ಗಮನಿಸಬೇಕಾದ ಬಿಡಿ ಹೂಗಳು

ಮಂಗಳವಾರ, ಜೂನ್ 25, 2019
26 °C

ಗಮನಿಸಬೇಕಾದ ಬಿಡಿ ಹೂಗಳು

Published:
Updated:
ಗಮನಿಸಬೇಕಾದ ಬಿಡಿ ಹೂಗಳು

ಬುಟ್ಟಿಯಲ್ಲಿ ಒತ್ತೊತ್ತಾಗಿ ಜೋಡಿಸಿಟ್ಟ ಒಂದಿಷ್ಟು ಸುಂದರ ಹೂಗಳಿವೆ. ಒಂದೊಂದು ಹೂವಿಗೂ ಒಂದೊಂದು ರೂಪ, ಗಂಧ. ಅವು ನಮ್ಮ ಮನಸ್ಸಿನಲ್ಲಿ ಉಕ್ಕಿಸುವ ರಸಾನುಭವವೂ ಒಂದಕ್ಕಿಂತ ಒಂದು ಭಿನ್ನವೇ. ಹಾಗಂತ ಒತ್ತೊತ್ತಾಗಿ ಇಟ್ಟಿರುವ ಹೂವನ್ನು ಮಾಲೆ ಎಂದುಕೊಂಡು ಎತ್ತಿಕೊಳ್ಳಹೊರಟರೆ ಚೆಲ್ಲಾಪಿಲ್ಲಿಯಾಗಿ ಉದುರುತ್ತವೆ.

‘ದಯವಿಟ್ಟು ಗಮನಿಸಿ’ ಸಿನಿಮಾ ಕೊಡುವ ಅನುಭವವೂ ಇದೇ ರೀತಿಯಾದದ್ದು. ಮಹಾನಗರದ ಬದುಕಿನ ನಾಲ್ಕು ಭಿನ್ನ ಕಥೆಗಳನ್ನು ಒಂದು ಚೌಕಟ್ಟಿನಲ್ಲಿ ಇಟ್ಟು ಕೊಟ್ಟಿದ್ದಾರೆ ನಿರ್ದೇಶಕ ರೋಹಿತ್‌ ಪದಕಿ. ಇಲ್ಲಿ ಒಂದು ಕಥೆಗೂ ಇನ್ನೊಂದು ಕಥೆಗೂ ಅಂಥ ಸಂಬಂಧವೇನಿಲ್ಲ. ತುಂಬ ಪ್ರಯಾಸಪಟ್ಟು ಸಂಬಂಧ ಕಲ್ಪಿಸಿಕೊಳ್ಳಹೊರಟರೂ ಅದು ಕೃತಕ ಬೌದ್ಧಿಕ ಕಸರತ್ತಾಗುತ್ತದಷ್ಟೆ. ಆ ಕಥೆಗಳು ತಮ್ಮಷ್ಟಕ್ಕೆ ತಾವು ಚೆಂದವಾಗಿಯೇ ಇರುವುದರಿಂದ ಹಾಗೆ ಹಟ ಹಿಡಿದು ಒಂದು ಎಳೆಯಲ್ಲಿ ಕಟ್ಟಿಹಿಡಿಯಬೇಕಾದ ಅಗತ್ಯವೂ ಕಾಣುವುದಿಲ್ಲ.

ಮಧ್ಯವಯಸ್ಸು ಮುಟ್ಟಿದರೂ ಮದುವೆಯಾಗದ ಗಂಡು, 'ಮಗಳು ಇನ್ನೂ ಕನ್ಯೆಯಾಗಿಯೇ ಇದ್ದಾಳೆ' ಎಂಬ ವೈದ್ಯರ ಪ್ರಮಾಣಪತ್ರ ಹಿಡಿದುಕೊಂಡು ಗಂಡು ಹುಡುಕಲು ಅಡ್ಡಾಡುತ್ತಿರುವ ತಂದೆ, ತನ್ನ ಬದುಕಿಗೆ ಎಂದೂ ಹೊಂದಿಕೊಳ್ಳಲಾರಳು ಎಂದು ಗೊತ್ತಿದ್ದೂ ಹುಡುಗಿಯ ಮೋಹದಲ್ಲಿ ಬೀಳುವ ಕಿಸೆಗಳ್ಳ, ಮೋಹವನ್ನು ಮೀರುವ ಆಸೆಯಿಂದ ಹೊರಟು ಅದೇ ಬಲೆಯಲ್ಲಿ ಮತ್ತೆ ಮತ್ತೆ ಸಿಲುಕಿಕೊಳ್ಳುವ ವಿರಾಗಿ, ಶಿಥಿಲಗೊಳ್ಳುತ್ತಿರುವ ದಾಂಪತ್ಯ ಬದುಕಿನ ಇಕ್ಕಳದಲ್ಲಿ ಸಿಲುಕಿ ನಲುಗುವ ಆಧುನಿಕ ಗಂಡ–ಹೆಂಡತಿ, ತನ್ನೊಳಗನ್ನೂ ಹೊರಗನ್ನೂ ನಿಯಂತ್ರಿಸುವ ಬೇಲಿಗಳನ್ನು ಜಿಗಿಯಲು ಹಂಬಲಿಸುತ್ತಲೇ ಒದ್ದಾಡುವ ಮಾಡರ್ನ್‌ ಹುಡುಗಿ... ಹೀಗೆ  ಇಲ್ಲಿ ಬರುವ ಪಾತ್ರಗಳಿಗೆಲ್ಲ ಒಂದೊಂದು ಕಥೆಯಿದೆ. ಆದರೆ ಆ ಯಾವ ಕಥೆಯೂ ಈಗ, ಇಲ್ಲಿ ಆರಂಭವಾಗಿದ್ದಲ್ಲ, ಇಲ್ಲಿಯೇ ಮುಗಿಯುವಂಥದ್ದೂ ಅಲ್ಲ. ಅವರೆಲ್ಲರೂ ಎಲ್ಲೋ ಆರಂಭವಾಗಿ ಇನ್ನೆಲ್ಲೋ ಮುಗಿಯುವ ದಾರಿಯಲ್ಲಿ ತಮ್ಮ ತಮ್ಮ ಭೂತದ ಭಾರ ಹೊತ್ತುಕೊಂಡು ತೆವಳುತ್ತಿರುವ ಸಂತ್ರಸ್ತರು. ಎಂದೋ ಹೇಗೋ ಸಮೃದ್ಧವಾಗಿದ್ದ ಜೀವನೋತ್ಸಾಹದ ಒರತೆಗಳನ್ನು ತಾವೇ ಬತ್ತಿಸಿಕೊಂಡು ಈಗ ದಾಹದಿಂದ ಬಳಲುತ್ತಿರುವವರು. ಮತ್ತೆ ತಾವು ಸಿಲುಕಿಕೊಂಡ ಚಕ್ರವ್ಯೂಹದಿಂದ ಹೊರಹೋಗುವ ಒಂದಾದರೂ ಕಿರುದಾರಿ ಕಾಣಿಸೀತೆ ಎಂಬ ಹಂಬಲದಲ್ಲಿ ಅರಸುತ್ತಿರುವವರು.

ಬದುಕಿನ ಸಂಕೀರ್ಣ ಸಮಸ್ಯೆಗಳಿಗೆ ಬ್ಲಾಕ್‌ ಅಂಡ್‌ ವೈಟ್‌ ಪರಿಹಾರಗಳನ್ನು ಸೂಚಿಸಿ ‘ಶುಭ ಮುಕ್ತಾಯ’ ಮಾಡುವುದರಲ್ಲಿ ನಿರ್ದೇಶಕರಿಗೆ ನಂಬಿಕೆಯಿಲ್ಲ. ಹರಿವ ನದಿಯಂಥ ಜೀವನದ, ಎಲ್ಲ ಗುಣಗಳನ್ನು ಅದು ಇದ್ದ ಹಾಗೆಯೇ ಕಾಣಿಸುವ ಪ್ರಯತ್ನವಷ್ಟೇ ಅವರದು. ಆದ್ದರಿಂದಲೇ ಈ ಸಿನಿಮಾದಲ್ಲಿ ಯಾವ ಕಥೆಯೂ ಮುಕ್ತಾಯಗೊಳ್ಳುವುದಿಲ್ಲ. ಸಿನಿಮಾದ ಅಂತ್ಯ, ಇದುವರೆಗೆ ಹೇಳಿದ ಕಥೆಗಳ ಹೊಸ ಅಧ್ಯಾಯದ ಆರಂಭದಂತೆಯೂ ಇದೆ.

ಬಿಡಿ ಕಥನಗಳು ನೀಡುವ ಅನುಭವ ಈ ಚಿತ್ರದ ಶಕ್ತಿಯಾದಂತೆಯೇ ದೌರ್ಬಲ್ಯವೂ ಹೌದು. ಪ್ರತಿಯೊಂದು ಹೊಸ ಕಥೆ ಆರಂಭವಾದಾಗಲೂ ಹಳೆಯ ಕಥೆ ಪ್ರೇಕ್ಷಕನ ಮನಸ್ಸಿನಿಂದ ಮರೆಯಾಗಿಬಿಡುತ್ತದೆ. ಮನಸ್ಸಿನಲ್ಲಿಯೂ ಅವು ಒಂದಕ್ಕೊಂದು ಸೇರಿಕೊಳ್ಳದ ಕಾರಣ ’ಇಡಿಯಾದ ಅನುಭವ’ ನೀಡುವುದಿಲ್ಲ. ತುಂಬ ಸೂಕ್ಷ್ಮವಾದ ಎಳೆಗಳನ್ನು ಹಗುರಗೊಳಿಸಿರುವುದೂ ಇದಕ್ಕೆ ಕಾರಣವಿರಬಹುದು. ‘ನನ್ನ ಮಗಳು ಕನ್ಯೆಯಾಗಿಯೇ ಇದ್ದಾಳೆ. ನನ್ನ ಬಳಿ ಡಾಕ್ಟರ್‌ ಸರ್ಟಿಫಿಕೇಟ್‌ ಇದೆ’ ಎಂದು ತಂದೆ ಅಲವತ್ತುಕೊಳ್ಳುವಂಥ ದಾರುಣ ಸನ್ನಿವೇಶ ಕಾಮಿಕ್‌ ಆಗಿ ತೋರಿಸಿರುವುದು ಹೀಗೆ ಹಗುರಗೊಳಿಸಿರುವುದಕ್ಕೆ ಒಂದು ಉದಾಹರಣೆಯಾಗಿ ನೀಡಬಹುದು.

ನಿರೂಪಣೆಯಲ್ಲಿನ ನಿಧಾನಗತಿಯನ್ನು ಸಂಭಾಷಣೆಯಲ್ಲಿ ಮೀರುವ ಪ್ರಯತ್ನದಲ್ಲಿ ಪದಕಿ ಹಲವೆಡೆ ದ್ವಂದ್ವಾರ್ಥದ ಗೆರೆ ದಾಟುತ್ತಾರೆ. (ಆದರೆ ಸಿನಿಮಾಕ್ಕೆ ‘ಎ’ ಪ್ರಮಾಣಪತ್ರ ನೀಡಿದ್ದು ಯಾಕೆ ಎಂಬ ಪ್ರಶ್ನೆಗೆ ಮಾತ್ರ ಎಲ್ಲಿಯೂ ಉತ್ತರ ಸಿಗುವುದಿಲ್ಲ). ಕುಂದಾಪುರ ಕನ್ನಡದ ಅಸ್ತವ್ಯಸ್ತ ಬಳಕೆ ಕಿರಿಕಿರಿ ಹುಟ್ಟಿಸುತ್ತದೆ.

ಮಧ್ಯವಯಸ್ಕ ಅವಿವಾಹಿತನಾಗಿ ರಾಜೇಶ್‌ ನಟರಂಗ ಅವರದು ಪಕ್ವ ಅಭಿನಯ. ಕಿಲಾಡಿ ಹುಡುಗ ಮತ್ತು ಭಗ್ನ ಪ್ರೇಮಿ ಎರಡೂ ಛಾಯೆಯಲ್ಲಿಯೂ ವಸಿಷ್ಠ ಸಿಂಹ ತೆರೆಯ ಮೇಲಿದ್ದಷ್ಟೂ ಹೊತ್ತು ಮನಸ್ಸನ್ನು ಆವರಿಸಿಕೊಳ್ಳುತ್ತಾರೆ. ರಘು ಮುಖರ್ಜಿ ತಮಗೂ ನಟನೆಯೂ ‘ಪದ್ಮಪತ್ರೆಯ ಮೇಲಣ ನೀರ ಸಂಬಂಧ’ ಎನ್ನುವುದನ್ನು ಇನ್ನೊಮ್ಮೆ ಸಾಬೀತುಗೊಳಿಸಿದ್ದಾರೆ. ಅರವಿಂದ್‌ ಕುಪ್ಳೀಕರ್‌, ಸಂಗೀತಾ ಭಟ್‌, ಭಾವನಾ, ಸಂಯುಕ್ತಾ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಧ್ಯೆ ಒಂದು ಹಾಡಿನಲ್ಲಿ ಬರುವ ಮೇಘನಾ ರಾಜ್‌ ಕಾವೆಬ್ಬಿಸಿ ಮರೆಯಾಗುತ್ತಾರೆ.

ಈ ಚಿತ್ರದ ನಿಜವಾದ ಹೀರೊ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌. ಅವರ ಸಂಯೋಜನೆಯ ಎಲ್ಲ ಹಾಡುಗಳು ಸಿನಿಮಾವನ್ನೂ ಮೀರಿ ಮನಸ್ಸಿನಲ್ಲುಳಿಯುತ್ತವೆ. ಹಿನ್ನೆಲೆ ಸಂಗೀತದಲ್ಲಿ ಅವರು ಮಾಡಿರುವ ಪ್ರಯೋಗಗಳೂ ಗಮನಾರ್ಹ. ಅರವಿಂದ ಕಶ್ಯಪ್‌ ಅವರ ಛಾಯಾಗ್ರಹಣವೂ ಚಿತ್ರದ ಧನಾತ್ಮಕ ಅಂಶಗಳಲ್ಲೊಂದು.

ಪಕ್ಕಾ ಗಾಂಧಿನಗರದ ಭಾಷೆಯಲ್ಲಿ ಹೇಳುವುದಾದರೆ ’ದಯವಿಟ್ಟು ಗಮನಿಸಿ’ ಓಡುವ ಸಿನಿಮಾ ಅಲ್ಲದಿರಬಹುದು, ಆದರೆ ಕೆಲವು ಸನ್ನಿವೇಶಗಳ ಮಟ್ಟಿಗೆ ಕಾಡುವ ಸಿನಿಮಾವಂತೂ ಹೌದು. ಇನ್ನಷ್ಟು ಸಾವಧಾನದಿಂದ, ಸೂಕ್ಷ್ಮತೆಯಿಂದ ಕಟ್ಟಿದ್ದರೆ ಇದು ಕನ್ನಡದ ಪ್ರಯೋಗಶೀಲತೆಯ ಗಡಿಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಯಂತೂ ಇತ್ತು. ಅದನ್ನು ಈ ನಿರ್ದೇಶಕರ ಮುಂದಿನ ಸಿನಿಮಾಗಳಲ್ಲಿ ನಿರೀಕ್ಷಿಸಬಹುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry