ವರ್ಷಧಾರೆಗೆ ಸಂತಸ, ದೀಪಗಳ ಹಬ್ಬ

ಶನಿವಾರ, ಮೇ 25, 2019
33 °C

ವರ್ಷಧಾರೆಗೆ ಸಂತಸ, ದೀಪಗಳ ಹಬ್ಬ

Published:
Updated:

ವಿಜಯಪುರ: ಸದಾ ಬರಗಾಲದಿಂದ ತತ್ತರಿಸಿ ಹನಿ ಹನಿ ನೀರಿಗೂ ಪರದಾಡುತ್ತಾ ಹಬ್ಬ ಹರಿದಿನ ಗಳನ್ನು ಸರಳವಾಗಿ ಆಚರಿಸಿ ಕೈ ತೊಳೆದುಕೊಳ್ಳುತ್ತಿದ್ದ ಜನತೆ ಈಗ ತಿಂಗಳಿನಿಂದ ಸುರಿದ ಭಾರಿ ವರ್ಷಧಾರೆಗೆ ಸಂತಸಗೊಂಡಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಐದು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿ ಸಮರ್ಪಕ ಮಳೆ, ಬೆಳೆ ಇಲ್ಲದೇ ರೈತಾಪಿ ಜನ ಕಂಗಾಲಾಗಿದ್ದರು. ದುಡಿಯುವ ಕೈಗಳಿಗೆ ಕೆಲಸ ಇಲ್ಲದೇ ಕೂಲಿ ಕಾರ್ಮಿಕರ ಕುಟುಂಬಗಳು ಸಂಕಷ್ಟದಲ್ಲಿ ಜೀವನ ದೂಡುತ್ತಿದ್ದವು.

ವರುಣನ ಕೃಪೆಯಿಂದ ಹಲವು ದಿನಗಳಿಂದ ಉತ್ತಮ ಮಳೆಯಾಗಿದೆ. ಹಲವು ಕೆರೆಗಳು ತುಂಬಿ ಕೋಡಿ ಹರಿದಿವೆ. ಹಲವು ಕೆರೆಗಳಿಗೆ ಶೇ 80 ರಷ್ಟು ನೀರು ಬಂದಿವೆ.

ಜನರು ಖುಷಿಯಿಂದಲೇ ಹಬ್ಬದ ಆಚರಣೆಗೆ ಭರದ ಸಿದ್ಧತೆ ಮಾಡಿಕೊಂಡು ಅಗತ್ಯ ವಸ್ತುಗಳ ಖರೀದಿಯನ್ನು ಸಂಭ್ರಮದಿಂದ ಮಾಡಿದ್ದಾರೆ.

ತಪ್ಪದ ಬೆಲೆ ಏರಿಕೆ : ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಎಂದಿನಂತೆ ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ ಕೈ ಸುಟ್ಟುಕೊಳ್ಳುವಂತಾಯಿತು ಎಂದು ಗ್ರಾಹಕರು ದೂರಿದ್ದಾರೆ.

ದೀಪಾವಳಿಗೆ ಮೆರಗು ನೀಡುವ ಪಟಾಕಿಗಳ ಖರೀದಿಗೂ ಜನರು ಸಂತಸದಿಂದ ಮುಗಿಬಿದ್ದಿದ್ದರು. ಹಬ್ಬದ ವಿಶೇಷವಾಗಿ ತಯಾರಿಸುವ ಕಜ್ಜಾಯ ಖಾದ್ಯಗಳ ತಯಾರಿಗೆ ಅಕ್ಕಿ, ಬೆಲ್ಲ, ಎಣ್ಣೆ ಪದಾರ್ಥಗಳನ್ನು ಗ್ರಾಹಕರು ಬೆಲೆ ಏರಿಕೆಯ ನಡುವೆ ಖರೀದಿಸುತ್ತಿದ್ದರು.

ನೋಮುಲ ಪಂಡುಗ: ದೀಪಾವಳಿ ಹಬ್ಬವನ್ನು ಬಯಲು ಸೀಮೆ ಭಾಗದಲ್ಲಿನ ಹಿರಿಯ ಜನರು ಇಂದಿಗೂ ಜನಪದ ಶೈಲಿಯಲ್ಲಿ ಆಚರಣೆ ಮಾಡುತ್ತಾರೆ. ಆದ್ದರಿಂದ ಹಬ್ಬವನ್ನು ದೀಪಾವಳಿ ಎನ್ನುವುದರ ಬದಲಿಗೆ ನೋಮುಲ ಪಂಡಗ ಎಂದೇ ಕರೆಯುತ್ತಾರೆ.

ಮುಸ್ಲಿಮರ ನೋಮುದಾರ: ಹಿಂದೂ ಗಳು ವಿಶೇಷವಾಗಿ ಆಚರಿಸುವ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಕೈಗೆ ಸಾಂಕೇತಿಕವಾಗಿ ಕಟ್ಟಿಕೊಳ್ಳುವ ನೋಮುದಾರಗಳನ್ನು ಮುಸ್ಲಿಂ ಸಮುದಾಯ ತಯಾರಿಸಿ ಕೊಡುವುದು ವಿಶೇಷವಾಗಿದೆ.

ಇದು ಹಿಂದು, ಮುಸ್ಲಿಮರ ನಡುವಿನ ಸೌಹಾರ್ದತೆ ಪ್ರತೀಕವಾಗಿದೆ. ದೀಪಾವಳಿ ಹಬ್ಬಕ್ಕೂ ತಿಂಗಳ ಮೊದಲೇ ಸಮುದಾಯದ ಹಲವು ಕುಟುಂಬಗಳು ಹಬ್ಬಕ್ಕೆ ಬೇಕಾದ ನೋಮುದಾರಗಳನ್ನು ವಿವಿಧ ಮಾದರಿಗಳಲ್ಲಿ ಆಕರ್ಷಕವಾಗಿ ಸಿದ್ಧಪಡಿಸಿ ಮಾರಾಟ ಮಾಡುವ ಮೂಲಕ ಸೌಹಾರ್ದತೆಯನ್ನು ಮೆರೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry