ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟೇಶ್ವರ ದೇಗುಲ ನಿರ್ಮಾಣಕ್ಕೆ ಕುಂಚಾದ್ರಿ ಬೆಟ್ಟ ಸಜ್ಜು

Last Updated 20 ಅಕ್ಟೋಬರ್ 2017, 6:21 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ವೆಂಕಟೇಶ್ವರಸ್ವಾಮಿ ದೇಗುಲ ನಿರ್ಮಾಣ ಮಾಡಲು ಇಲ್ಲಿನ ಕುಂಚಾದ್ರಿ ಬೆಟ್ಟ ಸಜ್ಜಾಗಿದೆ. ಸೆ. 8ರಂದು ಕುಂಚಾದ್ರಿ ವೆಂಕಟೇಶ್ವರ ದೇವಸ್ಥಾನದ ಚಾರಿಟಬಲ್‌ ಟ್ರಸ್ಟ್‌ನವರು ದೇಗುಲ ನಿರ್ಮಾಣ ಮಾಡುವ ಬೆಟ್ಟದ ಸ್ವಚ್ಛತೆ ಕಾರ್ಯಕ್ಕೆ ಚಾಲನೆ ನೀಡಿದ್ದರು. ಅಂದಿನಿಂದಲೂ ಯಂತ್ರಗಳನ್ನು ಬಳಸಿ ಬೆಟ್ಟದಲ್ಲಿರುವ ಕಲ್ಲು ಹಾಗೂ ಗಿಡ, ಗಂಟಿಗಳನ್ನು ತೆಗೆಯುವ ಕೆಲಸ ಭರದಿಂದ ನಡೆಯುತ್ತಿದೆ.

ಸುಮಾರು 165 ಅಡಿ ಎತ್ತರದ ಬೆಟ್ಟದಲ್ಲಿರುವ ಕಲ್ಲುಗಳನ್ನು ಯಂತ್ರದಿಂದ ರಂಧ್ರ ಮಾಡಿ, ಒಡೆಯಲಾಗುತ್ತಿದೆ. ಹಿಟ್ಯಾಚಿಯು ಆ ಕಲ್ಲು ಹಾಗೂ ಮಣ್ಣನ್ನು ತಗ್ಗು ಪ್ರದೇಶಕ್ಕೆ ತಳ್ಳುವ ಮೂಲಕ ದೇಗುಲ ನಿರ್ಮಿಸುವ ಜಾಗವನ್ನು ಸಮ(ಮಟ್ಟ) ಮಾಡುತ್ತಿದೆ. ಕಲ್ಲು ಕೆಲಸ ಮಾಡುವ ಕಾರ್ಮಿಕರು ಹಾಸು ಬಂಡೆಯಲ್ಲಿ ದೇಗುಲಕ್ಕೆ ಹತ್ತುವ ಮೆಟ್ಟಿಲುಗಳನ್ನು ನಿರಂತರವಾಗಿ ಕೆತ್ತನೆ ಮಾಡುತ್ತಿದ್ದಾರೆ. ಕಲ್ಲು, ಮುಳ್ಳುಗಳಿಂದ ಕೂಡಿದ್ದ ಬೆಟ್ಟ ಹಸನಾಗುತ್ತಿದೆ.

ದಾಳಿಂಬೆ ಕೃಷಿ ಮೂಲಕ ಕಾಯಕಯೋಗಿ ಎಂದು ನಾಡಿನಲ್ಲಿ ಗುರುತಿಸಿಕೊಂಡಿರುವ ಇಲ್ಲಿನ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಬಸವ ಭಕ್ತರಾಗಿರುವ ಶಾಂತವೀರ ಸ್ವಾಮೀಜಿ, ಬಯಲು ಸೀಮೆಯ ಈ ಬೆಟ್ಟದಲ್ಲಿ ವೆಂಕಟೇಶ್ವರಸ್ವಾಮಿ ದೇಗುಲ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿರುವುದು ಅಚ್ಚರಿಯನ್ನುಂಟು ಮಾಡುತ್ತಿದೆ ಎನ್ನುತ್ತಾರೆ ಪ್ರಸನ್ನಕುಮಾರ್‌, ಶಶಿಧರ್‌, ರಂಗನಾಥ್‌.

ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಗಿರಿ(ಬೆಟ್ಟ) ಪ್ರದೇಶದಲ್ಲಿ ತಿಮ್ಮಪ್ಪ ದೇವಸ್ಥಾನವಿಲ್ಲ. ಇಲ್ಲಿ ದೇಗುಲ ನಿರ್ಮಾಣ ಮಾಡುತ್ತಿರುವುದರಿಂದ ಈ ಭಾಗದ ಭಕ್ತರಿಗೆ ಅನುಕೂಲ ಆಗಲಿದೆ. ದೇಗುಲ ನಿರ್ಮಾಣದಿಂದ ತಾಲ್ಲೂಕಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಂತಾಗುತ್ತದೆ. ಹೀಗಾಗಿ ಭಕ್ತರು ಹೆಚ್ಚಿನ ಸಹಕಾರ ನೀಡಬೇಕು ಎಂದು ಕುಂಚಾದ್ರಿ ವೆಂಕಟೇಶ್ವರ ದೇವಸ್ಥಾನದ ಚಾರಿಟಬಲ್‌ ಟ್ರಸ್ಟ್‌ನ ಗೌರವಾಧ್ಯಕ್ಷ ಆಗ್ರೋ ಶಿವಣ್ಣ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT