ಗುರುವಾರ , ಸೆಪ್ಟೆಂಬರ್ 19, 2019
29 °C

ನಾನು ಇದನ್ನು ಅನುಭವಿಸಿದ್ದೆ...

Published:
Updated:
ನಾನು ಇದನ್ನು ಅನುಭವಿಸಿದ್ದೆ...

‘ನಿಮಗೆ ಯಾರಾದರೂ ಲೈಂಗಿಕ ಕಿರುಕುಳ ನೀಡುತ್ತಿದ್ದರೆ ಸುಮ್ಮನಿರಬೇಡಿ. #MeToo ಹ್ಯಾಶ್‌ಟ್ಯಾಗ್‌ನೊಂದಿಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ’ ಹೀಗೊಂದು ಟ್ವೀಟ್ ಮಾಡಿ ವಿಶ್ವದಾದ್ಯಂತ ಸಂಚಲನವನ್ನು ಸೃಷ್ಟಿಸಿದ್ದಾರೆ ಹಾಲಿವುಡ್ ನಟಿ ಅಲಿಸ್ಸ ಮಿಲಾನೊ. ಇವರ ಈ ಟ್ವೀಟ್‌ಗೆ ಲಕ್ಷಾಂತರ ಮಹಿಳೆಯರು ರಿಟ್ವೀಟ್‌ ಮಾಡಿ, #MeToo ಹ್ಯಾಶ್‌ಟ್ಯಾಗ್ ಅಡಿ ನಾನೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ ಎಂದು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ನಿರ್ಮಪಕ ಹಾರ್ವೆ ವೈನ್‌ಸ್ಟೈನ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡುತ್ತಿರುವುದು ನಟಿ ಅಲಿಸ್ಸ ಮಿಲಾನೊ ಒಬ್ಬರೇ ಏನಲ್ಲ. ಈ ಹಿಂದೆ ಕೂಡ ಹಲವು ನಟಿಯರು, ರೂಪದರ್ಶಿಯರು ಅತ್ಯಾಚಾರ, ಕೊಲೆ ಬೆದರಿಕೆ, ಲೈಂಗಕ ಶೋಷಣೆಯಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ ಧೈರ್ಯವಾಗಿ ಹಾರ್ವೆ ವೈನ್‌ಸ್ಟೈನ್ ಮೇಲೆ ಸಮರ ಸಾರಿದವರು ನಟಿ ಮಿಲಾನೊ. ಈ ಹಿಂದೆ ನಟಿ ಲೈಸೆಟ್ಟೆ ಆಂಟನಿ ಕೂಡ ಹಾರ್ವೆ ವೈನ್‌ಸ್ಟೈನ್ ನನ್ನ ಅತ್ಯಾಚಾರ ಮಾಡಿದ್ದರು ಎಂದು ಆರೋಪಿಸಿದ್ದರಾದರೂ ಈ ವಿಚಾರದ ಬಗ್ಗೆ ಹೆಚ್ಚು ಚರ್ಚೆಯಾಗಲಿಲ್ಲ.

ನಟಿ ಮಿಲಾನೊ ಟ್ವೀಟ್‌ನಿಂದ ಸ್ಫೂರ್ತಿ ಪಡೆದು ತಮಗಾದ ಶೋಷಣೆ ಬಗ್ಗೆ ಮಾತನಾಡಿದವರು ನಮ್ಮ ಕನ್ನಡತಿ ನಟಿ ನೀತು ಶೆಟ್ಟಿ. ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ತಮ್ಮ ಅನುಭವಗಳನ್ನೆಲ್ಲಾ ಬರೆದುಕೊಂಡಿದ್ದಾರೆ.

‘ಮುಂಜಾನೆ ಮನೆ ಪಾಠಕ್ಕೆ ಹೋಗುವಾಗ, ಸ್ಕೂಟಿ ಓಡಿಸುವಾಗ, ಆಟದ ಮೈದಾನದಲ್ಲಿ, ಮಾರುಕಟ್ಟೆಯಲ್ಲಿ, ಜನಸಂದಣಿಯಲ್ಲಿ, ಬಸ್‌ನಲ್ಲಿ, ಆಟೊದಲ್ಲಿ, ಕಚೇರಿಯಲ್ಲಿ ಈ ಎಲ್ಲಾ ಸ್ಥಳದಲ್ಲಿ ನಾನು ಶೋಷಣೆಗೆ ಒಳಗಾಗಿದ್ದೇನೆ. ಹಾಗಂತ ಎಲ್ಲಾ ಗಂಡಸರು ಇಂಥವರು ಎಂದಲ್ಲ. ಕೆಲ ಗಂಡಸರೂ ಕೂಡ ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ. ಆದರೆ ಇದರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು’ ಎಂದು #MeToo ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಬರೆದುಕೊಂಡಿದ್ದಾರೆ.

ನಟಿ ಮಿಲಾನೊ ಅವರು ಆರಂಭಿಸಿದ #MeToo ಹ್ಯಾಶ್‌ಟ್ಯಾಗ್ ಟ್ವೀಟರ್‌, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಟ್ರೆಂಡಿಂಗ್‌ ಆಗಿದೆ. ಲೇಡಿ ಗಾಗಾ, ಮೋನಿಕಾ ಲೆವಿನ್‌ಸ್ಕಿ, ರೊಸಾರಿಯೋ ಡಾಸನ್, ಇವಾನ್ ರೆಚೆಲ್ ವುಡ್, ಏಂಜಲೀನಾ ಜೋಲಿ, ರೋಸ್ ಮೆಕ್‌ಗೊವಾನ್, ಗ್ವಿನೆತ್ ಪಾಲ್ಟ್ರೋ ಅವರೂ ಕೂಡ ಈ ಹ್ಯಾಶ್‌ಟ್ಯಾಗ್ ಬಳಸಿ ಪ್ರತಿಕ್ರಿಯಿಸಿದ್ದಾರೆ.

ನಟಿ ಮಿಲಾನೊ ಅ.15ರ (ಭಾನುವಾರ) ಬೆಳಿಗ್ಗೆ ಮಾಡಿದ ಟ್ವಿಟ್‌ಗೆ ಒಂದೇ ದಿನದಲ್ಲಿ 5 ಲಕ್ಷ ಜನರಿಂದ ಪ್ರತಿಕ್ರಿಯೆ ಬಂದಿತ್ತು. ಬಹುತೇಕ ಜನರು, 'ನನ್ನದೂ ಇಂಥದ್ದೇ ಕಥೆ. ನನ್ನ ಮೇಲೆಯೂ ಶೋಷಣೆ ನಡೆದಿತ್ತು' ಎಂದು #metoo ಹ್ಯಾಶ್‌ಟ್ಯಾಗ್‌ ಅಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಈ ಅಭಿಯಾನವನ್ನು ಬೆಂಬಲಿಸಿ ಫ್ರಾನ್ಸ್‌ನಲ್ಲಿ #balancetonporc ಅಭಿಯಾನ ಆರಂಭವಾಗಿದೆ. ಫ್ರೆಂಚ್ ಭಾಷೆಯಲ್ಲಿ 'ಬಲನ್‌ಸೆಟೊನ್‌ಪೊರ್ಕ್' ಎಂದರೆ 'ಹಂದಿಯನ್ನು ಬಯಲಿಗೆ ತನ್ನಿ' ಎಂದು ಅರ್ಥ. ವಿವಿಧ ದೇಶಗಳಲ್ಲಿ #Womenwhoroar (ಘರ್ಜಿಸುವ ಮಹಿಳೆ) ಎಂಬ ಹ್ಯಾಶ್‌ಟ್ಯಾಗ್‌ನಲ್ಲೂ ಅಭಿಯಾನಗಳು ಆರಂಭವಾಗಿದೆ.

ನಿಮ್ಮ ಕಥೆಯನ್ನೂ ಹೇಳಬೇಕು ಎನಿಸಿತೇ? ನೀವೂ #metoo ಹ್ಯಾಶ್‌ಟ್ಯಾಗ್ ಅಭಿಯಾನದಲ್ಲಿ ಭಾಗವಹಿಸಬಹುದು. @Alyssa_Milano ಖಾತೆಯನ್ನೂ ನಿಮ್ಮ ಬರಹಕ್ಕೆ ಟ್ಯಾಗ್‌ ಮಾಡಿಕೊಳ್ಳಿ.

ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ

ಲೈಂಗಿಕ ಶೋಷಣೆ ಎಲ್ಲಾ ಕ್ಷೇತ್ರದಲ್ಲೂ ಇದೆ. ಧೈರ್ಯದಿಂದ ಹೋರಾಡೋಣ. ಆತ್ಮವಿಶ್ವಾಸ ರೂಢಿಸಿಕೊಳ್ಳೋಣ. ನಾವು ಅನುಭಿಸಿದ ಶೋಷಣೆಯ ಬಗ್ಗೆ ಮಾತನಾಡೋಣ.

ನಾನು ಯಾರಿಗೋ ಹೆದರಿ ಈ ಮಾತು ಹೇಳುತ್ತಿಲ್ಲ. ವೈಯಕ್ತಿಕವಾಗಿ ಸಿನಿಮಾ ಕ್ಷೇತ್ರದಲ್ಲಿ ನನಗೆ ಇಂಥ ಅನುಭವ ಆಗಿಲ್ಲ. ಆದರೆ ಹೊರಗೆ ಇಂಥ ಘಟನೆಗಳು ನಡೆಯುತ್ತಿರುತ್ತವೆ. ನಮ್ಮಲ್ಲಿ ಮಹಿಳೆಯನ್ನು ದೇವತೆ ಎನ್ನುತ್ತಾರೆ. ಆದರೆ ಭಾರತದಲ್ಲೇ ಹೆಚ್ಚು ಲೈಂಗಿಕ ಶೋಷಣೆಯಾಗುತ್ತಿದೆ. ನಾವು ಹೆಣ್ಣು ಮಕ್ಕಳಿಗೆ ಕತ್ತಲಾದ ಮೇಲೆ ಹೊರಗೆ ಓಡಾಡಬಾರದು ಎಂದು ಹೇಳುತ್ತವೆಯೇ ಹೊರತು. ಹೆಣ್ಣುಮಕ್ಕಳನ್ನು ಹೇಗೆ ಕಾಣಬೇಕು ಎನ್ನುವ ಪಾಠವನ್ನು ಗಂಡುಮಕ್ಕಳಿಗೆ ಕಲಿಸುವುದಿಲ್ಲ. ಈ ಮನಸ್ಥಿತಿ ಬದಲಾಗಬೇಕು.

ನಾನು ಫೇಸ್‌ಬುಕ್‌ನಲ್ಲಿ #metoo ಬಗ್ಗೆ ಸ್ಟೇಟಸ್‌ ಹಾಕಿದಾಗ. ಹಲವು ಗಂಡಸರು ನಮಗೂ ಇಂಥ ಅನುಭವಾಗಿದೆ ಎಂದು ಪ್ರತಿಕ್ರಿಯಿಸಿದರು. ಇದು ಕೂಡ ಬೇಸರದ ಸಂಗತಿ. ಕೆಲವರು ಬೈಯುವಾಗ ‘ಅಕ್ಕ’, ‘ಅಮ್ಮ’ ಎಂದೇ ಆರಂಭಿಸುತ್ತಾರೆ. ಇದೂ ಲೈಂಗಿಕ ಶೋಷಣೆಯ ಇನ್ನೊಂದು ಮುಖ ಅನಿಸುತ್ತೆ.

– ನೀತು ಶೆಟ್ಟಿ, ನಟಿ

**

ಪುರಾಣಗಳಲ್ಲಿನ #metoo

ಪುರಾಣಗಳಲ್ಲಿ ಇರುವ ಲೈಂಗಿಕ ಶೋಷಣೆಯ ಬಗೆಗೂ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗರಿಗೆದರಿದೆ. ನೇಹಾ ದೀಕ್ಷಿತ್ (@neha_dixit) ಎನ್ನುವವರು ಭಾಗವತದಲ್ಲಿ ಬರುವ ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ ಪ್ರಸಂಗದ ಚಿತ್ರವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ಗೋಪಿಕಾ ಸ್ತ್ರೀಯರೂ #MeToo ಎಂದು ಚೀರುವಂತೆ ಚಿತ್ರಿಸಲಾಗಿದೆ. ಕೌರವರ ಸಭೆಯಲ್ಲಿ ದ್ರೌಪದಿಯ ಸೀರೆ ಸೆಳೆಯುವ ಪ್ರಸಂಗವನ್ನೂ ಚಿತ್ರಿಸಲಾಗಿದೆ.

Post Comments (+)