ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಅಭ್ಯಾಸ ಪಂದ್ಯ: ಅಧ್ಯಕ್ಷರ ಇಲೆವನ್‌ಗೆ ಸೋಲು

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ : ರಾಸ್ ಟೇಲರ್ (102 ರನ್) ಮತ್ತು ಟಾಮ್ ಲಥಾಮ್ (108 ರನ್) ಅವರ ಅಮೋಘ ಶತಕಗಳ ಬಲದಿಂದ ನ್ಯೂಜಿಲೆಂಡ್ ತಂಡವು ಗುರುವಾರ  ಅಧ್ಯಕ್ಷರ ಇಲೆವನ್‌ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 33 ರನ್‌ಗಳಿಂದ ಜಯಿಸಿತು.

ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 343 ರನ್‌ ಗಳಿಸಿತು. ಸವಾಲಿನ ಮೊತ್ತ ಬೆನ್ನಟ್ಟಿದ ಭಾರತ ತಂಡ 47.1 ಓವರ್‌ಗಳಲ್ಲಿ 310 ರನ್‌ ಗಳಿಸಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಕರುಣ್ ನಾಯರ್‌ (53) ಅರ್ಧಶತಕ ದಾಖಲಿಸುವ ಮೂಲಕ ಚೈತನ್ಯ ತುಂಬಿದರು. 54 ಎಸೆತಗಳಲ್ಲಿ ಏಳು ಬೌಂಡರಿ ಬಾರಿಸಿದ ಈ ಆಟಗಾರ ಕಾಲಿನ್ ಮನ್ರೊ ಅವರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಗುರುಕೀರತ್ ಸಿಂಗ್‌ ಮಾನ್‌ (65) ಭಾರತದ ಇನಿಂಗ್ಸ್‌ ಕಳೆಗಟ್ಟುವಂತೆ ಆಡಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ 46 ಎಸೆತಗಳಲ್ಲಿ ಏಳು ಬೌಂಡರಿ ಬಾರಿಸಿದರು. ಇದರಲ್ಲಿ ಮೂರು ಸಿಕ್ಸರ್‌ ಕೂಡ ಸೇರಿವೆ.

ಆದರೆ ಭಾರತಕ್ಕೆ ಸುದೀರ್ಘ ಜತೆಯಾಟ ಆಡಲು ಸಾಧ್ಯವಾಗಲಿಲ್ಲ. ಶಿವಂ ಚೌಧರಿ (12), ಕರಣ್ ಶರ್ಮಾ (19), ಧವಳ್‌ ಕುಲಕರ್ಣಿ (24) ವಿಕೆಟ್ ಒಪ್ಪಿಸಿದರು. ಕೊನೆಯ ಓವರ್‌ಗಳಲ್ಲಿ ಮಿಂಚು ಹರಿಸಿದ ಬೌಲರ್ ಜಯದೇವ್‌ ಉನದ್ಕತ್‌ 24 ಎಸೆತಗಳಲ್ಲಿಯೇ 44 ರನ್ ಗಳಿಸಿದ್ದರು. ಆದರೆ ಕೆಟ್ಟ ಹೊಡೆತಕ್ಕೆ ಮುಂದಾದ ಅವರು ಮ್ಯಾಟ್ ಹೆನ್ರಿ ಅವರ ಬೌಲಿಂಗ್‌ನಲ್ಲಿ  ಕ್ಯಾಚ್‌ ನೀಡಿ ಹೊರನಡೆದರು. ಇದರಿಂದ ಇಲೆವನ್‌ ತಂಡ ನಿರಾಸೆ ಅನುಭವಿಸಿತು.

ಕಿವೀಸ್ ಬಳಗದ ಹನ್ನೊಂದು ಆಟಗಾರರೂ ಬೌಲಿಂಗ್ ಮಾಡಿದರು. ಮೈಕಲ್ ಸ್ಯಾಂಟನರ್‌ 44 ರನ್‌ಗಳಿಗೆ ಮೂರು ವಿಕೆಟ್ ಕಬಳಿಸಿದರು.

ರನ್‌ ಹೊಳೆ: ಮೊದಲು ಬ್ಯಾಟ್ ಮಾಡಿದ್ದ ಪ್ರವಾಸಿ ತಂಡದ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿದರು. ಮೊದಲ ಪಂದ್ಯದಲ್ಲಿ ಯುವ ಪಡೆಯೊಂದಿಗೆ ಸೋಲು ಕಂಡಿದ್ದ ಕಿವೀಸ್‌ ಬಳಗ ತಿರುಗೇಟು ನೀಡುವ ಉದ್ದೇಶದಿಂದ ಪೂರ್ಣ ತಯಾರಿಯೊಂದಿಗೆ ಕಣಕ್ಕಿಳಿದಿತ್ತು. 

ನ್ಯೂಜಿಲೆಂಡ್‌ ತಂಡ ಆರಂಭಿಕ ಆಘಾತ ಎದುರಿಸಿತು. ಮೂವರು ಬ್ಯಾಟ್ಸ್‌ ಮನ್‌ಗಳು ಕ್ರಮವಾಗಿ 36, 26 ಹಾಗೂ 1 ರನ್‌ ಗಳಿಸಿ ನಿರ್ಗಮಿಸಿದರು. ಮಧ್ಯಮ ಕ್ರಮಾಂಕದ ಆಟಗಾರರಾದ  ರಾಸ್ ಟೇಲರ್‌ (102), ಟಾಮ್ ಲಥಾಮ್ (108)  ಅವರು 166ರನ್‌ಗಳ ಜೊತೆಯಾಟವಾಡಿದರು. ಇಬ್ಬರೂ ಸೇರಿ ಒಟ್ಟು 21 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT