ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಖ್ಯಮಂತ್ರಿ ಬಳಿ ರೈತರ ನಿಯೋಗ’

Last Updated 20 ಅಕ್ಟೋಬರ್ 2017, 5:38 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ‘ತಾಲ್ಲೂಕಿನ ಮರಬ್ಬಿಹಾಳು ಏತನೀರಾವರಿ ಯೋಜನೆಗೆ ಅನುದಾನ ಕಲ್ಪಿಸುವ ಕುರಿತಂತೆ ಮುಖ್ಯಮಂತ್ರಿ ಬಳಿ ರೈತರ ನಿಯೋಗ ಕರೆದುಕೊಂಡು ಹೋಗಲಾಗುವುದು’ ಎಂದು ಶಾಸಕ ಎಸ್‌.ಭೀಮಾನಾಯ್ಕ ಹೇಳಿದರು. ಮರಬ್ಬಿಹಾಳು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮೂರು ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆ ಇದಾಗಿದ್ದು, ಮುಂಬರುವ ಅಧಿವೇಶನದಲ್ಲೂ ಇದರ ಬಗ್ಗೆ ಪ್ರಸ್ತಾಪಿಸಲಾಗುವುದು. ಇದುವರೆಗೂ ಈ ಯೋಜನೆ ಅನುಷ್ಠಾನಗೊಳಿಸಲು ಕ್ಷೇತ್ರವನ್ನಾಳಿದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ’ ಎಂದು ಟೀಕಿಸಿದರು.

‘ಗ್ರಾಮ ವಿಕಾಸ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಐದು ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳ ಪೈಕಿ ಗರಗ ಮತ್ತು ಮುಟುಗನಹಳ್ಳಿ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿವೆ. 371ಜೆ ಅನುದಾನದ ಮ್ಯಾಕ್ರೋ ಯೋಜನೆಯಡಿ ಬಸರಕೋಡು, ಉಪನಾಯಕನಹಳ್ಳಿ, ರಾಯರಾಳು ತಾಂಡಾ, ಕೂಡ್ಲಿಗಿ ತಾಲ್ಲೂಕಿನ ರಾಂಪುರ ಗ್ರಾಮಗಳನ್ನು ತಲಾ ₹ 1ಕೋಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.

‘ಪ್ರಧಾನಮಂತ್ರಿಗಳ ಆದರ್ಶ ಗ್ರಾಮಕ್ಕೆ ನಯಾಪೈಸೆ ಅನುದಾನ ಕಲ್ಪಿಸಿಲ್ಲ. ಪುಕ್ಕಟೆ ಪ್ರಚಾರಕ್ಕಾಗಿ ಆದರ್ಶ ಗ್ರಾಮ ಯೋಜನೆ ರೂಪಿಸಿದಂತಿದೆ. ತಂಬ್ರಹಳ್ಳಿಯಲ್ಲಿ ನಾಲ್ಕೂವರೆ ವರ್ಷಗಳಲ್ಲಿ ₹ 10ಕೋಟಿ ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ, ಮುಖ್ಯಮಂತ್ರಿ ಮಾದರಿ ಆದರ್ಶಗ್ರಾಮ ಯೋಜನೆಯಡಿ ತಾಳೆಬಸಾಪುರ ತಾಂಡಾ, ಮಲ್ಲನಾಯಕನಹಳ್ಳಿ ಆಯ್ಕೆ ಮಾಡಲಾಗಿದ್ದು ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡ ಲಾಗುವುದು’ ಎಂದೂ ತಿಳಿಸಿದರು.

ಚರ್ಚೆಗೆ ಆಹ್ವಾನ: ‘ಕ್ಷೇತ್ರದಲ್ಲಾದ ₹1ಸಾವಿರ ಕೋಟಿ ಅಂದಾಜು ಮೊತ್ತದ ಅಭಿವೃದ್ಧಿ ಕುರಿತಂತೆ ಮಾಜಿ ಶಾಸಕ ನೇಮಿರಾಜ ನಾಯ್ಕರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ’ ಎಂದು ಸವಾಲು ಹಾಕಿದರು.

‘ಇಲ್ಲಿನ ಹಗರಿ ಆಂಜನೇಯ ದೇವಾಸ್ಥಾನದ ಮುಂಭಾಗದಲ್ಲೆ ವೇದಿಕೆ ಸಿದ್ಧಪಡಿಸಿ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿಯ ಮಾಹಿತಿಯನ್ನು ದಾಖಲೆ ಸಮೇತ ಸಾರ್ವಜನಿಕರ ಮುಂದೆ ಇಡಲಾಗುವುದು. ಬಿಜೆಪಿ ಸರ್ಕಾರದ ಅನುದಾನವೆಂದು ಸಾಬೀತು ಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಸವಾಲೆಸೆದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗಮ್ಮ, ಪುರಸಭೆ ಅಧ್ಯಕ್ಷ ತಳವಾರ ರಾಘವೇಂದ್ರ, ಸ್ಥಾಯಿಸಮಿತಿ ಅಧ್ಯಕ್ಷ ಯು.ಬಾಬುವಲಿ, ಮುಖಂಡರಾದ ರೋಗಾಣಿ ಹುಲುಗಪ್ಪ, ಹುಲ್ಲಯ್ಯನವರ ಭೀಮಪ್ಪ, ಗೆದ್ದಲಗಟ್ಟಿ ತಿಮ್ಮಣ್ಣ, ರೋಗಾಣಿ ಪ್ರಕಾಶ್, ನಾಗರಾಜ, ಡಿ.ನಾಗಪ್ಪ, ಶಾಂತಪ್ಪ, ಶಿವಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT