ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರ ಕುಂಠಿತ, ರೈತನ ಫಸಲಿಗಿಲ್ಲ ಬೆಲೆ

Last Updated 20 ಅಕ್ಟೋಬರ್ 2017, 6:38 IST
ಅಕ್ಷರ ಗಾತ್ರ

ದಾವಣಗೆರೆ: ‘ಮುಂಜಾನೆ 4ಕ್ಕೆ ಒಂದು ಲೋಡ್‌ ಬೂದು ಕುಂಬಳಕಾಯಿ, ಅರ್ಧ ಲೋಡ್‌ ಬಾಳೆ ದಿಂಡು,18 ಪೆಂಡಿ ಬಾಳೆಎಲೆ ಜೊತೆಗೆ ಕಾಚಿಕಡ್ಡಿ, ಅಣ್ಣೆಕಡ್ಡಿ, ತಾವರೆ ಹೂವು ಎಲ್ಲವೂ ತಂದಿದ್ದೇವೆ. ಹೇಳಿಕೊಳ್ಳುವಂತಹ ವ್ಯಾಪಾರ ಆಗಿಲ್ಲ. 50 ಕುಂಬಳಕಾಯಿ ಕೂಡ ಮಾರಾಟವಾಗಿಲ್ಲ. ಅರ್ಧ ಕಟ್ಟು ಬಾಳೆಎಲೆ ಖಾಲಿಯಾಗಿಲ್ಲ. ಹೆಂಡ್ತಿ– ಮಕ್ಕಳು ಬಿಸಿಲಲ್ಲೇ ಕುಳಿತಿದ್ದೇವೆ...’

ಈ ರೀತಿ ಅಳಲು ತೋಡಿಕೊಂಡವರು ನಗರದ ಹದಡಿ ರಸ್ತೆ ಬದಿ ಗುರುವಾರ ಬೂದು ಕುಂಬಳಕಾಯಿ ವ್ಯಾಪಾರ ಮಾಡುತ್ತಿದ್ದ ರಾಣೆಬೆನ್ನೂರು ತಾಲ್ಲೂಕಿನ ಮೆಡ್ಲೇರಿ ಗ್ರಾಮದ ರೈತ ದಿಳ್ಳೆಪ್ಪ. ದೀಪಾವಳಿ ಹಬ್ಬ ಬಂತೆಂದರೆ ನಗರದ ಪ್ರದೇಶಗಳಲ್ಲಿ ಅಂಗಡಿ– ಮುಂಗಟ್ಟು ಹಾಗೂ ಮನೆಗಳಲ್ಲಿ ಎಲ್ಲಿಲ್ಲದ ಸಂಭ್ರಮ ತುಂಬಿರುತ್ತದೆ. ಆದರೆ, ಈ ಬಾರಿಯ ದೀಪಾವಳಿ ಸಂಭ್ರಮ ಬೆಳಕಿನ ಚಿತ್ತಾರ ಬಿಡಿಸದೇ ಮನೆಯ ಸಿಹಿಯೂಟಕ್ಕೇ ಸೀಮಿತವಾಗಿದೆ.

ಈಚೆಗೆ ಸುರಿದ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಬಾಳೆದಿಂಡು, ಕಾಚಿಕಡ್ಡಿ, ತಾವರೆ ಹೂವು ಹಾಗೂ ವಿವಿಧ ಬಗೆಯ ಹೂವಿನ ಫಸಲು ಹೆಚ್ಚು ಬಂದಿದೆ. ರೈತರು ಇವೆಲ್ಲವನ್ನು ಹೊತ್ತು ನಗರಕ್ಕೆ ಗುರುವಾರ ಮುಂಜಾನೆಯೇ ಲಗ್ಗೆ ಹಾಕಿ, ಇಲ್ಲಿನ ಹದಡಿ ರಸ್ತೆ, ಹಳೇ ಬಸ್‌ ನಿಲ್ದಾಣ, ಅಶೋಕ ರಸ್ತೆ, ಜಿಲ್ಲಾ ಆಸ್ಪತ್ರೆ ರಸ್ತೆ, ಶಾಮನೂರು ರಸ್ತೆ, ಗಡಿಯಾರ ಕಂಬ, ಕೆ.ಆರ್‌.ಮಾರುಕಟ್ಟೆ, ಹೊಂಡದ ವೃತ್ತ... ಹೀಗೆ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಖರೀದಿಸುವವರ ಸಂಖ್ಯೆ ತುಸು ವಿರಳವಾಗಿದೆ.

‘ಮುಂಜಾನೆ 4ಕ್ಕೆ ಇಲ್ಲಿಗೆ ಬಂದೀವಿ. ಸಂಜೆಯಾದರೂ ವ್ಯಾಪಾರ ಆಗಿಲ್ಲ. ಬಿಸಿಲಲ್ಲಿ ನಿಂತು ಸಾಕಾಗೈತಿ. ಯಾಕಾದರೂ ಬಂದ್ವಿ ಅನ್ನಿಸುತೈತಿ. ಬಾಳೆ ದಿಂಡು, ಎಲೆ, ಕಾಚಿಕಡ್ಡಿ ಹೊಲ್ದಾಗಾದರೂ ಬಿಟ್ಟಿದ್ರೆ, ಜಮೀನಿಗೆ ಗೊಬ್ಬರ ಆಗುತ್ತಿತ್ತು. ಈ ಹಬ್ದಾಗ ಟ್ರ್ಯಾಕ್ಟರ್‌ ಬಾಡಿಗೆ ಕೊಡುವಷ್ಟು ವ್ಯಾಪಾರ ಆದ್ರೆ ಸಾಕು’ ಎಂದು ಚನ್ನಗಿರಿ ತಾಲ್ಲೂಕಿನ ಕಾಕನೂರು ಗ್ರಾಮದ ರೈತರಾದ ಆಂಜಿನಪ್ಜ ಮತ್ತು ಶೇಖರಪ್ಪ ಅಳಲು ತೋಡಿಕೊಂಡರು.

ಪಟಾಕಿ ವ್ಯಾಪಾರ ಕುಂಠಿತ: ದೀಪಾವಳಿ ಹಬ್ಬ ಬಂತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂತೋಷ. ಹಬ್ಬದ ಎರಡು ದಿನವೂ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ, ಇದಕ್ಕೂ ಅವರ ಶಾಲೆಯ ಶಿಕ್ಷಕರು ಕಡಿವಾಣ ಹಾಕಿದ್ದಾರೆ. ಇದರಿಂದಾಗಿಯೇ ನಗರದ ಹೈಸ್ಕೂಲ್‌ ಮೈದಾನದಲ್ಲಿ ನಡೆಯುತ್ತಿರುವ ಪಟಾಕಿ ಮಾರಾಟ ಮಳಿಗೆಗಳಲ್ಲಿಯೂ ಕಳೆದ ವರ್ಷಕ್ಕಿಂತ ಈ ಬಾರಿ ಗ್ರಾಹಕರು ಕಡಿಮೆಯಿದ್ದಾರೆ.

‘ಕಳೆದ ವರ್ಷ 90 ಪಟಾಕಿ ಅಂಗಡಿಗಳನ್ನು ತೆರೆದು, ಐದು ದಿನ ವ್ಯಾಪಾರ ಮಾಡಲಾಗಿತ್ತು. ಆದರೆ, ಈ ಬಾರಿ 60 ಮಳಿಗೆಗಳನ್ನು ತೆರೆಯಲಾಗಿದೆ. ಜೊತೆಗೆ ಮೂರು ದಿನಗಳಿಗೆ ಮಾತ್ರ ವ್ಯಾಪಾರ ಸೀಮಿತ ಮಾಡಲಾಗಿದೆ. ಈ ವರ್ಷ ಪಟಾಕಿ ವ್ಯಾಪಾರ ಶೇ 50ರಷ್ಟು ಕುಂಠಿತವಾಗಿದೆ. ಇದಕ್ಕೆ ಕಾರಣ ಶಾಲೆಗಳ ಶಿಕ್ಷಕರು ‘ಪಟಾಕಿ ಸಿಡಿಸಲ್ಲ, ಪರಿಸರ ಸಂರಕ್ಷಿಸುತ್ತೇವೆ’ ಎಂದು ವಿದ್ಯಾರ್ಥಿಗಳಿಂದ ಪಡೆದಿರುವ ವಾಗ್ದಾನ. ಜತೆಗೆ ಸರಕು ಸೇವಾ ತೆರಿಗೆಯೂ ಕಾರಣವಾಗಿದೆ’ ಎಂದು ಹೇಳುತ್ತಾರೆ ಪಟಾಕಿ ವರ್ತಕರ ಮತ್ತು ಬಳಕೆದಾರರ ಸಂಘದ ಅಧ್ಯಕ್ಷ ಸಿದ್ದಣ್ಣ.

‘15 ವರ್ಷಗಳಿಂದ ಪಟಾಕಿ ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಹಬ್ಬದ ಮೊದಲ ದಿನವೇ ಶೇ 40ರಷ್ಟು ವ್ಯಾಪಾರ ಆಗುತ್ತಿತ್ತು. ಆದರೆ,ಶೇ 10ರಷ್ಟೂ ವ್ಯಾಪಾರವಾಗಿಲ್ಲ. ಪಟಾಕಿ ಸಿಡಿಸಬಾರದು ಎಂಬ ಭಾವನೆ ಮಕ್ಕಳಲ್ಲಿಹಾಗೂ ಜನರಲ್ಲಿ ಮೂಡಿರಬೇಕು. ಅಲ್ಲದೆ ಚೀನಾ ಪಟಾಕಿ ಕೂಡ ಮಾರುಕಟ್ಟೆಗೆ ಬಂದಿಲ್ಲ’ ಎಂದು ಪಟಾಕಿ ವ್ಯಾಪಾರಿ ಶ್ರೀನಿವಾಸ್‌ ಹೇಳುತ್ತಾರೆ.

‘ದೀಪಾವಳಿಯ ಸಡಗರ ಕಾಣುವುದೇ ಪಟಾಕಿ ಸದ್ದಿನಲ್ಲಿ. ಬೆಳಕಿನ ಹಬ್ಬದಂದು ಪಟಾಕಿ ಹಚ್ಚುವುದು ಸಂಪ್ರದಾಯ. ಆದರೆ, ವರ್ಷದಿಂದ ವರ್ಷಕ್ಕೆ ಪಟಾಕಿ ಸಿಡಿಸುವವರ ಸಂಖ್ಯೆ ಕಡಿಮೆಯಾಗಿರುವುದು ಉತ್ತಮ ಬೆಳವಣಿಗೆ’ ಎನ್ನುತ್ತಾರೆ ವಿನೋಬ ನಗರದ ರಮೇಶ್‌. ಜೇಡಿಮಣ್ಣಿನ ಸಾಂಪ್ರದಾಯಿಕ ಹಣತೆಗಳ ನೇಪಥ್ಯಕ್ಕೆ ಸರಿದಿದ್ದು, ಪಿಒಪಿ
ಯಿಂದ ತಯಾರಿಸಿದ ಅಲಂಕಾರಿಕ ಹಣತೆಗಳ ಮಾರಾಟ ನಗರದ ಕೆಲವೆಡೆ ಜೋರಾಗಿ ನಡೆದಿದೆ.

‘ಡಜನ್‌ ಅಲಂಕಾರಿಕ ಹಣತೆಗಳನ್ನು ₹ 50ರಿಂದ ₹ 80ರವರೆಗೆ ಮಾರಾಟ ಮಾಡುತ್ತೇವೆ. ಜನರು ಆಧುನಿಕ ಹಣತೆಗಳ ಖರೀದಿಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ’ ಎಂದು ಹದಡಿ ರಸ್ತೆಯಲ್ಲಿ ಅಲಂಕಾರಿಕ ಹಣತೆಗಳನ್ನು ಮಾರಾಟ ಮಾಡುತ್ತಿದ್ದ ರಾಜಸ್ಥಾನದ ನಂದಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT