3

ಕೊಲ್ಲುವವರಿದ್ದರು ಖರೆ, ಕಾಯುವವರಿದ್ದರೇ?

ಸುಧೀಂದ್ರ ಬುಧ್ಯ
Published:
Updated:
ಕೊಲ್ಲುವವರಿದ್ದರು ಖರೆ, ಕಾಯುವವರಿದ್ದರೇ?

ಸಾಮಾನ್ಯವಾಗಿ ರಾಜಕೀಯ ಹತ್ಯೆಗಳ ವಿಷಯದಲ್ಲಿ ಇಂತಹ ಗೊಂದಲಗಳು ಇರುತ್ತವೆ. ನ್ಯಾಯಾಲಯದಲ್ಲಿ ಸಾಕ್ಷಿ ಪುರಾವೆಗಳ ತುಲನೆಯಾಗಿ ತೀರ್ಪು ಬಂದ ನಂತರವೂ ತೀರ್ಪಿನ ಬಗ್ಗೆ ಅಪಸ್ವರ, ಒಳಸಂಚಿನ ಕುರಿತಾದ ಕತೆ-ಉಪಕತೆಗಳು ಕೇಳಿಬರುತ್ತವೆ. ಅಮೆರಿಕದ ಮಟ್ಟಿಗೆ ಹೇಳುವುದಾದರೆ, ಜಾನ್ ಕೆನಡಿ ಹತ್ಯೆ ಕುರಿತ ತನಿಖೆ ಇನ್ನೂ ಹಲವರಲ್ಲಿ ಅಸಮಾಧಾನ ಉಳಿಸಿದೆ. 1963ರಲ್ಲಿ ನಡೆದ ಹತ್ಯೆಯ ಕುರಿತು, ತನಿಖೆ ನಡೆಸಿ 1964ರಲ್ಲಿ ವರದಿ ನೀಡಿದ್ದ ವಾರೆನ್ ಆಯೋಗ, ಆಸ್ವಲ್ಡ್ ಎಂಬಾತ ಗುಂಡು ಹಾರಿಸಿ ಕೆನಡಿ ಹತ್ಯೆ ನಡೆಸಿದ್ದನ್ನು ಖಚಿತ ಪಡಿಸಿತ್ತು. ಆದರೆ ನಂತರ 1968, 1975 ಮತ್ತು 1978ರಲ್ಲಿ ನಡೆದ ಮೂರು ತನಿಖೆಗಳು ‘ಕೆನಡಿ ಹತ್ಯೆಯಾಗಿದ್ದು ಹಿಂದಿನಿಂದ ತೂರಿಬಂದ ಮತ್ತೆರಡು ಗುಂಡುಗಳಿಂದ’ ಎಂಬ ಸಂಗತಿಯನ್ನು ಅನಾವರಣಗೊಳಿಸಿದ್ದವು. ಹಾಗಾಗಿ ‘ಮ್ಯಾಜಿಕ್ ಬುಲೆಟ್ ಥಿಯರಿ’ ಹೆಚ್ಚು ಚರ್ಚೆಗೆ ಒಳಪಟ್ಟಿತು. ಒಳಸಂಚು ರೂಪಿಸಿದವರಾರು ಎಂಬ ಪ್ರಶ್ನೆಗೆ ಸಿಐಎ, ರಷ್ಯಾ, ಲಿಂಡನ್ ಜಾನ್ಸನ್, ಕೆನಡಿ ಪತ್ನಿ ಜಾಕಲಿನ್ ಕೆನಡಿ ಎಂಬ ವಿವಿಧ ಉತ್ತರಗಳು ಬರತೊಡಗಿದವು. ಈಗಲೂ ಆಗೀಗ ಈ ವಿಷಯ ಮುನ್ನೆಲೆಗೆ ಬಂದು ಚರ್ಚೆಯಾಗುವುದಿದೆ.

ಇನ್ನು, ಭಾರತದ ಮಟ್ಟಿಗೆ ಹೆಚ್ಚು ಚರ್ಚೆಯಾದ, ಅನುಮಾನಕ್ಕೆ ಆಸ್ಪದ ನೀಡಿದ ಹತ್ಯೆ ಎಂದರೆ ಮಹಾತ್ಮ ಗಾಂಧಿಯದ್ದು. ಇದೀಗ ಮತ್ತೊಮ್ಮೆ ಗಾಂಧಿ ಹತ್ಯೆ ಚರ್ಚೆಯ ವಿಷಯವಾಗಿದೆ. ಮುಂಬೈನ ಡಾ. ಪಂಕಜ್ ಫಡ್ನಿಸ್, ಸುಪ್ರಿಂ ಕೋರ್ಟಿಗೆ ಸಲ್ಲಿಸಿದ್ದ ತಮ್ಮ ಅರ್ಜಿಯಲ್ಲಿ ‘ಹಿಂದೆ ನಡೆದ ತನಿಖೆಯು ದೊಡ್ಡದೊಂದು ಪ್ರಕರಣವನ್ನು ಮುಚ್ಚಿಹಾಕುವ ಯತ್ನವಾಗಿತ್ತೇ ಮತ್ತು ಪ್ರಕರಣದಲ್ಲಿ ವಿ.ಡಿ. ಸಾವರ್ಕರ್ ಅವರನ್ನು ಎಳೆದು ತರಲು ಸಮರ್ಪಕ ಕಾರಣಗಳಿದ್ದವೇ, ಗಾಂಧಿಯನ್ನು ಉಳಿಸಿಕೊಳ್ಳಲು ಸಿಐಎ ಪ್ರಯತ್ನಿಸುತ್ತಿತ್ತೇ’ ಎಂಬ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ‘ಗಾಂಧಿ ದೇಹವನ್ನು ಗೋಡ್ಸೆ ಬಂದೂಕಿನ ಮೂರು ಗುಂಡುಗಳಲ್ಲದೇ, ನಾಲ್ಕನೇ ಗುಂಡು ಹೊಕ್ಕಿತ್ತೇ ಎಂಬುದರ ಬಗ್ಗೆ ತನಿಖೆಯಾಗಬೇಕು’ ಎಂಬ ಆಗ್ರಹವನ್ನೂ ಅರ್ಜಿಯಲ್ಲಿ ಸೇರಿಸಿದ್ದಾರೆ. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಪೀಠ, ಹಿರಿಯ ವಕೀಲ ಅಮರೇಂದರ್ ಶರಣ್ ಅವರನ್ನು ದಾಖಲೆ ಪರಿಶೀಲಿಸಲು ಅಮಿಕಸ್ ಕ್ಯೂರಿಯಾಗಿ ನೇಮಕ ಮಾಡಿದೆ.

ಹಾಗಾದರೆ ಗಾಂಧಿ ಹತ್ಯೆ ನಡೆದು ದಶಕಗಳು ಕಳೆದ ಮೇಲೂ ಇಂತಹ ಪ್ರಶ್ನೆಗಳು, ಸಂದೇಹಗಳು ಏಳುವುದು ಏಕೆ? ಹತ್ಯೆಗೆ ಪ್ರೇರಣೆ ನೀಡಿದ ಸಂಗತಿಗಳಿಗಿದ್ದ ವಿವಿಧ ಆಯಾಮಗಳು, ತನಿಖೆಯಲ್ಲಿ ನಿರ್ಲಕ್ಷಿಸಲಾದ ಅಂಶಗಳು, ಅಂದಿನ ಸಂಕೀರ್ಣ ಸಮಾಜೋ ರಾಜಕೀಯ ಸ್ಥಿತಿಗತಿ ಮತ್ತು ನಂತರದ ದಿನಗಳಲ್ಲಿ ಈ ವಿಷಯಕ್ಕೆ ಸಿಕ್ಕ ರಾಜಕೀಯ ಮಹತ್ವ ಬಹುಶಃ ಹತ್ಯೆ ಬಗೆಗಿನ ಸಂಶಯವನ್ನು ಗಾಢವಾಗಿಸುತ್ತಾ, ಹಲವು ಪ್ರಶ್ನೆಗಳನ್ನು ಹಾಗೆಯೇ ಉಳಿಸಿದೆ. ನಿಜ, ಗಾಂಧಿಯನ್ನು ಕೊಲ್ಲಲು ಬಯಸಿ ಯಶಸ್ವಿಯಾದವನು ನಾಥೂರಾಮ ಗೋಡ್ಸೆ. ಆದರೆ ಗಾಂಧಿಯನ್ನು ಉಳಿಸಿಕೊಳ್ಳಲು ಬಯಸಿದ್ದವರು ಅವರ ಆಪ್ತವಲಯದಲ್ಲಿ ಇದ್ದರೆ? ಈ ಪ್ರಶ್ನೆಯೊಂದಿಗೇ ಗಾಂಧಿ ಹತ್ಯೆ ಮತ್ತು ಅದಕ್ಕೆ ಹಿನ್ನೆಲೆಯಾಗಿ ನಡೆದ ಘಟನೆಗಳನ್ನು ನೋಡಬೇಕು.

'If we go down in Delhi, we are finished'. ಮೌಂಟ್ ಬ್ಯಾಟನ್ ಆಡಿದ್ದ ಈ ಮಾತು ದೇಶ ವಿಭಜನೆಯ ಬಗ್ಗೆ ಜನರಿಗಿದ್ದ ಆಕ್ರೋಶವನ್ನು ಪ್ರತಿಧ್ವನಿಸಿತ್ತು. ಭಾರತ ಮತ್ತು ಪಾಕಿಸ್ತಾನದ ಗಡಿ ಗುರುತಿಸಿದ ಬಳಿಕ, ಅತ್ತಲಿನಿಂದ ಹೊರಟ ಪ್ರತೀ ರೈಲು ರಾಶಿ ರಾಶಿ ಹೆಣಗಳನ್ನು, ಅತ್ಯಾಚಾರಕ್ಕೊಳಗಾದ ಮಹಿಳೆಯರು ಮತ್ತು ರಕ್ತ ಮೈಮೆತ್ತಿಕೊಂಡ ಮಕ್ಕಳನ್ನು ಹೊತ್ತು ದೆಹಲಿ ತಲುಪುತ್ತಿತ್ತು. ನಿರಾಶ್ರಿತರಾಗಿ ಬಂದವರು ತಮಗಾದ ನೋವು, ಹಿಂಸೆಯ ಸೇಡನ್ನು ತೀರಿಸಿಕೊಳ್ಳಲು ಮುಂದಾಗುತ್ತಿದ್ದರು. ಗುಂಪುಗುಂಪಾಗಿ ದೆಹಲಿಯ ಮಸೀದಿಗಳಿಗೆ ಮುತ್ತಿಗೆ ಹಾಕಿ ಅಲ್ಲೇ ಬೀಡು ಬಿಟ್ಟರು. ಕೆಲವನ್ನು ದೇವಾಲಯವನ್ನಾಗಿ, ಗುರುದ್ವಾರವನ್ನಾಗಿ ಮಾರ್ಪಡಿಸಲಾಯಿತು. ಅತ್ತ ಪಾಕಿಸ್ತಾನದಲ್ಲಿ ದೇವಾಲಯಗಳನ್ನು ಕುರುಹು ಸಿಗದಂತೆ ನಾಶಪಡಿಸಲಾಯಿತು. ಗಾಂಧಿ ಚಡಪಡಿಸಿದರು.

ವಿಭಜನೆಯೊಂದಿಗೆ ದೇಶದ ಒಟ್ಟು ಚರಾಸ್ತಿಯನ್ನು ಎರಡು ದೇಶಗಳ ಮಧ್ಯೆ ಹಂಚಿಕೊಳ್ಳುವ ತೀರ್ಮಾನವಾಗಿತ್ತು. ಅಂತೆಯೇ ಖಜಾನೆಯಿಂದ ಪಾಕಿಸ್ತಾನಕ್ಕೆ ₹ 55 ಕೋಟಿ ಕೊಡಬೇಕೆಂದು ಬ್ರಿಟಿಷರೆದುರು ಒಪ್ಪಂದವಾಗಿತ್ತು. ಆದರೆ ಅಷ್ಟರಲ್ಲಾಗಲೇ ಪಾಕ್, ತನ್ನವರನ್ನು ಗುಡ್ಡಗಾಡು ಜನರ ಸೋಗಿನಲ್ಲಿ ಕಳುಹಿಸಿ ಕಾಶ್ಮೀರದ ಕೆಲವು ಭಾಗಗಳನ್ನು ಆಕ್ರಮಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಹಾಗಾಗಿ ಆಕ್ರಮಣದಿಂದ ಹಿಂದೆ ಸರಿಯದಿದ್ದರೆ ಒಂದು ಪೈಸೆಯನ್ನೂ ಕೊಡಲಾಗದು ಎಂದು ಸರ್ದಾರ್ ಪಟೇಲರು ಧ್ವನಿಯೇರಿಸಿ ಸಂಪುಟ ಸಭೆಯಲ್ಲಿ ಹೇಳಿದ್ದರು. ಇತರರು ಹೌದೆಂದರು. ಆದರೆ ಮೌಂಟ್ ಬ್ಯಾಟನ್, ಸರ್ಕಾರದ ನಿರ್ಧಾರ ಸರಿಯಲ್ಲವೆಂದು ಗಾಂಧಿ ಬಳಿ ಅಲವತ್ತುಕೊಂಡರು. ಗಾಂಧಿ ಎಂದಿನಂತೆ ಉಪವಾಸದ ಅಸ್ತ್ರ ಬಳಸಿದರು. ‘ದೆಹಲಿಯಲ್ಲಿ ನರಮೇಧ ನಿಲ್ಲಬೇಕು. ನಿರಾಶ್ರಿತರು ಆಕ್ರಮಿಸಿಕೊಂಡಿರುವ ಮಸೀದಿಗಳನ್ನು ತೆರವು ಗೊಳಿಸಬೇಕು. ಖ್ವಾಜಾ ಕುತುಬುದ್ದೀನ್ ಸಮಾಧಿಯಲ್ಲಿ ಮುಸ್ಲಿಮರು ವಾರ್ಷಿಕ ಆಚರಣೆ ನಡೆಸುವುದಕ್ಕೆ ಅಡ್ಡಿಯಾಗಕೂಡದು. ಪಾಕಿಸ್ತಾನಕ್ಕೆ ಸೇರಬೇಕಾದ ₹ 55 ಕೋಟಿ ಹಣವನ್ನು ಕೊಡಬೇಕು’ ಎಂಬ ಆಗ್ರಹ ಅವರ ಉಪವಾಸಕ್ಕೆ ಜೋಡಣೆಯಾಗಿತ್ತು. ಗಾಂಧಿ ಉಪವಾಸ ಕೂತಾಗ ಪಟೇಲರು ಸಿಟ್ಟಾಗಿ ರಾಜೀನಾಮೆ ನೀಡಲು ಮುಂದಾಗಿದ್ದರು.

ಗಾಂಧೀಜಿ ತಮ್ಮ ಕೊನೆಯ ಉಪವಾಸ ಕೂಡುವ ಮುನ್ನ ಗೋಡ್ಸೆ ಎರಡು ಉದ್ದೇಶಗಳಿಗಾಗಿ ಶಸ್ತ್ರಾಸ್ತ್ರ ಖರೀದಿಗೆ ಹಣ ಸಂಗ್ರಹಿಸುತ್ತಿದ್ದ ಬಗ್ಗೆ ವರದಿಗಳಿವೆ. ಪಾಕಿಸ್ತಾನದಲ್ಲಿ ಪ್ರಜಾಪ್ರತಿನಿಧಿ ಸಭೆ ನಡೆಯುವ ಕಟ್ಟಡವನ್ನು ಸ್ಫೋಟಿಸುವುದು ಹಾಗೂ ವಿಭಜನೆಯ ಭಾಗವಾಗಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಹೊತ್ತೊಯ್ಯುತ್ತಿದ್ದ ಎರಡು ರೈಲುಗಳನ್ನು ಮಾರ್ಗಮಧ್ಯೆ ಸ್ಫೋಟಿಸಿ, ಶಸ್ತ್ರಗಳು ಪಾಕಿಸ್ತಾನಕ್ಕೆ ದೊರೆಯದಂತೆ ಮಾಡುವುದು. ಈ ಎರಡೂ ಕೈಗೂಡದಾಗ ಗಾಂಧಿ ಹತ್ಯೆ ಯೋಜನೆಯನ್ನು ಗೋಡ್ಸೆ ಮತ್ತು ಆಪ್ಟೆ ರೂಪಿಸಿದರು. ಜನವರಿ 20ರಂದು ಪ್ರಾರ್ಥನೆಯ ವೇಳೆ ಗಾಂಧಿ ಹತ್ಯೆ ಮಾಡಲು ಯೋಜನೆ ಸಿದ್ಧವಾಯಿತು. ಆದರೆ ಯೋಜನೆ ಯಶ ಕಾಣಲಿಲ್ಲ. ಸ್ಫೋಟಕ್ಕೆ ಕಾರಣನಾದ ಮದನಲಾಲ್ ಪಾಹ್ವಾನನ್ನು ಪೊಲೀಸರು ಬಂಧಿಸಿದರು, ಆತನ ಕಿಸೆಯಲ್ಲಿದ್ದ ಗ್ರೆನೇಡ್ ವಶಪಡಿಸಿಕೊಳ್ಳಲಾಯಿತು. ಪೊಲೀಸ್ ವಿಚಾರಣೆಯ ವೇಳೆ ತಮ್ಮ ಸಂಚಿನ ಕುರಿತು ಪಾಹ್ವಾ ಬಾಯಿ ತೆರೆಯುವ ಮುನ್ನ, ಗುರಿ ಸಾಧಿಸಬೇಕು ಎಂಬ ತಹತಹ ಗೋಡ್ಸೆ ಸಂಗಡಿಗರಲ್ಲಿತ್ತು. 1948ರ ಜನವರಿ 30ರಂದು ಗಾಂಧಿ ಹತ್ಯೆಯಾಯಿತು.

1948ರ ಮೇ 27ರಿಂದ ನ್ಯಾಯಮೂರ್ತಿ ಆತ್ಮಚರಣ್ ಎದುರು ವಿಚಾರಣೆ ಆರಂಭವಾಯಿತು. ಸರ್ಕಾರ ಒಟ್ಟು ಎಂಟು ಆಪಾದಿತರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ನಾಥೂರಾಮ ಗೋಡ್ಸೆ, ಗೋಪಾಲ ಗೋಡ್ಸೆ, ನಾರಾಯಣ ಆಪ್ಟೆ, ವಿಷ್ಣು ಕರ್ಕರೆ, ಮದನಲಾಲ್‌ ಪಾಹ್ವಾ, ಶಂಕರ ಕಿಸ್ತಯ್ಯಾ, ದತ್ತಾತ್ರೇಯ ಪರ್ಚುರೆ ಮತ್ತು ವಿ.ಡಿ. ಸಾವರ್ಕರ್. 1949ರ ಜನವರಿ 10ರಂದು ತೀರ್ಪು ಪ್ರಕಟವಾಯಿತು. ಈ ತೀರ್ಪಿನಲ್ಲಿ ಸಾವರ್ಕರ್ ತಪ್ಪಿತಸ್ಥರಲ್ಲವೆಂದು ಘೋಷಿಸಿ ಬಿಡುಗಡೆ ಮಾಡಲಾಯಿತು. ನಾಥೂರಾಮ ಗೋಡ್ಸೆ ಮತ್ತು ನಾರಾಯಣ ಆಪ್ಟೆಗೆ ಮರಣದಂಡನೆ ಹಾಗೂ ಉಳಿದ ಐದು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆದರೆ ನಂತರ ನ್ಯಾಯಮೂರ್ತಿ ಆತ್ಮಚರಣ್ ತೀರ್ಪು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ತನಗಾದ ಶಿಕ್ಷೆಯ ವಿರುದ್ಧ ಗೋಡ್ಸೆ ಯಾವುದೇ ಮೇಲ್ಮನವಿ ಸಲ್ಲಿಸಲಿಲ್ಲ. ಇತರರ ಪರ ವಕೀಲರು ವಾದಿಸಿದರು, ಗೋಡ್ಸೆ ತಾನೇ ತನ್ನ ಪರ ವಕಾಲತ್ತು ವಹಿಸಿದ. ಆ ತ್ರಿಸದಸ್ಯ ಪೀಠದಲ್ಲಿದ್ದ ಜಿ.ಡಿ. ಖೋಸ್ಲಾ, ‘ದಿ ಮರ್ಡರ್ ಆಫ್ ಮಹಾತ್ಮ’ ಕೃತಿಯಲ್ಲಿ ಅಂದು ಗೋಡ್ಸೆ ಮಂಡಿಸಿದ ವಾದ ವೈಖರಿಯ ಬಗ್ಗೆ ಬರೆಯುತ್ತಾ ‘ಅಂದು ಗೋಡ್ಸೆ ನ್ಯಾಯಾಲಯದಲ್ಲಿ ತನ್ನ ಹೇಳಿಕೆ ನೀಡುತ್ತಿದ್ದಾಗ ಅಲ್ಲಿದ್ದ ಹಲವರ ಕಣ್ಣುಗಳು ತೇವವಾಗಿದ್ದವು. ಅಂದು ನ್ಯಾಯಾಲಯದಲ್ಲಿ ಹಾಜರಿದ್ದವರನ್ನೇ ಜ್ಯೂರಿಗಳಾಗಿ ಮಾಡಿದ್ದಲ್ಲಿ, ಅವರು ಗೋಡ್ಸೆ ನಿರಪರಾಧಿಯೆಂದು ಘೋಷಿಸುತ್ತಿದ್ದರೇನೋ, ಅಂತಹ ಭಾವನಾತ್ಮಕ ಸನ್ನಿವೇಶ ಸೃಷ್ಟಿಯಾಗಿತ್ತು’ ಎಂದಿದ್ದಾರೆ. ಕೊನೆಗೆ ವಿಚಾರಣೆ ಮುಗಿದು, ಗೋಡ್ಸೆ ಮತ್ತು ಆಪ್ಟೆ ಗಲ್ಲಿಗೆ ತಲೆಯೊಡ್ಡಿದರು ಎನ್ನುವುದು ಈಗ ಇತಿಹಾಸ.

ಆದರೆ ನಂತರ ಹಲವು ಪ್ರಶ್ನೆಗಳು, ಒಳಸಂಚಿನ ಕತೆಗಳು ನ್ಯಾಯಾಲಯದ ಹೊರಗೆ ಮತ್ತು ಜನರ ನಡುವೆ ಬೆಳೆದವು. ಗಾಂಧಿಗೆ ಗೋಡ್ಸೆ ನಮಿಸುವಾಗ ಬೇರೊಬ್ಬ ಎತ್ತರದ, ಖಾದಿ ಕುರ್ತಾ ಪೈಜಾಮಾ ಧರಿಸಿದ್ದ ಆಸಾಮಿ ಹಿಂದಿನಿಂದ ಗುಂಡು ಹಾರಿಸಿದ. ಗಾಂಧಿ ಹತ್ಯೆಯ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಏಕೆ ಒಳಪಡಿಸಲಿಲ್ಲ? ಗಾಂಧಿ ಮೃತದೇಹವನ್ನು ಹೊತ್ತೊಯ್ಯುವಾಗ ಅವರ ವಸ್ತ್ರದಿಂದ ಕೆಳಗೆ ಬಿದ್ದ ಮತ್ತೊಂದು ಗುಂಡು ಯಾರ ತುಪಾಕಿಯಿಂದ ಸಿಡಿದದ್ದು? ಹೀಗೆ ಪ್ರಶ್ನೆಗಳು ಬೆಳೆಯುತ್ತಾ ಹೋದವು. ಈ ಎಲ್ಲಾ ಪ್ರಶ್ನೆಗಳನ್ನು ಪಕ್ಕಕ್ಕಿಟ್ಟರೂ ಒಂದು ಸಂದೇಹವಂತೂ ಬಹುವಾಗಿ ಕಾಡುತ್ತದೆ. ಗಾಂಧಿಯನ್ನು ಇನ್ನಷ್ಟು ವರ್ಷ ಉಳಿಸಿಕೊಳ್ಳಬೇಕು ಎಂಬ ಇಚ್ಛೆ ಅಂದು ಅಧಿಕಾರದಲ್ಲಿದ್ದ ಮತ್ತು ಆಪ್ತರು ಎನಿಸಿಕೊಂಡಿದ್ದವರಲ್ಲಿ ಇತ್ತೇ?

ರಾಜಮೋಹನ್ ಗಾಂಧಿ ತಮ್ಮ ‘ಮೋಹನದಾಸ್’ ಕೃತಿಯಲ್ಲಿ, ಕೊನೆಯ ದಿನಗಳಲ್ಲಿ ಗಾಂಧೀಜಿ ಮನಸ್ಥಿತಿ ಹೇಗಿತ್ತು ಎಂಬುದನ್ನು ವಿವರಿಸುತ್ತ ಕೆಲವು ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. 1946ರ ಡಿಸೆಂಬರ್ 30ರಂದು ನೆಹರೂಗೆ ಬರೆದ ಪತ್ರದಲ್ಲಿ ಗಾಂಧಿ ‘ಪ್ರಿಯ ಜವಾಹರಲಾಲ್, ಮಾರ್ಗದರ್ಶನಕ್ಕಲ್ಲದಿದ್ದರೂ ಈ ವೃದ್ಧ ದೇಶ ಸೇವಕನನ್ನು ಆಗಾಗ ಬಂದು ನೋಡುವುದನ್ನಾದರೂ ಮಾಡುತ್ತಿರಿ’ ಎಂದು ಬರೆದಿದ್ದರು. ಆದರೆ ಆ ವೇಳೆಗಾಗಲೇ ಗಾಂಧಿ ವಾಸ್ತವವನ್ನು ಅರಿಯದ ಆದರ್ಶವಾದಿ ಎಂಬ ಭಾವ ನೆಹರೂ, ಪಟೇಲ್ ಅವರಲ್ಲಿತ್ತು. ಸಿ.ರಾಜಗೋಪಾಲಾಚಾರಿ, ಕೃಪಲಾನಿ, ಆಜಾದ್ ಮತ್ತು ರಾಜೇಂದ್ರ ಪ್ರಸಾದರ ಅಭಿಪ್ರಾಯ ಅದಕ್ಕಿಂತ ಭಿನ್ನವಾಗಿರಲಿಲ್ಲ.

ಅದಾಗಲೇ ಐದಾರು ಬಾರಿ ನಡೆದಿದ್ದ ಹತ್ಯೆಯ ವಿಫಲ ಯತ್ನಗಳಿಂದ ಗಾಂಧಿ ತಮ್ಮ ಹತ್ಯೆಯಾಗುವುದು ಖಾತ್ರಿ ಎಂದು ನಂಬಿದ್ದರೆಂದು ಕಾಣುತ್ತದೆ, 1947ರ ಅಕ್ಟೋಬರ್ 26ರಂದು ತಮ್ಮನ್ನು ಕಾಣಲು ಬಂದ ವರ್ತಕ ಸಮುದಾಯದೆದುರು ‘ತನ್ನನ್ನು ಶಿಲುಬೆಗೇರಿಸಿದವರನ್ನು ಕ್ಷಮಿಸು ಭಗವಂತ ಎಂದು ಜೀಸಸ್ ಪ್ರಾರ್ಥಿಸಿದ್ದರು. ನನ್ನ ಹತ್ಯೆ ನಡೆದಾಗ ಹಂತಕನನ್ನು ಕ್ಷಮಿಸು ಎಂದು ಪ್ರಾರ್ಥಿಸುವ ಶಕ್ತಿ ನನಗೆ ಕೊಡು ಎಂಬುದು ನನ್ನ ನಿತ್ಯದ ಪ್ರಾರ್ಥನೆಯಾಗಿದೆ’ ಎಂದು ನುಡಿದಿದ್ದರು. ಈ ಸಂಗತಿಗಳೆಲ್ಲವೂ ಗಾಂಧಿ ವಾರಸುದಾರರಿಗೆ ಗೊತ್ತಿತ್ತು.

ಅದು ಹೋಗಲಿ, ಡಾ.ಜೆ.ಸಿ. ಜೈನ್ ಕೊಟ್ಟ ಮಾಹಿತಿಯಾದರೂ ಗಾಂಧೀಜಿಯನ್ನು ಉಳಿಸಬೇಕಿತ್ತು. ಬಾಂಬೆಯಲ್ಲಿದ್ದ ಡಾ.ಜೆ.ಸಿ. ಜೈನ್ ಹಿಂದಿ ಪ್ರಾಧ್ಯಾಪಕರಲ್ಲದೆ, ಲೇಖಕರಾಗಿದ್ದರು. ತಮ್ಮ ಸಂಪರ್ಕಕ್ಕೆ ಬಂದ ಪಾಹ್ವಾನಿಗೆ ಪುಸ್ತಕ ಮಾರುವ ನೌಕರಿ ನೀಡಿದ್ದರು. ಅನೌಪಚಾರಿಕ ಮಾತಿನ ನಡುವೆ ಪಾಹ್ವಾ, ತಾನು ರಾವ್ ಸಾಹೇಬ್ ಪಟವರ್ಧನ್ ಮೇಲೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಹಲ್ಲೆ ನಡೆಸಿದ್ದಾಗಿ ಹೇಳಿದ್ದ. ಜೊತೆಗೆ ಗಾಂಧಿ ಹತ್ಯೆಗೆ ಸಂಚು ರೂಪಿಸುತ್ತಿದ್ದೇವೆ ಎಂದಿದ್ದ. ಇದಾಗಿ ಕೆಲ ದಿನಗಳಲ್ಲೇ ಜನವರಿ 20ರಂದು ಬಿರ್ಲಾ ಹೌಸ್ ಘಟನೆ ನಡೆದದ್ದರಿಂದ ದಿಗಿಲುಗೊಂಡ ಜೈನ್, ಬಾಂಬೆ ಮುಖ್ಯಮಂತ್ರಿ ಬಿ.ಜಿ. ಖೇರ್, ಗೃಹ ಮಂತ್ರಿ ಮೊರಾರ್ಜಿ ದೇಸಾಯಿ ಅವರನ್ನು ಮರುದಿನ ಭೇಟಿಯಾಗಿ ವಿಷಯ ತಿಳಿಸಿದ್ದರು. ಒಂದು ಹತ್ಯೆ ತಡೆಯಲು ಒಂಬತ್ತು ದಿನಗಳ ಅವಧಿ ಕಡಿಮೆ ಆಗಿರಲಿಲ್ಲ. ಈ ಬಗ್ಗೆ ತಮ್ಮ ತೀರ್ಪಿನಲ್ಲಿ ಸರ್ಕಾರ ಮತ್ತು ಪೊಲೀಸರಿಗೆ ಆತ್ಮಚರಣ್ ಛೀಮಾರಿ ಹಾಕಿದ್ದರು.

ಹತ್ಯೆಯಾಗುವ ಮೂರು ತಿಂಗಳ ಮೊದಲು ಅಂದರೆ ನವೆಂಬರ್‌ನಲ್ಲಿ ಬರೆದ ಪತ್ರವೊಂದರಲ್ಲಿ ‘ಬಲಾಢ್ಯ ಭೀಮ, ಪರಾಕ್ರಮಿ ಅರ್ಜುನ, ಸತ್ಯಸಂಧ ಯುಧಿಷ್ಟಿರನಂತಹ ಗಂಡಂದಿರಿದ್ದೂ, ದ್ರೋಣ, ಭೀಷ್ಮ, ವಿಧುರನಿಂದ ಸೊಸೆಯೆನಿಸಿಕೊಂಡೂ, ತುಂಬಿದ ಸಭೆಯಲ್ಲಿ ದ್ರೌಪದಿ ಘೋರ ಸ್ಥಿತಿ ಅನುಭವಿಸಬೇಕಾಯಿತು. ಇಂದು ನನ್ನದೂ ದ್ರೌಪದಿಯ ಸ್ಥಿತಿಯೇ ಆಗಿದೆ. ಪ್ರತಿದಿನ ಭಗವಂತ ಕಾಯುತ್ತಿದ್ದಾನೆ’ ಎಂದು ಗಾಂಧಿ ಬರೆದಿದ್ದರು. ಬಿರ್ಲಾ ಭವನದಂತಹ ಭವ್ಯ ಕಟ್ಟಡದಲ್ಲಿ, ಅಧಿಕಾರದ ಚುಕ್ಕಾಣಿ ಹಿಡಿದ ನೆಹರೂ, ಪಟೇಲರ ಕಾವಲಿನಲ್ಲಿ ಗಾಂಧಿ ಇದ್ದರೂ ಹತ್ಯೆ ನಡೆಯಿತು ಎಂದರೆ ಏನು ಹೇಳುವುದು? ಕೊಲ್ಲಲು ಹೊಂಚು ಹಾಕಿದ್ದ ತಂಡವೇ ಇತ್ತು ದಿಟ. ಆದರೆ ಉಳಿಸಿಕೊಳ್ಳಬೇಕೆಂಬ ಹಂಬಲ ಯಾರಿಗಿತ್ತು? ಹೀಗಿರುವಾಗ ನಾಥೂರಾಮ ಗೋಡ್ಸೆಯ ತುಪಾಕಿಯಿಂದ ಚಿಮ್ಮಿದ ಗುಂಡುಗಳಷ್ಟೇ ಗಾಂಧಿಯನ್ನು ಕೊಂದದ್ದು ಎಂದು ಹೇಗೆ ಹೇಳುವುದು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry