'ನಮಗೆ ಸಾವಿನದೇ ಚಿಂತೆ– ಅವರಿಗೆ ಸಂಭ್ರಮ ಬೇಕಂತೆ'

ಶುಕ್ರವಾರ, ಮೇ 24, 2019
28 °C
ವಿಧಾನಸೌಧ ವಜ್ರಮಹೋತ್ಸವ: ದುಂದು ವೆಚ್ಚಕ್ಕೆ ಜನರ ವಿರೋಧ

'ನಮಗೆ ಸಾವಿನದೇ ಚಿಂತೆ– ಅವರಿಗೆ ಸಂಭ್ರಮ ಬೇಕಂತೆ'

Published:
Updated:
'ನಮಗೆ ಸಾವಿನದೇ ಚಿಂತೆ– ಅವರಿಗೆ ಸಂಭ್ರಮ ಬೇಕಂತೆ'

ಬೆಂಗಳೂರು: ನಗರದಲ್ಲಿ ಒಂದರ ಹಿಂದೊಂದು ದುರಂತಗಳು ಸಂಭವಿಸುತ್ತಿವೆ. ಈ ಋತುವಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ 10 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಗುಂಡಿಮಯ ರಸ್ತೆ ನಾಲ್ವರ ಬಲಿ ಪಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ವಿಧಾನಸೌಧ ವಜ್ರಮಹೋತ್ಸವ ಸಲುವಾಗಿ ₹ 10 ಕೋಟಿ ಖರ್ಚು ಮಾಡುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸಿದ್ದಾರೆ.

ವಜ್ರ ಮಹೋತ್ಸವ ಹೆಸರಿನಲ್ಲಿ ಜನರಿಗೆ ಉಪಯೋಗವಾಗುವ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದು ಅನೇಕರು ಸಲಹೆ ನೀಡಿದ್ದಾರೆ. ಜನರ ಅಭಿಪ್ರಾಯಗಳು ಇಲ್ಲಿವೆ.

‘ಕೆರೆ ರಕ್ಷಣೆಗೆ ದುಡ್ಡಿಲ್ಲ– ಇದಕ್ಕೆಲ್ಲಿಂದ ಹಣ ತರುತ್ತಾರೆ’

ನಗರದ ಕೆರೆಗಳ ಸಂರಕ್ಷಣೆಗೆ ಅನುದಾನ ಒದಗಿಸಲು ಸರ್ಕಾರದ ಬಳಿ ದುಡ್ಡಿಲ್ಲ. ಈಗ ವಿಧಾನ ಸೌಧ ವಜ್ರಮಹೋತ್ಸವಕ್ಕೆ ಹೇಗೆ ₹ 10 ಕೋಟಿ  ಖರ್ಚು ಮಾಡುತ್ತಾರೆ. ಈ ಸಮಾರಂಭ ಮಾಡಬಾರದು ಎಂದು ಹೇಳುವುದಿಲ್ಲ. ಆದರೆ, ಅದು ಅರ್ಥಪೂರ್ಣ ಆಗಬೇಕು. ಬೆಂಗಳೂರಿನ ಜನ ವಿಪರೀತ ಮಳೆಯಿಂದ ಒದ್ದಾಡುತ್ತಿದ್ದಾರೆ. ಇಡೀ ನಗರ ದುರಂತದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅದ್ಧೂರಿ ಸಂಭ್ರಮ ಬೇಕೇ.

ವಿಜಯ್‌ ನಿಶಾಂತ್‌, ಪರಿಸರ ಕಾರ್ಯಕರ್ತ

***

‘ಜನಪರ ಯೋಜನೆ ಮೂಲಕ ಆಚರಿಸಲಿ’

ವಜ್ರಮಹೋತ್ಸವದ ಸಂಭ್ರಮ ಅರ್ಥಪೂರ್ಣ ಆಗಬೇಕಾದರೆ ಈ ಪ್ರಯುಕ್ತ ಜನಪರ ಯೋಜನೆಯನ್ನು ಹಮ್ಮಿಕೊಳ್ಳಲಿ. ಮೂಲಸೌಕರ್ಯ ನಿರ್ಮಿಸಲಿ. ನಗರದ ರಸ್ತೆಗಳೆಲ್ಲ ಗುಂಡಿಬಿದ್ದಿವೆ. ಜನ ಸಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾರ್ಯಕ್ರಮವೊಂದಕ್ಕೆ ₹ 10 ಕೋಟಿ ಖರ್ಚು ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಭೂಷಣವಲ್ಲ.

ಜಗದೀಶ್‌ ಶೆಟ್ಟರ್‌ ಕೊಟ್ಟೂರು, ಸರ್ಜಾಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

***

‘ಇದೊಳ್ಳೆ ತಮಾಷೆಯಾಗಿದೆ’

ರೈತರ ಸಾಲ ಮನ್ನಾದ ಮೊತ್ತವನ್ನು ಹೊಂದಿಸಲು ಮೈಸೂರು ಮಿನರಲ್ಸ್‌ ಸಂಸ್ಥೆಯ ಹಣವನ್ನು ಅಪೆಕ್ಸ್‌ ಬ್ಯಾಂಕ್‌ನಲ್ಲಿ ಠೇವಣಿ ಇಡುವ ಮೂಲಕ ಸರ್ಕಾರ ಕಸರತ್ತು ನಡೆಸುತ್ತಿದೆ. ಆದರೆ, ವಜ್ರಮಹೋತ್ಸವ ಸಂಭ್ರಮಕ್ಕೆ ₹ 10 ಕೋಟಿ ಕೊಡುತ್ತಾರೆ. ಇದು ಒಳ್ಳೆ ತಮಾಷೆಯಾಗಿದೆ. ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕರುಣಿಸಿದ್ದರಿಂದ ಸರ್ಕಾರ ಖಜಾನೆ ಖಾಲಿ ಆಗಿದೆ. ಈಗ ಕಾರ್ಯಕ್ರಮದ ಹೆಸರಿನಲ್ಲಿ ಹಣ ದೋಚಲು ಮುಂದಾಗಿದ್ದಾರೆ.

ಮುರಳೀಧರ ಜಿ.ರಾವ್‌, ’ಪ್ರಜಾ ರಾಗ್‌’ ಸಂಘಟನೆ

***

‘ನಿರಾಶ್ರಿತರಿಗೆ ವಸತಿ ನಿರ್ಮಿಸಲಿ’

ಜನಸಾಮಾನ್ಯರು ವಿಧಾನಸೌಧಕ್ಕೆ ಭೇಟಿ ನೀಡುವುದೇ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಜನರನ್ನು ಮತ್ತಷ್ಟು ಒಳಗೊಳ್ಳುವುದು ಹೇಗೆ ಎಂಬುದರ ಬಗ್ಗೆ ಚಿಂತಿಸಬೇಕಿತ್ತು. ವಿಜೃಂಭಣೆಯಿಂದ ಕಾರ್ಯಕ್ರಮ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೆಲ ಸರ್ಕಾರಿ ಶಾಲಾ–ಕಾಲೇಜು, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳಿಗೆ ಹಣಕಾಸಿನ ನೆರವಿಲ್ಲದೆ ಸೊರಗಿವೆ. ಅಂತಹ ಸಂಸ್ಥೆಗಳಿಗೆ ಈ ಹಣವನ್ನು ವಿನಿಯೋಗಿಸಬಹುದು. ರಾಜಧಾನಿಯ ನಿರಾಶ್ರಿತರಿಗೆ 100 ವಸತಿಗಳನ್ನು ನಿರ್ಮಿಸಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಆದರೆ, ನಗರದಲ್ಲಿ ಇರುವುದು ಕೇವಲ 8 ವಸತಿಗಳು. ಇದಕ್ಕಾದರೂ ಈ ಹಣವನ್ನು ನೀಡಬಹುದಿತ್ತು.

–ವಿನಯ್‌ ಶ್ರೀನಿವಾಸ್‌, ಸಾಮಾಜಿಕ ಕಾರ್ಯಕರ್ತ

***

‘ಎಸ್‌ಟಿಪಿ ನಿರ್ಮಿಸಲು ಈ ಹಣ ಬಳಸಲಿ’


ಬೆಳ್ಳಂದೂರು ಕೆರೆ ಸುತ್ತಲಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ಥಾಪಿಸುವಂತೆ ಜಲಮಂಡಳಿ ಸೂಚಿಸಿದೆ. ಆದರೆ, ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಂದ ಶೇ 20ರಷ್ಟು ಕೊಳಚೆ ನೀರು ಹೊರ ಬರುತ್ತಿದೆ. ಎಸ್‌ಟಿಪಿ ಸ್ಥಾಪಿಸುವುದು ಆರ್ಥಿಕವಾಗಿ ಹೊರೆ ಆಗುತ್ತದೆ. ಕೆರೆಯ ಬಳಿ ಎಸ್‌ಟಿಪಿ ಸ್ಥಾಪಿಸಿ, ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡುವುದು ವೈಜ್ಞಾನಿಕವಾಗಿಯೂ ಸರಿಯಾದ ಕ್ರಮ. ಆದರೆ, ಎಸ್‌ಟಿಪಿ ಸ್ಥಾಪನೆಗೆ ದುಡ್ಡಿಲ್ಲ ಎಂದು ಜಲಮಂಡಳಿ ಹೇಳುತ್ತಿದೆ. ವಿಧಾನಸೌಧ ವಜ್ರಮಹೋತ್ಸವಕ್ಕೆ ₹10 ಕೋಟಿ ಖರ್ಚು ಮಾಡುವ ಬದಲಾಗಿ, ಎಸ್‌ಟಿಪಿ ಸ್ಥಾಪಿಸಬಹುದು. ಇದರಿಂದ ಕೆರೆಯನ್ನೂ ಸಂರಕ್ಷಿಸಿದಂತೆ ಆಗುತ್ತದೆ.

– ಸಿ.ಎಸ್‌.ವಿ.ಪ್ರಸಾದ್‌, ಅಧ್ಯಕ್ಷ, ಫೆಡರೇಷನ್‌ ಆಫ್‌ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌

***

‘ಶಾಸಕಾಂಗ ಜವಾಬ್ದಾರಿಯುತವಾಗಿ ವರ್ತಿಸಲಿ’


ಕಾರ್ಯಕ್ರಮದ ವೆಚ್ಚವನ್ನು ₹ 10 ಕೋಟಿಗೆ ಇಳಿಸಿದ್ದು ಸ್ವಾಗತಾರ್ಹ. ಆದರೆ, ಇದು ಕೂಡಾ ಜನರ ತೆರಿಗೆ ದುಡ್ಡು. ಜನಪ್ರತಿನಿಧಿಗಳು ತೆರಿಗೆ ಹಣ ಪೋಲಾಗದಂತೆ ಕಾವಲು ಕಾಯಬೇಕೇ ಹೊರತು, ಅವರೇ ಅದನ್ನು ಪೋಲು ಮಾಡಲು ಮುಂದಾಗಬಾರದು. ಶಾಸಕಾಂಗ ಈ ವಿಚಾರದಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು.

ಮುರಳಿ, ಜಯನಗರ ನಿವಾಸಿ

***

₹ 10 ಕೋಟಿಯಲ್ಲಿ ಏನು ಮಾಡಬಹುದು

* 35 ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಬಹುದು

* ನಗರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಬಲಿಯಾಗುವ 1000ಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರಿಸಬಹುದು

* ಬಿಎಂಟಿಸಿಗೆ 30 ಹೊಸ ಬಸ್‌ಗಳನ್ನು ಖರೀದಿಸಬಹುದು

* 500 ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಬಹುದು

* 60 ಕಿ.ಮೀ ಪ್ರಮುಖ ರಸ್ತೆಗಳನ್ನು ದುರಸ್ತಿಗೊಳಿಸಬಹುದು

* ಆರ್ಥಿಕವಾಗಿ ಹಿಂದುಳಿದವರಿಗೆ 400 ಮನೆಗಳನ್ನು ಕಟ್ಟಿಕೊಡಬಹುದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry