ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ಉಳಿಸಿ ಅಭಿಯಾನಕ್ಕೆ ಚಾಲನೆ

Last Updated 20 ಅಕ್ಟೋಬರ್ 2017, 5:27 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಹಿಂದೂ ಧಾರ್ಮಿಕ ಪರಂಪರೆಯಲ್ಲಿ ನದಿ ಮತ್ತು ಪರಿಸರ ಬಗ್ಗೆ ಭಕ್ತಿಯ ಭಾವನೆಗಳಿದ್ದು, ಅವುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನದಿಗಳ ಸಂರಕ್ಷಣೆ ಮತ್ತು ಜೋಡಣೆಯಿಂದ ದೇಶದ ರೈತರ ಬದುಕು ಹಸನಾಗುತ್ತದೆ’ ಎಂದು ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.

ತಾಲ್ಲೂಕಿನ ಅಂಕಲಿ ಗ್ರಾಮದ ಕೆ.ಎಲ್.ಇ.ಸಂಸ್ಥೆಯ ಶಾರದಾದೇವಿ ಕೋರೆ ಪದವಿ ಹಾಗೂ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ನದಿ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನದಿಗಳ ಕುರಿತಾಗಿ ಹಿಂದೂ ಧರ್ಮದಲ್ಲಿ ಪುರಾತನ ಕಾಲದಿಂದಲೂ ಪೂಜನೀಯ ಭಾವನೆಯಿದ್ದು, ನದಿಗಳಲ್ಲಿ ಮಿಂದೆದ್ದರೆ ಪೂರ್ವ ಜನ್ಮದ ಪಾಪವು ಕಳೆಯುತ್ತವೆ ಎಂಬ ನಂಬಿಕೆಯಿದೆ. ನದಿಗಳು ಜಗತ್ತಿನ ವಿವಿಧ ಸಂಸ್ಕೃತಿಗಳು ಬೆಳೆದು ಬರಲು ವಾತಾವರಣ ಕಲ್ಪಿಸಿದೆ.

ನದಿಗಳಲ್ಲಿ ತ್ಯಾಜ್ಯ ಎಸೆಯದೆ ಅವುಗಳ ಪಾವಿತ್ರ್ಯ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ನದಿಗಳ ಜೋಡಣೆಯಿಂದ ರೈತರ ಜೀವನ ಸುಂದರವಾಗುವ ಜತೆಗೆ ದೇಶದ ಆರ್ಥಿಕ ಪರಿಸ್ಥಿತಿ ಕೂಡ ಬದಲಾವಣೆಯಾಗಲಿದೆ’ ಎಂದರು.

ದೂಧ್‌ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಭರತೇಶ ಬನವಣೆ,‘ಫಲವತ್ತಾದ ಭೂಮಿ ಇದ್ದರೂ ನೀರು ಸಿಗದೇ ರೈತರ ಬದುಕು ತೀವ್ರ ಸಂಕಷ್ಟದಲ್ಲಿದ್ದು, ಪ್ರಧಾನಮಂತ್ರಿಗಳ ನದಿಗಳ ಜೋಡಣೆ ಯೋಜನೆ ದೇಶದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಿದೆ. ನದಿಗಳ ರಕ್ಷಣೆ ಹಾಗೂ ಜಲ ಸಂರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದರು.

ಪ್ರಾಚಾರ್ಯ ಬಾಳಾಸಾಹೇಬ ಮಿರ್ಜಿ, ಜಾಥಾ ಸಂಘಟಕ ಸುಧೀರ ಕೋಠಿವಾಲೆ, ಉಪನ್ಯಾಸಕ ಬಿ.ಎಸ್.ಅಂಬಿ, ಕೆ.ಬಿ.ಶಿಂಧೆ, ಭಾರತಿ ಪಾಟೀಲ, ಎಂ.ಬಿ.ವಾಲಿ, ಮಾರುತಿ ಕಾನಡೆ, ಬಿ.ಜಿ.ಜಾವೂರ್‌, ಪ್ರಿಯಾಂಕಾ ಕೆಳಗಿನಮನಿ, ಪ್ರಿಯಾಂಕಾ ಪಾಟೀಲ, ಸುಪ್ರಿಯಾ ಅರಬೋಳೆ, ಕಾವೇರಿ ಬೇನಾಡೆ, ಎಂ.ಎಂ.ಮೈಶಾಳೆ, ಡಾ.ಸುಕುಮಾರ ಚೌಗಲೆ, ಉಪಸ್ಥಿತರಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT