ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಕೊಚ್ಚಿಹೋದ ಹಿರೇಹಳ್ಳದ ಸೇತುವೆ

Last Updated 20 ಅಕ್ಟೋಬರ್ 2017, 6:49 IST
ಅಕ್ಷರ ಗಾತ್ರ

ಮುಂಡರಗಿ: ಕಳೆದ ಎರಡು ವಾರಗಳಿಂದ ನಿರಂತರವಾಗಿ ಸುರಿದ ಮಳೆಗೆ ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಹಿರೇಹಳ್ಳಕ್ಕೆ ನಿರ್ಮಿಸಲಾಗಿದ್ದ ಕಿರು ಸೇತುವೆ ಕೊಚ್ಚಿಕೊಂಡು ಹೋಗಿದೆ. ಸಮೀಪದಲ್ಲಿರುವ ಚೆಕ್‌ಡ್ಯಾಂನ ಒಡ್ಡು ಕಿತ್ತು ಹೋಗಿ, ಅಪಾರ ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗಿದೆ.

ಗದಗ ತಾಲ್ಲೂಕಿನ ಅಡವಿಸೋಮಾಪುರ, ಕೊಪ್ಪಳ ತಾಲ್ಲೂಕಿನ ಕವಲೂರ, ಕಪ್ಪತಗುಡ್ಡ ಹೀಗೆ ಹಲವು ಭಾಗಗಳಿಂದ ಹಿರೇಹಳ್ಳಕ್ಕೆ ಧಾರಾಕಾರ ನೀರು ಹರಿದುಬಂದಿದೆ. ಈ ಹಳ್ಳವು ಬೆಣ್ಣಿಹಳ್ಳಿ ಗ್ರಾಮದ ಮೂಲಕ ತುಂಗಭದ್ರಾ ನದಿಯನ್ನು ಸೇರುತ್ತದೆ. ಕಳಪೆ ಕಾಮಗಾರಿಯಿಂದ ಸೇತುವೆ ಮತ್ತು ಚೆಕ್‌ಡ್ಯಾಂ ಸಂಪೂರ್ಣ ಹಾನಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

‘ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ಭಾಗದ ಹಳ್ಳಗಳಿಗೆ ನಿರ್ಮಿಸಿರುವ ಬೃಹತ್ ಚೆಕ್‌ ಡ್ಯಾಂಗಳು ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿವೆ. ನೀರಿನ ರಭಸಕ್ಕೆ ಚೆಕ್ ಡ್ಯಾಂ ಅಂಚಿನಲ್ಲಿದ್ದ ಒಡ್ಡುಗಳು ಕಿತ್ತುಹೋಗಿವೆ. ಗುತ್ತಿಗೆದಾರರೇ ಇದಕ್ಕೆ ಹೊಣೆ’ ಎಂದು ಎ.ಪಿ.ಎಂ.ಸಿ. ಸದಸ್ಯ ರವೀಂದ್ರ ಉಪ್ಪಿನಬೇಟಗೇರಿ ಹೇಳಿದರು.

‘ಚೆಕ್ ಡ್ಯಾಂ ನಿರ್ಮಾಣ ಹಾಗೂ ಕಾಮಗಾರಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಶಾಸಕರು ಈ ಕುರಿತು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸರ್ಕಾರದ ಹಣವನ್ನು ಲೂಟಿ ಹೊಡೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ಮುಂಡರಗಿ ಪಟ್ಟಣದ ಹುಡ್ಕೊ ಕಾಲೊನಿ ಹತ್ತಿರ ಜಿಲ್ಲಾ ಪಂಚಾಯಿತಿ ಯೋಜನೆಯಡಿ ₹ 10 ಲಕ್ಷ ವೆಚ್ಚದ ಕೆರೆ ನಿರ್ಮಿಸುವ ಕಾಮಗಾರಿಯಲ್ಲೂ ಅವ್ಯವಹಾರ ನಡೆದಿದೆ. ಅಲ್ಲಿನ ಗರಸನ್ನು ಬೇರೊಬ್ಬರಿಗೆ ಮಾರಾಟ ಮಾಡಿಕೊಂಡಿದ್ದಾರೆ. ಈ ಕುರಿತು ಲೋಕಾಯುಕ್ತ ತನಿಖೆ ಆಗಬೇಕು’ ಎಂದು ಪುರಸಭೆ ಸದಸ್ಯ ಬಸವರಾಜ ರಾಮೇನಹಳ್ಳಿ ಒತ್ತಾಯಿಸಿದರು.

‘ಶಿರಹಟ್ಟಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ನೂರಾರು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ಕಾಮಗಾರಿಯಲ್ಲೂ ಭಾರಿ ಅಕ್ರಮ ನಡೆದಿದ್ದು, ಮಧ್ಯವರ್ತಿಗಳು ಕೋಟ್ಯಂತರ ರೂಪಾಯಿ ಜೇಬಿಗಿಳಿಸಿಕೊಂಡಿದ್ದಾರೆ’ ಎಂದು ಪುರಸಭೆ ಸದಸ್ಯ ಬಸವರಾಜ ರಾಮೇನಹಳ್ಳಿ ದೂರಿದರು. ಬಸವರಾಜ ಡಂಬಳ, ರಾಮಣ್ಣ ಹಟ್ಟಿ, ಬಸವರಾಜ ಮೇವುಂಡಿ, ಶರೀಫಸಾಬ್ ಕುಕನೂರ, ಈಶಪ್ಪ ಹೊಸಕರುಬರ, ಜಗದೀಶ ಅಡರಕಟ್ಟಿ, ವೀರಭದ್ರಪ್ಪ ಕುಂಬಾರ, ಶಿವಾನಂದ ಬಳಗಾನೂರ, ಬಸವರಾಜ ಅಂಗಡಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT