ಪ್ರಸನ್ನ ಉಪವಾಸ ಸತ್ಯಾಗ್ರಹ ಅಂತ್ಯ

ಮಂಗಳವಾರ, ಜೂನ್ 25, 2019
30 °C
* ಕೈ ಉತ್ಪನ್ನ ಕರಮುಕ್ತಗೊಳಿಸುವ ಕುರಿತು ನ.5ರ ಜಿಎಸ್‌ಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಆಗ್ರಹ

ಪ್ರಸನ್ನ ಉಪವಾಸ ಸತ್ಯಾಗ್ರಹ ಅಂತ್ಯ

Published:
Updated:
ಪ್ರಸನ್ನ ಉಪವಾಸ ಸತ್ಯಾಗ್ರಹ ಅಂತ್ಯ

ಬೆಂಗಳೂರು: ಕೈ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಮುಕ್ತಗೊಳಿಸುವಂತೆ ಒತ್ತಾಯಿಸಿ ಗ್ರಾಮ ಸೇವಾ ಸಂಘದ ಆಶ್ರಯದಲ್ಲಿ ಆರು ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ರಂಗಕರ್ಮಿ ಪ್ರಸನ್ನ ಅವರು ಗುರುವಾರ ಅಂತ್ಯಗೊಳಿಸಿದರು.

ಈ ವೇಳೆ ಅವರು ಮಾತನಾಡಿ, ‘ನವೆಂಬರ್‌ 5ರಂದು ನಡೆಯುವ ಜಿಎಸ್‌ಟಿ ಸಭೆಯಲ್ಲಿ ಕೈ ಉತ್ಪನ್ನಗಳನ್ನು ಕರಮುಕ್ತಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಸತ್ಯಾಗ್ರಹವನ್ನು ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಸಿದರು.

‘ನಾಚಿಕೆಗೇಡಿನ ಸಂಗತಿ’:

‘ವಿಸ್ಕಿ, ಸಿಮೆಂಟ್‌, ಕಾರು, ನೇಕಾರ ನೇಯ್ದ ಬಟ್ಟೆ ಎಲ್ಲವನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರಲಾಗಿದೆ. ಎಲ್ಲರಿಗೂ ಒಂದೇ ತೆರಿಗೆ ವಿಧಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ಹೇಳಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಬಡವರು, ಶ್ರೀಮಂತರ ನಡುವೆ ಇಷ್ಟು ವ್ಯತ್ಯಾಸ ಇರುವ ಈ ದೇಶದಲ್ಲಿ ಸಮಾನ ತೆರಿಗೆ ವಿಧಿಸುತ್ತೇವೆ ಎಂದು ಹೇಳಲು ನಿಮಗೆ ನಾಚಿಕೆ ಆಗುವುದಿಲ್ಲವೇ. ಬಡವರು, ಶ್ರೀಮಂತರಿಗೂ ಸಮಾನ ತೆರಿಗೆ ಎಂಬುದು ಅಮಾನುಷವಾದ ಪರಿಕಲ್ಪನೆ. ಇದು ನಮ್ಮ ದೇಶದ ದುರಂತ’ ಎಂದು ದೂರಿದರು.

‘ಈವರೆಗೆ ಕೆಟ್ಟ ಹಾಗೂ ಒಳ್ಳೆಯ ಸರ್ಕಾರಗಳು ಬಂದಿವೆ. ಆದರೆ, ಯಾವ ಸರ್ಕಾರಗಳೂ ಇಂತಹ ದಾರ್ಷ್ಟ್ಯವನ್ನು ತೋರಿರಲಿಲ್ಲ. ಬಡವರು ತಯಾರಿಸಿದ ಉತ್ಪನ್ನಗಳು ಮಾರುಕಟ್ಟೆಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಅವರ ಮೇಲೆ ಇನ್ನಷ್ಟು ತೆರಿಗೆ ವಿಧಿಸುವ ದಾರ್ಷ್ಟ್ಯವನ್ನು ಯಾವ ಸರ್ಕಾರಗಳೂ ಮಾಡಿರಲಿಲ್ಲ. ಈ ಸರ್ಕಾರ ಮಾಡಿದೆ. ಬೇಗ ತಪ್ಪನ್ನು ತಿದ್ದಿಕೊಂಡರೆ ಜನ ಗೌರವ ನೀಡುತ್ತಾರೆ. ಇಲ್ಲವಾದರೆ ಸರ್ಕಾರವನ್ನು ಕಿತ್ತು ಬಿಸಾಡುತ್ತಾರೆ’ ಎಂದರು.

ಸಾಹಿತಿಗಳಾದ ಕೆ.ಮರುಳಸಿದ್ಧಪ್ಪ, ಗೊ.ರು.ಚನ್ನಬಸಪ್ಪ, ಲೇಖಕಿ ಬಿ.ಟಿ.ಲಲಿತಾ ನಾಯಕ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ಧರಾಮಯ್ಯ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ರಂಗಕರ್ಮಿಗಳಾದ ಬಿ.ಜಯಶ್ರೀ, ಸಿ.ಬಸವಲಿಂಗಯ್ಯ, ಬಿ.ಸುರೇಶ್‌, ನಿವೃತ್ತ ಐಪಿಎಸ್‌ ಅಧಿಕಾರಿ ಅಜಯ್‌ ಕುಮಾರ್‌ ಸಿಂಗ್‌ ಇದ್ದರು.

***

‘ಎರಡೂ ಸದನಗಳಲ್ಲಿ ಮಂಡಿಸಿ’

‘ಕೈ ಉತ್ಪನ್ನಗಳನ್ನು ಕರಮುಕ್ತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮುಂದಿನ ಹೆಜ್ಜೆಯಾಗಿ ಅಕ್ಕಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಅವರು ಸಮಾಲೋಚನೆ ನಡೆಸಿ, ಈ ಬಗ್ಗೆ ಏಕಾಭಿಪ್ರಾಯ ರೂಪಿಸಲು ಪ್ರಯತ್ನಿಸಬೇಕು. ಸಾಧ್ಯವಾದರೆ, ಎರಡೂ ಸದನಗಳಲ್ಲಿ ಮಂಡಿಸಿ ಕೇಂದ್ರಕ್ಕೆ ಕಳುಹಿಸಿಕೊಡಬೇಕು’ ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಒತ್ತಾಯಿಸಿದರು.

***

ಗ್ರಾಮೀಣ ಕೈಗಾರಿಕೆಗಳು, ಕೈ ಉತ್ಪನ್ನಗಳ ಮೇಲಿನ ಕರವನ್ನು ತೆಗೆಯದ ಹೊರತು ಸತ್ಯಾಗ್ರಹ ಕೊನೆಗೊಳ್ಳುವುದಿಲ್ಲ. ಈ ಬಗ್ಗೆ ಪ್ರಧಾನಿ ಮೋದಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು.

–ಎಚ್‌.ಎಸ್‌.ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry