ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ತಂತ್ರಕ್ಕೆ ಪ್ರತಿತಂತ್ರ

ಭಾರತ–ಅಮೆರಿಕ ಸಹಭಾಗಿತ್ವ ವೃದ್ಧಿ: ಟಿಲ್ಲರ್‌ಸನ್‌ ಭೇಟಿ ವೇಳೆ ಸ್ಪಷ್ಟ ರೂಪ
Last Updated 19 ಅಕ್ಟೋಬರ್ 2017, 19:59 IST
ಅಕ್ಷರ ಗಾತ್ರ

ನವದೆಹಲಿ: ಇಂಡೊ–‍ಪೆಸಿಫಿಕ್‌ ಪ್ರದೇಶದಲ್ಲಿ (ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್‌ ಸಾಗರ ವ್ಯಾಪ್ತಿಯ ದೇಶಗಳು) ಚೀನಾದ ಮುನ್ನಡೆಗೆ ತಡೆ ಒಡ್ಡಲು ಭಾರತ ಮತ್ತು ಅಮೆರಿಕ ಜತೆಯಾಗಿ ಹೊಸ ಕಾರ್ಯತಂತ್ರ ರೂಪಿಸಲಿವೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್‌ ಟಿಲ್ಲರ್‌ಸನ್‌ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಿದಾಗ ಈ ಕಾರ್ಯತಂತ್ರ ಸ್ಪಷ್ಟ ರೂಪ ಪಡೆದುಕೊಳ್ಳಲಿದೆ.

ಇದೇ 24ರಂದು ಟಿಲ್ಲರ್‌ಸನ್‌ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ದೆಹಲಿಯಲ್ಲಿ ಭೇಟಿಯಾಗಲಿದ್ದಾರೆ. ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಚೀನಾವು ಯಜಮಾನಿಕೆಯ ಸ್ಥಾನ ಪಡೆಯಲು ಹವಣಿಸುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಹೇಗೆ ಎಂಬುದು ಟಿಲ್ಲರ್‌ಸನ್‌ ಭೇಟಿಯ ಪ್ರಮುಖ ಕಾರ್ಯಸೂಚಿಯಾಗಿದೆ. ಜತೆಗೆ ಅಫ್ಗಾನಿಸ್ತಾನದಲ್ಲಿ ಭಾರತ–ಅಮೆರಿಕ ದ್ವಿಪಕ್ಷೀಯ ಸಹಕಾರದ ವಿಚಾರವೂ ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಇಂಡೊ–ಪೆಸಿಫಿಕ್‌ ಪ್ರದೇಶಕ್ಕೆ ಸಂಬಂಧಿಸಿ ಭಾರತ ಮತ್ತು ಅಮೆರಿಕದ ಜಂಟಿ ನೀತಿಯು ಮುಂದಿನ ದಿನಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರಿಸಲಿದೆ. ನವೆಂಬರ್‌ 13–14ರಂದು ಮನಿಲಾದಲ್ಲಿ ನಡೆಯಲಿರುವ ಪೂರ್ವ ಏಷ್ಯಾ ಶೃಂಗ ಸಭೆ ಇದಕ್ಕೆ ಮುನ್ನುಡಿ ಬರೆಯಲಿದೆ. ಈ ಶೃಂಗ ಸಭೆಯಲ್ಲಿ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾಗವಹಿಸುವ ಸಾಧ್ಯತೆ ಇದೆ.

ವಾಷಿಂಗ್ಟನ್‌ನ ಸೆಂಟರ್‌ ಫಾರ್‌ ಸ್ಟ್ರಾಟೆಜಿಕ್‌ ಎಂಡ್‌ ಇಂಟರ್‌ನ್ಯಾಷನಲ್‌ ಸ್ಟಡೀಸ್‌ನಲ್ಲಿ ಟಿಲ್ಲರ್‌ಸನ್‌ ಅವರು ಬುಧವಾರ ಮಾಡಿದ ಭಾಷಣ ದಕ್ಷಿಣ ಏಷ್ಯಾ ಪ್ರದೇಶಕ್ಕೆ ಸಂಬಂಧಿಸಿ ಬಲವಾದ ಸಹಭಾಗಿತ್ವಕ್ಕೆ ವೇದಿಕೆ ಸಿದ್ಧಪಡಿಸಿದ್ದಾರೆ.

ಚೀನಾದಿಂದ ಜಗತ್ತಿಗೆ ಸವಾಲು
ವಾಷಿಂಗ್ಟನ್‌ (ಎನ್‌ವೈಟಿ ನ್ಯೂಸ್ ಸರ್ವಿಸ್‌): ಚೀನಾ ವಿರುದ್ಧ ಅಮೆರಿಕ ಗಂಭೀರ ಆರೋಪ ಮಾಡಿದೆ. ಏಷ್ಯಾ ಪೆಸಿಫಿಕ್‌ ಪ್ರದೇಶವನ್ನು ‘ಮುಕ್ತ ಮತ್ತು ಪಾರದರ್ಶಕ’ವಾಗಿ ಬೆಳೆಸಲು ಮುಂದಿನ ನೂರು ವರ್ಷಗಳ ಅವಧಿಯಲ್ಲಿ ಚೀನಾಕ್ಕಿಂತ ಭಾರತದ ಜತೆಗೂಡಿ ಕೆಲಸ ಮಾಡಲು ಬಯಸುವುದಾಗಿ ಹೇಳಿದೆ. ಈ ಮೂಲಕ, ಭಾರತದ ಪ್ರಮುಖ ಪ್ರತಿಸ್ಪರ್ಧಿ ಚೀನಾಕ್ಕೆ ಬಿಸಿ ಮುಟ್ಟಿಸಿದೆ.

ಭಾರತದ ಜತೆಗೆ ಇನ್ನೂ ಹತ್ತಿರದ ನಂಟು ಬೆಳೆಸಿಕೊಳ್ಳಬೇಕು ಎಂದು ಹೇಳಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್‌ ಡಬ್ಲ್ಯು. ಟಿಲ್ಲರ್‌ಸನ್‌ ಅವರು, ಜಾಗತಿಕ ವ್ಯವಸ್ಥೆಗೆ ಚೀನಾ ಬೆದರಿಕೆಯಾಗಿದೆ ಎಂದಿದ್ದಾರೆ. ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಪಾಕಿಸ್ತಾನ ಇನ್ನಷ್ಟು ಗಟ್ಟಿಗೊಳಿಸಬೇಕಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಜತೆಗೇ ಬೆಳೆಯುತ್ತಿರುವ ಚೀನಾ ಜವಾಬ್ದಾರಿಯುತವಾಗಿ ವರ್ತಿಸಿದ್ದು ಕಡಿಮೆ. ಕೆಲವೊಮ್ಮೆ ಅಂತರರಾಷ್ಟ್ರೀಯ, ನಿಯಮಗಳನ್ನು ಉಲ್ಲಂಘಿಸಿದೆ. ಭಾರತವು ಕಾನೂನು ಚೌಕಟ್ಟಿನೊಳಗೇ ಕಾರ್ಯನಿರ್ವಹಿಸಿ ಇತರ ದೇಶಗಳ ಸಾರ್ವಭೌಮತ್ವವನ್ನು ಗೌರವಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಮಹತ್ವ ಇಲ್ಲ
ಟಿಲ್ಲರ್‌ಸನ್‌ ಅವರು ತಮ್ಮ ಭಾಷಣದಲ್ಲಿ ಪಾಕಿಸ್ತಾನವನ್ನು ಹೆಚ್ಚು ಟೀಕೆ ಮಾಡಿಲ್ಲ. ಆದರೆ ಅವರ 20 ನಿಮಿಷದ ಭಾಷಣದಲ್ಲಿ ಪಾಕಿಸ್ತಾನದ ಪ್ರಸ್ತಾಪ ಆಗಿದ್ದು ಮೂರು ಬಾರಿ ಮಾತ್ರ. ಹಾಗಾಗಿ  ಅಮೆರಿಕದ ದ್ವಿಪಕ್ಷೀಯ ಸಂಬಂಧದಲ್ಲಿ ಭಾರತಕ್ಕೆ ದೊರೆಯುವ ಪ್ರಾಧಾನ್ಯ ಪಾಕಿಸ್ತಾನಕ್ಕೆ ದೊರೆಯದು ಎಂಬುದು ಸ್ಪಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT