ಸೋಮವಾರ, ಸೆಪ್ಟೆಂಬರ್ 16, 2019
29 °C

‘ಕಾಮಗಾರಿ ಆರಂಭಿಸಲು ಠೇವಣಿ ಇಡಿ’

Published:
Updated:

ಬೆಂಗಳೂರು: ದಾಸರಹಳ್ಳಿ ಮತ್ತು ನಾಗಸಂದ್ರ ಮೆಟ್ರೊ ನಿಲ್ದಾಣಗಳಿಗೆ ಜನರು ಸುಲಭವಾಗಿ ತಲುಪಲು ಪಾದಚಾರಿ ಕೆಳಸೇತುವೆ ಅಗತ್ಯ ಇದೆ. ಇವುಗಳ ನಿರ್ಮಾಣ ಕಾಮಗಾರಿಯನ್ನು ತನ್ನ ಜಾಗದಲ್ಲಿ ಆರಂಭಿಸಲು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರವು ನಿರ್ದಿಷ್ಟ ಮೊತ್ತವನ್ನು ಠೇವಣಿ ಇಡಲು ಬಿಎಂಆರ್‌ಸಿಎಲ್‌ಗೆ (ಮೆಟ್ರೊ ರೈಲು ನಿಗಮ) ಸೂಚಿಸಿದೆ.

‘ನಿಯಮದ ಪ್ರಕಾರ ಕಾಮಗಾರಿ ನಡೆಸಲು ಠೇವಣಿ ಇಡಬೇಕು. ನಾವು ಸಾರ್ವಜನಿಕ ಅನುಕೂಲಕ್ಕಾಗಿ ಕೆಳಸೇತುವೆ ನಿರ್ಮಿಸುತ್ತಿದ್ದೇವೆ. ಠೇವಣಿಯಿಂದ ವಿನಾಯಿತಿ ನೀಡುವಂತೆ ವಿನಂತಿಸಿ ಹೆದ್ದಾರಿ ಪ್ರಾಧಿಕಾರದ ಕೇಂದ್ರ ಕಚೇರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲಾ ಪತ್ರ ಬರೆದಿದ್ದಾರೆ. ವಿನಾಯಿತಿ ಸಿಗುವ ಭರವಸೆ ಇದೆ’ ಎಂದು ಬಿಎಂಆರ್‌ಸಿಎಲ್‌ನ ಅಧಿಕಾರಿಯೊಬ್ಬರು ತಿಳಿಸಿದರು.

ದಾಸರಹಳ್ಳಿ ಮತ್ತು ನಾಗಸಂದ್ರ ಮೆಟ್ರೊ ನಿಲ್ದಾಣಗಳನ್ನು ತಲುಪಲು ಜನ ರಾಷ್ಟ್ರೀಯ ಹೆದ್ದಾರಿ–48 ಅನ್ನು ದಾಟಿ ಹೋಗಬೇಕಾಗಿದೆ. ಇಲ್ಲಿ ಕೆಳಸೇತುವೆ ನಿರ್ಮಿಸಲು ಮೆಟ್ರೊ ನಿಗಮ ಸೆಪ್ಟೆಂಬರ್‌ನಲ್ಲಿ ಟೆಂಡರ್‌ ಕರೆದಿತ್ತು.

ಟೆಂಡರ್‌ಗೆ ಬಿಡ್‌ಗಳನ್ನು ಸಲ್ಲಿಸಲು ಡಿಸೆಂಬರ್‌ 4 ಕೊನೆಯ ದಿನ. ಆದರೆ, ಕಾಮಗಾರಿ ಆರಂಭಕ್ಕೂ ಮುನ್ನ, ಬಳಸುವ ಜಾಗಕ್ಕೆ ಪ್ರತಿಯಾಗಿ 30 ವರ್ಷದ ಅವಧಿಗೆ ₹ 2.5 ಕೋಟಿಯನ್ನು ಠೇವಣಿ ಇಡುವಂತೆ ಉಲ್ಲೇಖಿಸಿ ಹೆದ್ದಾರಿ ಪ್ರಾಧಿಕಾರವು ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿದೆ.

‘ನಾಗಸಂದ್ರದಿಂದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರಕ್ಕೆ ಮೆಟ್ರೊ ಮಾರ್ಗ ನಿರ್ಮಿಸಲು ಪ್ರಾಧಿಕಾರದ ಸ್ವಲ್ಪ ಜಾಗವನ್ನು ಬಳಸಿಕೊಳ್ಳುತ್ತಿದೆ. ಆ ಜಾಗಕ್ಕೆ ವಿನಾಯಿತಿ ನೀಡಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವೈ.ವೆಂಕಟರೆಡ್ಡಿ ಪ್ರಸಾದ್‌ ತಿಳಿಸಿದರು.

‘ಜಾಲಹಳ್ಳಿ ಮೆಟ್ರೊ ನಿಲ್ದಾಣವನ್ನು ತಲುಪಲು ಜನರು ಪರದಾಡುತ್ತಿದ್ದಾರೆ. ಹಾಗೆಯೇ ಸಂಚಾರ ದಟ್ಟಣೆ ಉಂಟಾಗುತ್ತದೆ. ಇಲ್ಲಿಯೂ ಒಂದು ಅಂಡರ್‌ಪಾಸ್‌ ನಿರ್ಮಿಸಬೇಕಿತ್ತು’ ಎಂದು ಪೀಣ್ಯ ಸಂಚಾರ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಜಾಲಹಳ್ಳಿಯಲ್ಲಿ ಬಿಬಿಎಂಪಿ ಅಂಡರ್‌ಪಾಸ್‌ ನಿರ್ಮಿಸಲು ಯೋಜಿಸಿದೆ. ಹಾಗಾಗಿ ಅಲ್ಲಿ ನಿಗಮದಿಂದ ಅಂಡರ್‌ಪಾಸ್‌ ನಿರ್ಮಿಸುತ್ತಿಲ್ಲ’ ಎಂದು ಬಿಎಂಆರ್‌ಸಿಎಲ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ವಸಂತ್‌ರಾವ್‌ ತಿಳಿಸಿದರು.

Post Comments (+)