾಗಿ ಪರಿವರ್ತನೆ ಆಗುತ್ತಿದ್ದು, ಈಗಾಗಲೇ ಕಾಮಗಾರಿಗಳು ಆರಂಭಗೊಂಡಿವೆ. ಇದು ಪೂರ್ಣಗೊಂಡ ಬಳಿಕ ಈ ಭಾಗದಲ್ಲಿ ಅತ್ಯುತ್ತಮ ರಸ್ತೆ ಸಂಪರ್ಕ ಲಭ್ಯವಾಗಲಿದ್ದು, ಟ್ರಾಫಿಕ್ ಸಮಸ್ಯೆಯೂ ತಕ್ಕಮಟ್ಟಿಗೆ ಬಗೆಹರಿಯುವ ನಿರೀಕ್ಷೆ ಇದೆ. ರೈಲು ಸಂಪರ್ಕವೂ ಉತ್ತಮವಾಗಿದೆ. ವೈಟ್‌ಫೀಲ್ಡ್‌ನಿಂದ ರಾಮನಗರದವರೆಗೆ ‘ಮೆಮು’ ರೈಲು ಸಂಚಾರವೂ ಸಾಧ್ಯವಾಗಿದೆ. ನೀರು ಪೂರೈಕೆಯೂ ತಕ್ಕಮಟ್ಟಿಗೆ ಇದೆ. ಎಂಜಿನಿಯರಿಂಗ್‌, ವೈದ್ಯಕೀಯ ಕಾಲೇಜು ಸಹಿತ ಹತ್ತಾರು ಶಿಕ್ಷಣ ಸಂಸ್ಥೆಗಳು ಸಮೀಪದಲ್ಲಿವೆ.

’ಬಿಡದಿ ಕೈಗಾರಿಕಾ ಪ್ರದೇಶವು ಉದ್ಯೋಗಗಳ ಆಗರ. ರಂಜನೆಗೆ ಇನೋವೇಟಿವ್‌ ಫಿಲ್ಮ್‌ಸಿಟಿ, ವಂಡರ್‌ಲಾ ವಿಲೇಜ್‌ನಂತಹ ದೊಡ್ಡ ತಾಣಗಳಿವೆ. ಎಲ್ಲವನ್ನೂ ತೂಕ ಮಾಡಿ ನೋಡುವುದಾದರೆ ಬಿಡದಿಯು ಭವಿಷ್ಯದಲ್ಲಿ ಉತ್ತಮ ಆಯ್ಕೆ ಆಗಬಹುದು’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್ ನಟರಾಜು.

ಸ್ಮಾರ್ಟ್‌ ಸಿಟಿ ಕನಸು

‘ಬಿಡದಿ ಸ್ಮಾರ್ಟ್‌ ಸಿಟಿ’ ನಿರ್ಮಾಣ ಕನಸು ಗರಿಗೆದರಿ ದಶಕವೇ ಕಳೆದಿದೆ. ಉದ್ದೇಶಿತ ಸ್ಮಾರ್ಟ್‌ ಸಿಟಿ ನಿರ್ಮಾಣಕ್ಕೆ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವು (ಬಿಎಂಆರ್‌ಡಿಎ) ಯೋಜನೆ ಸಿದ್ಧಪಡಿಸುತ್ತಿದ್ದು, ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಬಿಡದಿ ಹಾಗೂ ಸುತ್ತಲಿನ 10 ಹಳ್ಳಿಗಳನ್ನು ಒಳಗೊಂಡು ಸುಮಾರು 9 ಸಾವಿರ ಹೆಕ್ಟೇರ್‌ನಷ್ಟು ವಿಸ್ತೀರ್ಣದಲ್ಲಿ ದೊಡ್ಡ ನಗರಿ ನಿರ್ಮಾಣದ ಗುರಿಯೂ ಇದೆ. ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ. ರಾಜ್ಯ ಸರ್ಕಾರವು ಈಚೆಗೆ ಬಿಡದಿಗೆ ಪ್ರತ್ಯೇಕವಾಗಿ ಯೋಜನಾ ಪ್ರಾಧಿಕಾರವನ್ನೂ ರಚಿಸಲು ಮುಂದಾಗಿದೆ. ಸ್ಮಾರ್ಟ್‌ ಸಿಟಿ ಕನಸು ನನಸಾಗಿದ್ದೇ ಆದಲ್ಲಿ ಇಲ್ಲಿನ ಚಿತ್ರಣವೇ ಬದಲಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT