ಚತುರ ಸಾರಿಗೆ: ವರ್ಷಕ್ಕೆ ₹ 1 ಕೋಟಿ ಉಳಿತಾಯ

ಗುರುವಾರ , ಜೂನ್ 20, 2019
31 °C
ಮೈಸೂರಿನಲ್ಲಿ ಜಾರಿಯಾದ ಯೋಜನೆ; ಬೇರೆ ರಾಜ್ಯಗಳಿಂದಲೂ ಬೇಡಿಕೆ

ಚತುರ ಸಾರಿಗೆ: ವರ್ಷಕ್ಕೆ ₹ 1 ಕೋಟಿ ಉಳಿತಾಯ

Published:
Updated:
ಚತುರ ಸಾರಿಗೆ: ವರ್ಷಕ್ಕೆ ₹ 1 ಕೋಟಿ ಉಳಿತಾಯ

ಮೈಸೂರು: ಮೈಸೂರು ನಗರದಲ್ಲಿ ಚತುರ ಸಾರಿಗೆ ವ್ಯವಸ್ಥೆ (ಐಟಿಎಸ್‌) ಜಾರಿಗೆ ಬಂದ ಮೇಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಕೆಎಸ್‌ಆರ್‌ಟಿಸಿ) ವರ್ಷಕ್ಕೆ ₹ 1 ಕೋಟಿ ಉಳಿತಾಯವಾಗುತ್ತಿದೆ.

ಅಲ್ಲದೆ, ಈ ವ್ಯವಸ್ಥೆ ಅಳವಡಿಸಿಕೊಳ್ಳಲು ರಾಜಸ್ಥಾನ, ಕೇರಳ, ಗುಜರಾತ್‌, ಮಧ್ಯಪ್ರದೇಶ ರಾಜ್ಯಗಳಿಂದ ಬೇಡಿಕೆ ಬರುತ್ತಿದೆ. ಸಾರಿಗೆ ಅಧಿಕಾರಿಗಳು ಇಲ್ಲಿಗೆ ಬಂದು ಅಧ್ಯಯನ ನಡೆಸಿ ಹೋಗಿದ್ದಾರೆ.

‘ಸಂಚಾರ ವ್ಯವಸ್ಥೆ ಸುಧಾರಣೆ ಜೊತೆಗೆ ಕಾರ್ಯಾಚರಣೆ ವೆಚ್ಚ ತಗ್ಗಿದೆ. ಚಾಲಕರ ಕಾರ್ಯವೈಖರಿ ಮೇಲೆ ನಿಗಾ ಇಟ್ಟಿರುವುದರಿಂದ ಅಜಾಗರೂಕತೆಯ ಚಾಲನೆ ಕಡಿಮೆಯಾಗಿದೆ. ಹೀಗಾಗಿ, ಅಪಘಾತಗಳು ಕಡಿಮೆ ಆಗಿವೆ. ‌ಇಂಧನವೂ ಉಳಿತಾಯವಾಗುತ್ತಿದೆ’ ಎಂದು ರಾ‌ಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಕ ಕೆ.ರಾಮಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವ್ಯವಸ್ಥೆ ಅಳವಡಿಕೆ ಬಳಿಕ ಸಂಚಾರ ದಟ್ಟಣೆ ಕಡಿಮೆಯಾಗಿದ್ದು, ನಿಗದಿತ ಸಮಯಕ್ಕೆ ಬಸ್‌ಗಳು ನಿರ್ದಿಷ್ಟ ತಾಣ ತಲುಪುತ್ತಿವೆ.

ಐಟಿಎಸ್‌ ವಿಶೇಷ ವಾಹನ ಶೋಧ ವ್ಯವಸ್ಥೆ (ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್) ಮೂಲಕ 460 ಬಸ್‌ಗಳಿಗೂ ಜಿಪಿಎಸ್ ಅಳವಡಿಸಿ ನಿಯಂತ್ರಣಾ ಕೊಠಡಿಯಿಂದ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಈ ವ್ಯವಸ್ಥೆ ಮೂಲಕ ಬಸ್ ಎಲ್ಲಿದೆ, ಎಷ್ಟು ವೇಗವಾಗಿ ಹೋಗುತ್ತಿದೆ, ಎಷ್ಟು ಹೊತ್ತಿಗೆ ಮುಂದಿನ ನಿಲ್ದಾಣ ತಲುಪಲಿದೆ, ಯಾವ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಿಲ್ಲ ಎಂಬ ಸಮಗ್ರ ಚಿತ್ರಣ ಸಿಗುತ್ತಿದೆ. ದ್ವಿಮುಖ ಸಂವಹನಕ್ಕೆ ಅವಕಾಶ ಕಲ್ಪಿಸಲಾಗಿದೆ. ವೇಗ ಹೆಚ್ಚಿಸಿದಾಗ ಎಚ್ಚರಿಕೆಯನ್ನೂ ನೀಡಬಹುದು. ತಮ್ಮ ಬಡಾವಣೆಯ ನಿಲ್ದಾಣಕ್ಕೆ ಎಷ್ಟು ಹೊತ್ತಿಗೆ ಬಸ್‌ ಬರುತ್ತದೆ ಎಂಬುದನ್ನು ಪ್ರಯಾಣಿಕರು ತಿಳಿದುಕೊಳ್ಳಬಹುದು. ಆ್ಯಪ್‌ ಕೂಡ ಅಭಿವೃದ್ಧಿಪಡಿಸಲಾಗಿದೆ.

‘ಐಟಿಎಸ್‌ ಜಾರಿಗೂ ಮುನ್ನ ಮೈಸೂರಿನಲ್ಲಿ ಅಪಘಾತಗಳಿಂದ ಉಂಟಾಗುತ್ತಿದ್ದ ಸಮಸ್ಯೆಗಳಿಗೆ ಸಾರಿಗೆ ಸಂಸ್ಥೆ ಮೇಲೆ ವರ್ಷಕ್ಕೆ ₹ 80 ಲಕ್ಷಕ್ಕೂ ಹೆಚ್ಚು ಹೊರೆ ಬೀಳುತಿತ್ತು. ಈಗ ಶೇ 50ರಷ್ಟು ಹೊರೆ ತಗ್ಗಿದೆ. ಯಾರೋ ಅಪಘಾತ ಮಾಡಿ ಸಾರಿಗೆ ಸಂಸ್ಥೆಯನ್ನು ಹೊಣೆಗಾರಿಕೆ ಮಾಡುತ್ತಿದ್ದರು. ಈಗ ಆ ರೀತಿ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದರು.

ನಗರದಲ್ಲಿ 193 ಬಸ್‌ ನಿಲುಗಡೆ ತಾಣಗಳು ಇವೆ. ಈ ತಾಣಗಳಲ್ಲಿ ಅಳವಡಿಸಿರುವ ಡಿಜಿಟಲ್‌ ಫಲಕಗಳಲ್ಲಿ ಬಸ್‌ ಬರುವ ಸಮಯ ತೋರಿಸಲಾಗುತ್ತದೆ. ಈ ತಾಣಗಳನ್ನು ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ.

ಮುಖ್ಯ ನಿಲ್ದಾಣದಲ್ಲೂ ಈ ವ್ಯವಸ್ಥೆ ಇದೆ. ಯಾವ ಪ್ಲಾಟ್‌ಫಾರ್ಮ್‌ಗೆ ಯಾವ ಬಸ್‌ ಎಷ್ಟು ಹೊತ್ತಿಗೆ ಬರುತ್ತದೆ ಎಂಬ ಮಾಹಿತಿಯನ್ನು ಡಿಜಿಟಲ್‌ ಫಲಕದಲ್ಲಿ ತೋರಿಸಲಾಗುತ್ತದೆ. ಅದಷ್ಟೇ ಅಲ್ಲ; ಮುಂದಿನ ಯಾವ ಸಂಖ್ಯೆ ಬಸ್‌ ಎಷ್ಟು ಹೊತ್ತಿಗೆ ಬರುತ್ತದೆ ಎಂಬ ಮಾಹಿತಿಯೂ ಇರುತ್ತದೆ.‌

***

ಪ್ರಯಾಣಿಕರ ಸಮಯ ಉಳಿತಾಯದ ಜತೆಗೆ ಸಂಸ್ಥೆಗೂ ಲಾಭವಾಗಿದೆ. ಹಲವು ನಗರಗಳಿಂದ ಈ ವ್ಯವಸ್ಥೆಗೆ ಬೇಡಿಕೆ ಬರುತ್ತಿದೆ

ಕೆ.ರಾಮಮೂರ್ತಿ, ವಿಭಾಗೀಯ ನಿಯಂತ್ರಕ, ಕೆಎಸ್‌ಆರ್‌ಟಿಸಿ, ಮೈಸೂರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry