ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಸಂಪೂರ್ಣ ಪರಿಸರ ಸ್ನೇಹಿಯಾಗಿರಲಿ.!

Last Updated 20 ಅಕ್ಟೋಬರ್ 2017, 6:24 IST
ಅಕ್ಷರ ಗಾತ್ರ

ಚಿತ್ರದುರ್ಗ: ದೀಪಾವಳಿ ಹಬ್ಬ ಪರಿಸರಸ್ನೇಹಿಯಾಗಿರಲಿ. ಸಂಭ್ರಮದ ನಡುವೆ ಯಾವುದೇ ಅನಾಹುತ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಜನನಿಬಿಡ ಪ್ರದೇಶ ಹಾಗೂ ರಸ್ತೆ ಬದಿಗಳಲ್ಲಿ ಪಟಾಕಿ ಹೊಡೆಯುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ವಾಯುಮಾಲಿನ್ಯ ಉಂಟಾಗುವುದರಿಂದ ಹವಾಮಾನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಪರಿಸರಕ್ಕೆ ಮಾರಕವಾಗಿರುವ ಹಾನಿಕಾರಕ ಪಟಾಕಿಯಿಂದ ದೂರವಿರುವುದು ಒಳಿತು ಎನ್ನುತ್ತಾರೆ ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ.

ಪಟಾಕಿ ವ್ಯಾಪಾರದಲ್ಲಿ ಕುಸಿತ: ‘ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಜಾರಿ ಮತ್ತು ಮಾಲಿನ್ಯದ ಕುರಿತು ಜನರಲ್ಲಿ ಹೆಚ್ಚುತ್ತಿರುವ ಅರಿವಿನಿಂದಾಗಿ ಈ ವರ್ಷದ ಪಟಾಕಿ ವ್ಯಾಪಾರ ಕುಸಿದಿದೆ’ ಎಂದು ಪಟಾಕಿ ವ್ಯಾಪಾರಿಗಳು ಬೇಸರ ತಿಳಿಸುತ್ತಾರೆ.

ಜಿಎಸ್‌ಟಿ ಪರಿಣಾಮ: ‘ಪಟಾಕಿಗಳ ಮೇಲೆ ಶೇ 28 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಪಟಾಕಿಗಳ ದರ ಕಳೆದ ವರ್ಷಕ್ಕಿಂತ ಶೇ 30 ರಷ್ಟು ಹೆಚ್ಚಿದೆ. ಹೀಗಾಗಿ ಜನರು ಪಟಾಕಿಗಳನ್ನು ಖರೀದಿಸಲು ಮುಂದಾಗುತ್ತಿಲ್ಲ’. ವರ್ಷದಿಂದ ವರ್ಷಕ್ಕೆ ಪಟಾಕಿ ವ್ಯಾಪಾರ ಕುಸಿತ ಕಾಣುತ್ತಿದೆ ಎನ್ನುತ್ತಾರೆ ವಿನಾಯಕ ಪಟಾಕಿ ಅಂಗಡಿ ವ್ಯಾಪಾರಿ.

ಕಸ ಉತ್ಪತ್ತಿ ಕಡಿಮೆ ಮಾಡಿ: ‘ದೀಪಾವಳಿ ಹಬ್ಬದ ಅಂಗವಾಗಿ ಪಟಾಕಿ ಹೊಡೆಯುವುದರಿಂದ ಪರಿಸರದ ಮಾಲಿನ್ಯ ಉಂಟಾಗುವ ಜತೆಗೆ ಅನೇಕ ವಿಪತ್ತುಗಳಿಗೂ ಕಾರಣವಾಗುತ್ತದೆ. ಕಳೆದ ವರ್ಷ ರಾಜಧಾನಿ ದೆಹಲಿಯಲ್ಲಿ ಪಟಾಕಿಯಿಂದಾಗಿ ಹೆಚ್ಚು ಮಾಲಿನ್ಯ ಉಂಟಾಗಿತ್ತು. ಆದ್ದರಿಂದ ಕಡಿಮೆ ಪಟಾಕಿ ಹೊಡೆಯುವ ಮೂಲಕ ಕಸ ಉತ್ಪತ್ತಿಯನ್ನು ಕಡಿಮೆ ಮಾಡಬೇಕು’ ಎಂದು ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ ಮನವಿ ಮಾಡಿದ್ದಾರೆ.

‘ವ್ಯಾಪಾರಿಗಳು ಹಬ್ಬದ ದಿನಗಳಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವುದು, ಬಳಿಕ ಉಳಿದ ವಸ್ತುಗಳನ್ನು ರಸ್ತೆಯ ಮೇಲೆ ಬಿಸಾಡುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಸಾರ್ವಜನಿಕರು ದೀಪಾವಳಿ ಆಚರಿಸುವುದರೊಂದಿಗೆ ಪರಿಸರ ಮಾಲಿನ್ಯಗೊಳ್ಳದಂತೆ ಎಚ್ಚರಿಕೆ ವಹಿಸಬೇಕು’ ಎಂದು ಪೌರಾಯುಕ್ತ ಚಂದ್ರಪ್ಪ ಕೋರಿದ್ದಾರೆ.

ವೈದ್ಯರ ನಿಯೋಜನೆ: ‘ಪಟಾಕಿ ಸಿಡಿಸುವುದರಿಂದ ಆಗುವಂಥ ಅನಾಹುತಗಳ ಬಗ್ಗೆ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿದೆ.   ಹಾನಿಯಾಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಬಂದಿರುವವರ ಸಂಖ್ಯೆಯೂ ಎರಡು ವರ್ಷಗಳಲ್ಲಿ ಕಡಿಮೆ ಇದೆ. ಆದರೂ ಕೂಡ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ತುರ್ತು ಚಿಕಿತ್ಸೆ ನೀಡಲು ವೈದ್ಯರನ್ನು ನಿಯೋಜಿಸುವ ಮೂಲಕ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT