ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬ್ದ ರಹಿತ ದೀಪಾವಳಿಗೆ ಸಾಕ್ಷಿಯಾದ ದೆಹಲಿ

ಪಟಾಕಿ ನಿಷೇಧ: ‘ಸುಪ್ರೀಂ’ ಆದೇಶಕ್ಕೆ ಭಾರಿ ಬೆಂಬಲ
Last Updated 19 ಅಕ್ಟೋಬರ್ 2017, 19:32 IST
ಅಕ್ಷರ ಗಾತ್ರ

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಸಂದರ್ಭ ಪಟಾಕಿ ಮಾರಾಟವನ್ನು ನಿಷೇಧಿಸಿ ಸುಪ್ರೀಂ ಕೋರ್ಟ್‌ ಇತ್ತೀಚೆಗಷ್ಟೇ (ಅಕ್ಟೋಬರ್‌ 9) ಹೊರಡಿಸಿರುವ ಆದೇಶಕ್ಕೆ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್‌)ದ ನಿವಾಸಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಬುಧವಾರ ಪಟಾಕಿರಹಿತ ‘ಚಿಕ್ಕ ದೀಪಾವಳಿ’ ಆಚರಿಸಿರುವ ಇಲ್ಲಿನ ಜನತೆ, ಗುರುವಾರವೂ ಪಟಾಕಿ ಸುಡದೆ ದೀಪಾವಳಿ ಆಚರಣೆಯಲ್ಲಿ ತೊಡಗಿದ್ದು, ಶಬ್ದ ಮತ್ತು ವಾಯುಮಾಲಿನ್ಯ ತಡೆಯಲೆಂದೇ ಸುಪ್ರೀಂ ಕೋರ್ಟ್‌ ಹೊರಡಿಸಿರುವ ಆದೇಶವನ್ನು ಜನಸಾಮಾನ್ಯರು ಸ್ವಾಗತಿಸಿದ್ದು, ಇತ್ತೀಚಿನ ದಶಕಗಳಲ್ಲಿ ಇದೇ ಮೊದಲ ಬಾರಿಗೆ ದೆಹಲಿಯ ಜನ ‘ಶಬ್ದರಹಿತ’ ದೀಪಾವಳಿಗೆ ಸಾಕ್ಷಿಯಾದಂತಾಗಿದೆ.

ಆಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರೂ ‘ಚಿಕ್ಕ ದೀಪಾವಳಿ’ಯ ಮುನ್ನಾ ದಿನದಿಂದಲೇ ದೊಡ್ಡ ಪ್ರಮಾಣದ ಶಬ್ದ ಮಾಡುವ ಪಟಾಕಿ ಹಾರಿಸುವುದರಲ್ಲಿ ನಿರತರಾಗುತ್ತಿದ್ದರು. ನಂತರ ಎರಡು ದಿನ ಆಚರಿಸಲಾಗುವ ದೀಪಾವಳಿಯ ದಿನಗಳಂದೂ ಹಗಲು ರಾತ್ರಿ ಎನ್ನದೆ, ಎಡೆಬಿಡದೆ ಪಟಾಕಿ ಸುಟ್ಟು ಸಂಭ್ರಮಿಸುತ್ತಿದ್ದ ಜನತೆ, ಈ ಬಾರಿ ಪಟಾಕಿ ಮಾತ್ರವಲ್ಲ, ಶಬ್ದವನ್ನೇ ಮಾಡದ ಸುರುಸುರು ಬತ್ತಿಯ ಉಸಾಬರಿಗೂ ಹೋಗಿಲ್ಲ.

‘ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 31ರವರಗೆ ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿದೆಯೇ ವಿನಾ ಪಟಾಕಿ ಹಾರಿಸುವುದನ್ನಲ್ಲ. ಹೊರಗಡೆಯಿಂದ ಅಥವಾ ಆನ್‌ಲೈನ್‌ ಮೂಲಕ ಪಟಾಕಿ ಖರೀದಿಸಿ ತಂದು ಹಾರಿಸುವುದಕ್ಕೆ ಅವಕಾಶವಿದೆಯಾದರೂ, ಅಪಾಯದ ಗಂಟೆ ಬಾರಿಸುತ್ತಿರುವ ಇಲ್ಲಿನ ವಾಯು ಮಾಲಿನ್ಯಕ್ಕೆ ಬೇಸತ್ತಿರುವ ಜನತೆ ಸ್ವಯಂ ಪ್ರೇರಣೆಯಿಂದಲೇ ಪಟಾಕಿಗೆ ವಿದಾಯ ಹೇಳಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂಬುದು ಪರಿಸರ ಪ್ರೇಮಿಗಳ ಅಭಿಪ್ರಾಯ.

‘ದೀಪಾವಳಿ ಹಬ್ಬ ಬಂತು ಎಂಬುದು ಪಟಾಕಿಗಳ ಅಬ್ಬರದಿಂದಲೇ ನಮಗೆ ಗೊತ್ತಾಗುತ್ತಿತ್ತು. ಕೆಲವೊಮ್ಮೆ ಈ ಹಬ್ಬ ಯಾಕಾದರೂ ಬಂತೋ ಅನ್ನಿಸುವಷ್ಟು ಬೇಸರಕ್ಕೆ ಪಟಾಕಿ ಹಾವಳಿ ಕಾರಣವಾಗುತ್ತಿತ್ತು’ ಎಂದು 25 ವರ್ಷಗಳಿಂದ ದೆಹಲಿಯಲ್ಲಿ ವಾಸವಾಗಿರುವ ಚೆನ್ನೈ ಮೂಲದ ಎಂಜಿನಿಯರ್‌ ಡಿ.ಮುರುಗನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಹನಗಳಿಂದ ಹೊರಹೊಮ್ಮುವ ಹೊಗೆಯಿಂದ ವಾಯುಮಾಲಿನ್ಯ ಅತಿಯಾಗಿ, ಜಾಗತಿಕವಾಗಿ ದೆಹಲಿಗೆ ಕೆಟ್ಟ ಹೆಸರು ಬಂದಿದೆ. ಅಂಥದರಲ್ಲಿ ನಾಲ್ಕೈದು ದಿನ ಈ ಪಟಾಕಿಗಳ ಸದ್ದು, ಆಗಸದೆತ್ತರಕ್ಕೆ ಹಾರಿ ಡಬ್‌ ಎನ್ನುವ ರಾಕೆಟ್‌ಗಳು ಹೊರಸೂಸುವ ಹೊಗೆಯೂ ಸೇರಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗುತ್ತಿತ್ತು. ಅದಕ್ಕೆ ಅಪವಾದ ಎಂಬಂತೆ ಈ ಬಾರಿ ಆಗೊಮ್ಮೆ, ಈಗೊಮ್ಮೆ ಪಟಾಕಿ ಹಾರಿದ ಸದ್ದು ಕೇಳುತ್ತಿದೆ’ ಎಂದು ಅವರು ಹೇಳಿದರು.

‘ಪಟಾಕಿ ಹಾರಿಸುವುದಕ್ಕೆ ದೆಹಲಿಯ ಜನ ಎತ್ತಿದ ಕೈ ಎಂದೇ ಹೇಳಬಹುದು. ದೇಶದ ಇತರ ಯಾವ ಕಡೆಯೂ ಕಂಡುಬರದಷ್ಟು ಪ್ರಮಾಣದ ಪಟಾಕಿ ಹುಚ್ಚು ಇಲ್ಲಿನ ಜನರಿಗಿದೆ. ಕೆಲವರಂತೂ ಲಕ್ಷಾಂತರ ರೂಪಾಯಿ ವ್ಯಯಿಸಿ ಪಟಾಕಿ ಸುಟ್ಟು ಸಂಭ್ರಮಿಸುತ್ತಾರೆ. ದೀಪಾವಳಿಗೆ ಮೊದಲೇ ಮಾರಾಟ ನಿಷೇಧಿಸಿ ಕೋರ್ಟ್‌ ಆದೇಶ ಹೊರಡಿಸಿರುವುದು ಉತ್ತಮ ನಡೆ’ ಎಂದು ಹೇಳಿದವರು ರಾಮಕೃಷ್ಣ ಪುರಂ ನಿವಾಸಿ ಓಂ ಪಟವರ್ಧನ್‌.

ದೀಪಾವಳಿ ಅಂಗವಾಗಿ ಮೊದಲೇ ಪಟಾಕಿ ತಂದು ಇಟ್ಟುಕೊಂಡಿದ್ದ ವ್ಯಾಪಾರಿಗಳೂ ಕೋರ್ಟ್‌ ಆದೇಶ ಉಲ್ಲಂಘಿಸುವ ಹುಚ್ಚು ಸಾಹಸಕ್ಕೆ ಮುಂದಾದ ಪ್ರಕರಣಗಳೂ ಅಷ್ಟಾಗಿ ಕಂಡುಬಂದಿಲ್ಲ. ಆದರೂ ದೆಹಲಿ ಪೊಲೀಸರು ಕಳೆದ ಮೂರು ದಿನಗಳಿಂದ ಅಕ್ರಮ ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ 29 ಜನರನ್ನು ಬಂಧಿಸಿದ್ದು, 1,200 ಕೆ.ಜಿ ಪಟಾಕಿ ವಶಪಡಿಸಿಕೊಂಡಿದ್ದಾರೆ.

ಪಟಾಕಿ ಮಾರಾಟ ನಿಷೇಧ ಹಾಗೂ ವಾಯು ಮಾಲಿನ್ಯ ಕುರಿತು ದೆಹಲಿ ಸರ್ಕಾರ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸಲು ಯತ್ನಿಸಿದ್ದು ಫಲ ಕಂಡಿದೆ. ಸಾರ್ವಜನಿಕರೇ ಅಕ್ರಮ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲವರು ಪಟಾಕಿ ಇದ್ದರೂ ಹಾರಿಸದೆ ಬೆಂಬಲ ಸೂಚಿಸಿದ್ದಾರೆ.

ದೀಪಾವಳಿಯ ಸಂದರ್ಭ ಮನಸ್ಸಿಗೆ ಮುದ ನೀಡದೆ, ಕಸಿವಿಸಿ ಉಂಟು ಮಾಡುತ್ತಿದ್ದ ಪಟಾಕಿಯ ಸದ್ದಿಗೆ ನಿರೀಕ್ಷೆಯಂತೆಯೇ ಬ್ರೇಕ್‌ ಬಿದ್ದಿದೆ. ಕೆಲವರು ಆನ್‌ಲೈನ್‌ ಮೂಲಕ ಹಾಗೂ ಎನ್‌ಸಿಆರ್‌ ವ್ಯಾಪ್ತಿಯಿಂದ ಆಚೆ ಹೋಗಿ ಪಟಾಕಿ ಖರೀದಿಸಿ ತಂದು ಸಂಭ್ರಮಿಸುತ್ತಿದ್ದಾರೆ. ಅಂಥವರ ಪ್ರಮಾಣ ಶೇ 1ರಷ್ಟು ಮಾತ್ರ. ಬುಧವಾರ ಮತ್ತು ಗುರುವಾರ ಸಂಜೆಯವರೆಗೆ ಪಟಾಕಿಗಳ ಸದ್ದು ಅಷ್ಟಾಗಿ ಕೇಳಿಲ್ಲ. ಶುಕ್ರವಾರವೂ ಇದು ಮುಂದುವರಿಯಲಿದೆ ಎಂಬ ವಿಶ್ವಾಸವಿದೆ ಎಂದು ದೆಹಲಿ ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT