‘ಅಹಂ ಬ್ರಹ್ಮಾಸ್ಮಿ’ ತತ್ವ ಜಗತ್ತಿಗೆ ಸಾರಿದ ಶಂಕರಾಚಾರ್ಯ

ಶುಕ್ರವಾರ, ಮೇ 24, 2019
23 °C

‘ಅಹಂ ಬ್ರಹ್ಮಾಸ್ಮಿ’ ತತ್ವ ಜಗತ್ತಿಗೆ ಸಾರಿದ ಶಂಕರಾಚಾರ್ಯ

Published:
Updated:

ಶೃಂಗೇರಿ: ಜಗತ್ತಿನ ಎಲ್ಲಾ ಋಷಿಮುನಿಗಳು ಧರ್ಮದ ಬಗ್ಗೆ ಉತ್ತಮ ಮೌಲ್ಯಗಳನ್ನು ನೀಡಿದ್ದಾರೆ. ಆದರೆ ಶಂಕರರು ಸಾಮಾನ್ಯ ಮನುಷ್ಯನು ಹುಟ್ಟು ಹಾಗೂ ಸಾವಿನ ನಡುವೆ ಹೇಗೆ ಬದುಕಿದರೆ ಮುಕ್ತಿ ಪಡೆಯಬಹುದು ಎಂಬುದನ್ನು ವಿವರಿಸಿದ್ದಾರೆ. ಹಾಗಾಗಿ ಶಂಕರರು ಜಗತ್ತಿನ ಮೊದಲಗುರು. ಅದ್ವೈತ ಸಿದ್ಧಾಂತದ ಮೂಲಕ ಜನಮಾನಸದಲ್ಲಿ ನಿರಂತರವಾಗಿ ನೆಲೆಸಿದ ಭಗವತ್ಪಾದರು ಸ್ವಹಿತಲಾಭವಿಲ್ಲದೇ ಲೋಕಕಲ್ಯಾಣಕ್ಕಾಗಿ ದುಡಿದರು ಎಂದು ಸಾಹಿತಿ ಆಗುಂಬೆ ಗಣೇಶ್ ಹಗ್ಗೆಡೆ ತಿಳಿಸಿದರು.

ಶೃಂಗೇರಿ ತಾಲ್ಲೂಕಿನ ರೋಟರಿ ಭವನದಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ ಡಾ.ವಿಠಲಶೆಟ್ಟಿ ದತ್ತಿ ಉಪನ್ಯಾಸ ‘ಶಂಕರಚಾರ್ಯರ ಆದ್ವೈತ ಸಿದ್ಧಾಂತ’ ಎಂಬ ವಿಷಯದ ಕುರಿತು ಅವರು ಮಾತಾಡಿದರು.

ಅದ್ವೈತ ಎಂದರೆ ದೇಹ ಹಾಗೂ ಆತ್ಮ ಒಂದೇ ಎಂದರ್ಥ. ಆತ್ಮ ಎಂಬುದೇ ಭಗವಂತ. ನಮ್ಮೊಳಗಿನ ಅಜ್ಞಾನವನ್ನು ಹೊಡೆದೋಡಿಸಿದಾಗ ಮಾತ್ರ ಜ್ಞಾನಪ್ರಾಪ್ತಿ ಉಂಟಾಗುತ್ತದೆ. ಪ್ರಜ್ಞಾನದಿಂದ ಮಾತ್ರವೇ ಭಗವಂತನ ಸ್ವರೂಪ ಲಭ್ಯವಾಗುತ್ತದೆ.

ಉಪನಿಷತ್ತಿನ ಆಧಾರದಿಂದ ಮೂಡಿದ ಸರಳತತ್ವವು ಇಂದಿಗೂ ಕೂಡಾ ಪ್ರಸ್ತುತವಾಗಿದೆ. ಸನಾತನಧರ್ಮದ ಶ್ರೇಯಸ್ಸಿಗಾಗಿ ಅವಿರತವಾಗಿ ದುಡಿದು ಜಗತ್ತಿನಲ್ಲಿ ವೇದಾಂತದ ಮೌಲ್ಯಗಳನ್ನು ಉಳಿಸಿಕೊಳ್ಳುವಲ್ಲಿ ಶಂಕರರು ವಹಿಸಿದ ಪಾತ್ರ ಅದ್ವಿತೀಯವಾದುದು. ಕೇವಲ ಕಾಲ್ನಡಿಗೆ ಮುಖಾಂತರ ಜನರನ್ನು ಸಂಪರ್ಕಿಸಿ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದ ಭಗವತ್ಪಾದರ ವಿಶಾಲ ದೃಷ್ಟಿಕೋನ ಸರ್ವರಿಗೂ ಮಾದರಿ ಎಂದರು.

ಧರ್ಮದ ನಡುವೆ ಇರುವ ಜಿಜ್ಞಾಸೆಯನ್ನು ಬಗೆಹರಿಸಿ ಸರಳತತ್ವವನ್ನು ಜಗತ್ತಿಗೆ ಸಣ್ಣವಯಸ್ಸಿನಲ್ಲಿ ನೀಡಿದ ಶಂಕರಚಾರ್ಯರು ಶಿವಸ್ವರೂಪಿಗಳು. ಭಗವಂತನ ಶ್ರದ್ಧೆಗೆ ಮನಸ್ಸು ಪರಿಶುದ್ಧವಾಗಿರಬೇಕು. ಪೂಜೆ ಎಂದರೆ ದೇವರಿಗೆ ಹೂವು, ಹಣ್ಣು ಮಾತ್ರ ಸಮರ್ಪಿಸುವುದಲ್ಲ. ನಮ್ಮೊಳಗಿನ ಕಲ್ಮಶಗಳನ್ನು ಭಗವಂತನಿಗೆ ಅರ್ಪಿಸಿ ಆತ್ಮವನ್ನು ಪರಿಶುದ್ಧವಾಗಿಸುವುದೇ ನಿಜವಾದ ಪೂಜೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪೂರ್ಣಿಮಾ ಸಿದ್ಧಪ್ಪ ವಹಿಸಿದರು. ಪ್ರಧಾನಕಾರ್ಯದರ್ಶಿ ಹೆಗ್ಗದ್ದೆ ಶಿವಾನಂದರಾವ್ ಕಸಬಾ, ಹೋಬಳಿ ಘಟಕದ ಅಧ್ಯಕ್ಷ ಕೆಲವಳ್ಳಿ ಕಳಸಪ್ಪ, ರೋಟರಿ ಅಧ್ಯಕ್ಷ ಸಂಪತ್‍ಕುಮಾರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry